ಸ್ವ-ಗತ

ಸ್ವ-ಗತ

ನಿನಗೆ ನಿಜವಾಗಿ ತಿಳಿಯಲಿಲ್ವ? ನಾಟಕ ಮಾಡುತ್ತಿದ್ದ? ಅಷ್ಟೊಂದು ಚಡಪಡಿಸಿ ಹೋಗ್ತಿದ್ದೆ ನಿನಗೋಸ್ಕರ. ತಮಾಷೆ ನಿನಗೆ. ಊರವರಿಗೆಲ್ಲ ತಿಳಿಯೋದು ನಿನಗೆ ಮಾತ್ರ ಗೊತ್ತಾಗಲಿಲ್ಲ ಕಡೇವರ್ಗೂ. ನೀನು ಎರಡು ಮೂರು ದಿನ ಕಾಣಲಿಲ್ಲವೆಂದ್ರೆ, ನಿನ್ನೊಂದಿಗೆ ಜಗಳವಾಡಿ ಅಳುಮುಖ ಮಾಡ್ಕೊಂಡು ಮೊಂಡು ಹಿಡೀತಿದ್ನಲ್ಲ? ಅದೆಷ್ಟು ತಾಳ್ಮೆಯಿಂದ ಸಮಾಧಾನ ಮಾಡ್ತಿದ್ದೆ. ನಿನ್ನ ಮುಂದೆ ಮಗುವಾಗಿಬಿಡ್ತಿದ್ದೆನಲ್ಲ, ನಿಜ ಹೇಳು ನಿನಗೆ ಮುದ್ದು ಬರ್ತಿರ್ಲಿಲ್ವ ನನ್ಮೇಲೆ? ಅದೆಷ್ಟು ಕಾದೆ ಕಣೋ!!! ಕಾಯೋದ್ರಲ್ಲೂ ಸುಖವಿದೆ ಅಂತಾರೆ. ಅದೇನು ಸುಖವಿದೆ ಮಣ್ಣು. ಬರೀ ಕಾದದ್ದಷ್ಟೇ. ಶಬರಿ ಕತೆ ನನಗೆ ಹೆಚ್ಚು ಇಷ್ಟವಾಗ ತೊಡಗಿದ್ದೇ ಆಗ. ನೂರು ಶಬರಿಗಳನ್ನ ಮೀರಿಸುವಂತಿತ್ತು ನನ್ನ ನಿರೀಕ್ಷೆ. ಪ್ರತಿ ದಿನ, ಪ್ರತಿ ಕ್ಷಣ ನಿನ್ನ ಬಾಯಿಂದ ಆ ಮಾತು ಬರುತ್ತೆ, ಇದೀಗ ನನ್ನ ಮುಂದೆ ಮಂಡಿಯೂರಿ ’ನನ್ನ ಮದ್ವೆ ಮಾಡ್ಕೋತೀಯೇನೆ? ನಾನು ನಿನ್ನ ತುಂಬ ತುಂಬಾ ಪ್ರೀತಿಸ್ತೀನಿ’ ಅಂತ ಹೇಳಿಬಿಡ್ತೀಯ. ನನ್ನ ಪ್ರೀತಿ, ನಿರೀಕ್ಷೆ, ಕನಸುಗಳಿಗೆಲ್ಲ ಸಾರ್ಥಕತೆ ದೊರಕಿಸಿಕೊಡ್ತೀಯ. ಇನ್ನೇನು ನೀನು ನನಗೆ ಸಿಕ್ಕೇ ಬಿಡ್ತೀಯ. ಕಣ್ಣಲ್ಲಿ ನೂರು ನಕ್ಷತ್ರಗಳ ಮಿಂಚು. ಮುಖಕ್ಕೆ ನಾಚಿಕೊಳ್ಳಲು ಕಾತರ, ಬಾಹುಗಳಿಗೆ ನಿನ್ನಲ್ಲಿ ಇಷ್ಟಿಷ್ಟೇ ಒಂದಾಗಿಬಿಡುವ ಬಯಕೆ. ಅದೆಷ್ಟು ರಾತ್ರಿ ನನ್ನ ಕನಸುಗಳನ್ನ ಹೀಗೆ ಆಳಿದ್ದೀಯೋ ನೀನು

ಕಾಲ ಹಾಗೇ ಇದ್ದು ಬಿಡಬೇಕಿತ್ತು. ಬದುಕಿನ ಕೊನೆ ಕ್ಷಣದವರೆಗೆ ನೀನು ಬರುತ್ತೀಯೆಂದು ಮನದ ಹೊಸ್ತಿಲಿಗೆ ರಂಗೋಲಿಯಿಟ್ಟು ಕಾದು ಬಿಡುತ್ತಿದ್ದೆ. ಉಹೂಂ ಕಾಲವೂ ನಿನ್ನ ಜಾತಿಗೆ ಸೇರಿದ್ದು, ನಿಷ್ಟುರ, ಉರುಳುತ್ತಲೇ ಹೋಯ್ತು. ನನ್ನಲ್ಲಿನ ನಿರೀಕ್ಷೆಗೆ ಇನ್ನಷ್ಟು ರೆಕ್ಕೆ ಪುಕ್ಕ ಕಟ್ಟಿ ಕೊಡುತ್ತ. ನಾನೆಷ್ಟು ಹುಚ್ಚಿ?! ನನಗ್ಯಾಕೆ ಬೇಕಿತ್ತು ನಿನ್ನ ಬಾಯಿಂದಲೇ ಪ್ರೀತಿಸುತ್ತೇನೆ ಎಂದು ಹೇಳಿಸುವ ಹುಚ್ಚು? ನಾನೇ ಬಾಯ್ಬಿಟ್ಟು ಹೇಳಿಬಿಡಬೇಕಿತ್ತು. ಹೇಳಿಬಿಡಬಹುದಿತ್ತ? ಇಲ್ಲ, ಜನ್ಮವಿಡೀ ಅಂಗೈಯಲ್ಲಿ ಜೀವಹಿಡಿದು ಕಾಯುತ್ತಿದ್ದೆನೆ ವಿನಹ ನಿನ್ನ ತೀಕ್ಷ್ಣ ಕಣ್ಣುಗಳನ್ನೆದುರಿಸಿ ನನಗಂತು ಹೇಳಲು ಸಾಧ್ಯವೇ ಇರಲಿಲ್ಲ ಬಿಡು.

ಅದೊಂದು ದಿನ ನನ್ನೆಲ್ಲ ಸಂಭ್ರಮವನ್ನು ಗರಿಗೆದರಿಸಿ ನಿಲ್ಲಿಸಿದ್ದೆ. ’ಮನೆಗೆ ಬರುತ್ತೇನೆ. ನಿಂಜೊತೆ ಮಾತಾಡಬೇಕು. ಮುಂದಿನವಾರ ಯು.ಕೆಗೆ ಹೊರಡುತ್ತಿದ್ದೀನಲ್ಲ. ಹಾಗೆ ನಿನಗೊಂದು ಸರ್ಪ್ರೈಸ್ ಇದೆ’ ಅದೆಷ್ಟು ಸಾರಿ ನೆನಸಿಕೊಂಡು ಪುಳಕಿತಳಾದೆನೋ ನನಗೇ ಗೊತ್ತು. ನಿನ್ನ ಮಾತುಗಳಲ್ಲಿ ಅದೇನು ರೊಮ್ಯಾಂಟಿಸಿಸಂ ಇತ್ತು ಅಂತ? ನಿನ್ನ ಯಾವತ್ತಿನ ತಣ್ಣಗಿನ ದನಿಯಲ್ಲೇ ಹೇಳಿದ್ದೆ. ಆದರೂ ಮನಸು ಹುಚ್ಚು ಕುದುರೆ. ಕಣ್ಗಳು ಮತ್ತೆ ಕನಸುಗಳಿಂದ ಬಣ್ಣ ಬಣ್ಣ. ಖುಷಿಯಿಂದ ಮನೆಯೆಲ್ಲ ಓಡಾಡಿಬಿಟ್ಟೆ. ನಿನಗಿಷ್ಟದ ಬಣ್ಣದ ಸೀರೆ, ತುಸು ಹೆಚ್ಚು ಮೇಕಪ್ಪು. ಹಹ್ ಹುಚ್ಚಿ!

ನನ್ನೆದೆಯಲ್ಲಿ ಬಿರುಗಾಳಿಯ ತರಂಗಗಳೇಳುತ್ತಿತ್ತು. ನೀನು ಸಂಜೆಯ ತಂಗಾಳಿಯಂತೆ, ಕಣ್ಣುಗಳಲ್ಲಿ ಅದೇ ತೀಕ್ಷ್ಣತೆ, ಸೂರ್ಯನನ್ನೇ ಹಿಡಿದಿಟ್ಟುಕೊಂಡಿದಿಯೇನೋ ಎಂಬಂತೆ. ತನ್ನ ಹೆರಿಗೆಯ ಅಂತಿಮ ಕ್ಷಣದ ಉತ್ಕಟ ನೋವಿನಲ್ಲೂ, ಬರಲಿರುವ ಮಗುವಿನ ಬಗ್ಗೆ ಸಂತಸಗೊಳ್ಳುವ ತಾಯಿಯಂತೆ, ನಿನ್ನಗಲಿಕೆಯ ಸಂಕಟದ ಜೊತೆ ನೀನು ಕಡೆಗೂ ನನ್ನ ನಿರೀಕ್ಷೆ ನಿಜ ಮಾಡುತ್ತೀ ಎಂದು ಕಾದೆ. ನಿನ್ನ ಬಾಯಿಂದ ಕೊನೆ ಮಾತು ಬರುವವರೆಗೂ ಕಾಯುತ್ತಲೇ ಇದ್ದೆ.

ಎಲ್ಲವೂ ಎಷ್ಟು ಸಲೀಸಿತ್ತು ನಿನಗೆ ಯಾವುದರ ಬಗ್ಗೆಯೂ ಕನ್ ಫ್ಯೂಶನ್ಸ್ ಇಲ್ಲ, ಎಲ್ಲವೂ ಕರಾರುವಾಕ್, ನಿಚ್ಚಳ! ಸ್ಪಷ್ಟ! ಐದು ವರ್ಷದ ಯುಕೆ ಟ್ರಿಪ್, ರಾಜು ಅಂಕಲ್ ಮಗಳಿಗೆ ಅಲ್ಲೇ ಕೆಲಸವಿರುವುದರಿಂದ, ಇನ್ನೆರೆಡು ದಿನಕ್ಕೆ ನಿಮ್ಮಿಬ್ಬರ ಮದುವೆ. ಐದು ವರ್ಷದ ನಂತರ ಭಾರತಕ್ಕೆ ವಾಪಾಸ್, ಆಮೇಲೆ ಇಲ್ಲೊಂದು ಕಂಪನಿ ತೆರೆಯುವ ಯೋಚನೆ. ಅದಕ್ಕೆ ರಾಜು ಅಂಕಲ್ ಇನ್ವೆಸ್ಟ್ ಮೆಂಟು. ಅದಕ್ಕೆ ಬದಲಾಗಿ ನೀನವರ ಮಗಳನ್ನು ಮದುವೆಯಾಗುವುದು. ಮ್ಯಾಥ್ಸ್ ಫಾರ್ಮುಲ ಇದ್ದಂತೆ ನಿನ್ನ ಜೀವನವೂ ಅದರ ಲೆಕ್ಕಚಾರವೂ. ಬೆಚ್ಚಿಬಿದ್ದೆ ನಾನು. ಮುಂದೇನು? ನನ್ನ ಆಸೆ ನಿರೀಕ್ಷೆ ಕನಸುಗಳನ್ನು ಕೊಲ್ಲುವ ಹಕ್ಕು ನಿನಗಿಲ್ಲ ಎಂದು ನಿನ್ನ ಕತ್ತಿನ ಪಟ್ಟಿ ಹಿಡಿದು ಕೇಳಬೇಕೆನಿಸಿತು. ಸತ್ತ ನಗುವಿನೊಂದಿಗೆ ನಿನಗೆ ಕಂಗ್ರಾಟ್ಸ್ ಹೇಳುವುದು ಬಿಟ್ಟು ನನ್ನ ಕೈಲಿ ಏನು ಹೇಳಲಾಗಲಿಲ್ಲ. ಹೆದರಿದ್ದೆ. ಪ್ರೀತಿಯಂತೆಯೇ ನಿನ್ನ ಮೇಲಿನ ಕೋಪವೂ ಮನಸ್ಸಿನಲ್ಲಿ ಉಳಿದು ಹೋಯ್ತು.

ಕೋಪವೇ ಅನ್ಸುತ್ತೆ ಹಾಗೆ ನನ್ನನ್ನು ಅವನೆಡೆಗೆ ತಿರುಗಿಸಿದ್ದು. ಅವನ ಬೆಚ್ಚನೆಯ ಬಾಹುವಿನಲ್ಲಿ ನಿನ್ನ ಬಿಸುಪು ಹುಡುಕುತ್ತಿದ್ದೆ. ನಿನ್ನನ್ನು ದ್ವೇಷಿಸಬೇಕೆಂದು ಕೊಂಡಾಗಲೆಲ್ಲ ಅವನನ್ನು ಹೆಚ್ಚು ಪ್ರೀತಿಸುವ ನಾಟಕವಾಡುತ್ತಿದ್ದೆ. ನಾಟಕ ಬಯಲಾಗಿ ಹೋಗುತ್ತಿತ್ತು. ಇವನ ಪ್ರೀತಿಯಲ್ಲು ನಿನ್ನದೇ ಛಾಯೆ ಹುಡುಕುತ್ತಿದ್ದೆ, ಕೆದಕಿ ಕೆದಕಿ. ನಿನ್ನನ್ನು ಎಷ್ಟು ಪ್ರೀತಿಸುತ್ತಿದ್ದೆನೆಂದರೆ ದ್ವೇಷವನ್ನು ಪ್ರೀತಿಯಿಂದಷ್ಟೇ ಮಾಡಲು ಸಾಧ್ಯವಿತ್ತು! ನನ್ನ ಎದೆಗೆ ತಲೆ ಹಚ್ಚಿ ಆಲಿಸುತ್ತಿದ್ದ ಅವನು. ತನ್ನ ಪ್ರೀತಿಯ ಸ್ವರ ಹುಡುಕುತ್ತಿದ್ದಾನೆಂದುಕೊಂಡೆ. ಆದರೆ ಅವನ ಅನುಮಾನದ ಕಿವಿಗಳು ನಿನ್ನದೆ ಕಂಪನಗಳನ್ನು ಹುಡುಕುತ್ತಿದ್ದವು. ನೋಡು ಅವನಲ್ಲೂ ಮುಚ್ಚಿಡಲಾರದೇ ಹೋದೆ ನಿನ್ನ ಪ್ರೀತಿಯನ್ನು. ನಾ ಹೇಳದೆ ಎಲ್ಲವು ತಿಳಿದುಕೊಂಡು ಬಿಟ್ಟ. ತಿಳಿಯದೇ ಹೋಗಿದ್ದು ನಿನಗೆ ಮಾತ್ರ.

ಅವನಿಂದ ದೂರಾದ ಮೇಲೆ ಮತ್ತೆ ನನ್ನೊಡನುಳಿದದ್ದು ನಿನ್ನವೇ ನೆನಪುಗಳು. ಅವಷ್ಟೇ ಸಾಕೆಂದು ಎದೆಗವಚಿಕೊಂಡು ಬದುಕತೊಡಗಿದೆ. ನನ್ನ ಶಾಂತ ಸರೋವರದಂತಹ ಬದುಕಿಗೆ ಕಲ್ಲೆಸದ ಹಾಗೆ ನೀನೇಕೆ ಮತ್ತೆ ಬಂದು ಬಿಟ್ಟೆ? ನನಗೆ ನಿನ್ನ ನೆನಪುಗಳೊಂದಿಗೇ ಪ್ರೀತಿ ಬೆಳೆದುಬಿಟ್ಟಿತ್ತು. ಅವೇ ನೀನು, ಅಲ್ಲ ನನಗೇ ಬೇಕಿದ್ದ ನೀನು ಅಂದುಕೊಂಡು ಪ್ರೀತಿಸುತ್ತ ಬದುಕುತ್ತಿದ್ದೆ. ’ಇಲ್ಲ! ಅದು ನಾನಲ್ಲ’ ಎನ್ನುವುದನ್ನು ಸಾಬೀತು ಮಾಡಲೇ ಬಂದೆಯಾ? ಅಷ್ಟು ವರ್ಷಗಳ ನಂತರ ಮತ್ತೆ ನಿರೀಕ್ಷೇ. ಕಣ್ಣರಳಿಸಿ, ಕಿವಿ ನಿಮಿರಿಸಿ ಕೂತಿದ್ದೆ. ನಿನ್ನದು ಅದೇ ತಣ್ಣಗಿನ ಧ್ವನಿ. ’ಅವಳಿಗೆ ಇಷ್ಟವಿರಲಿಲ್ಲವೆಂದಲ್ಲ. ಇನ್ನೊಬ್ಬನಾರೋ ನನಗಿಂತ ಇಷ್ಟವಾದ ಅದಕ್ಕೆ ಡಿವೋರ್ಸ್ ಮಾಡಿದಳು. ನಿನಗೂ ಗಂಡನಿಲ್ಲ, ನಾನು ಹೆಂಡ್ತಿಯನ್ನು ಬಿಟ್ಟಿದ್ದೀನಿ. ಇಬ್ಬರೂ ಜೊತೆಗಿರೋಣ್ವ?’ ಅದೇ ಕರಾರುವಾಕ್ಕು ಮಾತುಗಳು. ನೋ ಕನ್ ಫ್ಯೂಶನ್ಸ್. ಹಳೆಯ ಲೆಕ್ಕಚಾರದ ಬುದ್ದಿ.

ನಗು ಬಂದುಬಿಡ್ತು ನನಗೆ. ನನ್ನ ಪೆದ್ದುತನಕ್ಕೋ, ನಿನ್ನ ವ್ಯವಹಾರದ ಮಾತುಗಳಿಗೋ ಗೊತ್ತಿಲ್ಲ. ಹೇಗೋ ಸಾಧ್ಯ? ಅಷ್ಟು ದಿನದ ನನ್ನ ನಿರೀಕ್ಷೆಗೆ, ಪ್ರೀತಿಗೆ ನಿನ್ನಲ್ಲಿ ಸಿಗುವ ಸ್ಥಾನ ಇದೇ ಎಂದು ತಿಳಿದ ಮೇಲೂ ನಿನ್ನ ಆಫರ್ ಹೇಗೆ ಒಪ್ಪಿಕೊಂಡುಬಿಡಲಿ? ಈಗ ನಿನಗಿಂತ ಹೆಚ್ಚಾಗಿ ನನ್ನೊಂದಿಗಿರುವ ನನಗಿಷ್ಟವಾಗುವ ನಿನ್ನ ನೆನಪುಗಳನ್ನೆ ಪ್ರೀತಿಸ್ತಿದೀನಿ. ನಿನ್ನನ್ನು ಒಪ್ಪಿಕೊಂಡು ಬಿಟ್ಟರೆ ಅವಕ್ಕೆ ಅವಮಾನವಾದಂತಲ್ಲವೇ? ನನ್ನ ಪ್ರೀತಿಯನ್ನು ನಾನು ವ್ಯಾಪರಕ್ಕಿಟ್ಟಿಲ್ಲ. ಪ್ರೀತಿಯಿಲ್ಲದ್ದು ಬರೀ ವ್ಯವಹಾರವಷ್ಟೇ. ಕ್ಷಮಿಸು ನನ್ನ ಕೈಲದು ಸಾಧ್ಯವಿಲ್ಲ.

Rating
No votes yet

Comments