ಅಂತರ

ಅಂತರ

ಮುಂಜಾನೆಯ ಹಿಮದಲ್ಲಿ
ಉಸಿರಿನ ಹೊಗೆಯಲ್ಲಿ
ಮರಗಟ್ಟುವ ಚಳಿಯಲ್ಲಿ
ಮುಸುಕಿದ್ದ ಮಂಜಿನೊಡನೆ ಸೂರ್ಯನ ಹೋರಾಟ
ಭುವಿ ತಲುಪಲು ರವಿತೇಜನ ಪರದಾಟ

ಮಂಜಿನೊಡನೆ ಬೆಳಕಿನ ಸರಸ
ಹಸಿರು ಹುಲ್ಲಿಗೆಂತೊ ಸಂತಸ
ನೀರ ಹನಿಗಳಲ್ಲೇನೊ ಉಲ್ಲಾಸ
ಹುಲ್ಲಿನ ಅಂಚಿನಲ್ಲೊಂದು ಕತ್ತಿಯ ಛಳಪು
ನೀರ ಹನಿಗಳಲ್ಲಿ ವಜ್ರದ ಹೊಳಪು

ಸೀಳಿ ಬಂದಿರಲು ಸೂರ್ಯ ರಶ್ಮಿ
ಮುಗಿಲೆತ್ತರದ ದಟ್ಟ ಮರಗಳ,
ಹರಡಿದ ಮಂಜಿನ ಪದರಗಳ
ಹೊನ್ನಿನ ತೇರಿನ ಹಾದಿಯದು ಕವಿಗೆ
ಬರಿಯ ಟಿಂಡಾಲ್ ಪರಿಣಾಮವದು ವಿಜ್ಞಾನಿಗೆ

ಹಕ್ಕಿಗಳ ಚಿಲಿಪಿಲಿ ಕಲರವಗಳು
ಟೊಂಗೆಗಳಿಗೆ ಪೋಣಿಸಿದ ಗಾಜಿನ ಮಣಿಗಳು
ಅದರೊಳಗೆ ತೂರಿ ಬಂದ ಸಪ್ತವರ್ಣಗಳು
ನಿರ್ಮಿಸೀತೆ ಮಾನವನ ಕೃತ್ರಿಮ ಜ್ಞಾನ
ಪ್ರಕೃತಿಯ ನೈಜ ಸುಂದರತೆಯ ಸೊಬಗನ್ನ?

ಅಸ್ತಂಗತನಾಗಲು ಅರುಣ
ಸರ್ವಸ್ವವೂ ನಿರ್ವರ್ಣ
ಶೀತಲ ಗಾಳಿಯ ಸಂಚಲನ
ಭಯಾನಕ ಭೀಭತ್ಸ ರಸಗಳ ಆಂದೋಲನ
ಇರುಳ ಸೌಂದರ್ಯದಳೊಂದು ಕ್ರೌರ್ಯದ ಸಮ್ಮಿಲನ

ದೂರ ಸರಿದಿರಲು ಇಳೆ ರವಿಯಿಂದ
ಮೂಡಿದೆ ಇಂತೊಂದು ವೈಪರೀತ್ಯ
ಆಕ್ಷೇಪಿಸಿತ್ತು ಮನ ಆದಿತ್ಯನ ಸುಡುಬಿಸಿಲೆಂದು
ಇಂದು ಬಯಸಿ ಬೇಡಿದೆ ಆತನ ಸಾನ್ನಿಹಿತ್ಯ
ವಸ್ತುವೊಂದನ್ನು ಕಳೆದುಕೊಂಡಾಗಲೆ ತಿಳಿಯುವುದೆ ಅದರ ಬೆಲೆ?

Rating
No votes yet

Comments