ಪಾಳೆಯಗಾರ ಭೂಷಣ್ ಮತ್ತು ಇತರ ಕಥೆಗಳು

ಪಾಳೆಯಗಾರ ಭೂಷಣ್ ಮತ್ತು ಇತರ ಕಥೆಗಳು

ಮೊನ್ನೆ ತುಮಕೂರಿನ ನೀರ ನಿಶ್ಚಿಂತೆ ಕಾರ್ಯಕ್ರಮಕ್ಕೆ ನಾವು ಸ್ವಲ್ಪ ತಡವಾಗಿ ಧಾಳಿ ಮಾಡಿದೆವು. ನನ್ನ ಗಮನ ಮೊದಲು ಸೆಳೆದವರೆಂದರೆ ಬಿಳಿಯ ಜುಬ್ಬಾ ಧರಿಸಿದ ಒಬ್ಬರು ಆಜಾನುಬಾಹು ಅಸಾಮಿ. ಅವರ ನಿಲುಮೆ ಮತ್ತು ಉಡುಪಿನಿಂದ ಅವರು ಮುಸಲ್ಮಾನರಿರಬಹುದೆಂದು ನಾನಂದುಕೊಂಡೆ. ವೇದಿಕೆಯ ಮೇಲಿದ್ದವರ ಮಾತಿನ ಮೂಲಕ ಅವರ ಹೆಸರು 'ನಾಗಭೂಷಣ್' ಎಂದು ತಿಳಿಯಿತು. ಆಗಲೂ ನನಗೆ ಹರಿ ಹೇಳುವ 'ಭೂಷಣ್' ಮತ್ತು ಈ 'ನಾಗಭೂಷಣ್' ಒಬ್ಬರೇ ಎಂದು ತಿಳಿಯಲಿಲ್ಲ. ಆಮೇಲೆ ನಿಧಾನವಾಗಿ ಗೊತ್ತಾಯಿತೆನ್ನಿ.
ಕಾರ್ಯಕ್ರಮ ಕೊನೆಗೊಳ್ಳುವ ಹೊತ್ತಿಗೆ ಸಂಜೆ ನಾಲ್ಕರ ಆಸುಪಾಸು. ಕಿಟಕಿಯ ಮೂಲಕ ಬರುತ್ತಿದ್ದ ಓರೆಬೆಳಕು ಭಾವಚಿತ್ರಗಳಿಗೆ ಹೇಳಿಮಾಡಿಸಿದಂತಿತ್ತು. ಒಬ್ಬೊಬ್ಬರಾಗಿ ಆನಿಲ್, ಶಿವು ಮತ್ತು ಭೂಷಣ್ ರವರನ್ನು ಸೆರೆಹಿಡಿದದ್ದಾಯಿತು.

ನಾನು ಮನುಷ್ಯರ ಭಾವಚಿತ್ರಗಳನ್ನು ತೆಗೆಯುವುದು ಇಲ್ಲ ಎನ್ನುವಷ್ಟು ಕಡಿಮೆ. 'ಸ್ವಲ್ಪ
ತಲೆ ಓರೆ ಮಾಡಿ' - ಎನ್ನುವ ಸಲಹೆಗಳನ್ನು ಕೊಡುವುದು ನನಗೆ ಸ್ವಲ್ಪ ಬೇಜಾರು. ಮತ್ತೊಂದು
ಸಮಸ್ಯೆಯೆಂದರೆ ಕ್ಯಾಮರಾ ಮುಖಕ್ಕೆ ಹಿಡಿಯುತ್ತಲೂ ಹೆಚ್ಚಿನವರು ಇಂಗು ತಿಂದ ಮಂಗಗಳಂತೆ
ಬೆಪ್ಪು ಬೆಪ್ಪಾಗಿ ತಮ್ಮ ಮಾತನ್ನೆಲ್ಲ ನಿಲ್ಲಿಸಿ ಯಾವುದೋ ಒಂದು ordeal ಗೆ
ಒಳಗಾಗುತ್ತಿದ್ದವರಂತೆ ಬಿಳಿಚಿಕೊಳ್ಳುತ್ತಾರೆ. ಅವರನ್ನು ಅದರಿಂದ ಹೊರತರಬೇಕಿದ್ದರೆ
ನಾನು ವಿದೂಷಕನ ಕೆಲಸ ಮಾಡಿಯೋ ಅಥವಾ ಯಾವುದಾದರೂ ಸಂಬಂಧವಿಲ್ಲದ ಒಂದು ವಿಷಯದ ಬಗ್ಗೆ
ಅವರಲ್ಲಿ ಸಂಭಾಷಿಸಿಯೋ ಸರ್ಕಸ್ ಮಾಡಬೇಕಾಗುತ್ತದೆ. ಪ್ರಕೃತಿ ಚಿತ್ರಗಳನ್ನು
ತೆಗೆಯುವುದೆಂದರೆ ಹಾಗಲ್ಲ. ಅವಳು ಸದಾ ಪೋಸು ಕೊಡುತ್ತಲೇ ಇರುತ್ತಾಳೆ. ಅಲ್ಲದೆ ಚಿತ್ರ
ತೆಗೆಯುತ್ತಿರುವ ಈ ಮನುಷ್ಯ ತನ್ನೆದುರು ಏನೂ ಅಲ್ಲದ ಒಂದು ಕ್ರಿಮಿ ಎಂಬ ಅರಿವು
ಅವಳಿಗಿದ್ದಂತೆ ನನಗೆ ಕ್ಯಾರೇ ಅನ್ನದೆ ಚಿತ್ರ ತೆಗೆಯಲು ಅನುವುಮಾಡಿಕೊಡುತ್ತಾಳೆ.

 

ಇರಲಿ... ಈ ಬಾರಿ ನನಗೇನೂ ಸಮಸ್ಯೆಯಾಗಲಿಲ್ಲ. ಹೊಸ ಪರಿಚಯದವರೆಲ್ಲ ಜಮಾನಾದಿಂದ ಗೆಳೆಯರೇನೋ ಎಂಬಂತೆ ಸ್ನೇಹ, ವಿಶ್ವಾಸದಿಂದ ವರ್ತಿಸಿದರು. ಬಹುಷ: ಇಂತಹ ಕಾರ್ಯಕ್ರಮದಿಂದ ಗಳಿಸುವ ದೊಡ್ಡ ಆಸ್ತಿ ಪರಿಚಯ-ವಿಶ್ವಾಸಗಳೇ ಇರಬಹುದು ಎಂದು ನನಗೊಮ್ಮೊಮ್ಮೆ ಅನ್ನಿಸುವುದಿದೆ.

ನಮ್ಮನ್ನೆಲ್ಲ ಒಂದೇ ಸೂತ್ರಕ್ಕೆ ಪೋಣಿಸಿದ ಹರಿಗೆ ವಂದನೆಗಳು.

ವಸಂತ್ ಕಜೆ.

Rating
No votes yet

Comments