ನಾನು ನೋಡಿದ ಸಿನೆಮಾ

ನಾನು ನೋಡಿದ ಸಿನೆಮಾ

ಈ ಸ್ಲಮ್ ಡಾಗ್ ಸಿನಿಮಾದ ಬಗೆಗಿನ ವಿಮರ್ಶೆಗಳು, ಚರ್ಚೆಗಳು, ವಾದ-ವಿವಾದಗಳು ನಿಜವಾಗಲೂ ಬೇಸರ ಹುಟ್ಟುವಷ್ಟು ನಮ್ಮ ಮಾಧ್ಯಮಗಳಲ್ಲಿ ನಡೆಯುತ್ತಿದೆ. ನಮ್ಮ ಬಾಲಿವುಡ್ ನಲ್ಲಿ ಹಾಗೂ ನಮ್ಮಿತರ ಪ್ರಾದೇಶಿಕ ಭಾಷೆಗಳಲ್ಲಿ ಇದಕ್ಕಿಂತ ಉತ್ತಮವಾದ ಚಿತ್ರಗಳು ಎಷ್ಟೋ ಬಂದಿವೆ. ನಾವ್ಯಾರೂ ಬಹುಶಃ ಗಮನಿಸಿಲ್ಲ ಅನಿಸುತ್ತೆ. ಈ ಚಿತ್ರದ ನಿರ್ದೇಶಕ ಎಲ್ಲೋ ಪಾರ್ಟಿ ಮಾಡುತ್ತಾ ಮಜವಾಗಿದ್ದರೆ, ಇಲ್ಲಿ ನಮ್ಮ ದೇಶದಲ್ಲಿ ಇದಕ್ಕೆ ರಾಜಕೀಯದ ಬಣ್ಣ ಬಂದಿದೆ. ಈ ಸಲದ ಚುನಾವಣೆಗೆ ಕಾಂಗ್ರೆಸ್ ‘ಜೈ ಹೋ’ ಹಾಡಿನ ಟ್ಯೂನನ್ನು ಬೇರೆ ಖರೀದಿಸಿದ್ದಾರಂತೆ.

ಹೀಗೆ ನನ್ನ ಮನಸ್ಸಿಗೆ ನಾಟಿದ ಸಿನೆಮಾದ ಬಗ್ಗೆ ಯೋಚನೆ ಮಾಡುತ್ತಿದ್ದಾಗ, ನೆನಪಾಗಿದ್ದು ‘ರಾಮಚಂದ್ ಪಾಕಿಸ್ತಾನಿ’. ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ವಾಸವಾಗಿರುವ ಒಂದು ಅಲೆಮಾರಿ ಹಿಂದೂ ಕುಟುಂಬದ ಕಥೆ ಇದು. ಗಡಿಭಾಗದಲ್ಲಿ ಇವರ ನೋವುನಲಿವು, ಸ್ಥಿತಿಗತಿಗಳನ್ನು ಬಹಳ ಮನೋಜ್ಣವಾಗಿ, ಹೃದಯಸ್ಪರ್ಶಿಯಾಗುವಂತೆ ಚಿತ್ರಿಸಿದ್ದಾರೆ. ಅಮ್ಮನ ಮೇಲೆ ಕ್ಷುಲ್ಲಕ ಕಾರಣಕ್ಕೆ ಕೋಪಗೊಂಡ ೭ ವರ್ಷದ ಬಾಲಕನು(ರಾಮಚಂದ್) ಮನೆಯಿಂದ ಹೊರಗೆ ಹೋಗುತ್ತಾನೆ. ಕೈಯಲ್ಲಿ ಕ್ಯಾಟರ್ ಪಿಲ್ಲರ್ ಹಿಡಿದ ಈತನಿಗೆ ಗಡಿ ದಾಟಬಾರದು ಎಂಬ ಅರಿವಿರುವುದಿಲ್ಲ. ಅಲ್ಲೇ ಗದ್ಧೆಯಲ್ಲಿ ದುಡಿಯುತ್ತಿದ್ದ ಆತನ ತಂದೆಗೆ ಮಗ ಗಡಿ ದಾಟುತ್ತಿರುವುದು ಗಮನಕ್ಕೆ ಬಂದು, ಕೂಗಿದರೂ ಕೋಪದಲ್ಲಿದ್ದ ಅವನು ತಂದೆಯ ಮಾತನ್ನು ಕೇಳದೇ ವಾಪಸ್ಸು ಬರುವುದಿಲ್ಲ. ಗಡಿ ಕಾಯುತ್ತಿದ್ದ ಸೈನಿಕರು ಆ ಮಗುವನ್ನು ಹಿಡಿಯುತ್ತಾರೆ, ಗಾಬರಿಗೊಂಡ ತಂದೆಯೂ ಕೂಡ ಗಡಿಯನ್ನು ದಾಟುತ್ತಾನೆ. ಈತನ ಕೈಯಲ್ಲಿದ್ದ ಆಟದ ಕ್ಯಾಟರ್ ಪಿಲ್ಲರ್ ಆಯುಧದಂತೆ ತೋರುತ್ತದೆ ಹಾಗೂ ಇವರು ಹಿಂದೂಗಳಾಗಿದ್ದರೆಂದು, ಪಾಕಿಸ್ತಾನದ ಕಡೆಯ ಸ್ಪೈಗಳಾಗಿರಬಹುದೆಂದು ಇವರನ್ನು ದೆಹಲಿಯ ಜೈಲಿಗೆ ಹಾಕಲಾಗುತ್ತದೆ. ತಂದೆಯ ಅಸಹಾಯಕತೆ, ಮಗುವಿನ ಮುಗ್ಧತೆ, ಇತ್ತ ಕಡೆ ತಾಯಿಗೆ ಇವರಿಬ್ಬರೂ ಏನಾದರೋ ಎನ್ನುವ ಚಿಂತೆ, ಅಲ್ಲೊಬ್ಬ ಆ ಹೆಣ್ಣಿಗೆ ಸಹಾಯ ಮಾಡುವವ, ಹೀಗೆ ಶುರುವಾಗುತ್ತದೆ ಕಥೆ. ಮುಗ್ಧ ಬಾಲಕ ತನ್ನನ್ನು ತಾನು ಜಗತ್ತಿಗೆ ತೆರೆದುಕೊಳ್ಳುವ ಪರಿ, ನಿಜಕ್ಕೂ ಕಣ್ಣೀರಿನಲ್ಲಿ ನಮ್ಮನ್ನು ಮುಳುಗುವಂತೆ ಮಾಡುತ್ತದೆ. ಎಲ್ಲೂ ವಿಷಯವನ್ನು ಅನಗತ್ಯವಾಗಿ ಎಳೆದಿಲ್ಲ ಹಾಗೂ ಸಿನೀಮಯ ಅನ್ನಿಸುವಂತಹ ಚಿತ್ರಣವಿಲ್ಲ ಹಾಗೂ ಪಾಕಿಸ್ತಾನವನ್ನಾಗಲೀ, ಭಾರತವನ್ನಾಗಲೀ ದೂಶಿಸುವುದಿಲ್ಲ. ಬಹಳ ನೈಜ ಅಷ್ಟೇ ಮನಸ್ಸನ್ನು ಬಹಳ ಚಿಂತನೆಗೀಡಾಗುವುದಂತೆ ಮಾಡುವುದು. ಇವತ್ತಿನ ದಿವಸ ಯಾರು ಉಗ್ರರೋ ಎಂದು ಎಲ್ಲರೂ ಎಲ್ಲರನ್ನು ಅನುಮಾನಿಸುತ್ತಿರುವ ಕಾಲದಲ್ಲಿ ಬಂದ ಈ ಚಿತ್ರ ಹೃದಯಕ್ಕೆ ತಟ್ಟುವುದರಲ್ಲಿ ಸಂಶಯವೇ ಇಲ್ಲ.

Rating
No votes yet

Comments