"ನಿಮ್ಮ ಮತ ಯಾರಿಗೇ???" ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಯ ಸುತ್ತಾ .............!!!!!!

Submitted by Chetan.Jeeral on Mon, 03/16/2009 - 22:49

ನಮಸ್ಕಾರ ಸ್ನೇಹಿತರೆ,

ಇನ್ನೇನು ಚುನಾವಣೆ ನಮ್ಮ ಮನೆ ಬಾಗಿಲಿಗೆ ಬಂದು ನಿಂತಿದೆ. ಬಹುಷಃ ನಿಮ್ಮ ಮನೆಗಳಿಗೆಲ್ಲ ನಮ್ಮ ರಾಜ್ಯದ ಲೋಕಸಭಾ ಅಭ್ಯರ್ಥಿಗಳು ಒಂದು ರೌಂಡ್ ಬಂದು ನಮಗೆ ಓಟು ಕೊಡಿ ಅಂತ ಹಲ್ಲು ಗಿಂಜಿ ಹೋಗಿರುತ್ತಾರೆ. ನಿಮಗೆ ಅವರ ಮುಖಕ್ಕೆ ಒಂದು ಸಾರಿ ಚೆನ್ನಾಗಿ ಬಾರಿಸಿ ಬೈದು ಹೊರಗೆ ಅಟ್ಟಬೇಕು ಅಂತ ಅನ್ನಿಸುತ್ತೆ ಆದ್ರೆ ಮಾಡೋಕೆ ಆಗಲ್ಲ ಅಂತ ಅವರಿಗೆ ಒಂದು ಕೃತಕ ನಗೆ ತೋರಿಸಿ ಮನಸಿನಲ್ಲೇ ನೂರು ಜನ್ಮಕ್ಕಾಗುವಸ್ಟು ಬೈದಿರ್ತಿರ. ನಿಜ ತಾನೇ.

ಇದೋ ನಿಮಗೆ ಇಲ್ಲಿ ಮತ್ತೊಂದು ಸುವರ್ಣ ಅವಕಾಶ ಒದಗಿ ಬಂದಿದೆ. ಯಾವ ನಾಯಕನನ್ನು ನೀವು ಆಯ್ಕೆ ಮಾಡುತ್ತೀರ ಅನ್ನೋದರ ಮೇಲೆ ನಮ್ಮ ನಾಡಿನ ಭವಿಷ್ಯವಿದೆ ಅನ್ನೋದನ್ನ ಒಮ್ಮೆ ನೆನಪು ಮಾಡಿಕೊಂಡು ಮತ ಹಾಕಿ ಅನ್ನೋದು ನನ್ನ ಸವಿನಯ ಮನವಿ.

ಇಲ್ಲಿ ನಿಮ್ಮೊಂದಿಗೆ ಒಂದು ಸೂಕ್ಷ್ಮ ವಿಷಯದ ಬಗ್ಗೆ ಕೆಲವು ಮಾತುಗಳನ್ನ ಹೇಳಬೇಕು ಅಂತ ಇದೀನಿ:
ಈ ಕೆಳಗಿನ ಕೊಂಡಿಯಲ್ಲಿರುವ ಸುದ್ದಿಯನ್ನ ಮೊದಲು ಒಮ್ಮೆ ನೋಡಿಬಿಡಿ : http://karave.blogspot.com/2009/03/no-support-to-party-in-2009-election…

ಇದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ನಾರಾಯಣ ಗೌಡರು ನೀಡಿರುವ ಪತ್ರಿಕಾ ಹೇಳಿಕೆ. ಅದರ ಶೀರ್ಷಿಕೆಯನ್ನ ಇನ್ನೊಮ್ಮೆ ಓದಿಕೊಳ್ಳಿ "ರಾಜ್ಯದ ಪರ ದನಿಯೆತ್ತುವವರಿಗೆ ಮಾತ್ರ ನಮ್ಮ ಬೆಂಬಲ" .
ಈ ವರದಿಯನ್ನ ಓದಿದ ಮೇಲೆ ನನಗೆ ತೋಚಿದ ಕೆಲವು ವಿಷಯಗಳನ್ನ ನಿಮ್ಮ ಮುಂದೆ ಹೇಳಬೇಕು ಅಂತ ಇದೀನಿ.
ನೋಡಿ ನಮ್ಮ ರಾಜ್ಯದಲ್ಲಿರುವ ಒಟ್ಟು ಲೋಕಸಭಾ ಸದಸ್ಯರ ಸಂಖ್ಯೆ ೨೮, ಇಲ್ಲಿಂದ ಆಯ್ಕೆ ಆಗುವವರು ಬಿಜೆಪಿ, ಕಾಂಗ್ರೆಸ್ಸ್ ಮತ್ತೆ ಜನತಾದಳ ಹಾಗೆ ವಿರಳವಾಗಿ ಪಕ್ಷೇತರರು ಆಯ್ಕೆ ಆಗುತ್ತಾರೆ.

ಪಕ್ಷೇತರರನ್ನು ಪಕ್ಕಕ್ಕಿಟ್ಟು ನೋಡೋದಾದ್ರೆ ಇಲ್ಲಿಂದ ಆಯ್ಕೆ ಆಗಿರುವ ರಾಷ್ಟ್ರೀಯ ಪಕ್ಷದ ಸದಸ್ಯರು ಲೋಕಸಭೆಯಲ್ಲಿ ಯಾವತ್ತು ನಮ್ಮ ನಾಡು, ನುಡಿ, ಜಲ ಮತ್ತು ನೆಲದ ವಿಷಯ ಬಂದಾಗ ಅಲ್ಲಿ ತಾನು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿದ್ದೇನೆ ಅನ್ನೋ ಪ್ರಜ್ಞೆ ಇಟ್ಟುಕೊಂಡು ಆ ವಿಷಯಗಳಲ್ಲಿ ನಮ್ಮ ರಾಜ್ಯದ ಪರ ದನಿಯೆತ್ತಿ ಮಾತನಾಡಿದ್ದಾರೆ? ನಿಮಗೆ ಯಾವತಾದ್ರು ಲೋಕಸಭಾ ಕಲಾಪಗಳ ವರದಿಗಳು ಪತ್ರಿಕೆಗಳಲ್ಲಿ ಬಂದಾಗ ನಮ್ಮ ರಾಜ್ಯದ ಸಂಸದರ ಹೆಸರುಗಳು ಕಂಡಿದ್ದಾವಾ?. ಬೇಡದಿರುವ ಕೆಲಸಗಳಲ್ಲಿ ನಮ್ಮವರ ಹೆಸರುಗಳು ಇರುತ್ತವೆ ಅನ್ನೋದು ಬೇರೆ ಮಾತು. ಅವುಗಳ ಬಗ್ಗೆ ಇನ್ನೊಮ್ಮೆ ಚರ್ಚಿಸೋಣ.

ಯಾಕೆ ರಾಷ್ಟ್ರೀಯ ಪಕ್ಷಗಳಿಂದ ಆರಿಸಿ ಬರುವ ಸದಸ್ಯರಿಂದ ಕೆಲಸಗಳು ಆಗೋದಿಲ್ಲ ಅನ್ನೋ ಕಾರಣ ಹುಡುಕಿದರೆ ಸಿಗುವ ಸರಳ ಮತ್ತು ಸಿಧ್ಧ ಉತ್ತರ "ಹೈ ಕಮಾಂಡ್ ". ಅಲ್ಲಿಂದ ಬರುವ ಯಾವುದೇ ಆಜ್ಞೆಯನ್ನ ಧಿಕ್ಕರಿಸುವ ನೈತಿಕ ಧೈರ್ಯ ಇಲ್ಲಿನ ಯಾವುದೇ ನಾಯಕರು ಪ್ರದರ್ಶಿಸುವುದಿಲ್ಲ. ನಮ್ಮ ರಾಜ್ಯಕ್ಕೆ ಸಂಭಂದಿಸಿದ ವಿಷಯಗಳಾದ ಮಹದಾಯಿ ಯೋಜನೆ, ಕಾವೇರಿ ಜಲ ಹಂಚಿಕೆ ವಿವಾದ, ಬೆಳಗಾವಿ ಗಡಿ ಸಮಸ್ಯೆ , ಶಾಸ್ತ್ರೀಯ ಭಾಷೆ ಸ್ಥಾನ ಮಾನ , ಹೀಗೆ ಇದರ ಪಟ್ಟಿ ಮುಂದುವರಿಯುತ್ತೆ. ಈ ವಿಷಯಗಳು ಲೋಕ ಸಭೆಯಲ್ಲಿ ಚರ್ಚೆಗೆ ಬಂದಾಗ ನಮ್ಮ ಯಾವ ಸಂಸದರು ನಮ್ಮ ನಾಡ ಪರವಾಗಿ ಧ್ವನಿ ಎತ್ತಿದ್ದಾರೆ ನೀವೇ ಹೇಳಿ.
ಈ ವಿಷಯಗಳನ್ನ ಗಮನಿಸಿದರೆ ನಾರಾಯಣ ಗೌಡರು ಹೇಳಿರುವ ಮಾತುಗಳು ಮಹತ್ವ ಪಡೆಯುತ್ತವೆ. ಇವತ್ತು ರಕ್ಷಣಾ ವೇದಿಕೆ ನಮ್ಮ ನಾಡಿನಲ್ಲಿ ಒಂದು ಬೃಹತ್ ಸಂಘಟನೆಯಾಗಿ ಬೆಳೆದು ನಿಂತಿರುವುದನ್ನು ಯಾರು ಅಲ್ಲಗಳೆಯಲು ಸಾಧ್ಯವಿಲ್ಲ. ನಾಡ ನುಡಿ ವಿಷಯದಲ್ಲಿ ಅದು ತನ್ನ ಕನ್ನಡ ಪ್ರೇಮವನ್ನ, ನಾಡ ಪರ ಕಾಳಜಿಯನ್ನ ತೋರಿಸಿದೆ.

ಯಾವುದೇ ಪಕ್ಷ ಸಾಚಾ ಅಲ್ಲ, ಹಾಗೆಯೇ ಎಲ್ಲಾ ಪಕ್ಷಗಳಲ್ಲು ಬರಿಯ ಕೆಟ್ಟವರೆ ಇದ್ದಾರೆ ಅಂತಲೂ ಹೇಳಬರುವುದಿಲ್ಲ. ಹಾಗಾಗಿಯೇ ಇಲ್ಲಿ ನಾರಾಯಣ ಗೌಡರು ಹೇಳಿರುವ ಹೇಳಿಕೆ ಪ್ರಾಮುಖ್ಯತೆ ಪಡೆಯುತ್ತದೆ. ನಾಡ ಪರ ಕಾಳಜಿಯುಳ್ಳ ಯಾವುದೇ ವ್ಯಕ್ತಿ ಇರಲಿ ಪಕ್ಷ ಭೇಧ ಮರೆತು ಅವರನ್ನ ಬೆಂಬಲಿಸುವುದು ನಿಜಕ್ಕು ಒಂದು ಒಳ್ಳೆಯ ನಡೆ ಅಂತಾನೆ ಹೇಳಬಹುದು.

ಇವತ್ತು ನಮಗೆ ಬೇಕಾಗಿರುವುದು ನಮ್ಮ ನಾಡು, ನುಡಿಯ ಬಗ್ಗೆ ಕಾಳಜಿ ಇರುವಂತಹ ನಾಯಕರು. ಅವರನ್ನ ಗುರುತಿಸಿ, ಆಯ್ಕೆ ಮಾಡಿ ಅವರನ್ನ ನಮ್ಮ ನಾಡನ್ನ ಮುನ್ನಡೆಸುವ ಅಧಿಕಾರ ನೀಡುವುದು ನಮ್ಮಗಳ ಕೈಯಲ್ಲಿದೆ.
ನೀವು ಏನು ಹೇಳ್ತಿರಾ?

Comments