ಮಳೆ ನೀರು ಕೂಡಿಟ್ಟು ಮಾದರಿಯಾದ ನಮ್ಮೂರ ಜಿ.ಪಂ ಕಚೇರಿ

ಮಳೆ ನೀರು ಕೂಡಿಟ್ಟು ಮಾದರಿಯಾದ ನಮ್ಮೂರ ಜಿ.ಪಂ ಕಚೇರಿ

ಬೇಸಿಗೆ ಕಾಲದಲ್ಲಿ ಎಲ್ಲೆಲ್ಲೂ ನೀರಿಗೆ ಪರದಾಟ ನಡೆಸುವಾಗ ಮಳೆಗಾಲದಲ್ಲಿ ನಾವು ಅದೆಷ್ಟು ನೀರನ್ನು ಸುಮ್ಮನೆ ಪೋಲು ಮಾಡಿದ್ದೇವೆ ಎಂದು ಯೋಚಿಸುತ್ತೇವೆ. ಮಳೆ ನೀರನ್ನು ಹಾಳು ಮಾಡಬೇಡಿ ನೀರಿಂಗಿಸುವ ಮೂಲಕ ಅಂತರ್ಜಲ ಮಟ್ಟವನ್ನು ಕಾಪಾಡಿ ಎಂದು ಎಷ್ಟೋ ಬಾರಿ ಜನರಲ್ಲಿ ವಿನಂತಿಸಿದರೂ ಈ ಬಗ್ಗೆ ಕಾರ್ಯ ಪ್ರವೃತ್ತರಾದವರು ಕೆಲವೇ ಮಂದಿ. ಮಳೆ ನೀರು ಇಂಗಿಸುವ ಬಗ್ಗೆ ಸಾಕಷ್ಟು ಕಾರ್ಯಕ್ರಮ, ಭಾಷಣ ಎಲ್ಲವನ್ನು ಹಮ್ಮಿಕೊಂಡರೂ ಇದಕ್ಕೆ ಪ್ರತಿಕ್ರಿಯೆ ನೀಡುವ ಜನರು ವಿರಳ. ಆದರೆ ಕೇರಳದ ಉತ್ತರ ಜಿಲ್ಲೆಯಾದ ಕಾಸರಗೋಡು ಜಿಲ್ಲಾ ಪಂಚಾಯತ್ ಕಚೇರಿ ಜನರಿಗೆ ಭೋಧನೆ ನೀಡುವ ಜೊತೆಗೆ ತಾವೇ ಸ್ವತಃ ಈ ಕಾರ್ಯದಲ್ಲಿ ತೊಡಗಿಕೊಂಡು ಜನರಿಗೆ ಮಾದರಿಯಾಗುವ ಮೂಲಕ ಜನ ಮೆಚ್ಚುಗೆ ಗಳಿಸಿದೆ.

ಮಳೆ ನೀರನ್ನು ಹೇಗೆ ಸಂರಕ್ಷಿಸಬೇಕು ಎಂದು ಮಾಹಿತಿ ನೀಡುತ್ತಿದ್ದ ಕಾಸರಗೋಡು ಜಿಲ್ಲಾ ಪಂಚಾಯತ್ ಅಧಿಕಾರಿಗಳು ಯೋಚಿಸಿದ್ದು ಇಷ್ಟೇ. ಜನರಿಗೆ ಮಾಹಿತಿ ನೀಡುವ ಜೊತೆಗೆ ನಾವೇಕೇ ಮಳೆ ನೀರು ಸಂಗ್ರಹಿಸಿ, ಅದನ್ನೇಕೆ ನಮ್ಮ ಅಗತ್ಯಗಳಿಗೆ ಬಳಸಬಾರದು? ಈ ಒಂದು ಯೋಚನೆ ಯೋಜನೆಯಾದಾಗ ಕಾಸರಗೋಡು ಜಿಲ್ಲಾ ಪಂಚಾಯತ್ ಆವರಣದಲ್ಲಿ ಮಳೆ ನೀರು ಸಂಗ್ರಹ ಟ್ಯಾಂಕೊಂದು 2004ನೇ ಇಸವಿಯಲ್ಲಿ ಸ್ಥಾಪಿತವಾಯಿತು. ಇದಕ್ಕೆ ನೇತೃತ್ವ ನೀಡಿದವರು ಅಂದಿನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಇ.ಪದ್ಮಾವತಿ.

ಸುಮಾರು 100 ಮಂದಿ ನೌಕರರು ದುಡಿಯುತ್ತಿರುವ ಈ ಕಚೇರಿಯಲ್ಲಿ ದಿನಗಟ್ಟಲೆ ನೂರಾರು ಮಂದಿ ತಮ್ಮ ಕಾರ್ಯಗಳಿಗಾಗಿ ಸಂದರ್ಶನ ನೀಡುತ್ತಿರುತ್ತಾರೆ. ಇಷ್ಟೊಂದು ಜನರ ಅಗತ್ಯಗಳನ್ನು ಪೂರೈಸಲು ಅಂದರೆ ಶೌಚಾಲಯಗಳಿಗೆ ನೀರು ಧಾರಾಳವಾಗಿ ಬೇಕು ತಾನೇ? ಇದನ್ನೆಲ್ಲಾ ಮನಗಂಡ ಜಿಲ್ಲಾ ಪಂಚಾಯತ್ ಕಚೇರಿಯ ಅಧಿಕೃತರು 4.25 ಲಕ್ಷ ಲೀಟರ್ ನೀರು ಸಂಗ್ರಹಿಸುವ ಶಕ್ತಿಯನ್ನು ಹೊಂದಿರುವ ಸುಸಜ್ಜಿತವಾದ ಟ್ಯಾಂಕೊಂದನ್ನು ಜಿಲ್ಲಾ ಪಂಚಾಯತ್ ಅಂಗಳದಲ್ಲೇ ನಿರ್ಮಿಸಿದರು.

ಲಭ್ಯ ಮಾಹಿತಿಗಳ ಪ್ರಕಾರ ಜಿಲ್ಲಾ ಪಂಚಾಯತ್ ಕಟ್ಟಡದ ಛಾವಣಿ 560 ಚದರ ಮೀಟರ್್ಗಳಷ್ಟಿದೆ. ಪ್ರಸ್ತುತ ಪ್ರದೇಶದಲ್ಲಿ ವರ್ಷಕ್ಕೆ ಸರಾಸರಿ 3,500 ಮಿಲ್ಲಿಮೀಟರ್ ಮಳೆ ಲಭಿಸುತ್ತದೆ. ಹೀಗೆ ಲಭಿಸಿದ ಮಳೆಯಿಂದ ಸುಮಾರು 19.5 ಲಕ್ಷ ಲೀಟರ್್ಗಳಷ್ಟು ನೀರು ಲಭಿಸುತ್ತದೆ. ಇದಕ್ಕಾಗಿ ಛಾವಣಿಯಿಂದ ಪೈಪ್ ಮೂಲಕ ನೀರನ್ನು ಟ್ಯಾಂಕ್್ಗೆ ಹರಿಯಬಿಡಲಾಗುತ್ತದೆ. ಹೀಗೆ ಸಂಗ್ರಹಿಸಿದ ಮಳೆ ನೀರು ಆವಿ ಮೂಲಕ ಒಂದಿಷ್ಟು ನಷ್ಟವಾದಾಗ ಬಾಕಿ ಉಳಿಯುವ ನೀರು 15ಲಕ್ಷ ಲೀಟರ್. ಇದರಲ್ಲಿ ಜಿ.ಪಂ.ಕಚೇರಿಯ ಅಗತ್ಯಗಳಿಗೆ ಬೇಕಾದ ನೀರು ಕೇವಲ 6ಲಕ್ಷ ಲೀಟರ್. ಇಲ್ಲಿ ಅದೆಷ್ಟು ನೀರು ಬಾಕಿ ಉಳಿಯುತ್ತದೆ ನೋಡಿ!. ಇದನ್ನು ಸುರಕ್ಷಿತವಾಗಿ ಸಂಗ್ರಹಿಸಿಟ್ಟು ಜಿಲ್ಲೆಯ ಯಾವುದಾದರೂ ಪ್ರದೇಶದಲ್ಲಿ ನೀರಿನ ಅಭಾವ ತೀವ್ರವಾಗಿ ಕಾಡಿದಾಗ ಇಲ್ಲಿ ಸಂಗ್ರಹಿಸಲಾದ ನೀರನ್ನು ಸರಬರಾಜು ಮಾಡಲಾಗುತ್ತದೆ.

ಬೇಸಿಗೆ ಚುರುಕಾದಾಗ ಉಪ್ಪು ನೀರು, ಕೆಲವೊಮ್ಮೆ ವಾರಕ್ಕೊಮ್ಮೆ ನೀರು ಹೇಗೆ ನೀರಿಲ್ಲದೆ ಕಂಗೆಡುತ್ತಿದ್ದ ಜನತೆಗೆ ಇದರಿಂದಾಗಿ ಹೆಚ್ಚಿನ ಲಾಭ ಲಭಿಸಿದೆ. ಈ ಮೊದಲು ತಮ್ಮ ಕಚೇರಿಯಲ್ಲಿ ನಿತ್ಯೋಪಯೋಗಕ್ಕಾಗಿ ಬೋರ್್ವೆಲ್್ನ್ನು ಆಶ್ರಯಿಸುತ್ತಿದ್ದ ಸಿಬ್ಬಂದಿ ವರ್ಗವು ಇದೀಗ ಮಳೆ ನೀರಿನ್ನೇ ಎಲ್ಲಾ ಕಾರ್ಯಗಳಿಗೂ ಉಪಯೋಗಿಸುತ್ತಾರೆ. ಇದು ಮಾತ್ರವಲ್ಲದೆ ಶುದ್ದಿಕರಿಸಿದ ಮಳೆ ನೀರನ್ನೇ ಇಲ್ಲಿ ಕುಡಿಯಲು ಕೂಡಾ ಬಳಸಲಾಗುತ್ತದೆ.

ಈ ಯೋಜನೆಗೆ ಆರಂಭವಾಗಿ ವರ್ಷಗಳೇ ಕಳೆದು ಹೋದವು. ಆದರೆ ಕಾಸರಗೋಡು ಜಿಲ್ಲಾ ಪಂಚಾಯತ್ ಕಚೇರಿಯ ಈ ಒಂದು ಯೋಜನೆಯು ತಮ್ಮ ಕಚೇರಿಯ ಅಗತ್ಯಗಳನ್ನು ಪೂರೈಸುವ ಮೂಲಕ ಹಾಗೂ ನೀರಿನ ಬಗ್ಗೆ ಜನರಿಗೆ ಕಾಳಜಿ ಮೂಡಿಸುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಇಂತಹ ಯೋಜನೆಗಳನ್ನು ಮಾಡಲು ನಾವು ಕೂಡಾ ಮುಂದಾದರೆ ನೀರಿನ ಕ್ಷಾಮವನ್ನು ಬಗೆಹರಿಸಬಹುದಲ್ಲವೇ?

ಫೋಟೋ ಕೃಪೆ: ಆನಂದ್ ಪೈ

Rating
No votes yet

Comments