"ಆವರಣ ಎಂಬ ವಿ-ಕೃತಿ", ಪಿ.ಲಂಕೇಶ್ ಹಾಗೂ ತೇಜಸ್ವಿ.

"ಆವರಣ ಎಂಬ ವಿ-ಕೃತಿ", ಪಿ.ಲಂಕೇಶ್ ಹಾಗೂ ತೇಜಸ್ವಿ.

ಭೈರಪ್ಪನವರಿಗೆ ಇಂತಹ ಸಮಚಿತ್ತ ಸಾಧಿಸುವುದು ಹೇಗೆ ಸಾಧ್ಯವಾಯಿತೋ ಗೊತ್ತಿಲ್ಲ. ಅವರ ಒಂದೊಂದು ಕೃತಿಗೂ ನೂರಾರು ಕಡೆಯಿಂಡ ಪ್ರಹಾರಗಳು, ವಯಕ್ತಿಕ ಟೀಕೆಗಳು, ಇದರ ಮಧ್ಯೆಯೂ ಅವರ ಅಭಿಮಾನಿಗಳು! ಟಿಪ್ಪು ಸುಲ್ತಾನನ ಬಗ್ಗೆ ಭೈರಪ್ಪ ತಮ್ಮ ಸಂಶೊಧನೆಯನ್ನು ವಿಜಯಕರ್ನಾಟಕದಲ್ಲಿ ವಿಸ್ತೃತವಾಗಿ ಬೆರೆದಾಗ ಅನೇಕರು ಅವರ ಮೇಲೆ ಮುರಕೊಂಡು ಬಿದ್ದರು. ಚಿ.ಮೂ ರಂತವರು ಸಮರ್ಥಿಸಿದರೆ ಕಾರ್ನಾಡ್, ಕೊ.ಚೆ ಗಳೆಲ್ಲ ವಿರೋಧಿಸಿದ್ದರು. ವಿರೋಧಿಸುವವರು ಎಂದಿನಂತೆ ವಯಕ್ತಿಕ ಟೇಕೆಗೂ ಇಳಿದಿದ್ದರು. ಭೈರಪ್ಪನವರು ಮಾತ್ರ ತಮ್ಮ ಮುಂದಿನ ಲೇಖನದಲ್ಲಿ ಪ್ರತಿಕ್ರಿಯಿಸಿದ ಎಲ್ಲರನ್ನೂ ಹೆಸರಿಸಿ "ಇವರೆಲ್ಲ ನನ್ನ ಲೇಖನಕ್ಕೆ ಪ್ರತಿಕ್ರಿಯಿಸಿದ್ದಾರೆ. ಧನ್ಯವಾದಗಳು " ಎಂದು ಮಾತ್ರ ಹೇಳಿ ತಮ್ಮ ವರಸೆಯಲ್ಲೇ ಸಂಶೋಧನಾತ್ಮಕ ಬರವಣಿಗೆಗೆಳನ್ನು ಮುಂದುವರಿಸಿದ್ದರು! ಅವರ ಸ್ಥಿತಪ್ರಜ್ಞತೆ ಇಂದಿಗೂ ನನಗೆ ಆಶ್ಚರ್ಯ ಹುಟ್ಟಿಸುತ್ತದೆ.

ಸ್ನೇಹಿತರೊಬ್ಬರ ಮನೆಯಲ್ಲಿ ಗೌರಿ ಲಂಕೇಶ್ ಸಂಪಾದಿಸಿದ "ಆವರಣ ಎಂಬ ವಿ-ಕೃತಿ" ಪುಸ್ತಕ ಕಣ್ಣಿಗೆ ಬಿತ್ತು. ಸಲ್ಪ ಸಮಯವಿದ್ದುದರಿಂದ ಅಲ್ಲೇ ಕಣ್ಣಾಡಿಸತೊಡಗಿದೆ. ಲೇಖಕರ ಪಟ್ಟಿಯಲ್ಲಿ ಜಿ.ಕೆ.ಗೋವಿಂದರಾವ್, ಕೊ.ಚೆ, ಭಾನು ಮುಷ್ತಾಕ್ ಇತ್ಯಾದಿ ಟಿಪಿಕಲ್ ಹೆಸರುಗಳಿದ್ದವು. ಪರಿವಿಡಿಯನ್ನು ನೋಡುತ್ತಲೆ " ತಮ್ಮ ಆವರಣದಲ್ಲಿ ಬಂಧಿಯಾಗಿರುವ ಭೈರಪ್ಪ", "udigestable stuff" ಎಂಬಂತಹ ಶೀರ್ಷಿಕೆಗಳನ್ನು ನೋಡಿ ಇದು ಭೈರಪ್ಪನವರನ್ನು ತಾಡಿಸಲೆಂದೇ ಹೊರತೆಗೆದ ಪುಸ್ತಕ ಎಂಬ ಅನುಮಾನ ಮೂಡತೊಡಗಿತು. ಸಂಪಾದಕಿ ಗೌರಿ ಆವರಣ ವನ್ನು "ವ್ರಣ" ಎಂದೆಲ್ಲಾ ವಿಶ್ಲೇಷಿಸಿದ್ದರು. ಲೇಖಕರ ಪಟ್ಟಿಯಲ್ಲಿ ನನಗೆ ಆಶ್ಚರ್ಯ ಹುಟ್ಟಿಸಿದ ಎರಡು ಹೆಸರುಗಳೆಂದರೆ ಒಂದು ಪಿ.ಲಂಕೇಶ್ ಇನ್ನೊಂದು ತೇಜಸ್ವಿ.

ಆವರಣ ಬಿಡುಗಡೆಯಾದಾಗುವ ಹೊತ್ತಿಗೆ ಲಂಕೇಶರು ವಿಧಿವಶರಾಗಿದ್ದರು. ಅವರು ಆವರಣದ ಬಗ್ಗೆ ಹೇಗೆ ಬರೆಯಲು ಸಾಧ್ಯ ಎಂದು ಅವರ ಲೇಖನವನ್ನು ತೆಗೆದು ನೋಡಿದಾಗ ಅದು ಆವರಣದ ಬಗ್ಗೆ ಆಗಿರದೆ "ಸಾರ್ಥ"ದ ವಿಮರ್ಶೆಯಾಗಿತ್ತು. ಲಂಕೇಶರು ಸಾರ್ಥದ ಬರವಣಿಗೆಯಲ್ಲಿನ ವಾಕ್ಯಗಳನ್ನು, ಅರ್ಥಗಳನ್ನು ತಮ್ಮ ವ್ಯಾಖ್ಯಾನಗಳ ಮೂಲಕ ವಿರೋಧಾಭಾಸಗಳೆಂದು ವಿಶ್ಲೇಷಿಸುತ್ತಿದ್ದರು. ಅದರಲ್ಲಿ ಒಂದು ವಾಕ್ಯ ಕಣ್ಣಿಗೆ ಬಿತ್ತು " ಹದಿನೆಂಟನೆಯ ಶತಮಾನದ್ದೆಂದು ಹೇಳುವ ಈ ಕಾದಂಬರಿಯಲ್ಲಿ ಶಂಕರಾಚಾರ್ಯ ಹೇಗೆ ಬರುತ್ತಾನೆಂದು ಭೈರಪ್ಪನವರೇ ಹೇಳಬೇಕು!" . ಈ ವಾಕ್ಯವನ್ನು ಓದುತ್ತಿದ್ದಂತೆ ನನಗೆ ಲಂಕೇಶರ ಉದ್ದೇಶ ಸ್ಪಷ್ಟವಾಯಿತು. "ಸಾರ್ಥ" ಗುಜ್ಜರ ಪ್ರತಿಹಾರ ಸಾಮ್ರಾಜ್ಯದಲ್ಲಿ ನಡೆಯುವ ಕಥೆ. ಮುಂಡನಮಿಶ್ರ, ಭಾರತಿ, ಕುಮಾರಿಲಭಟ್ಟರು, ಶಂಕರಾಚಾರ್ಯರ ಪಾತ್ರಗಳು ಇದರಲ್ಲಿ ಬರುತ್ತದೆ. ಮುಸ್ಲಿಂ ಧಾಳಿಕೋರರು ಗಾಂಧಾರದ ಮೇಲೆ ಧಾಳಿ ಮಾಡಿದ ಉಲ್ಲೇಖ ಬರುತ್ತದೆ. ಹೀಗಿದ್ದ ಮೇಲೆ ಇದು ಒಂಭತ್ತನೆಯ ಶತಮಾನದ ಕಥೆ ಎಂದು ಅಲ್ಪ ಸಲ್ಪ ಇತಿಹಾಸ ತಿಳಿದವರಿಗೂ ಗೊತ್ತಾಗುತ್ತದೆ. ಇನ್ನು ಈ ಕಾದಂಬರಿ ಹದಿನೆಂಟನೆ ಶತಮಾನದ್ದೆಂದು ಭೈರಪ್ಪನವರಾದರೂ ಏಕೆ ಹೇಳುತ್ತಾರೆ? ಲಂಕೇಶರ ಲೇಖನ ಕೇವಲ ಭೈರಪ್ಪನವರನ್ನು ಹಣಿಯಲೆಂದೇ ಬರೆದದ್ದು ಎಂಬ ಭಾವನೆ ನನ್ನಲ್ಲಿ ಬಂದಿತ್ತು ಅಲ್ಲದೆ ಆವರಣದ ವಿಮರ್ಶೆಯ ಪುಸ್ತಕದಲ್ಲಿ ಸಾರ್ಥದ ಬಗ್ಗೆ ಪ್ರಕಟಿಸುವ ಅವಶ್ಯಕತೆಯೂ ಈ ಭಾವನೆಗೆ ಪುಷ್ಠಿ ಕೊಟ್ಟಿತು. ಹಿಂದೆಯೇ ಭೈರಪ್ಪನವರು ತಮ್ಮ ಭಿತ್ತಿಯಲ್ಲಿ "ಲಂಕೇಶರು ತಮ್ಮ ಶಿಷ್ಯರಿಗೆ ಹಾರುವ ಭೈರಪ್ಪನ ಪುಸ್ತಕಗಳನ್ನು ಓದಬೇಡಿ ಎಂದು ಹೆಳುತ್ತಿದ್ದರು" ಎಂದು ಬರೆದಿದ್ದೂ ನೆನಪಾಯಿತು. ಹದಿನೆಂಟನೆಯ ಶತಮಾನದ ವಾಕ್ಯ ಕಂಡೊಡನೆ ಲೇಖನವನ್ನು ಮುಂದೆ ಓದುವುದು ಅನವಶ್ಯಕ ಎಂದೆನಿಸಿ ಮುಂದೆ ಪುಟ ತಿರುಗಿಸಿದೆ.

ಕನ್ನಡದ ಅತ್ಯಂತ ಶ್ರೇಷ್ಠ ಕಥೆಗಾರ ಯಾರು ಎಂದು ಯಾರಾದರೂ ಕೇಳಿದರೆ ನನ್ನ ನೆನಪಿಗೆ ಥಟ್ಟನೆ ಹೊಳೆಯುವ ಹೆಸರು ಬೆಸಗರಹಳ್ಳಿ ರಾಮಣ್ಣ ನವರದು. ಬೆಸಗರಹಳ್ಳಿ ರಾಮಣ್ಣನವರು ಕೆಲ ವರ್ಷಗಳ ಹಿಂದೆ ಕಾಲಾಧೀನರಾದಾಗ ಅವರ ಆಪ್ತರೊಬ್ಬರು ಅದೇ ವಾರದ ಭಾನುವಾರದ ಸಾಪ್ತಾಹಿಕ ಸಂಚಿಕೆಯಲ್ಲಿ ಶ್ರದ್ಧಾಂಜಲಿ ಲೇಖನವನ್ನು ಬರೆದಿದ್ದರು (ಜನತಾವಾಣಿ ಪತ್ರಿಕೆ). ಅದರಲ್ಲಿದ್ದ ಬಾಕ್ಸ್ ಐಟೆಮ್ ನಲ್ಲಿ ಒಂದು ಟಿಪ್ಪಣಿ ಹೀಗಿತ್ತು " ಬೆಸಗರಹಳ್ಳಿ ರಾಮಣ್ಣ ಲಂಕೇಶರನ್ನು ’ಲಂಗೇಶ’ ಎಂದು ಕರೆಯುತ್ತಿದ್ದರು. ಕಥಾಸ್ಪರ್ಧೆಯೊಂದರಲ್ಲಿ ರಾಮಣ್ಣನೂ ವಿದ್ಯಾರ್ಥಿ ವಿಭಾಗದಲ್ಲಿ ಭಾಗವಹಿಸಿದ್ದರು. ರಾಮಣ್ಣನ ಕಥೆ ತೀರ್ಪುಗಾರರಿಗೆ ಎಷ್ಟು ಹಿಡಿಸಿತೆಂದರೆ ಆ ಕಥೆ ವಿದ್ಯಾರ್ಥಿ ವಿಭಾಗವನ್ನೂ ಮೀರಿ ಸಾರ್ವಜನಿಕ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದುಬಿಟ್ಟಿತು. ಆದರೆ ಲಂಕೇಶ್ ಪ್ರಭಾವವನ್ನು ಬಳಸಿ ತಮಗೆ ಪ್ರಥಮ ಬಹುಮಾನ ಬರುವಂತೆ ಮಾಡಿ ರಾಮಣ್ಣನ ಕಥೆಯನ್ನು ಎರಡನೆಯ ಸ್ಥಾನಕ್ಕೆ ತಳ್ಳಿದರು. ಇದರ ಬಗ್ಗೆ ರಾಮಣ್ಣ ಸ್ನೇಹಿತರೊಡನೆ ಹೇಳಿಕೊಂಡು ’ನೋಡ್ರಪ್ಪಾ ನಮ್ಮ ಲಂಗೇಶ ಹೀಗೆ ಮಾಡಿಬಿಟ್ಟ’ ಎಂದು ಅವಲತ್ತುಕೊಳ್ಳುತ್ತಿದ್ದರು." (ಪತ್ರಿಕೆಯಲ್ಲಿ ಓದಿದ್ದನ್ನು ಇಲ್ಲಿ ಬರೆದಿದ್ದೇನೆ. ಇದರ ಸತ್ಯಾಸತ್ಯತೆ ಬಗ್ಗೆ ಯಾರದರೂ ತಿಳಿದಿದ್ದರೆ ದಯವಿಟ್ಟು ಪ್ರತಿಕ್ರಿಯಿಸಿ).

ತೇಜಸ್ವಿ ಲೇಖನ ತೇಜಸ್ವಿ ಇದಕ್ಕೋಸ್ಕರ ಬರೆದುಕೊಟ್ಟದಲ್ಲ. ತಮ್ಮ ಸ್ನೇಹಿತರೊಬ್ಬರಿಗೆ ಬರೆದಿದ್ದ ಪತ್ರದಿಂದ ಸಂಪಾದಕರು ಆಯ್ದದ್ದು. ತೇಜಸ್ವಿ ಆವರಣದ ಬಗ್ಗೆ "undigestable stuff ! ಆರು ಮುದ್ರಣವಾಗಿದೆಯಂತೆ. ಇಂಥದನ್ನು ಯಾಕ್ರೀ ಓದುತ್ತಾರೆ?" ಎಂದು ಹೇಳಿದ್ದರು. ಆವರಣವನ್ನು ಕೊಂಡು ಓದಿದ ಸರಿಸುಮಾರು ಹತ್ತು ಸಾವಿರ ಜನ ತೇಜಸ್ವಿಯವರ ಒಂದೇ ಮಾತಿನಿಂದ ಮುಠ್ಠಾಳರಾಗಿಬಿಟ್ಟರು! ಓದುಗರ ಬಗ್ಗೆ ಕಮೆಂಟ್ ಮಾಡುವಾಗ ಸ್ವಲ್ಪ ಎಚ್ಚರ ಬೇಡವೇ?

ನಾನು ತೇಜಸ್ವಿ ಬರಹಗಳ ಕಟ್ಟಾ ಅಭಿಮಾನಿ. ವೃತ್ತಿಪರ ವಿಜ್ಞಾನ ಲೇಖಕರೂ ಬರೆಯಲು ಸಾಧ್ಯವಾಗದಂತಹ ವಿಜ್ಞಾನ ವಿಚಾರಗಳನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ಎಷ್ಟು ಸರಳವಾಗಿ ಬರೆಯುತ್ತಾರಲ್ಲ ಎಂಬ ಅಚ್ಚರಿ. ಅತ್ಯಂತ ಸಹಜ ಎಂಬಂತೆ ಅವರ ಕೃತಿಗಳಲ್ಲಿ ಹಾಸುಹೊಕ್ಕಗಿರುವ ಹಾಸ್ಯ ಅವರ ಬಗೆಗಿನ ಪ್ರೀತಿಯನ್ನು ಇಮ್ಮಡಿಸುತ್ತಿತ್ತು. ತೇಜಸ್ವಿಯವರ ಬಹುತೇಕ ಎಲ್ಲ ಪುಸ್ತಕಗಳೂ ನನ್ನ ಬಳಿ ಇವೆ. ತೇಜಸ್ವಿ ಸಾಹಿತ್ಯವನ್ನು ಓದಿದಷ್ಟು ಭೈರಪ್ಪನವರ ಸಾಹಿತ್ಯವನ್ನು ನಾನು ಓದಿಲ್ಲ. ನನ್ನಲ್ಲಿ ಬರೆಯಬೇಕೆಂಬ ತುಡಿತ ತೀವ್ರವಾಗಿದ್ದೆ ತೇಜಸ್ವಿ, ಪಾ.ವೆಂ ರ ಸಾಹಿತ್ಯ ಓದಿದ ಮೇಲೆ. (ಎಂತಹ ಪಾಪದ ಕೆಲಸ ಮಾಡಿದರು ಇವರಿಬ್ಬರೂ ಎನ್ನುತ್ತೀರಾ?!!). ಭಾವಾನುವಾದದಲ್ಲೂ ತೇಜಸ್ವಿ ಸಮ ಎತ್ತರಕ್ಕೆರುವವರು ತೀರಾ ಕಡಿಮೆ.

ವಿ-ಕೃತಿ ಪುಸ್ತಕದ ಗುಂಗಿನಲ್ಲೇ ಮನೆಗೆ ಬರುವಾಗ ದಾರಿಯಲ್ಲಿ ತೇಜಸ್ವಿಯರ ಬರಹಗಳ ಬಗ್ಗೆ ಚಿಕ್ಕದಾಗಿ ಚಿಂತನೆ ನಡೆಸಿತು ನನ್ನ ಮನಸ್ಸು. ತೇಜಸ್ವಿ ಬರೆದದ್ದಾದರೂ ಏನು ? ಜಿಮ್ ಕಾರ್ಬೆಟ್, ಕೆನ್ನೆತ್ ಅಂಡರ್‌ಸನ್ ರ ಕಥನಗಳ, ಲಾಂಗ್ ವಾಕ್ ಪ್ಯಾಪಿಲ್ಲಾನ್ ಗಳ ಅನುವಾದ, ಇಂಟರ್ನೆಟ್‍ನಿಂದ ಇಳಿಸಿದ ಮತ್ತು ಅಲ್ಲಿ ಇಲ್ಲಿಂದ ಸಂಗ್ರಹಿಸಿದ ಮಾಹಿತಿಗಳ ಅನುವಾದವಾದ ಮಿಲೆನಿಯಮ್ ಸಿರೀಸ್ ಮತ್ತು ಮಿಸ್ಸಿಂಗ್ ಲಿಂಕ್, ಅಲೆಮಾರಿಯ ಅಂಡಮಾನ್, ಪರಿಸರದ ಕಥೆಗಳು, ಅಣ್ಣನ ನೆನಪು ಅನುಭವ ಕಥನಗಳು. ಉಳಿದಂತೆ ಸ್ವಂತವಾಗಿ ಅವರ ಕಥಾಸಂಕಲನಗಳು, ಕವನಸಂಕಲನ ಮತ್ತು ಕಾದಂಬರಿಗಳು. ಇದರಲ್ಲಿ ಕೊಲಾಜ್ ಮಾದರಿಯ ಜುಗಾರಿ ಕ್ರಾಸ್, ಚಿದಂಬರ ರಹಸ್ಯ ಮತ್ತು ಸೈನ್ಸ್ ಫ಼ಿಕ್ಷನ್ ರೀತಿಯ ಕರ್ವಾಲೊ.

ಕಥೆಗಳಲ್ಲಿ ತೇಜಸ್ವಿ ಅಮೋಘ. ಅವರ ಕಾದಂಬರಿಗಳು ಮತು ಕಥೆಗಳು ಅವರ ಸುತ್ತಮುತ್ತಲಿನ ಪರಿಸರ, ಜನರ ಸುತ್ತಲೇ ಸುತ್ತುತ್ತವೆ. ಜುಗಾರಿ ಕ್ರಾಸ್, ಚಿದಂಬರ ರಹಸ್ಯ, ಕರ್ವಾಲೊಗಳಲ್ಲಿ ಏಲಕ್ಕಿ ಬೆಳೆ ಮತ್ತು ಮಾರುಕಟ್ಟೆಯ, ಕಾಫ಼ಿ ತೋಟ, ಪ್ರಾಣಿ ಪಕ್ಷಿಗಳ ವರ್ತನೆ, ಆಳುಗಳ, ಅಧಿಕಾರಿ, ವ್ಯಾಪಾರಸ್ಥರ ವರ್ತನೆ ಇತ್ಯಾದಿಗಳಲ್ಲಿ ಢಾಳಾಗಿ ತೇಜಸ್ವಿಯವರ ಸ್ವ ಅನುಭವವನ್ನು ಕಾಣಬಹುದು. ಈ ಅನುಭವಗಳಿಗೆ ತಮ್ಮ ಕಲ್ಪನೆ ಮತ್ತು ಪ್ರಬುದ್ಧ ಸಾಹಿತ್ಯದ ಮೂಲಕ ಹೊಸ ರೂಪ ಕೊಟ್ಟು ಓದುಗರನ್ನು ರಂಜಿಸುತ್ತಾರೆ ತೇಜಸ್ವಿ.

ತೇಜಸ್ವಿ ಭೈರಪ್ಪನವ ಹಾಗೆ ತರ್ಕಶಾಸ್ತ್ರ ಪ್ರವೀಣರಲ್ಲ. ಭಾಷೆಯ ಮೇಲಿನ ಹಿಡಿತ ಮತ್ತು ಬರಹದ ಶೈಲಿಗಳಲ್ಲಿ ಇಬ್ಬರೂ ಸೈಂಧವರೇ! ಭೈರಪ್ಪನವರ ಕೃತಿಗಳಲ್ಲಿ ಕಂಡುಬರುವಂತೆ ತೇಜಸ್ವಿ ಬರಹಗಳಲ್ಲಿ ಒಂದು ಸಮಸ್ಯೆ ಅಥವಾ ತತ್ವಗಳ ಬಗೆಗಿನ ವಿವಿಧ ಮಜಲುಗಳ ವಿಮರ್ಶೆ ಬರುವುದಿಲ್ಲ. ತೇಜಸ್ವಿ ಕೃತಿಗಳು ಅವರ ಅನುಭವದ ಎಲ್ಲೆ ದಾಟಿ ಹೋಗುವುದಿಲ್ಲ. ಭೈರಪ್ಪನವರ ಕೃತಿಗಳಲ್ಲಿ ಅದರಲ್ಲೊ ಐತಿಹಾಸಿಕ ಕೃತಿಗಳಲ್ಲಿ ಆಳವಾದ ಅಧ್ಯಯಯನ ಬೇಕಾಗುತ್ತದೆ. ಪರ್ವ ಬರೆಯಲಿಕ್ಕಾಗಿ ಅವರು ಮಹಭಾರತದಲ್ಲಿ ಉಲ್ಲೇಖಿಸಿರುವ ಸ್ಥಳಗಳಿಗೆಲ್ಲಾ ಹೋಗಿಬಂದು ಅನೇಕ ವರ್ಷಗಳ ಅಧ್ಯಯನದ ನಂತರ ಎರಡು ವರ್ಷ ಪರ್ಯಂತ ಕೂತು ಪರ್ವ ಬರೆದಿದ್ದಾರೆ. ಇಂತಹ ಒದ್ದಾಟಗಳು ತೇಜಸ್ವಿ ಬರಹಕ್ಕೆ ಬೇಕಾಗಿಲ್ಲ. ತೇಜಸ್ವಿ ಬರಹ ಪ್ರಕಾರಗಳಲ್ಲಿರುವ ವೈವಿಧ್ಯ ಭೈರಪ್ಪನವರ ಕೃತಿಗಳಲ್ಲಿಲ್ಲ. ಆದರೆ ಚಿಂತನೆಗಳ ವೈವಿಧ್ಯದಲ್ಲಿ ಭೈರಪ್ಪನವರೇ ಒಂದು ಹೆಜ್ಜೆ ಮುಂದೆ.

ಈಗಲೂ ನಾನು ತೇಜಸ್ವಿ ಅಭಿಮಾನಿ. ಆವರಣ ಓದುವವರ ಬಗ್ಗೆ ತೇಜಸ್ವಿ ಹಾಗೆ ಅಂದಿದ್ದು ಬೇಸರವನ್ನು ತರಿಸಿತು. ಹಾಗಾಗಿ ಅವರ ಕೃತಿಗಳ ಚಿಂತನೆ ಒಮ್ಮೆ ಮನದಲ್ಲಿ ಬಂದು ಹೋಯಿತು.

Rating
No votes yet

Comments