ಹಳ್ಳಿಯವರಂದ್ರೆ ತಮಾಷೇನಾ??

ಹಳ್ಳಿಯವರಂದ್ರೆ ತಮಾಷೇನಾ??

ತುಂಬಾ ದಿನದ ಹಿಂದೇನೇ ಸಂಪದ ಸೇರಿದೆ. ಬರೆಯೋ ಆಸೆ ಸಿಕ್ಕಾಪಟ್ಟೆ ಇದ್ರೂ ಸೋಮಾರಿತನದಿಂದಾಗಿ ಆಗಿರ್ಲಿಲ್ಲ (ವೇಳೆಯ ಅಭಾವ ಅಂತ ಬರೆಯೋಣ ಅನ್ಕೊನ್ಡೆ; ಅದು ನನಗೆ ನಾನೆ ಹೇಳ್ಕೊಳ್ಳೊ ಸುಳ್ಳು ಅಂತ ಗೊತ್ತಾಗಿ ಸುಮ್ನಾದೆ)
ಬರೀಬೇಕು ಅನ್ಸತ್ತೆ, ಎಲ್ಲ ವಿಷಯಗಳ ಬಗ್ಗೆ .. ಅಲ್ಪ ಸ್ವಲ್ಪ, ತಿಳಿದಷ್ಟು.. ಆದ್ರೆ ಸಂಪದ ತೆಗೆದು ನೋಡಿದ್ರೆ ಯಾರೋ ಆಗ್ಲೆ ಬರೆದ್ಬಿಟ್ಟಿದಾರೆ.. ತುಂಬಾ ಆಬ್ವಿಯಸ್ ಆದದ್ದನ್ನ ಬರೆಯೋದು ಹಾಗು ಚರ್ಚೆ ಮಾದೋದು ಎರಡೂ ಸಮಯಲೋಪಗಳು ಅನ್ನಿಸ್ತು(ಕ್ಷಮಿಸಿ ಆಬ್ವಿಯಸ್-ಗೆ ಕನ್ನಡ ಪದ ಗೊತ್ತಿಲ್ಲ)..
ಸರಿ ಕೊನೆಗೆ ಬರೆಯೋಕೆ ತಗೊಂಡ ವಿಷಯ ಅಂದ್ರೆ ನಮ್ ಹಳ್ಳಿ.. ಅಲ್ಲಿನ ಸ್ವಾರಸ್ಯಗಳು.. ಅಪ್ಪ, ಅಮ್ಮ, ತಾತ, ಅಜ್ಜಿ ಹೇಳಿದ ಕತೆಗಳು..
ಎಲ್ಲಾರಿಗು ಇಷ್ಟ ಆಗಬಹುದು ಅನ್ನೊ ಆಸೆಯಿಂದ ಬರಿತಿದೀನಿ... ಇಷ್ಟ ಅಗ್ಲಿಲ್ಲ ಅಂದ್ರೆ ಹೇಳ್ಬಿಡ್ರಪ್ಪ.. ನಿಲ್ಸ್ಬಿಡ್ತೀನಿ..

ಕಂತು ಒಂದು:
ಕೆಲವರು ಇರ್ತಾರೆ ಪಟ್ಟಣದವರು.. ಕೆಲವರು ಅಂತ ಹೇಳ್ಬಿಟ್ಟಿದೀನಿ. ಮತ್ತೆ ನನ್ಗೇ ಹೇಳಿದ್ದು ಅಂತ ಗಲಾಟೆ ಸುರು ಮಾಡಿದ್ರೆ ದೇವರಾಣೆ ಕ್ಯಾರೆ ಅನ್ನಲ್ಲ.
ಈ ಕೆಲವರು ಏನ್ ಅಂದ್ಕೊಡಿರ್ತಾರೆ ಅಂದ್ರೆ ಅವರು ಬುದ್ಧಿವಂತರು ಯಾಕೆ ಅಂದ್ರೆ ಅವ್ರು ತುಂಬ ಓದ್ದೋರು. ಓದಿಗು ಬುದ್ಧಿವಂತಿಕೆಗು ಸಂಬಂಧವಿಲ್ಲ ಅಂತ ನಮ್ ಲಕ್ಷಾಂತರ ಕಂಪ್ಯೂಟರ್ ಇಂಜಿನೀರ್ಗಳು ನಿರೂಪಿಸಿದ ಮೇಲೂ..(ಅದು ಹೇಗೆ ಅಂತ ಕೇಳ್ತೀರ.. ಕೇಳಿ.. ಕೇಳ್ರಿ ಪರವಾಗಿಲ್ಲ..)
ವಿಷಯಕ್ಕೆ ಬರೋಣ. ಇಂತ ಕೆಲವರಲ್ಲಿ ಒಬ್ಬ ಹುಡುಗಿ ಒಂದ್ ಸಲ ಅವಳ ಹಳ್ಳಿಗೆ ಹೋದ್ಲು.. ಆಗ ತಾನೆ ಪಿ ಯು ಸಿ ಮುಗಿದಿತ್ತು.. ಚಂದುಳ್ಳಿ ಚೆಲುವೆ ಬೇರೆ.. ಸಿಕ್ಕಪಟ್ಟೆ ಬಿನ್ನಾಣಗಿತ್ತಿ ಅಂದ್ಕೊಳ್ಳಿ.. ಹಳ್ಳೀಲಿ ಇವಳನ್ನ ನೋಡಿದ ಪಡ್ಡೆ ಹೈಕ್ಳೆಲ್ಲ ಎರಡು ನಿಮಿಷ ಕಣ್ಣು ಬಡೀಲಿಲ್ಲ..
ಇವಳ್ಗೋ ಖುಶೀನೋ ಖುಶಿ.. ಅಂಗಡಿಗೆ ಹೋದ್ಲು ತರಕಾರಿ ತರೋಕಂತ. ಅಂಗಡಿಯ ಹೆಂಗಸಿಗೆ ಒಂದು ಸಾಮಾನು ಹೇಳೋದು ಸೆಲ್ಲ್ ನಲ್ಲಿ ಟೊಯ್ ಟೊಯ್ ಅಂತ ಎಸ್ ಎಮ್ ಎಸ್ ಮಾಡೋದು ಮತ್ತೆ ಅಂಗಡಿಯಾಕೆ ಕೇಳಿದಾಗ ತಲೆ ಎತ್ತಿ ಇನ್ನೊನ್ದ್ ಸಾಮಾನ್ ಹೆಸರು ಹೇಳೋದು.. ಹೀಗೆ ಐದು ನಿಮಿಷ ನಡೀತು.. ಕೊನೆಗೆ ಈ ಹುಡುಗಿ ಪ್ಲಾಸ್ಟಿಕ್ ಬ್ಯಾಗ್ನಲ್ಲಿದ್ದ ಸಾಮಾನೆಲ್ಲವನ್ನ ತಾನು ತಂದಿದ್ದ ಬ್ಯಾಗಿಗೆ ಹಾಕ್ಕೊಂಡು "ದುಡ್ಡು ಎಷ್ಟಾಯ್ತು" ಅಂತ ಕೇಳಿದ್ಲು..
ಅಂಗಡಿಯವ್ಳು: "ಎಪ್ಪತ್ತು ರೂಪಾಯಿ."
ಹುಡುಗಿ ನೂರು ರೂಪಾಯಿ ಕೊಟ್ಳು..
ಅಂಗಡಿಯವ್ಳು: ಏನವ್ವ ನೀವು ದೊಡ್ಡ ಪಟ್ಟಣದವ್ರು ಅನ್ಸತ್ತೆ.. ತುಂಬಾ ಓದಿದೀರ ಅನ್ಸತ್ತೆ!
ಹುಡುಗಿಗೆ ಖುಶಿ. ನನ್ ಬಟ್ಟೆ, ಸೆಲ್, ಆಧುನಿಕತೆ ನೋಡಿ ಈ ಹೆಂಗಸು ಹೀಗೆ ಹೇಳ್ತಾ ಇದಾಳೆ ಅನ್ಕೊಡ್ಳು.
ಸರಿ ಹುಡುಗಿ ಕೇಳಿದ್ಲು "ಹೌದು ನಿನಗೆ ಹೇಗೆ ಗೊತ್ತಾಯ್ತು?"
ಅಂಗಡಿಯವ್ಳು: "ಅಲ್ಲ ಈರುಳ್ಳಿ, ಆಲುಗೆಡ್ಡೆ, ಬೇಳೆ , ಸಕ್ಕರೆ ಎಲ್ಲ ಸಾಮನು ತಗೊಂಡು.. ಟೊಮಾಟೊನ ಮೊದಲು ಬ್ಯಾಗ್ ಒಳಗಡೆ ಹಾಕ್ಕಂಡ್ರಿ ನೋಡಿ ಆಗಲೆ ಗೊತ್ತಾಯ್ತು ಕಾಮನ್ ಸೆನ್ಸ್ ಇಲ್ಲ ಅಂತ..ಅದಕ್ಕೆ ಪಟ್ಟಣದವರಾ ಅಂತ ಕೇಳ್ದೆ. ಬೇಜಾರ್ ಮಾಡ್ಕಬೇಡಿ."
ಹುಡುಗಿ ಗಪ್ ಚುಪ್!

Rating
No votes yet

Comments