ನನ್ನ ಅಮೂಲ್ಯ ಸಮಯ ಅನಗತ್ಯ ಕೆಲಸಕ್ಕೆ ವ್ಯಯವಾಗುತ್ತಿದೆಯಲ್ಲಾ!!

ನನ್ನ ಅಮೂಲ್ಯ ಸಮಯ ಅನಗತ್ಯ ಕೆಲಸಕ್ಕೆ ವ್ಯಯವಾಗುತ್ತಿದೆಯಲ್ಲಾ!!

ಇವತ್ತು ಬೆಳಿಗ್ಗೆ ಚಂದನದಲ್ಲಿ ಒಂದು ಕಾರ್ಯಕ್ರಮ.ವೇದಾಧ್ಯಾಯೀ ಪಂಡಿತ್ ಸುಧಾಕರ ಶರ್ಮರ ಪ್ರವಚನ.ಸರಳ ಜೀವನ-ಉದಾತ್ತ ಚಿಂತನ.  ಅನೇಕ ದಿನಗಳಿಂದ ನನ್ನ ಮನದಲ್ಲಿ ಕಾಡುತ್ತಿದ್ದ ಕೊರಗು-" ಛೇ, ಜೀವನದಲ್ಲಿ ಅದೆಷ್ಟು ದಂಡ ಮಾಡುತ್ತೇವೆ?" ಇದೇ ವಿಚಾರದಲ್ಲಿ ನನ್ನ ಪತ್ನಿಯೊಡನೆ ಬಿಸಿ ಬಿಸಿ ಮಾತುಗಳು.ಮುನಿಸಿಪಾಲಿಟಿ ನೀರು ಬಂದು ನೇರ ಸಂಪಿಗೆ ಬೀಳುತ್ತೆ.[ನಮ್ಮೂರಲ್ಲಿ ನಲ್ಲಿಗೆ ಮೀಟರ್ ಇಲ್ಲ.] ಅದಕ್ಕೆ ಒಂದು ನಿಯಂತ್ರಣವಿದೆ. ನಮಗೆ ಬೇಕಾಗುವಷ್ಟು ಬಂದಮೇಲೆ ಅದು ತಾನೇ ತಾನಾಗಿ ನಿಲ್ಲಲು ಅವಕಾಶವಿದೆ. ಆದರೂ ಅದನ್ನು ತಪ್ಪಿಸಿ ಸಂಪ್ ತುಂಬಿ ನೀರು ಚಿರಂಡಿಗೆ ಹೋಗುವಾಗ , ನಿತ್ಯವೂ ನನ್ನ ಮಾಮೂಲಿ ಪಾಠ " ನೋಡು ಕೊನೆಯಮನೆಯಲ್ಲಿ ನೀರಿಲ್ಲದೆ ಪರದಾಡುತ್ತಿದ್ದಾರೆ. ನೀನು ಸಂಪ್ ತುಂಬಿ ಚಿರಂಡಿಗೆ ನೀರು ಹರಿಸುತ್ತಿದ್ದೀಯಾ! "

ಅದಕ್ಕೆ ಮಾಮೂಲಿ ಉತ್ತರ-" ನಿಮಗೇನು ಗೊತ್ತು, ನೀರು ಬಿಟ್ಟು ನಾಲ್ಕು ದಿನಗಳಾಯ್ತು, ನೀವೇನು ಸಂಸಾರ ಮಾಡಬೇಕೆ? ನಮ್ಮ ಕಷ್ಟ ನಿಮಗೆಲ್ಲಿ ಗೊತ್ತಾಗುತ್ತೆ?

-" ತೀರಾ ನೀರು ಬರದಿದ್ದರೆ ೧೫೦ ರೂಪಾಯಿಗೆ ಒಂದು ಟ್ಯಾಂಕ್ ನೀರು ಹಾಕಿಸಿದರಾಯ್ತು. ಕಂಟ್ರೋಲ್ ತೆಗೆಯಬೇಡ ಎಂದರೂ ಕೇಳುವುದೇ ಇಲ್ಲ. ಅವಳು ತೆಗೆಯುವುದು, ನಾನು ಹಾಕುವುದು, ಇದು ಮಾಮೂಲಿ ನಮ್ಮ ಮನೆಯಲ್ಲಿ.ಆದಷ್ಟೂ ನೀರು ಪೋಲಾಗುವುದಕ್ಕೆ ನಾನು ಬಿಡುವುದಿಲ್ಲ,ಆದರೂಈ ವಿಚಾರಕ್ಕಾಗಿ ಬಿಸಿ ಬಿಸಿ ಮಾತನಾಡಬೇಕಲ್ಲಾ! ಎಂಬ ಕೊರಗು ನನ್ನ ಮನದಲ್ಲಿ.

ಇನ್ನು ತರಕಾರಿ, ಹಣ್ಣು , ಕೆಲವು ಆಹಾರ ಪದಾರ್ಥಗಳು ಕೊಳೆತು ಹೊರಗಡೆ  ಎಸೆದಾಗಲಂತೂ ತುಂಬಾ ಬೇಸರ ವಾಗುತ್ತೆ.  ನಾನುವಿದ್ಯುತ್ ಇಲಾಖೆಯಲ್ಲಿರುವುದರಿಂದ ೨೦೦ ಯೂನಿಟ್ ಉಚಿತ ವಿದ್ಯುತ್ ಸೌಲಭ್ಯ  ಇದೆ.ಆನಂತರ ೧೦೦ ಯೂನಿಟ್ ಗಳಿಗೆ ಕಡಿಮೆ ದರ ಬೇರೆ.ನಿತ್ಯವೂ ಬಾಯ್ಲರ್ ನಲ್ಲಿ ನೀರು ಕುದಿಸಿ ಸ್ನಾನ ತಡವಾಗಿ ನೀರು ಆರಿ ಹೋಗುವುದು! ಯಾವ ದೇವರಿಗೆ ಪ್ರೀತಿ? ಅದಕ್ಕಾಗಿ ಮತ್ತೆ ಪ್ರವಚನ. ವಿದ್ಯುತ್ ಕ್ಷಾಮ ಬೇರೆ.ಬೇರೆಯವರಿಗೆ ಉಳಿತಾಯ ಮಾಡಿ ಎಂದು ಹೇಳಬೇಕಾದರೆ ಸ್ವತ: ನಾನು ಪಾಲಿಸಿರಬೇಕಲ್ಲ!

ಹೀಗೆ ನಾವು ದಂಡ ಮಾಡುವ ನೀರು, ವಿದ್ಯುತ್ , ಆಹಾರ ಪದಾರ್ಥಗಳನ್ನು ದಂಡವಾಗದಂತೆ ಎಚ್ಚರ ವಹಿಸಿದ್ದರೆ ಅದೆಷ್ಟು ಜನರಿಗೆ ಉಪಯೋಗವಾಗುತ್ತಿತ್ತು, ಎಂಬುದು ನಮಗೆ ಹೊಳೆಯುವುದೇ ಇಲ್ಲ ವಲ್ಲಾ!

ಅದೇ ರೀತಿ ಹೆಚ್ಚು ಹೆಚ್ಚು ಸಂಗ್ರಹಿಸುವ ಬುದ್ಧಿಯಿಂದ ಅದೆಷ್ಟು ಹಾನಿ ಮಾಡಿಕೊಳ್ಳುತ್ತೇವೆಂಬ ಕಲ್ಪನೆ ನಮಗಿದೆಯೇ? ನಮ್ಮ ಮನೆಗಳಲ್ಲಿ ಇರುವ ಪದಾರ್ಥಗಳ ಬಳಕೆಯಬಗ್ಗೆ ಸುಮ್ಮನೆ ಒಂದು ಸರ್ವೆ ಮಾಡೋಣ.ಇರುವ ಪದರ್ಥಗಳಲ್ಲಿ ನಿತ್ಯ ಉಪಯೋಗ ವಾಗುತ್ತಿರುವುದೆಷ್ಟು? ಸುಮ್ಮನೆ ಇರುವುದೆಷ್ಟು? ಹಾಗೇ ಒಮ್ಮೆನೋಡ ಹೊರಟರೆ ಉಪಯೋಗಕ್ಕೆ ಬಾರದ ವಸ್ತುಗಳ ಸಂಖ್ಯೆಯೇ ಜಾಸ್ತಿ, ಎಂಬುದು ನಮ್ಮ ಗಮನಕ್ಕೆ ಬಂದರೂ ನಮ್ಮದೇ ಅದಕ್ಕೆ ಸಮಝಾಯಿಶಿ ಬೇರೆ ಇರುತ್ತೆ. ಇದನ್ನು ಎಸೆಯಲೂ ಮನಸ್ಸು ಬರುಲ್ಲ. ಇಟ್ಟುಕೊಳ್ಳುವುದರಿಂದ ಪ್ರಯೋಜನವಿಲ್ಲ. ಅಂತಹಾ ವಸ್ತುಗಳ ಬಗ್ಗೆಯೂ ಇದರ ಸದ್ವಿನಿಯೋಗ ಹೇಗೆ ಎಂಬ ಚಿಂತನೆ ಮಾಡುವುದೇ ಇಲ್ಲ.

ನಮ್ಮ ಒಬ್ಬರು ಮಿತ್ರರು. ಅವರ ಮನೆಯಲ್ಲಿ ಸ್ಟೀಲ್ ಕುರ್ಚಿ, ಡೈನಿಂಗ್ ಟೇಬಲ್ ಇತ್ಯಾದಿ ಇತ್ತು. ಸ್ವಲ್ಪ ಧನಿಕರಾದರು. ಬೀಟೆ ಮರದ ಫರ್ನಿಚರ್ ಬಂತು. ಆಗ ಆಪುಣ್ಯಾತ್ಮ  ಮಾಡಿದ ಕೆಲಸವೇನು ಗೊತ್ತೆ? ಹಳೆಯ ಕುರ್ಚಿ-ಟೇಬಲ್ ಎಲ್ಲವನ್ನೂ ಅವರ ಆಫೀಸ್ ಜವಾನನನ್ನು ಕರೆದು ಕೊಟ್ಟುಕಳಿಸಿ ಬಿಟ್ಟರು. ಆಗ ಅವರಿಗೆ ನಿರಾಳ.

ಕೆಲವು ಮನೆಯಲ್ಲಿ ನಾನು ಗಮನಿಸಿರುವೆ.ಕಾಲೇಜಲ್ಲಿ ಓದುವ ಮಕ್ಕಳು ಮನೆಯಲ್ಲಿದ್ದಾರೆಂದರೆ ಮನೆತುಂಬಾ ಅವರ ಬಟ್ಟೆಯೇ! ಅವರು ಓದಿ ಕೆಲಸ ಕ್ಕೆ ಸೇರಿಬಿಟ್ಟರಂತೂ ಪ್ರತೀ ತಿಂಗಳ ಸಂಬಳದಲ್ಲೂ ಒಂದೊಂದು ಜೊತೆ ಕೊಳ್ಳುವುದು ಒಂದು ಫ್ಯಾಶನ್. ಅಪ್ಪ-ಅಮ್ಮನ ಸಮಝಾಯಿಶಿ ಹೇಗಿರುತ್ತದೆಂದರೆ ಅವನ ದುಡಿಮೆಯಲ್ಲಿ ಅವನು ಹೇಗಾದರೂ ಆನಂದ ವಾಗಿರಲಿ! ಆನಂದದ ಕಲ್ಪನೆ ಯಾದರೂ ನಮಗಿದೆಯೇ? ಇಂತಹಾ ಮನೆಯಲ್ಲಿ ಬಟ್ಟೆಗಳ ರಾಶಿ ರಾಶಿ.

ಕೆಲವು ಸಂದರ್ಭಗಳಲ್ಲಿ ಏನಾಗುತ್ತದೆಂದರೆ ಮಕ್ಕಳು ಬೆಳೆದಂತೆಲ್ಲಾ ಬೇಗ ಬೇಗ ಬಟ್ಟೆ ಬಿಗಿಯಾಗಿಬಿಡುತ್ತೆ. ಅಂತಾ ಹತ್ತಾರು ಉಡುಪುಗಳು ಮನೆಯಲ್ಲಿ ಉಪಯೋಗಕ್ಕೆ ಬಾರದೆ ಇರುತ್ತೆ. ಇಲ್ಲೊಂದು ಸಮಸ್ಯೆ ಕೂಡ ಇದೆ. ಹಿಂದಿನ ಕಾಲದಲ್ಲಾಗಿದ್ದರೆ ಮನೆಯಲ್ಲಿ ನಾಲ್ಕು ಜನ ಮಕ್ಕಳಿರುತ್ತಿದ್ದರು. ಅಣ್ಣ ಬೆಳೆದಂತೆಲ್ಲಾ ಅದೇ ಉಡುಪು ತಮ್ಮನಿಗೆ ಸರಿಯಾಗುತ್ತಿತ್ತು. ಪುಸ್ತಕಗಳ ವಿಚಾರದಲ್ಲೂ ಅಷ್ಟೆ. ನನಗೆ ಚೆನ್ನಾಗಿ ನೆನಪಿದೆ.ನಾವು ಪ್ರತೀ ವರ್ಷ ಬೇಸಿಗೆ ರಜೆಯಲ್ಲಿ ಮಾಡುತ್ತಿದ್ದ ಕೆಲಸವೇ ಅದು. ಅರ್ಧ ಚಾರ್ಜ್ ಗೆ ಪುಸ್ತಕ ಮಾರುವುದು/ಕೊಳ್ಳುವುದು.ಅಥವ ಅಣ್ಣನ/ಅಕ್ಕನ ಪುಸ್ತಕಗಳು ತಂಗಿಗೆ/ತಮ್ಮನಿಗೆ ಆಗುತ್ತಿತ್ತು.ಈಗ ಅದೆಲ್ಲಾ ಸಂಕೋಚದ ಕೆಲಸ.

ಇಂದಿನಕಾಲಕ್ಕೆ  ಹಿಂದಿನ ಕಾಲದ ರೀತಿ ಹೊಂದುವುದಿಲ್ಲ. ಕಾರಣ ಮನೆಯಲ್ಲಿ ಒಂದೇ ಮಗು. ಅದು ಬೆಳೆದಂತೆಲ್ಲಾ ಅದರ ಬಟ್ಟೆ, ಪುಸ್ತಕಗಳು,ಆಟದ ಸಾಮಾನುಗಳು, ಮನೆಯಲ್ಲಿ ಕೆಲಸಕ್ಕೆ ಬಾರದ ವಸ್ತುಗಳಾಗಿ ಮನೆಯ ಜಾಗವನ್ನೆಲ್ಲಾ ಅಕ್ರಮಿಸಿಕೊಂಡಿರುತ್ತವೆ. ಅದರ ಮರು ಬಳಕೆ, ಉಪಯೋಗದ ಬಗ್ಗೆ ಇಂದಿನವರು ಹೆಚ್ಚು ಚಿಂತನೆ ಮಾಡುವುದೇ ಇಲ್ಲ.ಇದಕ್ಕೆ ಅಪವಾದ ವಿಲ್ಲ ವೆಂದಲ್ಲ.

ಇಂತಹಾ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ನಮ್ಮಮಕ್ಕಳು ಓದಿ ಮುಗಿಸಿರುವ ಪುಸ್ತಕಗಳು, ಬಿಗಿಯಾದ ಬಟ್ಟೆಗಳು,ಆಟದ ಸಮಾನುಗಳನ್ನು ಅಗತ್ಯವಿರುವ ಜನರ ಉಪಯೋಗಕ್ಕೆ ನೀಡಿದರೆಸಾರ್ಥಕವಾಗುತ್ತದೆಂಬ ಅರಿವು ನಮಗೆ ಬರಬೇಡವೇ?

ನಮ್ಮ ಮನೆಯಲ್ಲಿ ಗಾರೆ ಕೆಲಸ ಮಾಡಲು ಒಬ್ಬ ಕೆಲಸಗಾರ ಬಂದ. ವಯಸ್ಸು ೨೦ ವರ್ಷ.ನಾನೂ ಗಮನಿಸುತ್ತಿದ್ದೆ. ಪಾಪ!  ಪ್ರತಿನಿತ್ಯವೂ ಅದೇಪ್ಯಾಂಟ್ ನಲ್ಲಿ  ಬಂದು, ಅದನ್ನು ಬಿಚ್ಚಿಟ್ಟು ಕೆಲಸದ ಬಟ್ಟೆ ತೊಟ್ಟು ಕೆಲಸ ಮಾಡುತ್ತಿದ್ದ. ನನ್ನ ಮಗ ೨೩ ವರ್ಷದವನು.ಆರು ತಿಂಗಳಲ್ಲಿ ಸ್ವಲ್ಪ ಬೆಳೆದ.ಪ್ಯಾಂಟ್ ಗಳೆಲ್ಲ ಬಿಗಿಯಾಗಿತ್ತು. ತುಂಬಾ ಬೆಲೆಯ ಪ್ಯಾಂಟ್ ಗಳು. ಹೊಸದಾಗಿಯೇ ಇವೆ. ನನ್ನ ಮಗ ಹೇಳಿದ. ಚಂದ್ರನಿಗೆ ಈ ಪ್ಯಾಂಟ್ ಗಳನ್ನು ಕೊಟ್ಟು ಬಿಡೋಣಾ ಅಪ್ಪ. ಚಂದ್ರನನ್ನು ಕೆಳಿದೆ-" ನೋಡು ಚಂದ್ರ, ನನ್ನ ಮಗನ ಹತ್ತಿರ ಅವನಿಗೆ ಬಿಗಿಯಾದ ನಾಲ್ಕೈದು ಪ್ಯಾಂಟ್ ಗಳಿವೆ. ನೀನು ಬೇಸರ ಪಟ್ಟುಕೊಳ್ಳದಿದ್ದರೆ ಅವನ್ನು ನೀನು ಧರಿಸುವುದಾದರೆ ಕೊಡುತ್ತೇನೆ"

ಅದಕ್ಕೆ ಚಂದ್ರ ಹೇಳಿದ-" ಕೊಡೀ  ಸಾರ್ ಅವರು ನನ್ನ ಅಣ್ಣ ಇದ್ದಹಾಗೆ"

ಅಂದು ಚಂದ್ರ ನನ್ನ ಮಗನ ಹೊಸ ಪ್ಯಾಂಟ್ ಶರ್ಟ್ ಧರಿಸಿ ಎಶ್ಟು ಸಂತೋಷ ಪಟ್ಟು ಕೊಂಡನೆಂದರೆ, ನನಗೆ ಅಗ ಸಾರ್ಥಕ ವೆನಿಸಿತು.ನಡೆದ ಘಟನೆ ಹೆಳಿದೆ ಅಷ್ಟೆ.

ಇನ್ನೊಂದು ಮುಖ್ಯ ಸಂಗತಿ ಮನೆಯ ಕ್ಲೀನಿಂಗ್. ಯಾರೋ ಅತೀ ಶ್ರೀಮಂತರು ನಾಲ್ಕರು ಆಳು ಇಟ್ಟುಕೊಂಡು ಬಂಗಲೆಯಲ್ಲಿ ಜೀವನ ಮಾಡುವ ವಿಚಾರ ಬೇರೆ.ಆದರೆ ಸಾಮನ್ಯ ಮಧ್ಯಮ ತರಗತಿಯ ಜನರು ಮನೆಯಲ್ಲಿ ಸರಳ ವಾಗಿ ಜೀವನ ಮಾಡದೆ ಹೆಚ್ಚು ಬೆಲೆಬಾಳುವ ಫರ್ನಿಚರ್, ಟಿ.ವಿ, ಫ್ರಿಜ್ ಮೊದಲಾದುವುಗಳನ್ನು ಬಹಳ ಕಷ್ಟಪಟ್ಟು ಹೊಂದಿಸಿಕೊಂಡಿದ್ದರೆ ಪ್ರತಿದಿನ ಮನೆಯ ಕ್ಲೀನ್ ಮಾಡುವುದೇ ಮನೆಯೊಡತಿ/ಒಡೆಯನಿಗೆ ಒಂದು ದೊಡ್ದ ತಲೇ ನೋವು. ನಗರಗಳಲ್ಲಿ ಬದುಕುವವರಿಗೆ ಈಗಂತೂ ವಾಹನಗಳ ರಭಸದ ಓಡಾಟದಿಂದ ಮನೆಯ ತುಂಬಾ ದೂಳು. ಅದರ ಪರಿಣಾಮ ಮನೆಯ ವಸ್ತುಗಳ ಮೇಲೆಲ್ಲ ದೂಳುಮಯ.ನಾವು ನಲವತ್ತು-ಐವತ್ತು ಸಾವಿರ ತೆತ್ತು ಫರ್ನಿಚರ್ ಮಾಡಿದ್ದಾಗಿದೆ. ಇನ್ನು ಕ್ಲೀನ್ ಮಾಡುವ ಕೆಲಸವೂ ನಮ್ಮದೇ ತಾನೇ. ಅದಕ್ಕಾಗಿ ಯಾವಗಲೂ ಕೈಯಲ್ಲಿ ಒಂದು ಬಟ್ಟೆಹಿಡಿದು, ಟಿ.ವಿ.ಸ್ಟ್ಯಾಂಡ್, ಟೆಲೆಫೋನ್.ಫ್ರಿಜ್, ಕುರ್ಚಿ, ಟೇಬಲ್, ಸೋಫಾ, ಎಲ್ಲವನ್ನೂ ಒರೆಸುತ್ತಲೇ ಇರಬೇಕು. ಇನ್ನು ಮನೆಗೆ ಗೆಸ್ಟ್ ಗಳು ಬರುತ್ತಾರೆಂದರಂತೂ ಅವರು ಏನೆಂದುಕೊಳ್ಳುತ್ತಾರೋ ಅಂತಾ ಬೆಳಿಗ್ಗೆ ಐದಕ್ಕೇ ಎದ್ದು ಮನೆ ಕ್ಲೀನಿಂಗ್ ಮಾಡಿದ್ದೇ ಮಾಡಿದ್ದು.ಇದು ನನ್ನ ಅನುಭವವವೇ ಹೌದು. ಅಂತಹಾ ಸಂದರ್ಭದಲ್ಲೆಲ್ಲಾ ನಾನೆಂದುಕೊಳ್ಳುತ್ತೇನೆ. ಜಾಡಮಾಲಿಗೂ ನಮಗೂ ಏನು ವೆತ್ಯಾಸ? ಅವನಿಗಾದರೂ ಅದೇ ಫುಲ್ ಟೈಮ್ ಕೆಲಸ. ನಾನು ನನ್ನ   ಆಫೀಸ್ ,ಓದು-ಬರಹ,ಇವೆಲ್ಲಕ್ಕೂ ವಿನಿಯೋಗಿಸಬೇಕಿದ್ದ ಬಹುಪಾಲು ಸಮಯ ಜಾಡಮಾಲಿ ಕೆಲಸಕ್ಕೆ ವಿನಿಯೋಗಿಸುತ್ತಿದ್ದೀನಲ್ಲಾ!!

ಇದಕ್ಕೆ ಕಾರಣ ವಿವರಿಸಬೇಕಾಗಿಲ್ಲವಲ್ಲಾ?

ಮನೆಯ ಹಾಲ್ ನಲ್ಲಿ ಬಂದವರು ಕುಳಿತುಕೊಳ್ಳುವುದಕ್ಕಾಗಿ ಚಾಪೆಯೊಂದನ್ನು  ಹಾಕಿರುವ ಪದ್ದತಿ ಈಗಲೂ ಹಳ್ಳಿಯಲ್ಲಿದೆ.ಹಾಲ್ ನ್ನು ಒಮ್ಮೆ ಗುಡಿಸಿ ಚಾಪೆ ಹಾಕಿದರೆ ಮುಗಿದುಹೋಯ್ತು, ಬಂದವರೊಡನೆ  ಆನಂದವಾಗಿ ಮಾತಕತೆಯಾಡಿಕೊಂಡು ಕಾಲ ಹಾಕುವ ಹಳ್ಳಿಜನರನ್ನು ನೋಡಿದಾಗ ಪಟ್ಟಣದ ಫರ್ನಿಚರ್ ಅವಾಂತರ ನನಗಂತೂ ನಿಜವಾಗಿ ಬೇಸರ ತರಿಸುತ್ತೆ. ಎಂತಹ ಅಮೂಲ್ಯ ಸಮಯವು ಕ್ಷುದ್ರ ಕೆಲಸಕ್ಕಾಗಿ ನಾವು ಕಳೆದುಕೊಳ್ಳುತ್ತಿದ್ದೇವೆ. ಅದಕ್ಕಾಗಿಯೇ ನಮ್ಮ ಪೂರ್ವಜರು ಹೇಳಿದರು ಸರಳವಾಗಿ ಬದುಕು- ಉದಾತ್ತವಾಗಿ ಬದುಕು.

ಈ ದಿಕ್ಕಿನಲ್ಲಿ ಬರೆದಷ್ಟೂ ಇದೆ.ಸಂಪದಿಗರೇ ಪ್ರತಿಕ್ರಿಯೆಗಳಲ್ಲಿ ನಾವು ಸುಧಾರಣೆ ಮಾಡಿಕೊಳ್ಳಬೇಕಾದ ಬಗ್ಗೆ ಸಲಹೆ ಕೊಟ್ಟರೆ ಉತ್ತಮ. ಲೇಖನ ಅದಕ್ಕಾಗಿಯೇ ಮುಂದುವರೆಸ ಬೇಕಾಗಿಲ್ಲ. ಅಂತೂ ಒಂದು ಸಂಗತಿ ಸ್ಪಷ್ಟ. ಎಷ್ಟು ಸರಳವಾಗಿ, ಎಷ್ಟು ಕಡಿಮೆ ಸಾಮಾನುಗಳಿಂದ ನಮ್ಮ ಜೀವನ ಸಾಗುತ್ತದೋ ಅಷ್ಟು ನೆಮ್ಮದಿ ಸಿಗುವುದರಲ್ಲಿ ಸಂದೇಹವಿಲ್ಲ.ನಮ್ಮಮನೆಯಲ್ಲಿ ಅನಗತ್ಯವಾಗಿ ಮೂಲೆಸೇರಿರುವ ವಸ್ತುಗಳು ಯಾರಿಗಾದರೂ ಉಪಯೋಗ ವಾಗುತ್ತದೆಯೇ ಯೋಚಿಸಬಾರದೇಕೇ?

Rating
No votes yet

Comments