ದೇವರಿದ್ದಾನೆ, ದೇವರೇ ಇಲ್ಲ ಎಂಬ ಸದಾಚಾರಿಯ ಮನದಲ್ಲಿ!!!

ದೇವರಿದ್ದಾನೆ, ದೇವರೇ ಇಲ್ಲ ಎಂಬ ಸದಾಚಾರಿಯ ಮನದಲ್ಲಿ!!!

ದೇವರು ಇದ್ದಾನೆ ಎನ್ನುವುದು ನಿಜಕೂ ಒಂದು ಭ್ರಾಂತು
ದೇವರು ಇಲ್ಲ ಎನ್ನುವುದು ಇನ್ನೊಂದು ತೆರನ ಭ್ರಾಂತು

ದೇವರಿದ್ದಾನೋ ಇಲ್ಲವೋ ಎನ್ನುವ ಪ್ರಶ್ನೆಯೇ ಇಲ್ಲಿ ಗೌಣ
ಆದರೆ ದೇವರ ಹೆಸರಲಿ ಸಂಪಾದಿಸುತಿಹರು ಜನರಿಲ್ಲಿ ಹಣ

ದೇವರ ಹೆಸರಲ್ಲಿ ನೂರೆಂಟು ಅನಾಚಾರ ನಡೆಸುವವರೆಲ್ಲ
ಆತ್ಮಸಾಕ್ಷಿಯಾಗಿ ಆ ದುರಾತ್ಮಗಳಿಗೆ ದೇವರೆಂಬುದೇ ಇಲ್ಲ

ಯಾವ ಪೂಜೆ ಪುರಸ್ಕಾರಗಳ ಗೋಜಿಗೂ ಹೋಗದೆ ಇದ್ದು
ನಂಬಿಕೊಂಡಿರಬಹುದು ತನ್ನ ಕರ್ತವ್ಯಗಳನೇ ದೇವರೆಂದು

ಪ್ರೀತಿಯಿರುವ ಮನವದು ಖಂಡಿತ ಆಗುವುದು ಶ್ರೀ ನಿವಾಸ
ಪ್ರೀತಿಯಿಲ್ಲದಿರೆ ಅಲ್ಲಿ ಕ್ಷಣಕಾಲ ದೇವ ಮಾಡಲಾರನು ವಾಸ

ಕಲ್ಲನ್ನು ದೇವರಾಗಿಸಿ ಪೂಜಿಸುವರು ಈಗ ಊರೆಲ್ಲಾ ಮಂದಿ
ತಮ್ಮ ಮಾತಾಪಿತರ ಮಾಡಿಹರು ತಮ್ಮ ಮನೆಗಳಲಿ ಬಂಧಿ

ಕಲ್ಲ ಕಲ್ಲೆಂದೆಣಿಸೆ ಅದುವೇ ಕಲ್ಲಿಗೆ ಸಲುವ ನಿಜವಾದ ಪೂಜೆ
ಮನುಜನ ಮನುಜ ಎಂದೆಣಿಸುವುದು ಆ ಮನುಜನಿಗೆ ಪೂಜೆ

ಶಿಲ್ಪ, ಮೂರ್ತಿ, ಚಿತ್ರಗಳೆಲ್ಲಾ ಅಪ್ರಬುದ್ಧ ಮಕ್ಕಳಿಗಷ್ಟೇ ಬೇಕು
ಪ್ರಬುದ್ಧರಾದ ನಮಗೇಕೆ ಕಣ್ಣ ಮುಂದೆ ದೇವಚಿತ್ರಗಳು ಬೇಕು

ಒಳಗಿರುವ ದೇವರ ಜನ ಹುಡುಕಾಡುವರು ಅಲೆಅಲೆದು ಸಂತೆ
ಮೂಗ ಮೇಲಿರುವ ಕನ್ನಡಕವ ಮನೆಯೆಲ್ಲಾ ತಾ ಹುಡುಕುವಂತೆ

ದೇವರಿದ್ದಾನೆಂದು ನುಡಿದು ಅನಾಚಾರಿಯಾದವಗೆ ದೇವರೆಲ್ಲಿ
ದೇವರಿದ್ದಾನೆ, ದೇವರೇ ಇಲ್ಲ ಎಂಬ ಸದಾಚಾರಿಯ ಮನದಲ್ಲಿ
*********************************

Rating
No votes yet

Comments