ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-

ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-

Comments

ಬರಹ

ಅದ್ಯಾಕೆ ಅಷ್ಟು ರೂಡ್ ಆಗಿ ಉತ್ತರಿಸಿದೀಯ. ಅವಳು ಹುಡುಗಿ ಗೊತ್ತಿಲ್ವ ನಿನಗೆ?
ಎಂದಿದ್ದಕ್ಕೆ, 'ಹುಡುಗಿಯಾದ್ರೆ ಎರಡು ಕೊಂಬ? ಸಮಾನತೆ ಬೇಕು ಅಂತೀರ ಮತ್ತೆ ಹೀಗೆ
ರಿಸರ್ವೇಶನ್ನು ಕೇಳ್ತೀರ' ಅಂತಂದು ನಕ್ಕಿದ್ದ. ಹೌದಲ್ವ ಹುಡುಗಿ ಎಂದ ಮಾತ್ರಕ್ಕೆ
ಆಕೆಯನ್ನು ವಿಶೇಷವಾಗಿ ಉಪಚರಿಸಬೇಕಿತ್ತು ಅಂತ ನನಗನ್ನಿಸಿದ್ದೇಕೆ? ಪುರುಷರೊಡನೆ
ಸಮಾನತೆ ಬಯಸುವ ನಾವು, ಇತರ ಪುರುಷರಂತೆ ನಮ್ಮನ್ನು ಕಂಡಾಗ ಸ್ತ್ರೀ ಶೋಷಣೆ
ಅಂದುಕೊಂಡುಬಿಡುತ್ತೇವಲ್ಲ? ಸ್ತ್ರೀ ಪುರುಷ ಸಮಾನತೆಯ ಬಗ್ಗೆ ನನ್ನದು ಮೊದಲಿನಿಂದಲೂ
ಗೊಂದಲದ ಅಭಿಪ್ರಾಯಗಳೇ. ಸ್ಪಷ್ಟವಾಗಿ ಏನನ್ನು ತೀರ್ಮಾನಿಸಿಕೊಳ್ಳಲಾಗದೆ
ಚಡಪಡಿಸುತ್ತೇನೆ.

ಮೊನ್ನೆ ಟಿವಿ ಚಾನೆಲ್ ಒಂದರಲ್ಲಿ ವೈಶ್ಯಾವಾಟಿಕೆಯ ಕುರಿತು ಚರ್ಚಿಸುತ್ತಿದ್ದರು.
ಸ್ತ್ರೀ ಸ್ವಾತಂತ್ರ್ಯ ಮತ್ತು ಸಮಾಜದ ಸ್ವಾಸ್ಥ್ಯ ಚರ್ಚೆಯ ಪ್ರಮುಖ ವಿಷಯವಾಗಿತ್ತು.
ವೈಶ್ಯಾವಾಟಿಕೆಯನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಯುವತಿ, ತಾನು ಸ್ವಇಚ್ಛೆಯಿಂದ ಈ
ಕೆಲಸಕ್ಕೆ ಬಂದಿದ್ದಾಗಿಯೂ, ಇತರ ಎಲ್ಲಾ ಕೆಲಸಗಳಂತೆ ಜೀವನ ನಿರ್ವಹಣೆಗಾಗಿ ತಾನು ಈ
ಕೆಲಸವನ್ನು ಆರಿಸಿಕೊಂಡಿರುವೆ, ತನ್ನ ವೃತ್ತಿಯ ಬಗ್ಗೆ ಪಶ್ಚಾತಾಪವಾಗಲೀ ದುಃಖವಾಗಲೀ
ತನಗೆ ಇಲ್ಲವೆಂದೂ ಹೇಳುತ್ತಿದ್ದಳು. ಚರ್ಚೆ ಮುಂದುವರೆದು ಸಮಾಜದ ಸ್ವಾಸ್ಥ್ಯದ ಬಗ್ಗೆ
ಹೊರಳಿತು. ವೈಶ್ಯಾವಾಟಿಕೆಗೆ ಬಂದವರೆಲ್ಲಾ ತಮ್ಮ ಇಚ್ಛೆಯಿಂದ ಬಂದಿರುವುದಿಲ್ಲ,
ಕೆಲವರನ್ನು ಬಲತ್ಕಾರವಾಗಿ ವೈಶ್ಯಾವಾಟಿಕೆಗೆ ಇಳಿಸುತ್ತಾರೆ. ಅದನ್ನು ಇತರ
ವೃತ್ತಿಗಳಂತೆ ಪರಿಗಣಿಸಲು ಸಾಧ್ಯವಿಲ್ಲ. ವೈಶ್ಯಾವಾಟಿಕೆಯಂತಹ ಕೊಳಕನ್ನು ಒಳಗೊಂಡಿರುವ
ಸಮಾಜದಲ್ಲಿ ಬದುಕುವುದು ಕಳವಳಕಾರಿಯೆಂದೂ, ಅದು ಪೇಯ್ಡ್ ರೇಪ್ (ಹಣನೀಡಿ
ಅತ್ಯಚಾರವೆಸಗುವುದು) ಎಂದು, ಬಲತ್ಕಾರವಾಗಿಯಾಗಲೀ ಸ್ವ ಇಚ್ಛೆಯಿಂದಾಗಲೀ
ವೈಶ್ಯಾವಾಟಿಕೆಯಿಂದ ಸಮಾಜದ ಮೇಲಾಗುವ ಪರಿಣಾಮಗಳು ಯೋಚಿಸುವಂತಹುದ್ದು.
ವೈಶ್ಯಾವಾಟಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದಾಗಲೀ, ಒಪ್ಪಿಕೊಳ್ಳುವುದಾಗಲೀ
ಗೊಂದಲದ ವಿಷಯವೇ ಎಂಬ ಕನ್ ಕ್ಲೂಶನ್ ನಿಂದ ಚರ್ಚೆ ಮುಗಿದಿತ್ತು.

ಸ್ತ್ರೀಸ್ವಾತಂತ್ರ್ಯದ ಬಗ್ಗೆ ಅವರ ಮಾತುಗಳನ್ನು ಕೇಳಿದಾಗ ನನ್ನಲ್ಲಿ ಅನೇಕ ಗೊಂದಲಗಳುಂಟಾದವು. ಸಮಾಜದ ಸ್ವಾಸ್ಠ್ಯದ ವಿಷಯ ಬಂದಾಗ ಹೆಣ್ಣಿನ ಜೀವನ ಕ್ರಮವೇ ಅಷ್ಟು ಪ್ರಾಮುಖ್ಯತೆ ಪಡೆದುಕೊಂಡುಬಿಡುತ್ತದಲ್ಲ? ಗಂಡಸು ಹೇಗಿದ್ದರು ಸಹಿಸುವ ಸಮಾಜ ಹೆಣ್ಣಿನ ನಡತೆಯಿಂದ, ಆಕೆಯ ಜೀವನಕ್ರಮದಿಂದಲೇ ಅದರ ಆರೋಗ್ಯವನ್ನು ನಿರ್ಧರಿಸಿಕೊಳ್ಳೋದು ಏಕೆ? ಹೆಣ್ಣಿನ ಹಲವು ನಿಲುವುಗಳಿಗೆ, ಅಭಿಪ್ರಾಯಗಳಿಗೆ ಮೈಲಿಗೆಯ ಆರೋಪ ಹೊರಿಸಿ, ಆಕೆ ಹೀಗೆ ಇರಬೇಕು ಎಂದು ಅವಳ ಮೇಲೆ ಬಂಧನಗಳನ್ನು ಹೇರಿ ಅವಳ ಮನಸಿನಲ್ಲಿ ತಾನು ಅಬಲೆ ನಿಸ್ಸಾಹಯಕಳು ಎಂಬತಹ ಭಾವನೆಗಳನ್ನು ಬೆಳೆಸುವ ಸಮಾಜ ಹೆಣ್ಣನ್ನು ಮಾತ್ರ ನಿಯಂತ್ರಣದಲ್ಲಿಡಲು ಮಾಡಿರುವ ಹೇರಿಕೆಗಳಲ್ಲವೇ? ಇಂತಹ ಹೇರಿಕೆಗಳನ್ನು ಮೀರಿದ ಹೆಣ್ಣು ಸಮಾಜದ ದೃಷ್ಟಿಯಲ್ಲಿ ಕೀಳು ಅನಿಸಿಬಿಡುತ್ತಾಳೆ! ಒಂದೇ ಗಂಡಿಗೆ ನಿಷ್ಠಳಾದ ಹೆಣ್ಣು ಪತಿವ್ರತೆಯಾಗಿ ಆರೋಗ್ಯ ಸಮಾಜದ ಪ್ರತೀಕವಾದಂತೆ, ವಿವಿಧ ಕಾರಣಗಳಿಂದ ವೈಶ್ಯಾವೃತ್ತಿಗೆ ಇಳಿದ ಹೆಣ್ಣು ಸಮಾಜದ ಸ್ವಾಸ್ಥ್ಯ ಕೆಡಿಸಿಬಿಡುತ್ತಾಳೆ!! ಒಂದಕ್ಕಿಂತ ಹೆಚ್ಚು
ಹೆಣ್ಣುಗಳ ಸಂಪರ್ಕ ಹೊಂದಿಯೂ ಗಂಡಸೊಬ್ಬ ಗೃಹಸ್ಥನಾಗಿ ಬಾಳುವುದು ಸಾಧ್ಯವಿದೆಯಾದರೇ,
ಹೆಣ್ಣಿಗೇಕೆ ಇದು ಸಾಧ್ಯವಿಲ್ಲ? ಇಷ್ಟಕ್ಕೂ ವೈಶ್ಯಾವಾಟಿಕೆ ಹೆಣ್ಣಿಂದ ಮಾತ್ರ
ಸಾಧ್ಯವಾಗುತ್ತದೆಯೇ? ಹೆಣ್ಣಿನಷ್ಟೇ ಗಂಡೂ ಸಹ ಅದರಲ್ಲಿ ಭಾಗಿಯಾಗಿರುತ್ತಾನಲ್ಲ
ಅವನನ್ನು ಪ್ರಶ್ನಿಸದ ಸಮಾಜ ಹೆಣ್ಣನ್ನೇಕೆ ದೂರುತ್ತದೆ? ಹೆಣ್ಣು ತನ್ನ ಮೈ
ಮಾರಿಕೊಳ್ಳುತ್ತಾಳೆಂದರೆ, ಕೊಂಡು ಕೊಳ್ಳುವವನು ಗಂಡಲ್ಲವೇ?

ಒಬ್ಬ ಪುರುಷ ಅನೇಕ ಹೆಂಗಸರೊಂದಿಗಿದ್ದಾಗ್ಯೂ ಸ್ತ್ರೀ ಆತನನ್ನು ಒಪ್ಪುತ್ತಾಳೆಂದರೆ
ಸ್ತ್ರೀಯ ಅದೇ ಪ್ರವೃತ್ತಿಯನ್ನು ಪುರುಷನ್ಯಾಕೆ ಕಡೆಗಣಿಸಬೇಕು ಎಂಬುದು ನನ್ನ ಬೇಸಿಕ್
ಪ್ರಶ್ನೆಯಾದರೂ, ನನ್ನಲ್ಲಿನ ಗೊಂದಲ ಅಷ್ಟೇ ಅಲ್ಲ. ಸಮಾನತೆ ಅಂದರೆ ಸ್ತ್ರೀಯು
ಪುರಷನಿಂದ ಸಾಧ್ಯವಾಗುವುದನ್ನೆಲ್ಲ ಮಾಡುವುದಷ್ಟೇ ಎಂದರ್ಥವೇ? ಅದೇ ನಿಜವಾದರೆ ಸ್ತ್ರೀ
ಸ್ವಾತಂತ್ರ್ಯ ಎಂಬ ಪದಕ್ಕೆ ಅರ್ಥವೇನಿದೆ? ಸ್ತ್ರೀಯೊಬ್ಬಳು ಪುರುಷನ ಫ್ಲರ್ಟಿಂಗನ್ನು
ಸಹಿಸಿಕೊಂಡು ತಾನು ಪತಿವ್ರತೆಯಾಗಿ ಉಳಿಯುವುದು ಸಾಧ್ಯವಿದೆ ಎಂದಾದರೆ, ಆ ಸ್ಥಿತಿ
ಅವಳಿಗೆ ಸಮಾಜದಲ್ಲಿ ಭದ್ರತೆ ಮತ್ತು ಗೌರವ ತಂದುಕೊಡುತ್ತಿದೆಯಲ್ಲ. ಸಮಾಜವೆಂದರೇ
ಕೇವಲ ಪುರುಷರೆಂದಲ್ಲ, ಸಮಾಜವು ಸ್ತ್ರೀಪುರುಷರಿಬ್ಬರನ್ನೂ ಒಳಗೊಂಡಿರುತ್ತದೆ. ಹಲವು
ಗಂಡಸರ ಸಂಬಂಧವಿರಿಸಿಕೊಳ್ಳುವ ಹೆಣ್ಣನ್ನು ಕೀಳು ಎಂದು ಭಾವಿಸುವುದು ಸಮಾಜದ
ಪುರುಷರಷ್ಟೇ ಅಲ್ಲ, ಪತಿವ್ರತೆ ಎನಿಸಿಕೊಂಡಿರುವ ಇತರ ಸ್ತ್ರೀಯರ ನಿಲುವೂ ಇದೇ
ಆಗಿರುತ್ತದೆ. ಅಲ್ಲದೇ ನಮ್ಮ ಸಮಾಜಕ್ಕೆ ಪಾತಿವ್ರತ್ಯದ ಶೀಲ ಮುಂತಾದ ಕಲ್ಪನೆಗಳು
ಇರುವುದರಿಂದಲೇ ಇತರ ಪಾಶ್ಚಾತ್ಯ ದೇಶಗಳಿಗೆ ಸಾಧ್ಯವಾಗದ ಕುಟುಂಬವ್ಯವಸ್ಥೆ ನಮ್ಮ
ದೇಶದಲ್ಲಿ ಸಾಧ್ಯವಾಗಿರುವುದು. ಸ್ತ್ರೀ ಪುರುಷ ಸಮಾನತೆ ಸಾಧಿಸಿದ ಅಥವಾ ಸಾಧಿಸಿದೆ
ಎನ್ನಲಾದ ಅಮೆರಿಕದಂತಹ ಮುಂದುವರೆದ ದೇಶಗಳಲ್ಲಿ ತೀರ ಶಾಲೆಯ ಮಕ್ಕಳಿಗೆ ಊಟದಲ್ಲಿ Anti pregnancy pill ಗಳನ್ನು ಹಾಕಿಕೊಡುತ್ತಾರೆಂದರೆ, ನಮ್ಮ ಕುಟುಂಬ ವ್ಯವಸ್ಥೆಯಿಂದ
ಹಾಗು ಅದರಿಂದ ಉಳಿದಿರುವ ಸಮಾಜದ ಸ್ವಾಸ್ಥ್ಯದಿಂದ ನಮ್ಮ ಹಾಗೂ ನಮ್ಮ ಮುಂದಿನ
ಪೀಳಿಗೆಗೆ ಎಷ್ಟು ಅನುಕೂಲವಾಗುತ್ತಿದೆಯಲ್ಲವೇ?

ಸಮಾನತೆ ಮತ್ತು ಸ್ತ್ರೀ ಸ್ವಾತಂತ್ರ್ಯ ಎರಡೂ ಒಂದಕ್ಕೊಂದು ಪೂರಕ. ಸಮಾಜದ ಸ್ವಾಸ್ಥ್ಯ
ಕೆಡಿಸುವುದಾಗಲೀ ಉಳಿಸುವುದಾಗಲೀ ಹೆಣ್ಣಿನ ಕೈಯಲ್ಲಿ ಸಾಧ್ಯವೆನ್ನುವುದಾದರೆ ಅದು
ಸ್ತ್ರೀ ಕುಲಕ್ಕೆ ಸಂದ ಗೌರವವಲ್ಲವೇ? ಹೀಗೆ ಎರಡೂ ಕೋನಗಳಲ್ಲಿ ಯೋಚಿಸಿದಾಗ ಯಾವುದು
ಸರಿ ಎಂದು ತೀರ್ಮಾನಿಸಲಾಗದೆ ಮತ್ತೆ ಮತ್ತೆ ಅದೇ ಗೊಂದಲದ ಗುಂಡಿಗೆ ಬೀಳುತ್ತೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet