ಆ ಹಾಡು

ಆ ಹಾಡು

ಯಾವುದೇ ವ್ಯಕ್ತಿ ಯನ್ನು ಆತ ಸತ್ತ ಮೇಲೆ ಗುರುತಿಸುವುದು ಅವ ಮಾಡಿದ ಕೆಲಸ ಹೊಗಳುವುದು ನಮ್ಮ ಭಾರತದೇಶ ಪಾಲಿಸಿಕೊಂಡು ಬಂದ ಒಂದು ಸಂಪ್ರದಾಯ. ಆದರೆ ಕೆಲವು ಕಲಾವಿದರಿಗೆ ಆ ಭಾಗ್ಯ ಸಹ ಸಿಗುವುದಿಲ್ಲ ಉದಾಹರಣೆಗೆ ಮೊನ್ನೆ ತೀರಿಕೊಂಡ ಸುಲೋಚನ ಅವರ ವಿಷಯ ತಗೊಳ್ಳಿ. ನಮ್ಮ ಕನ್ನಡ ಭಾಷೆಗೆ
ಅವರು ನೀಡಿದ ಕೊಡುಗೆ ಅತ್ಯಲ್ಪ ಇರಬಹುದು ಆದರೆ ನೆನಪಿನಲ್ಲಿ ಉಳಿಯುವಂತಹುದು. ಯಾರು ತಾನೇ
ಮರೆಯಲು ಸಾಧ್ಯ ಈ ಹಾಡುಗಳನ್ನು......

೧) "ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ...." ಕನ್ನಡ ಭಾವಗೀತೆಗಳಲ್ಲಿ ಈ ಹಾಡು ಎಂದೂ ಮರೆಯಲಾರದ ಹಾಡು. ಈಗಲೂ ಹಳೆ ನೆನಪು ಒತ್ತರಿಸಿ ಬಂದಾಗ ನಾ ಕೇಳಬಯಸುವ ಹಾಡು ಇದು.
ಸುಲೋಚನ ಮಾತ್ರ ಈ ಹಾಡು ಹಾಡಲು ಯೋಗ್ಯರು ಯಾಕೆಂದರೆ ಅವರ ಧ್ವನಿಯಲ್ಲಿ ಒಂದು ನಾಜೂಕಾದ
ಸೆಳೆತ ವಿತ್ತು. "ಬಾನಿನಲ್ಲಿ ಒಂಟಿ ತಾರೆ...." ವಾಹ್ ! ಹಾಡೆಂದರೆ ಇದು.

೨) ಶರೀಫರ ಹಾಡು ಧಾರವಾಡ ಭಾಷೆಯಲ್ಲಿ. ಸುಲೋಚನ ತಮ್ಮ ಕೈಲಾದಷ್ಟು ನ್ಯಾಯ ಒದಗಿಸಿದ್ದರು.
"ಹಾವು ತುಳಿದೇನ ಮಾನಿನಿ....." , "ಹೋಗುತಿಹುದು ಕಾಲ ವ್ಯರ್ಠ...." ಹಾಡುಗಳಿಗೆ ತಮ್ಮ ಸಿರಿಕಂಠ
ಒದಗಿಸಿದ್ದರು."ನಿಂತೇನು ಮಾಡಿದಿ ಇಲ್ಲಿ " ಅವರ ಧ್ವನಿಯಲ್ಲಿ ಕೇಳುತ್ತಿದ್ದರೆ ಹಾಗೆ ತೇಲಿ ಹೋದಂತೆ.

೩) "ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು...." ನನ್ನ ಮಗಳು ಸಣ್ಣವಳಿದ್ದಾಗ ಹಾಡಿ ಮಲಗಿಸುತ್ತಿದ್ದೆ.
ಆದರೇನು ನನ್ನದು ಗಾರ್ಧಭ ಗಾನ ಸುಲೋಚನರದು ಕೋಕಿಲ ಗಾನ. ಅವರ ಧ್ವನಿಯಲ್ಲಿ ತೇಲಿ ಬರುವ ಈ
ಜೋಗುಳದ ಹಾಡು ಅಪ್ಯಾಯಮಾನ. "ವೀಣೆ ನುಡಿಸುವರಂತೆ..." ಈ ಶಬ್ದದಲ್ಲಿನ ಲಾಲಿತ್ಯ ಅವರಿಗೆ ಮಾತ್ರ
ಸಾಧ್ಯ.

೪) ಅನೇಕ ಸಿನೇಮಾಗಳಿಗಾಗಿ ಹಾಡಿದ್ದಾರೆ. " ನೇಸರ ನೋಡು...." , " ಈ ಬಾಳ ತೆರೆಯ ಮೇಲೆ ಸಿಹಿ ಭಾವ
ಹೆಣೆದ ಜಾಲ" , ಅಣ್ಣಾವರ ಜತೆ ಹಾಡಿದ "ಇದು ರಾಮ ಮಂದಿರ", "ಆನೆ ಮೇಲೆ ಅಂಬಾರಿ ಕಂಡೆ...."
ಒಂದೊಂದು ಹಾಡು ಅಮೂಲ್ಯ.

ಆದರೇನು ಅವರ ಪ್ರತಿಭೆ ಸರಿಯಾಗಿ ಬಳಕೆ ಆಗಲೇ ಇಲ್ಲ. ಅದೇನೋ ಅಂತಾರಲ್ಲ ’ಹಿತ್ತಿಲ ಗಿಡ ಮದ್ದಲ್ಲ’
ಈ ಗಾದೆಯನ್ನು ನಮ್ಮ ಸಿನೇಮಾ ಮಂದಿ ಚಾಚೂತಪ್ಪದೇ ಪಾಲಿಸಿತಿದ್ದಾರೆ ಅಂದಿಗೂ ಇಂದಿಗೂ !

Rating
No votes yet

Comments