ನಾವು ಹೀಗೆ ಒತ್ತಾಯಿಸಬಹುದೆ?

ನಾವು ಹೀಗೆ ಒತ್ತಾಯಿಸಬಹುದೆ?

ಸಂಪದಿಗರೆ!

ಲೋಕಸಭಾ ಚುನಾವಣೆಯು ಕೂಗಳತೆಯ ದೂರದಲ್ಲಿದೆ. ವಿವಿಧ ಪಕ್ಷಗಳು ತಮ್ಮ ಹುರಿಯಾಳುಗಳನ್ನು ಆರಿಸಲು ಎಲ್ಲ ರೀತಿಯ ಸರ್ಕಸ್ಸುಗಳನ್ನು ಮಾಡುತ್ತ ನಮಗೆಲ್ಲ ಮನರಂಜನೆಯನ್ನು ನೀಡುತ್ತಿದ್ದಾರೆ. ಅವರನ್ನು ವ್ಯಥೆಯಿಂದ ಅಭಿನಂದಿಸೋಣ.

ಚುನಾವಣೆಗೆ ನಿಲ್ಲುವವರು ತಮ್ಮ ಸಂಪತ್ತಿನ ಬಗ್ಗೆ ಬಹಿರಂಗವಾಗಿ ಘೋಶಿಸಬೇಕಿದೆ. ಇದರ ಜೊತೆಗೆ ನಾವು ಅವರ ಆರೋಗ್ಯದ ಬಗ್ಗೆ ಮಾಹಿತಿಯನ್ನು ಕೇಳಬಹುದೆ? ನನ್ನ ಉದ್ದೇಶ ನೇರ ಹಾಗೂ ನಿಖರ. ನಮ್ಮ ಪ್ರತಿನಿಧಿಗಳಾಗಿ ಆರೋಗ್ಯವಂತರು ಆಯ್ಕೆಯಾಗಲಿ!

೧. ನಿಮಗೆ ಸಕ್ಕರೆ ಕಾಯಿಲೆ, ಅತಿರಕ್ತದೊತ್ತಡ, ಹೃದಯಾಘಾತ, ಕ್ಯಾನ್ಸರ್ ಇತ್ಯಾದಿ ರೋಗಗಳು ಇವೆಯೆ?

೨. ನೀವು ಧೂಮಪಾನಿಗಳೆ? ಮದ್ಯಪಾನಿಗಳೆ??

೩. ನಿಮಗೆ ಅಧಿಕೃತ ಪತ್ನಿಯಲ್ಲದೆ, ಉಪಪತ್ನಿಯರು ಅಥವ ಗೆಳತಿಯರು ಇರುವರೆ?

೪. ನಿಮಗೆ ಸಿಫಿಲಿಸ್, ಗನೋರಿಯ, ಹರ್ಪೆಸ್, ಎಚ್.ಐ.ವಿ ಅಥವ ಏಡ್ಸ್ ಇದೆಯೆ?

೫. ನಿಮ್ಮ ಬಿ.ಎಂ.ಐ (ಬಾಡಿ ಮಾಸ್ ಇಂಡೆಕ್ಸ್=ವ್ಯಕ್ತಿಯ ಎತ್ತರಕ್ಕೆ ಸೂಕ್ತ ತೂಕವಿದೆಯೆ? ಬೊಜ್ಜಿದೆಯೆ ಎಂದು ತಿಳಿಯಲು ನೆರವಾಗುವ ಸೂಚ್ಯಂಕ) ಎಷ್ಟು? ಒಂದು ವೇಳೆ ಬೊಜ್ಜಿದ್ದರೆ ನೀವು ಅದನ್ನು ಇಂತಿಷ್ಟು ತಿಂಗಳಲ್ಲಿ ಕರಗಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಲ್ಲಿರಾ?

೬. ನೀವು ನಿಮ್ಮ ಕುಟುಂಬ, ನಿಮ್ಮ ಪಕ್ಷ, ನಿಮ್ಮ ವೈಯುಕ್ತಿಕ ಬದುಕಿನ ಜೊತೆ ನಿಮ್ಮ ಕ್ಷೇತ್ರದ ಜನರ ನೋವು ನಲಿವುಗಾಳನ್ನು ಕೇಳುವ, ಪ್ರತಿಸ್ಪಂದಿಸುವ ಮಾನಸಿಕ ಸ್ಥೈರ್ಯ ನಿಮಗಿದೆಯೆ? ನಿಮ್ಮ ಎಮೋಷನಲ್ ಕೋಶಂಟ್ ತಿಳಿಸುವಿರಾ?

೭. ನಿಮಗೆ ಒಂದು ವೇಳೆ ನಿಮಗೆ ಅನಾರೋಗ್ಯವಾದರೆ (ಆಗದಿರಲಿ ಎಂದು ಆ ಭಗವಂತನಲ್ಲಿ ನಮ್ಮ ಪ್ರಾರ್ಥನೆ) ಅದಕ್ಕೆ ನಮ್ಮ ದೇಶದಲ್ಲಿಯೇ ಚಿಕಿತ್ಸೆ ತೆಗೆದುಕೊಳ್ಳುತ್ತೀರಿ, ವಿದೇಶಕ್ಕೆ ಹೋಗುವುದಿಲ್ಲ ಎಂದು ಭರವಸೆ ಕೊಡುತ್ತೀರಾ?

೮. ಎಲ್ಲಕ್ಕಿಂತ ಮುಖ್ಯವಾಗಿ, ನಾವು ನಿಮ್ಮನ್ನು ಆರಿಸಿದ ಮೇಲೆ ನಿಮಗೆ ಮರೆವು (ಆಮ್ನೀಸಿಯ) ಕಾಡುವುದಿಲ್ಲ, ನಿಯಮಿತವಾಗಿ ನಿಮ್ಮ ಕ್ಷೇತ್ರದ ಜನರನ್ನು ಭೇಟಿಯಾಗುತ್ತೇನೆ ಎಂದು ಪ್ರಮಾಣ ಮಾಡುವಿರಾ?

ಸಂಪದಿಗರೆ

ವಿದೇಶಗಳಲ್ಲಿ ಚುನಾವಣೆಗೆ ನಿಲ್ಲುವ ವ್ಯಕ್ತಿಯ ಆರೋಗ್ಯವನ್ನು ಮತದಾರರು ಬಹಿರಂಗವಾಗಿ ಪ್ರಶ್ನಿಸುತ್ತಾರೆ. ನಾವೇಕೆ ಪ್ರಶ್ನಿಸಬಾರದು?

ಹುರಿಯಾಳುಗಳ ಆರೋಗ್ಯವನ್ನು ನಾವು ಪ್ರಶ್ನಿಸಬಹುದೆ? ಅನಾರೋಗ್ಯ ಪೀಡಿತರನ್ನು, ಬೊಜ್ಜಿಗರನ್ನು, ಲಂಪಟರನ್ನು, ಹೃದಯಹೀನರನ್ನು, ಅರೆಮರುಳರನ್ನು ನಾವು ತಿರಸ್ಕರಿಸಬಹುದೆ? ಇದಕ್ಕೆ ಕಾನೂನು ನೆರವಾಗಬಲ್ಲುದೆ? ಏನೆನ್ನುತ್ತೀರಿ? 

Rating
No votes yet

Comments