ನಿನ್ನಲೊಂದು ಬಿನ್ನಹ

ನಿನ್ನಲೊಂದು ಬಿನ್ನಹ

ನನ್ನ ಬಾಳು ಹೀಗೆ ಇರಬೇಕೆಂದು ನಾನು ಕನಸ ಕಂಡದ್ದು ತಪ್ಪೇ?
ಅ ಕನಸ ನನಸು ಮಾಡುವತ್ತ ಮೊದಲಹೆಜ್ಜೆ ಇಟ್ಟಿದ್ದು ತಪ್ಪೇ?

ನನ್ನ ಪ್ರತಿಯೊಂದು ಕ್ರಿಯೆಯೂ ನಿನಗೆ ತಿಳಿದುದೇ ಅಲ್ಲವೇ?
ನನ್ನ ಪ್ರತಿಹೆಜ್ಜೆಗೂ ಮುನ್ನ ನಿನ್ನ ಸಹಮತವಿದ್ದುದೂ ನಿಜವಲ್ಲವೆ?

ಏಕೀ ಸಂಶಯ ಅಪನಂಬಿಕೆ ನುಸುಳಿದೆ ನಮ್ಮ ನಡುವಲ್ಲಿ?
ಅಥವಾ ಸಮಾಜ ಏನೆನ್ನಬಹುದೆಂಬ ಭಯ ಮನೆಮಾಡಿದೆಯೇ ನಿನ್ನಲ್ಲಿ?

ಇದೇ ಮೊದಲಲ್ಲ ನೀ ನನ್ನ ಬಯಕೆಗೆ ತಣ್ಣೀರೆರಚಿದ್ದು
ಸವಿಮಾತ ಮೂಲಕವೇ ಈ ನನ್ನ ಪುಟ್ಟ ಹೃದಯಕ್ಕೆ ಚುಚ್ಚಿದ್ದು

ಕಂಗಳ ತುಂಬಿರುವ ಹನಿಗಳು ನಿನಗೆ ಕಾಣದೆ?
ತಾಳಲಾರೆ ಈ ನೋವ ನಾನಿನ್ನು ಮುಂದೆ

“ನಾ ಬರೆದ ಬಾಳಚಿತ್ರ ಕಣ್ಣೀರಿನಿಂದಲೇ ಅಳಿಸಿ ಹೋಗಿದೆ
ಪುನಃ ಅದನು ಚಿತ್ರಿಸುವ ಆಸೆಯು ಬತ್ತಿ ಹೋಗಿದೆ
ಇನ್ನು ನೀನೆ ನನ್ನೀ ಬಾಳ ಕಥೆಗಾರ
ಮರುನುಡಿಯಿಲ್ಲದೆ ಪಾಲಿಸುವೆ ನಿನ್ನ ಆದೇಶವ ಪೂರ"

ಇಲ್ಲ…. ಹೀಗೆ ಹೇಳಿ ನನ್ನ ಕನಸನ್ನೆಲ್ಲ ಸುಟ್ಟು ಹಾಕಲು ನಾ ಯೋಗಿಯಲ್ಲ
ನನ್ನಾಸೆಯ ನೀನು ಗೌರವಿಸುವೆಯೆಂಬ ಆಶಯವೂ ಸೋತಿಲ್ಲ

ಹೇಳು ಮುಂದೊಂದು ದಿನ ನನಗೂ ಸಮಯ ಬರುವುದಲ್ಲವೇ?
ನನ್ನ ಕನಸಿನ ಜೀವನ ಜೀವಿಸಲು ಅವಕಾಶ ಕೊಡುವೆಯಲ್ಲವೇ?

Rating
No votes yet

Comments