ಜಟಕಾ ಕುದುರೆ ಹತ್ತಿ ಪ್ಯಾಟೆ ದಾರಿಲಿ

ಜಟಕಾ ಕುದುರೆ ಹತ್ತಿ ಪ್ಯಾಟೆ ದಾರಿಲಿ

ಇವತ್ತು ಆಫೀಸಿಗೆ ಬಂದದ್ದು ಮಧ್ಯಾನ್ಹ. ಕಾರ್ ಡ್ರೈವ್ ಮಾಡ್ಕೊಂಡು ಬಿಸಿಲಿನ ಬೇಗೆಯಲ್ಲಿ ಓವನ್ ಒಳಗೆ ಇರೋ ಆಭಾಸ. ಏ/ಸಿ ಹಿತ ಕೊಡ್ತಿರ್ಲಿಲ್ಲ. ಸೆಂಟ್ ಜೋಸೆಫ್ಸ್ ಕಾಲೇಜಿನ ಹಾಕಿ ಗ್ರೌಂಡ್ ಹತ್ರ ಇದ್ದ ಸಿಗ್ನಲ್ ನಲ್ಲಿ ಕಂಡೆ ನೋಡಿ ಈ ಕುದುರೆ ಮತ್ತು ಅದು ಹೊತ್ತಿರುವ ಭಾರವನ್ನ. ಹಳೆಯ ಚಿತ್ರಗೀತೆಗಳು, ರಾಜ ಮಹಾರಾಜರ ಚಲನಚಿತ್ರಗಳು ಕಣ್ಮುಂದೆ ಬರತೊಡಗಿದವು. ಅಣ್ಣಾವ್ರು ಹಾಡಿದ್ದ "ಅಶ್ವಮೇಧ" ಹಾಡು ಕೂಡ ಜ್ಞಾಪಕಕ್ಕೆ ಬಂತು. ಹಿಂದಿನ ಕಾಲದಲ್ಲಿ ಇದು ರಾಜರ "ರೋಲ್ಸ್ ರಾಯ್".

ಪ್ರೆಟ್ರೋಲಿನ ಚಿಂತಿಲ್ಲ
ಅವಘಡಗಳು ಅಷ್ಟಿಲ್ಲ
ಮಾಲಿನ್ಯ ಇಲ್ಲವೇ ಇಲ್ಲ. 
ನೋಡ್ಲಿಕ್ಕೆ ಚೆಂದ
ಸವಾರಿ ಮಾಡ್ಲಿಕ್ಕೆ ಆನಂದ
ನೀನೊಂದ್ಸಾರಿ ಟ್ರೈ ಮಾಡಿ ನೋಡೋ ಕಂದ.

ಟ್ರಾಫಿಕ್ ಮತ್ತು ಕಾಂಕ್ರೀಟಿನಿಂದ ತುಂಬಿರುವ ನಗರಗಳಲ್ಲಿ ಜನ ಸಂಜೆಯ ತಣ್ಣನೆಯ ಗಾಳಿ ಕುಡಿಯುವುದು ಎಷ್ಟು ಕಷ್ಟ ಅಂತ ಮತ್ತೆ ಹೇಳಬೇಕಿಲ್ಲ. ವರ್ಷಾನುಗಟ್ಟಲೆ ಸಾರ್ವಜನಿಕ ಸಾರಿಗೆ ಬಳಸಿದ ನನಗೆ ಇನ್ನೇನು ಅದು ಸಾಧ್ಯವೇ ಇಲ್ಲ ಅನ್ನೊ ಪರಿಸ್ಥಿತಿ ಬಂದ್ದದ್ದೂ ಆಯ್ತು. ವಾಹನ ಕೊಳ್ಳೋದಕ್ಕೂ ಮೊದಲು ಮತ್ತೆ ನಂತರ ಆಕ್ಸಿಡೆಂಟ್ಗಳು, ವಾಹನದಟ್ಟನೆ ಬಗ್ಗೆ ಇದ್ದ ಆಲೋಚನೆಗಳು ಮಾತ್ರ ಬದಲಾಗಿಲ್ಲ.ಸ್ವಚ್ಚಂದವಾಗಿ ರಸ್ತೆಯಲ್ಲಿ ಆಟ ಆಡೋದು, ಸೈಕಲ್ ಒಡೆಯೋದು, ನಾನೂ "ನಾನೇ ರಾಜ್ ಕುಮಾರ್" ಅಂತ ಕುದುರೆ ಹತ್ತಿ ಕೂತು ಸವಾರಿ ಮಾಡಿ ಹಾಡೇಳೋದು ಎಲ್ಲ ಬರೀ ಕನಸಾಗೇ ಉಳ್ಕೊಂಡ್ ಬಿಟ್ಟಿದೆ ಬೆಂಗಳೂರಲ್ಲಿ. 

ನಿಮ್ಮ ಸುತ್ತ ಮುತ್ತ ಇರುವ ಸಾಂಪ್ರದಾಯಿಕ ಸಂಚಾರ ವ್ಯವಸ್ಥೆಗಳ ಬಗ್ಗೆ ಜನರ ಮನ ಮುಟ್ಟಿ. ಇವೆಲ್ಲ ನಮ್ಮ ಕಣ್ಣೆದುರಿಂದ ಮಾಸಿ ಹೋಗೋದರ ಮೊದಲು ಅವನ್ನ ಹತ್ತು ಜನ ನೋಡ್ಲಿಕಾದರು, ಸಾಧ್ಯವಾದರೆ ಅದರ ಆನಂದ ಸವೀಲಿಕ್ಕಾದರೂ ಕಾರಣವಾಗಿ. 

ಬೆಂಗಳೂರಿನಲ್ಲಿ ಸೈಕಲ್ ಸವಾರರಿಗೆ ಅನುಕೂಲ ಮಾಡಿಕೊಡ್ಲಿಕ್ಕೆ ಶತಾಯಗತಾಯ ಪ್ರಯತ್ನಿಸುತ್ತಿರುವ ನಮ್ಮ ಮುರಳಿಯ ಕೆಲಸಗಳಿಗೆ ಬೆಂಬಲ ಸೂಚಿಸುತ್ತ ಈ ಲೇಖನ.

Rating
No votes yet

Comments