ಪರೀಕ್ಷೆ ಹತ್ತಿರ ಬಂತು !

ಪರೀಕ್ಷೆ ಹತ್ತಿರ ಬಂತು !

ಬಹಳ ದಿವಸಗಳಾಗಿದ್ದವು ಬ್ಲಾಗ್ ಬರೆದು. ಬೇಸರವಾಗಿ ವಾಕಿಂಗ್ ಗೆ ಹೋದಾಗ ಕಂಡಿದ್ದು ಎಲ್ಲಾ ಅಪ್ಪ ಅಮ್ಮಂದಿರು, ಮನೆಯ ಹೊರಗಡೆ ವರಾಂಡದಲ್ಲಿ ಪುಸ್ತಕಗಳ ರಾಶಿ ಹಾಕಿ ತಮ್ಮ ತಮ್ಮ ಮಕ್ಕಳನ್ನು ಓದಿಸುತ್ತಿದ್ದದ್ದು. ಜೊತೆಜೊತೆಗೆ ಏಟುಗಳು ಕೂಡಾ ಬೀಳುತ್ತಿತ್ತು. "ಆ ಶಶಾಂಕನನ್ನು ನೋಡು, ಕ್ಲಾಸಿಗೆ ಮೊದಲು ಬರ್ತಾನೆ, ನೀನು ಇದ್ದೀಯ!" ಮುಂತಾದ ಮೂದಲಿಕೆಗಳು ಬೇರೆ. ಇತ್ತ ಕಡೆ ಬಂದರೆ ಇನ್ನೊಬ್ಬ ತಾಯಿ ತನ್ನ ಮಗಳಿಗೆ ಹೊಡೆಯುತ್ತಾ "ನಿನ್ನ ಅಕ್ಕ ಎಷ್ಟು ಚೆನ್ನಾಗಿ ಓದ್ತಿದ್ದಳು, ಈ ತರಹ ಇರಲಿಲ್ಲ". ಮತ್ತೊಂದು ಕಡೆ ಇಬ್ಬರು ತಾಯಂದಿರು ತಮ್ಮ ತಮ್ಮ ಮಕ್ಕಳನ್ನು ಹೇಗೆ ಪರೀಕ್ಷೆ ಎದುರಿಸಲು ಸಿದ್ಧತೆ ನಡೆಸುತ್ತಿದ್ದೆವೆಂದು ಹೆಮ್ಮೆಯಿಂದ ಕೊಚ್ಚಿಕೊಳ್ಳುತ್ತಿದ್ದರು. ಇವರು ಚಿಕ್ಕವರಾಗಿದ್ದಾಗ ಓದ್ತಿದ್ದರೋ ಇಲ್ಲವೋ ಗೊತ್ತಿಲ್ಲ, ಆದರೆ ತಮ್ಮ ಮಕ್ಕಳು ಮಾತ್ರ ಶಾಲೆಗೆ ಮೊದಲು ಬರಬೇಕೆಂಬ ಹಟ. ಎಲ್ಲಾ ಮಕ್ಕಳು ಶಾಲೆಗೆ ಮೊದಲಿಗರಾಗಿ ಬರುವುದು ಹೇಗೆ?

ನನಗೂ ನನ್ನ ಅಣ್ಣನಿಗೂ ಇದೇ ವಿಷಯಕ್ಕೆ ಯಾವಾಗಲೂ ಜಗಳವಾಗುತ್ತಿತ್ತು. ಅವನಿಗೋ ವಿಜ್ನಾನದ ವಿಷಯಗಳು ನೀರು ಕುಡಿದಷ್ಟು ಸುಲಭ. ಅವನಿಗೆ ನೆನಪಿನ ಶಕ್ತಿಯು ಜಾಸ್ತಿ. ನನಗೋ ಈ ಭೌತ ಶಾಸ್ತ್ರ ಹಾಗೂ ರಸಾಯನ ಶಾಸ್ತ್ರ ತಲೆ ಬುಡ ಅರ್ಥವಾಗುತ್ತಿರಲಿಲ್ಲ. ಅಮ್ಮನ ಕೈಯಲ್ಲಿ ಏಟು ಕೊಡಿಸಬೇಕೆಂದರೆ, ಬೇಕುಬೇಕೆಂದೇ ಅಮ್ಮನ ಮುಂದೆ ಪ್ರಶ್ನೆ ಕೇಳುವುದು. ನಾನೋ ಉತ್ತರ ಗೊತ್ತಿರದೆ ಬೆಪ್ಪುಬೆಪ್ಪಾಗಿ ಅವನನ್ನು ನೋಡುವುದು. ಇಲ್ಲಿ ಅಮ್ಮನ ಬಾಯಲ್ಲಿ ಸಹಸ್ರನಾಮಾರ್ಚನೆ ಶುರು. ನನಗೆ ಈ ಪರೀಕ್ಷೆಗಳು ಯಾಕಾದರೂ ಬರುವುದೋ? ಎಂಬ ಚಿಂತೆ ಎಡಬಿಡದೆ ಕಾಡುತ್ತಿತ್ತು. ಸಮಾಧಾನವಾಗಿದ್ದು ನನ್ನ ಮತ್ತು ಅಣ್ಣನ ಸಬ್ಜೆಕ್ಟ್ ಗಳು ಬೇರೆಬೇರೆಯಾದಾಗ. ಅವನು ವಿಜ್ನಾನದ ಕಡೆ ಹೋದ, ನಾನೋ ಅವನ ಹಿಂದೆ ಬಿದ್ದರೆ, ಅವನ ಕಾಟ ತಡೆಯಲು ಸಾಧ್ಯವಿಲ್ಲವೆಂದು ಕಾಮರ್ಸ್ ಲೈನಿಗೆ ಹೋದೆ :-) ಸ್ವಲ್ಪ ಮಟ್ಟಿಗೆ ಇದರಿಂದ ಮನೆಯಲ್ಲಿ ಜಗಳಗಳು ನಿಂತಿತು.

ಈಗಲೂ ಈ ಪ್ರಶ್ನೆಗಳು ನನ್ನನ್ನು ಕಾಡುತ್ತಿರುತ್ತವೆ. ಯಾಕೆ ನಮ್ಮನ್ನು ಬೇರೆಯವರ ಜೊತೆಯಲ್ಲಿ ಹೋಲಿಸಬೇಕು? ನಮಗೇ ನಮ್ಮದೇ ಆದ identity ಬೇಡವೇ? ಯಾರೋ ಚೆನ್ನಾಗಿ ಓದುತ್ತಾರೆಂದು ನಾನು ಅವರಿಗಿಂತ ಹೇಗೆ ಚೆನ್ನಾಗಿ ಓದುವುದು? ಅವ ಇಂಜಿನಿಯರಿಂಗ್ ಮಾಡಿದ ಮಾತ್ರಕ್ಕೇ ನಾನು ಕೂಡ ಅದನ್ನೇ ಮಾಡಬೇಕೇ? ಹೀಗೆ........ ನಿಮಗೆ ಯಾರಿಗಾದರೂ ಹೀಗೆ ಆದದ್ದುಂಟೇ?

Rating
No votes yet

Comments