ಐಶ್ವರ್ಯ ಮತ್ತು ಆಕೆಯ ಸ್ವಾತಂತ್ರ-ಭಾಗ ೧

ಐಶ್ವರ್ಯ ಮತ್ತು ಆಕೆಯ ಸ್ವಾತಂತ್ರ-ಭಾಗ ೧

ಬಾಗಿಲಿಗೊರಗಿ ನಿಂತಿದ್ದ ಸೌಮ್ಮ್ಯ ದಿಗ್ರ್ಭ್ರಮೆಗೊಳಗಾಗಿದ್ದಳು. ಎದುರಿಗೆ ಅವಿನಾಶ್ ತಪ್ಪಿಸ್ಥತನಂತೆ ತಲೆ ಬಗ್ಗಿಸಿ ನಿಂತಿದ್ದನು. ಹಿಂದಿನ ದಿವಸ ಬಾಲ್ಯ ಗೆಳತಿ ಐಶ್ವರ್ಯಳ ಸಾವು ಅವಳನ್ನು ಕಂಗೆಡಿಸಿತ್ತು. ಸಾವಿನ ಕಾರಣವೂ ಸೌಮ್ಯಳನ್ನು ಜರ್ಜರಿತಗೊಳಿಸಿತ್ತು.

ನಾನು ಸ್ವಭಾವತಃ ಬಹಳ ಮೌನಿ, ಮತ್ತೆ ಬಡತನದ ಕಾರಣ ಬಹಳ ಸಂಕೋಚ. ಐಶ್ವರ್ಯ ಹೆಸರಿನಂತೆಯೇ ಸೌಂದರ್ಯದಲ್ಲಿಯೂ, ಶ್ರೀಮಂತಿಕೆಯಲ್ಲಿಯೂ ಐಶ್ವರ್ಯಳೇ. ಮಾತಂತೂ ಚಿನಕುರಳಿಯ ಹಾಗೆ ಪಟಪಟ ಮಾತಾಡುತ್ತಾ ಶಾಲೆಯಲ್ಲಿ ಎಲ್ಲ ಶಿಕ್ಷಕರ ಮನಸೂರೆಗೊಂಡಿದ್ದಳು. ಆಕೆಯ ಮೇಲಿನ ಅಸೂಯೆಯಿಂದಾಗಿ ಯಾರೂ ಆಕೆಯನ್ನು ಗೆಳತಿಯನ್ನಾಗಿ ಸ್ವೀಕರಿಸಿರಲಿಲ್ಲ. ಹೀಗಿದ್ದಾಗ, ಒಂದು ಪರೀಕ್ಷೆಯ ದಿನ ಯಾರೋ ಆಕೆಯ ಜಾಮೆಟ್ರಿ ಬಾಕ್ಸನ್ನು ಕದ್ದುಬಿಟ್ಟಿದ್ದರು. ಅವಳು ಅಳುತ್ತಿದ್ದನ್ನು ಕಂಡ ನಾನು ನನ್ನ ಜಾಮೆಟ್ರಿ ಬಾಕ್ಸನ್ನು ಅವಳಿಗ ಕೊಟ್ಟಿದ್ದೆ. ಹೀಗೆ ಶುರುವಾದ ನಮ್ಮಿಬ್ಬರ ಸ್ನೇಹ ಹೀಗಾಗುವುದೆಂದು ಯಾರು ತಿಳಿದಿದ್ದರು? ಶಾಲೆಗೆ ಒಟ್ಟಿಗೆ ಹೋಗುತ್ತಿದ್ದೆವು, ಬರುತ್ತಿದ್ದೆವು. ಶಾಲೆಗೆ ಅವಳು ಫರ್ಸ್ಟ್ ಬರುತ್ತಿದ್ದಳು. ನನಗೇನೂ ಅವಳ ಮೇಲೆ ಅಸೂಯೆ ಯಿರಲಿಲ್ಲ. ಅದುವರೆವಿಗೂ ಹುಡುಗಿಯರ ಶಾಲೆಯಲ್ಲಿ ಕಲಿಯುತ್ತಿದ್ದ ನಾವು ಹತ್ತನೇ ತರಗತಿ ಮುಗಿದು, ಕೊ-ಎಡ್ ಕಾಲೇಜಿಗೆ ಸೇರಿದೆವು.

ನಮ್ಮ ಕಾಲೇಜಿನ ಸೌಂದರ್ಯ ರಾಣಿಯಾದಳು ಐಶ್ವರ್ಯ. ಎಲ್ಲರ ಕಣ್ಣು ಈಕೆಯ ಮೇಲೆ. ನಾನು ಇವಳೊಟ್ಟಿಗೆ ದೃಷ್ಟಿಬೊಟ್ಟಿನಂತಿದ್ದೆ. ಸ್ವಭಾವತಃ ವಾಚಾಳಿಯಾದ ಈಕೆ ಚರ್ಚೆಗಳಲ್ಲಿ ಭಾಗವಹಿಸುವುದು, ಬಹುಮಾನಗಳನ್ನು ಗೆಲ್ಲುವುದು ಶುರುವಾಯಿತು. ನಿಧಾನವಾಗಿ ಸ್ತ್ರೀ ಸ್ವಾತಂತ್ರ್ಯ, ಸಮಾನತೆ, ನಾವ್ಯಾಕೆ ಪುರುಷರಿಗಿಂತ ಹಿಂದಿರಬೇಕು? ಅವರು ಕುಡಿಯುತ್ತಾರೆ, ಸೇದುತ್ತಾರೆ, ನಾವ್ಯಾಕೆ ಮಾಡಬಾರದು ಎನ್ನುವ ಹಮ್ಮು ತಲೆಗೇರತೊಡಗಿತು. ನಾನೇನೂ ಸ್ತ್ರೀ ಗೆ ಸ್ವಾತಂತ್ರ್ಯ ಬೇಡ ಎನ್ನುತ್ತಿರಲಿಲ್ಲ. ಆದರೆ ಇದೆಲ್ಲಾ ನಮ್ಮಂತಹವರಿಗಲ್ಲ ಅನ್ನುವ ಭಾವನೆಯಿತ್ತು. ಸ್ತ್ರೀ ಸಮಾನತೆಗಿಂತ ಸ್ತ್ರೀಪುರುಷರಿಬ್ಬರೂ ಸಮಾಜದ ಎರಡು ಕಣ್ಣುಗಳಿದ್ದಂತೆ ಅನ್ನುವ ಅರಿವಿತ್ತು. ಸ್ತ್ರೀ ಸರಿಯಿದ್ದರೆ ಯಾವುದೇ ಗಂಡನ್ನು ಹಾದಿ ತಪ್ಪದಂತೆ ಸರಿಮಾಡಬಹುದು ಎನ್ನುವ ಧೋರಣೆಯಿತ್ತು. ಆದರೆ ಐಶ್ವರ್ಯ ಈ ವಿಷಯದಲ್ಲಿ ಮಾತ್ರ ನನ್ನನ್ನು ವಿರೋಧಿಸುತ್ತಿದ್ದಳು. ನನ್ನೊಂದಿಗೆ ಜಗಳವಾಡುತ್ತಿದ್ದಳು. ತಡೆಯಲಾರದೆ ಒಂದು ದಿನ ನಾನೆಂದೆ "ನಿನ್ನಭಿಪ್ರಾಯ ನಿನಗೆ, ನನ್ನಭಿಪ್ರಾಯವನ್ನು ನೀನು ಬದಲಾಯಿಸುವುದುಬೇಡ". ಈ ಘಟನೆಯಾದ ಮೇಲೆ ನಮ್ಮಿಬ್ಬರ ಸಂಬಂಧದಲ್ಲಿ ಸ್ವಲ್ಪ ಬಿರುಕು ಉಂಟಾಯಿತು. ನಾವಿಬ್ಬರೂ ಮೊದಲಿನಂತೆ ಸ್ನೇಹದಿಂದ ಇರದಾದೆವು. ಐಶ್ವರ್ಯ ಮಾತ್ರ ಹುಡುಗರ ಸರಿಸಮಾನವಾಗಿ ಅವರೊಟ್ಟಿಗೆ ಎಲ್ಲ ಕಡೆಗೂ ಹೋಗತೊಡಗಿದಳು.

ಕಾಲೇಜು ಮುಗಿದ ಕೂಡಲೆ ನನಗೆ ಮನೆಯಲ್ಲಿ ಮದುವೆಗೆ ಹುಡುಗನನ್ನು ಹುಡುಕಲು ಪ್ರಾರಂಭಿಸಿದರು. ನಮ್ಮಪ್ಪ ನನ್ನ ಜಾತಕವನ್ನು ಪರಿಚಯಸ್ಥರಿಗೆಲ್ಲಾ ಕೊಟ್ಟರು. ಜಾತಕ ಸರಿಹೋಗಿ ನನ್ನನ್ನು ನೋಡಲು ಬಂದ ಮೊದಲನೇ ಹುಡುಗ ಅವಿನಾಶ್. ನನ್ನನ್ನು ನೋಡಿದ ಕೂಡಲೇ ಒಪ್ಪಿಕೊಂಡ ಅವಿನಾಶ್. ಸುಂದರ, ವಿದ್ಯಾವಂತ ಯುವಕ. ಜೊತೆಗೆ ವಾಚಾಳಿ ಬೇರೆ. ಮಾತನಾಡುತ್ತಿದ್ದರೆ ಆತನನ್ನೇ ನೋಡುತ್ತಿರುವ ಬಯಕೆ. ಆತನಾವುದೋ ಸಾಫ್ಟ್ ವೇರ್ ಕಂಪೆನಿಯಲ್ಲಿ, ಬೆಂಗಳೂರಿನಲ್ಲಿ, ಕೆಲಸ ಮಾಡುತ್ತಿದ್ದ. ಅವಿನಾಶ್ ನೊಟ್ಟಿಗೆ ನನ್ನ ಮದುವೆಯಾಯಿತು. ಸುಖೀ ಸಂಸಾರ ನನ್ನದಾಯಿತು ಅಥವಾ ಇಷ್ಟು ದಿವಸದವರೆವಿಗೂ ನಾನಾ ಭ್ರಮೆಯಲ್ಲಿದ್ದೇನೋ ಗೊತ್ತಿಲ್ಲ! ಹೀಗೇ ೨-೩ ವರ್ಷಗಳು ಕಳೆದವು. ಅವಿನಾಶ್ ಗೆ ನನ್ನ ತವರೂರಾದ ಮೈಸೂರಿಗೆ ಟ್ರಾನ್ಸ್ ಫರ್ ಆಯಿತು. ನಾನು ಬಹಳ ಖುಷಿಯಿಂದ ಮೈಸೂರಿನಲ್ಲಿ ಮನೆ ಮಾಡಿದೆ.

ಒಂದು ದಿವಸ ಅವಿನಾಶ್ ಬಹಳ ಸಂತೋಷದಿಂದ ಬಂದು ತನಗೆ ಪ್ರೋಮೋಷನ್ ಸಿಕ್ಕಿದೆಯೆಂದು ಹಾಗು ಗೆಳೆಯರಿಗೆಲ್ಲಾ ಮನೆಯಲ್ಲಿ ಪಾರ್ಟಿ ಕೊಡಿಸುವುದಾಗಿ ಹೇಳಿದ್ದೇನೆ ಎಂದ. ಪಾರ್ಟಿಯ ದಿವಸ ನನ್ನ ಕಣ್ಣನ್ನು ನಾನೇ ನಂಬಲಾಗಲಿಲ್ಲ. ನನ್ನ ಪ್ರೀತಿಯ ಗೆಳತಿ ಐಶ್ವರ್ಯ ಕೂಡಾ ಆ ಪಾರ್ಟಿಗೆ ಬಂದಿದ್ದಳು. ಆಕೆ ಕೂಡಾ ಅವಿನಾಶ್ ನ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಗೆ ಹಣಕ್ಕೇನೂ ಕೊರತೆ ಇಲ್ಲದಿದ್ದರೂ, ಸ್ವಾತಂತ್ರ್ಯಕ್ಕಾಗಿ ಕೆಲಸಕ್ಕೆ ಸೇರಿದ್ದಳು! ಅವಳ ಮದುವೆಯಾಗಿರಲಿಲ್ಲ. ಹಾಗೂ ಅವಳ ಸ್ವಭಾವದಲ್ಲಿ ಹೆಚ್ಚಿನ ಬದಲಾವಣೆಯಾಗಿರಲಿಲ್ಲ. ಮದುವೆಯ ಜಂಜಾಟವಿಲ್ಲದೆ ಆಕೆ ಹಾಯಾಗಿದ್ದಳು ಹಾಗೂ ಇದು ಅವಳ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು.

ಮುಂದುವರೆಯುವುದು.............

Rating
No votes yet

Comments