ಚಿರಋಣಿಯು ನಾನೆಲ್ಲರಿಗೆ .....

ಚಿರಋಣಿಯು ನಾನೆಲ್ಲರಿಗೆ .....

ಪ್ರಿಯ ಸಂಪದಿಗರೆ, ಈ ವರ್ಷ ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಳ್ಳಲಿಕ್ಕೆ ಅನುವು ಮಾಡಿಕೊಟ್ಟ ನಿಮ್ಮೆಲ್ಲರಿಗೆ ಮತ್ತೊಮ್ಮೆ ನನ್ನ ಹೃತ್ಪೂರ್ವಕ ಧನ್ಯವಾದಗಳು... ಸಂಪದದ ಜೊತೆ ಜೊತೆಗೆ ಇಡೀ ದಿನ ಸಾಗಿದ್ದು...... ತಿಳಿಯಲೇ ಇಲ್ಲ. ಅಲ್ಲದೆ ನಿಮ್ಮೆಲ್ಲರ ಹಾರೈಕೆಗೂ ಮೊದಲು ನನ್ನ ಗುರುಗಳ ಆಶೀರ್ವಾದ ಹಾಗೂ ಶುಭಾಶಯ ಕೋರುವ ಒಂದು ಪದ್ಯ ನನ್ನ ಕೈ ಸೇರಿತ್ತು. ನಾನವರಿಗೆ ದತ್ತು ಪುತ್ರಿಯೂ ಹೌದು, ಶಿಷ್ಯೆಯೂ ಹೌದು. ಇದಕ್ಕಿಂತ ಸೌಭಾಗ್ಯ ಇನ್ನೆಲ್ಲಿಯದು . ಆ ಪದ್ಯವನ್ನೊಮ್ಮೆ ನೀವೂ ಓದಲೆಂಬುದು ನನ್ನಾಸೆ... ಅದು ಇಲ್ಲಿದೆ.

ಇಂದು ಬಂದಿದೆ ಸಮಯ
ಶುಭ ಕೋರಲು ನಿನಗೆ
ಜನ್ಮ ದಿನದ ಸಂಭ್ರಮದಿ
ನಲಿಯುತ್ತಿಹ ಬಾಲೆಗೆ |

ಸೂರ್ಯನಿರುವಲ್ಲಿ ಧರೆಗೆ
ಹೊಸ ಬೆಳಕು ದಿನವು
ನೀನಿರಲು ಅಂತೆ
ಹರ್ಷಪೂರದಿ ಜಗವು |

ಹಸಿರು ಚಿಮ್ಮಿದ ಮರಕೆ
ಹೊಸ ಹೂವ ಬೆಡಗು
ಬಂದಿರಲು ಇಂದಿನ ದಿನ
ಮಂದಹಾಸದ ಸೊಬಗು |

ಚಂದ್ರ ಕಂಡಿರಲು ನಿನ್ನೆ
ಬೆಳಗಿತ್ತು ಆಗಸವು
ಸಡಗರದಿ ಈ ದಿನ
ಮಾಯವಾಗಿದೆ ನೋವು |

ನಿನ್ನೆ ಎಂಬುದು ಸುಳ್ಳು
ನಾಳೆಯಲ್ಲಿದೆ ಬದುಕು
ನಿನ್ನೆ ನಾಳೆಯ ನಡುವೆ
ಮಾಯವಾಗಲಿ ಅಳುಕು |

ಹೂ ನಗೆಯ ಆಭರಣ
ನಿನ್ನದಾಗಲಿ ಇಂದು
ಹೊಳೆದ ನಗೆ ಮಿಂಚಲ್ಲಿ
ಹರುಷದಾ ಬಿಂದು |

ಹುಲುಮಾನವ ನಾನು
ಕೊಡಲಾರೆ ಏನೂ
ಎದೆಯಲ್ಲರಳಿದ ಹೂವು
ಘಮಿಸದಿದ್ದೀತೇನು ?|

ಮಗಳು ನೀನಾಗಿ ನನಗೆ
ಹೊಸ ಅರ್ಥ ಬಂಧಕೆ
ಮನಗೆದ್ದ ಮಗುವಾಗಿ
ಹೊಸ ಅಂದ ಬಿಂಬಕೆ |

ಬಂದ ನೆನಪಿದೆ ಇಂದು
ನಾಳೆ ಬಲು ಕಠಿಣ
ಮರೆಯಾಗದಿರುವಂತೆ
ಕಟ್ಟಿಂದೇ ತೋರಣ |

ರಾಮನಿಗೆ ಕೋದಂಡ
ಅರ್ಜುನಗೆ ಗಾಂಡೀವ
ಇರಲೆಂದೂ ನಿನ್ನಲ್ಲಿ
ಬದುಕ ಹಸನಿಸೊ ಭಾವ |

ತುಂಬಿರಲಿ ಬಾಳಲ್ಲಿ
ಕಳೆಕಳೆಯ ನಗೆಯು
ಇದ್ದು ನಿನ್ನವರೆಲ್ಲ
ಹರಸುತ್ತಿರಲಿ ಬುವಿಯು |

ಮತ್ತೆ ಕೋರುವೆ ನಿನಗೆ
ಜನ್ಮದಿನದ ಶುಭಾಶಯ
ನಗುತಲಿರು ಮಗುವೆ
ಚಿರವಿರಲಿ ಹರಯ |

Rating
No votes yet

Comments