ನಗೆಯು ಬರುತಿದೆ ಎನಗೆ ನನ್ನನೆ ನೋಡಿ!

ನಗೆಯು ಬರುತಿದೆ ಎನಗೆ ನನ್ನನೆ ನೋಡಿ!

’ನಗೆಯು ಬರುತಿದೆ ಎನಗೆ ಜಗದೊಳಿರುವ ಮನುಜರೆಲ್ಲ ಹಗರಣ ಮಾಡುವುದ ಕಂಡು ’ ಅಂತ ಪು.ದಾಸರು ಹಾಡಿದರು. ಅವರಿವರನ್ನ ನೋಡಿ ನಗೋದು ಬಲೇ ಸುಲಭ . ನಮ್ಮನ್ನು ನಾವೇ ನೋಡಿ ನಗೋದು ಬಲು ಅಪರೂಪ.

ಈಗ ನನ್ನನ್ನೇ ನೋಡಿ.
ಎಷ್ಟೋ ಬಿಲಿಯನ್ ಬೆಳಕಿನ ವರ್ಷಗಳಷ್ಟು ವಿಸ್ತಾರವಾಗಿದ್ದು ಇನ್ನೆಷ್ಟೊ ಬಿಲಿಯನ್ ವರ್ಷಗಳಿಂದ ಇರೋ ಈ ಬ್ರಹ್ಮಾಂಡ ಅಂದ್ರೆ ವಿಶಾಲವಿಶ್ವದಲ್ಲಿ ಎಷ್ಟೋ ನಕ್ಷತ್ರಗಳು ಹುಟ್ಟಿ ಸಾಯ್ತಾ ಇರುತ್ತವೆ . ಅವಕ್ಕಿಷ್ಟು ಗ್ರಹಗಳು . ಅಂಥಾದ್ದೊಂದು ಈ ಭೂಮಿ . ಈ ಭೂಮಿಯಲ್ಲಿ ಮೂರೋ ನಾಲ್ಕೋ ಬಿಲಿಯನ್ ವರ್ಷಗಳಿಂದ ಜೀವಿಗಳಿವೆ . ಅಲ್ಲಿ ಇವತ್ತಿನ ಮನುಷ್ಯಜೀವಿ ಇರೋದು ಎರಡು ಲಕ್ಷ ವರ್ಷಗಳಿಂದ . ಮನುಷ್ಯ ಮನಸ್ಸಿಗೆ ಹಚ್ಕೊಂಡು ಒದ್ದಾಡ್ತಿರೋ , ದೇವರು, ಧರ್ಮ , ಜಾತಿ , ಜನಾಂಗ , ಭಾಷೆಗಳ ನೆನಪು ಐದೋ ಹತ್ತೋ ಸಾವಿರ ವರ್ಷದ್ದು. ಈ ಮನುಷ್ಯನ್ ಜೀವನದ ಅವಧಿ ಹೆಚ್ಚು ಅಂದ್ರೆ ನೂರು ವರ್ಷ . ’ನಂ’ ಕನ್ನಡ ಭಾಷೆ ಕೆಲವು ಸಾವಿರ ವರ್ಷ ಹಳೇದು. ಪುರಂದರದಾಸರು ಒಂದ್ ಐದುನೂರು ವರ್ಷ ಹಿಂದೆ ಇದ್ರು . ಅವರು ಸಂಗೀತದಲ್ಲಿ ಸಾಧನೆ ಮಾಡಿ ’ ಕರ್ಣಾಟಕ ಸಂಗೀತ ಪಿತಾಮಹ’ರಾದರು. ನಾಲ್ಕೂ ಮುಕ್ಕಾಲು ಲಕ್ಷ ಕೃತಿರಚನೆ ಮಾಡಿದರು. ಅದರಲ್ಲಿ ಉಳಿದಿರೋದು ಸಾವಿರ+ ಅಷ್ಟೆ. ಇವುಗಳನ್ನ ಸಂಗೀತಾಭಿಮಾನಿ , ಭಕ್ತ ಜನರು ಮೆಚ್ಚಿಕೊಂಡು ಹಾಡಿಕೊಂಡು ಹಾಡು ಕೇಳಿಕೊಂಡು ಇದ್ದಾರೆ . ಮುದ್ರಣ ಇಲ್ಲದ ಕಾಲಕ್ಕೆ ಹಾಡಿಕೊಂಡು ನೆನಪಿನಲ್ಲಿ ಇಟ್ಕೊಂಡ್ರು . ಅಕ್ಷರ ಕಲಿತ ನಾಲಕ್ ಜನ ಬರೆದಿಟ್ಕೊಂಡ್ರು . ನೂರು ವರ್ಷದ ಹಿಂದೆ ಪ್ರಿಂಟಿಂಗ್ ಪ್ರೆಸ್ ಬಂದು ಪ್ರಿಂಟ್ ಮಾಡಿದ್ರು . ಈಗ ಹತ್ವರ್ಷದ ಹಿಂದೆ ಕಂಪ್ಯೂಟರ್ , ಇಂಟರ್ನೆಟ್ ಬಂದು , ಕೂತಲ್ಲೇ ಕೈಬೆರಳಲ್ಲೇ ನಮಗೆ ಬೇಕಾದ್ದು ಸಿಗಬೇಕಂತ ಅಂದ್ಕೋತಿದೀವಿ. ಕೆಲವು ಸಾವಿರ ಜನ ಕನ್ನಡ ಇಂಟರ್ನೆಟ್ಟಲ್ಲಿ ಬಳಸ್ತಿದೀವಿ .

’ಸಂಪದ’ದ್ದೇ ಹರಿದಾಸ.ಇನ್ ( www.haridasa.in ) ಅಂತ ಒಂದ್ ಸೈಟ್ ಇದ್ದು ಅಲ್ಲಿ ನಾನು ಪುರಂದರದಾಸರ ಹಾಡು ಏ(/ಸೇ/ಪೇ)ರಿಸ್ತಾ ಇದ್ದೀನಿ. ಅದೂ ಯಾರೋ ತಮಿಳಿನ ಮಹಾನುಭಾವರು ಟೈಪು ಮಾಡಿಟ್ಟಿರೋದು. ಅದನ್ನ ತಿದ್ದಿ ಒಂದಿಷ್ಟನ್ನ ಪೂರ್ತಿಯಾಗೇ ಬರ್ದು ಏನೋ
ಮಹಾ ಸಾಧನೆ ಮಾಡ್ತಿದ್ದೀನಿ ಅಂತಾ ಈ ಬ್ಲಾಗಲ್ಲಿ ಬರೀತಾ ಇದ್ದೀನಿ. ಯಾರಾದ್ರೂ ನನ್ ಈ ಮಹಾಸಾಧನೇನ ಗಮನಿಸಿ ನನ್ ಬೆನ್ ತಟ್ತೀರಾ ಅಂತ .
ಈ ಬ್ಲಾಗಿಂಗ್ ಮೂಲಕ ನಾನು ಊದಿಕೊಳ್ಳೋ ತುತ್ತೂರೀನ , ತೋಡಿಕೊಳ್ಳೋ ಗೋಳನ್ನ ಒಂದ್ ನೂರ್ ಜನ ಗಮನಿಸ್ತೀರಿ . ನಾಕೈದ್ ಜನ ಅನಿಸಿಕೆ ಹಾಕ್ತೀರ .
ಇಲ್ಲಿ ಯಾರಾದ್ರೂ ಒಂದೆರಡ್ ಒಳ್ಳೇ ಮಾತ್ ಬರೆದ್ರೆ ಬಲೇ ಸಂತೋಷ ಆಗ್ತದೆ . ನನ್ ಮನಸ್ಸಿಗೆ ವಿರುದ್ಧ ಬರೆದ್ರೆ ನಂಗೆ ಬೇಜಾರಾಗಿ ಸಂಪದಾನೇ ಬಿಟ್ಬಿಡ್ತೀನಿ.

ಇದನ್ನ ನಾನು ಗಮನಿಸಿ ನಾನು ನಗಬೇಕಲ್ವೇ ?
ಹಾಡಬೇಕಲ್ವೇ ’ ನಗೆಯು ಬರುತಿದೆ ಎನಗೆ ’ ಅಂತ ?

Rating
No votes yet

Comments