ಭಾಷಾ ಶುದ್ಧಿಯ ನಟ್ಟು ಬೋಲ್ಟುಗಳು….

0
ಕನ್ನಡಕ್ಕೆ ಸಂಬಂಧಿಸಿದ ಚರ್ಚೆಗಳ ಅತಿ ದೊಡ್ಡ ಮಿತಿಯೆಂದರೆ ಅದು ಕೇವಲ ‘ಭಾಷಾ ಶುದ್ದಿ’ಯ ಇಲ್ಲವೇ ಕನ್ನಡ ಸಾಹಿತ್ಯದ ಕುರಿತ ಚರ್ಚೆಯಾಗಿಬಿಡುವುದು. ಇನ್ನೂ ಸ್ವಲ್ಪ ಸ್ಪಷ್ಟವಾಗಿ ಹೇಳಬೇಕೆಂದರೆ ಕನ್ನಡ ಭಾಷೆಯ ಒಂದು ಬಗೆಯ ಬಳಕೆಗಷ್ಟೇ ಈ ಚರ್ಚೆಗಳು ಸೀಮಿತವಾಗುವುದು. ಈ ಚೌಕಟ್ಟನ್ನು ಮೀರಿದವರು ಚರ್ಚೆಯಿಂದ ಹೊರಗುಳಿಯುತ್ತಾರೆ ಇಲ್ಲವೇ ‘ಮಡಿವಂತ’ರ ತೀವ್ರ ದಾಳಿಗೆ ಗುರಿಯಾಗುತ್ತಾರೆ. ಡಿ.ಎನ್.ಶಂಕರಭಟ್ಟರ ‘ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ’ ವಿದ್ವತ್ ವಲಯದಲ್ಲಿ ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿತು. ಈ ಚರ್ಚೆಗಳನ್ನು ಕನ್ನಡದ ಬಳಕೆಯ ಮಟ್ಟಕ್ಕೆ ತರುವಲ್ಲಿ ಎಲ್ಲರೂ ಸೋತರು. ಕನ್ನಡ ಬಳಸುವ ಸಾಮಾನ್ಯರನ್ನು ಬಿಟ್ಟು ಬಿಡೋಣ. ಕನ್ನಡ ಸ್ನಾತಕೋತ್ತರ ತರಗತಿಗಳಲ್ಲೂ ‘ಕನ್ನಡದ್ದೇ ವ್ಯಾಕರಣ’ ಪರಿಕಲ್ಪನೆಯ ಕುರಿತ ಚರ್ಚೆಗಳು ನಡೆಯುವುದಿಲ್ಲ. ಅಂದರೆ ನಮ್ಮ ಮಟ್ಟಿಗೆ ಕನ್ನಡದ ಕುರಿತ ಚರ್ಚೆ ಎಂಬುದು ಜೀವಂತ, ಚಲನಶೀಲ ಸಂಸ್ಕೃತಿಯೊಂದರ ಕುರಿತ ಚರ್ಚೆಯಲ್ಲ. ‘ಒಂದಾನೊಂದು ಕಾಲದಲ್ಲಿ ಏಸೊಂದು ಮುದವಿತ್ತ’ ಎಂಬ ನಾಸ್ಟಾಲ್ಜಿಯಾದಲ್ಲಿ ಮುಳುಗುವ ಚರ್ಚೆಗಳು. ಈಗ ಓ.ಎಲ್.ಎನ್. ಅವರು ಆರಂಭಿಸಿರುವ ಭಾಷಾ ಶುದ್ಧಿಗೆ ಸಂಬಂಧಿಸಿದ ಚರ್ಚೆಗೆ ಬರುತ್ತಿರುವ ಪ್ರತಿಕ್ರಿಯೆಗಳಲ್ಲಿ ಕೆಲವು ಭಾಷೆಯ ಕುರಿತ ಸೀಮಿತ ಗ್ರಹಿಕೆಯನ್ನು ಬಹಳ ಸ್ಪಷ್ಟವಾಗಿ ವ್ಯಕ್ತ ಪಡಿಸುತ್ತಿವೆ. ಈ ಸೀಮಿತ ಗ್ರಹಿಕೆ ಕೇವಲ ಸಾಮಾನ್ಯರ ವಲಯಕ್ಕೆ ಮಾತ್ರ ಸೀಮಿತವಾಗಿ ಉಳಿದ ವಿಷಯವಾಗಿದ್ದರೆ ತೊಂದರೆ ಇರಲಿಲ್ಲ. ಕನ್ನಡ ಭಾಷೆಯನ್ನು ಒಂದು ಅಧ್ಯಯನ ವಿಷಯವನ್ನಾಗಿ ಮಾಡಿಕೊಂಡ ವಲಯದಲ್ಲೂ ಇದೆ. ಕೆಲ ತಿಂಗಳುಗಳ ಹಿಂದೆ ಹಂಪಿಯ ಕನ್ನಡ ವಿಶ್ವ ವಿದ್ಯಾಲಯ ಮತ್ತು ಮೈಸೂರಿನ ಸಿಐಐಎಲ್ ಸೇರಿ ಹಂಪಿಯಲ್ಲಿ ‘ಭಾಷೆ ಮತ್ತು ತಂತ್ರಜ್ಞಾನ’ ವಿಷಯದಲ್ಲಿ ಮೂರು ದಿನಗಳ ವಿಚಾರ ಗೋಷ್ಠಿಯನ್ನು ಏರ್ಪಡಿಸಿದ್ದವು. ಮೂರು ದಿನಗಳಲ್ಲಿ ನಲವತ್ತು ಪ್ರಬಂಧಗಳು ಮಂಡಿತವಾದವು. ಇವುಗಳಲ್ಲಿ ಬೆರಳೆಣಿಕೆಯ ಕೆಲವನ್ನು ಹೊರತು ಪಡಿಸಿದರೆ ಉಳಿದೆಲ್ಲವೂ ಭಾಷೆ ಮತ್ತು ತಂತ್ರಜ್ಞಾನಗಳೆರಡನ್ನೂ ಬಹಳ ಸೀಮಿತ ಅರ್ಥದಲ್ಲಿ ಗ್ರಹಿಸಿದ ಪ್ರಬಂಧಗಳು. ಭಾಷಾ ಶಾಸ್ತ್ರವನ್ನು ಅಧ್ಯಯನ ವಿಷಯವನ್ನಾಗಿ ಕಲಿತ ವಿದ್ಯಾರ್ಥಿಗಳೂ ಭಾಷೆಯನ್ನು ಅದರ ಜೀವಂತ ರೂಪದಲ್ಲಿ ಗ್ರಹಿಸಿರಲಿಲ್ಲ ಎಂಬುದು ಆಶ್ಚರ್ಯಕರ ವಿಷಯವಾದರೂ ಸತ್ಯ. ಇಲ್ಲಿ ಮಂಡಿತವಾದ ಪ್ರಬಂಧಗಳಲ್ಲಿ ಹೆಚ್ಚಿನವು ಅಕ್ಷರ ಸಂಬಂಧೀ ತಂತ್ರಜ್ಞಾನವಾದ ಮುದ್ರಣ ತಂತ್ರಜ್ಞಾನದ ಆಚೆಗೆ ಹೋಗಿ ಚರ್ಚಿಸಲಿಲ್ಲ. ಮುದ್ರಣ ತಂತ್ರಜ್ಞಾನ ಭಾಷೆಯ ಮಟ್ಟಿಗೆ ಬಹಳ ಮುಖ್ಯವಾಗಿರಬಹುದು. ಆದರೆ ಇದು ಮಾತ್ರ ಮುಖ್ಯವಲ್ಲವಲ್ಲ! ಅನಕ್ಷರಸ್ಥ ಕನ್ನಡಿಗನ ದೃಷ್ಟಿಕೋನದಿಂದ ನೋಡಿದರೆ ಅಕ್ಷರಕ್ಕೆ ಸಂಬಂಧಿಸಿದ ತಂತ್ರಜ್ಞಾನವೇ ಅವನಿಗೆ ಅಪ್ರಸ್ತುತ. ಆದರೆ ಅವನ ಬದುಕಿನಲ್ಲೂ ತಂತ್ರಜ್ಞಾನವಿದೆ. ಆತನಲ್ಲೂ ಒಂದು ತಂತ್ರಜ್ಞಾನದ ಪದಕೋಶವಿದೆ. ಇದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದ ಒಂದು ಪ್ರಬಂಧವೂ ವಿಚಾರ ಸಂಕಿರಣದಲ್ಲಿ ಮಂಡಿತವಾಗಲಿಲ್ಲ. ಇದಕ್ಕಾಗಿ ಬಹುದೊಡ್ಡ ಸಂಶೋಧನೆಯ ಅಗತ್ಯವೇನೂ ಇರಲಿಲ್ಲ. ಗ್ರಂಥಾಲಯಗಳಲ್ಲಿ ದಿನಗಟ್ಟಳೆ ಕಳೆಯಬೇಕಾದ ಅಗತ್ಯವೂ ಇರಲಿಲ್ಲ. ಸುತ್ತಮುತ್ತಲಿನ ಬದುಕನ್ನು ಸೂಕ್ಷ್ಮವಾಗಿ ಗಮನಿಸಿ ಭಾಷಾ ಶಾಸ್ತ್ರದ ಸರಳ ಪರಿಕರಗಳನ್ನು ಬಳಸಿ ವಿಶ್ಲೇಷಿಸಿದ್ದರೆ ಸಾಕಾಗುತ್ತಿತ್ತು. ಇದರಿಂದ ‘ಒಳ್ಳೆಯ ಪ್ರಬಂಧ’ ತಯಾರಿಸಲು ಸಾಧ್ಯವಾಗದಿದ್ದರೂ ತಂತ್ರಜ್ಞಾನವೆಂಬುದು ಕನ್ನಡಿಗನ ಬದುಕಿನೊಳಕ್ಕೆ ಪ್ರವೇಶ ಪಡೆದದ್ದು ಮುದ್ರಣ ತಂತ್ರಜ್ಞಾನ ಬರುವುದಕ್ಕೂ ಬಹಳ ಮೊದಲು ಎಂಬುದು ಕನಿಷ್ಠ ಪ್ರಬಂಧಕಾರರಿಗಾದರೂ ಅರ್ಥವಾಗುತ್ತಿತ್ತು. ಮೋಟಾರು ವಾಹನಗಳು ಕನ್ನಡಿಗನ ಬದುಕಿನ ಅವಿಭಾಜ್ಯ ಅಂಗವಾಗಿ ದಶಕಗಳೇ ಕಳೆದವು. ಈ ಅವಧಿಯಲ್ಲಿ ಮೋಟಾರು ವಾಹನಗಳಿಗೆ ಸಂಬಂಧಿಸಿದ ಒಂದು ತಾಂತ್ರಿಕ ಪದಕೋಶ ಕನ್ನಡಕ್ಕೆ ಸೇರಿದೆ. ಈ ಬಗ್ಗೆ ನಾವೆಷ್ಟು ಚರ್ಚಿಸಿದ್ದೇವೆ. ತಂತ್ರಜ್ಞಾನ ಮತ್ತು ಕನ್ನಡದ ಕುರಿತ ಚರ್ಚೆಯಲ್ಲಿ ಬಹಳ ಪ್ರಮುಖ ಸ್ಥಾನ ಮೋಟಾರು ವಾಹನಗಳಿಗೆ ಸಂಬಂಧಿಸಿದ ಪದಕೋಶಕ್ಕಿದೆ ಎಂದು ನನಗನ್ನಿಸುತ್ತಿದೆ. ಇದು ಕಂಪ್ಯೂಟರ್ ಅಥವಾ ಆ ಬಗೆಯ ಇತರ ಯಾವುದೇ ತಂತ್ರಜ್ಞಾನದಂತೆ ಕೇವಲ ಶಿಕ್ಷಿತ ವರ್ಗಕ್ಕೆ ಮಾತ್ರ ಎಟುಕಿದ ತಂತ್ರಜ್ಞಾನವಲ್ಲ. ಮೋಟಾರು ವಾಹನಗಳನ್ನು ದುರಸ್ತಿ ಮಾಡುವವರಲ್ಲಿ ಯಾವ ಭಾಷೆಯ ಅಕ್ಷರಗಳನ್ನೂ ಅರಿಯದ ಒಂದು ದೊಡ್ಡ ವರ್ಗವಿದೆ. ಈ ವರ್ಗದ ಆಡು ನುಡಿಯಲ್ಲಿ ಮೋಟಾರು ವಾಹನದ ತಂತ್ರಜ್ಞಾನಕ್ಕೆ ಸಂಬಂಧಿಸಿದ ಬಹುದೊಡ್ಡ ‘ಕನ್ನಡ ಪದಕೋಶ’ವಿದೆ. ಇದನ್ನು ನಾನು ಕನ್ನಡ ಪದಕೋಶವೆಂದೇ ಕರೆಯುತ್ತೇನೆ. ಏಕೆಂದರೆ ಮೋಟಾರು ವಾಹನಗಳ ಸಂದರ್ಭದಲ್ಲಿ ಬಳಸುವ ಅನೇಕ ಪದಗಳು ಇಂಗ್ಲಿಷ್ ಅಥವಾ ಇತರ ಮೂಲಗಳನ್ನು ಹೊಂದಿದ್ದರು ಆ ಪದಗಳು ಕನ್ನಡದ್ದೇ ಎಂಬಂತೆ ಆಡು ನುಡಿಯಲ್ಲಿ ಬಳಕೆಯಾಗುತ್ತವೆ. ಈ ಪದಗಳು ಅವನ್ನು ಬಳಸುವವರಿಗೆ ಬೇಕಾದ ಎಲ್ಲಾ ಬದಲಾವಣೆಗಳಿಗೂ ಒಳಗಾಗಿ ಸಂಪೂರ್ಣ ಕನ್ನಡ ಪದಗಳೇ ಆಗಿಬಿಟ್ಟಿವೆ. ಬಸ್ಸು, ಬೋಲ್ಟು, ನಟ್ಟು ಎಂಬ ಪದಗಳನ್ನೆಲ್ಲಾ ಕನ್ನಡದ್ದಲ್ಲ ಎನ್ನಲು ಸಾಧ್ಯವೇ? ಮೋಟಾರು ವಾಹನಗಳದ್ದು ಒಂದು ಉದಾಹರಣೆ ಮಾತ್ರ. ಕೃಷಿ ಕ್ಷೇತ್ರದಲ್ಲಿರುವ ಆಧುನಿಕ ತಂತ್ರಜ್ಞಾನದ ಪದ ಸಂಪತ್ತನ್ನು ನಾವು ಗಮನಿಸುವುದೇ ಇಲ್ಲ. ಗ್ಯಾಮಾಕ್ಸಿನ್ ಎಂಬ ಕೀಟನಾಶಕ ಜಮಕ್ಷನ್ ಆಗಿ ಕನಿಷ್ಠ ಮೂವತ್ತು ವರ್ಷಗಳಾದರೂ ಕಳೆದಿರಬೇಕು. ಇರಿಗೇಶನ್ ಪಂಪ್ ಸೆಟ್ ಶಿಷ್ಠ ಬಳಕೆಯಲ್ಲಿಯೂ ನೀರಾವರಿ ಪಂಪ್ ಸೆಟ್ ಮಾತ್ರವಾಗಿ ಉಳಿದಿದೆ. ಡ್ರಿಪ್ ಇರಿಗೇಶನ್ ಬರೆಹದ ಸಂದರ್ಭದಲ್ಲಿ ಮಾತ್ರ ಹನಿ ನೀರಾವರಿಯಾಗುತ್ತದೆ. ಆಡು ನುಡಿಯಲ್ಲಿ ಇದು ಈಗಲೂ ಡ್ರಿಪ್ ಇರಿಗೇಶನ್. ಆಡು ನುಡಿಯಲ್ಲಿ ಈ ಬಳಕೆಯೇ ಉಳಿದಿರಲು ಅನೇಕ ಕಾರಣಗಳಿವೆ. ಡ್ರಿಪ್ ಇರಿಗೇಶನ್ ಪದಕ್ಕೆ ಹನಿ ನೀರಾವರಿ ಎಂದು ಬಳಸಿ ಬಿಡಬಹುದು. ಆದರೆ ಮೈಕ್ರೋಡ್ರಿಪ್ ಇರಿಗೇಶನ್ ಗೆ ಏನೆಂದು ಹೇಳಬೇಕು? ರೈತ ಈ ಬಗೆಯ ಪಾರಿಭಾಷಿಕ ಗೊಂದಲಗಳನ್ನು ಶಾಶ್ವತವಾಗಿ ನಿವಾರಿಸಿಕೊಳ್ಳಲು ಡ್ರಿಪ್ ಇರಿಗೇಶನ್ ಎಂಬುದನ್ನು ಪಾರಿಭಾಷಿಕವಾಗಿ ತೆಗೆದುಕೊಂಡಿದ್ದಾನೆ! ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶಿಷ್ಠ ಸಂದರ್ಭಗಳಲ್ಲಿಯೂ ಇಂಥ ಪ್ರಯೋಗಗಳನ್ನು ಮಾಡಿದ ಹಿರಿಮೆ ‘ಅಡಿಕೆ ಪತ್ರಿಕೆ’ಗೆ ಇದೆ. ರೈತರಿಗೆ ಅರ್ಥವಾಗುವ ಹೊಸ ನುಡಿಗಟ್ಟನ್ನೇ ಈ ಪತ್ರಿಕೆ ರೂಪಿಸಿತು. ಇಂಥ ಪ್ರಯತ್ನಗಳ ಮೇಲೆ ಬೆಳಕು ಚೆಲ್ಲುವ ಮತ್ತು ಇದರ ಮೂಲಕ ಕನ್ನಡವನ್ನು ವರ್ತಮಾನದ ಕನ್ನಡ ಪಾರಿಭಾಷಿಕಗಳ ಸಮಸ್ಯೆಗೆ ಉತ್ತರ ಕಂಡುಕೊಳ್ಳುವ, ಭಾಷಾ ಶುದ್ಧಿಯ ಮಿತಿ ಮತ್ತು ಸಾಧ್ಯತೆಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ನಾವು ಮಾಡುವುದೇ ಇಲ್ಲ. ಸಂವಹನ ಸಾಧ್ಯವಿಲ್ಲದ ಶುದ್ಧ ಭಾಷೆಯಿಂದ ಯಾವ ಪ್ರಯೋಜನವೂ ಇಲ್ಲ. ಇದರಿಂದ ಯಾವ ಉಪಯೋಗವೂ ಇಲ್ಲ. ಬಳಕೆಯ ಸಂದರ್ಭದ ಸಮಸ್ಯೆಗಳನ್ನು ಪರಿಹರಿಸದ ಚರ್ಚೆಗೆ ಯಾವ ಅರ್ಥವೂ ಇಲ್ಲ. ಇಂಥ ಒಣ ಚರ್ಚೆಗಳಲ್ಲಿ ತೊಡಗಿಕೊಳ್ಳುವ ಬದಲಿಗೆ ಹೊಸ ಪರಿಕಲ್ಪನೆಗಳನ್ನು ಸಂವಹನ ಸಾಧ್ಯವಿರುವ ಕನ್ನಡದಲ್ಲಿ ವಿವರಿಸುವ ಮೂಲಕ ಕನ್ನಡ ಭಾಷೆಯನ್ನು ಬೆಳಸಬೇಕು. ಭಾಷಾ ಶುದ್ಧಿಯ ಬಗ್ಗೆ ಕೂದಲು ಸೀಳುವ ಎಲ್ಲರೂ ಹೊಸ ಪರಿಕಲ್ಪನೆಗಳನ್ನು ಅರಿತುಕೊಳ್ಳಲು ಬೇಕಿರುವಷ್ಟು ಇಂಗ್ಲಿಷ್ ಕಲಿತಿದ್ದಾರೆ. ಇವರಿಗೆ ಕನ್ನಡದಲ್ಲಿಯೇ ಯಾವುದನ್ನೂ ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇಲ್ಲ. ಇವರಿಗೆ ಭಾಷೆ ಶುದ್ಧವಾಗಿದ್ದರೆ ಸಾಕು. ಹೀಗೆ ಶುದ್ಧವಾಗಿರುವ ಭಾಷೆ ಶುದ್ಧವಾಗಿ ಉಳಿಯಬಹುದೇ ಹೊರತು ಕಾಲದ ಅಗತ್ಯಕ್ಕೆ ಸ್ಪಂದಿಸಲಾರದು. namismail @ rediffmail.com
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಒಳ್ಳೆ ಲೇಖನ ಇಸ್ಮಾಇಲ್, ಹೊಸ ವಿಚಾರಗ್ಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಿಯ ಇಸ್ಮಾಯಿಲ್, ಕನ್ನಡದ ಶುದ್ಧತೆಯ ಬಗಗೆ ನಡೆಯುತ್ತಿರುವ ಚರ್ಚೆಗೆ ಸರಿಯಾದ ದಿಕ್ಕು ತೋರಿದ್ದೀರಿ. ಥ್ಯಾಂಕ್ಸ್. ಬೇರೆ ಬೇರೆ ಜಾಬುಗಳಲ್ಲಿರುವ ಜನ ಬಳಸುವ ಕನ್ನಡ ಇನ್ನೂ ನಿಘಂಟುಗಳ ಪವಿತ್ರ ದೃಷ್ಟಿಗೆ ಬಿದ್ದೇ ಇಲ್ಲ. ಇನ್ನು ಕನ್ನಡದ ಬದಲಾಗುತ್ತಿರುವ ಸ್ವರೂಪದ ಬಗ್ಗೆ ಚರ್ಚೆ ನಡೆಯುವುದೆಲ್ಲಿ ಬಂತು? ಕನ್ನಡದ ಪರಿಸ್ಥಿತಿ ಕೊಂಚ ವಿಚಿತ್ರವಾಗಿದೆ. ಇಂಗ್ಲಿಷಿನಲ್ಲಿ ಆಯಾ ವಿಷಯಗಳಿಗೆ ಸಂಬಂಧಿಸಿದ ಗ್ಲಾಸರಿಗಳನ್ನು ಬಳಸುವಷ್ಟು ಅಕ್ಷರಸ್ಥರು ಇದ್ದಾರೆ. ಆದರೆ ದುಡಿಮೆಯಲ್ಲಿ ತೊಡಗಿ, ಆ ದುಡಿಮೆಯ ಮೂಲಕವೇ ಕನ್ನಡವನ್ನು ಶ್ರೀಮಂತಗೊಳಿಸುತ್ತಿರುವ ಜನಸಮುದಾಯ ಅಕ್ಷರವಂಚಿತರು. ನಾವು ಬೇರೆ ಬೇರೆ ಜಾಬುಗಳಿಗೆ ಸಂಬಂಧಿಸಿದ ನಿಘಂಟುಗಳನ್ನು ಕಷ್ಟಪಟ್ಟು ರಚಿಸಿದರೂ ಅದನ್ನು ಬಳಸಬಲ್ಲ ಜನ ಅಕ್ಷರ ಶುದ್ಧಿಯನ್ನು ಪ್ರತಿಪಾದಿಸುವ ಮಡಿವಂತರೇ! ಅವರಿಗೆ ಬದಲಾಗುತ್ತಿರುವ ಕನ್ನಡದ ಅಗತ್ಯಗಳಿಗಿಂತ ಕಲ್ಪಿತ ಅಭಿಮಾನ, ಕಲ್ಪಿತ ಶ್ರೀಮಂತಿಕೆ, ಇತ್ಯಾದಿ ಭ್ರಮೆಗಳೇ ಮುಖ್ಯ. ವಿವಿಧ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಪದಕೋಶವನ್ನು ಕನ್ನಡ ವಿವರಣೆಯೊಂದಿಗೆ ಸಂಪದದಲ್ಲಿ ಆರಂಭಿಸಬಹುದಲ್ಲವೇ? ನೀವೇ ಯಾಕೆ ಮೊದಲಿಗರಾಗಬಾರದು! ನನ್ನಂಥವರೂ ಕೈಜೋಡಿಸುತ್ತೇವೆ. ನಾಗಭೂಷಣ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓಹ್! ಇಸ್ಮಾಯಿಲ್ ಅವರೇ ತುಂಬಾ ಚೆನ್ನಾಗಿ ವಿಷಯವನ್ನು ಪ್ರಸ್ತುತ ಪಡಿಸಿದ್ದೀರಿ. ಇದೇ ದಿಕ್ಕಿನಲ್ಲಿ ನಾವು ನಮ್ಮ ಚರ್ಚೆಯನ್ನು ಮುಂದುವರಿಸೋಣ. ಅಕೌಂಟೆನ್ಸಿಯನ್ನು ಲೆಕ್ಕಶಾಸ್ತ್ರ ಅನ್ನಲು ಆಗುವುದಿಲ್ಲ. ಎಲ್ಲ ಕಡೆ ಉಪಯೋಗಿಸುವ ಗುಡ್ ವಿಲ್ ಎನ್ನುವ ಪದಕ್ಕೆ ಸೂಕ್ತ ಕನ್ನಡ ಪದವನ್ನು ಕೊಡಲು ನಾನು ಇನ್ನೂ ಪ್ರಯತ್ನಿಸುತ್ತಲೇ ಇದ್ದೇನೆ. ಸಾಧ್ಯವಾಗಿಲ್ಲ. ಈ ಶಾಸ್ತ್ರಗಳೆಲ್ಲ ನಮ್ಮಲ್ಲಿ ಮೊದಲು ಬಳಕೆ ಇರಲಿಲ್ಲವಾದ್ದರಿಂದ ನಾವು ಹೊಸ ಹೊಸ ಪದಗಳನ್ನು ಕನ್ನಡಕ್ಕೆ ಸೇರಿಸಿಕೊಳ್ಳಲೇಬೇಕು. ಇಲ್ಲವಾದಲ್ಲಿ ನಾವು ಬೆಳೆಯುವುದಿಲ್ಲ - ಹಿಂದೆ ಸರಿಯುತ್ತೇವೆ. ತವಿಶ್ರೀನಿವಾಸ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.