ನಾ ಕೇಳಿದ ಸಂಗೀತ ಕಚೇರಿ

ನಾ ಕೇಳಿದ ಸಂಗೀತ ಕಚೇರಿ

ಕಚೇರಿ ಕೇಳದೆ ಸುಮಾರು ವರ್ಷಗಳಾಗುತ್ತ ಬಂದಿತ್ತು. ಅಷ್ಟರಲ್ಲಿ ಒಂದು ಉತ್ತಮ ಕಚೇರಿ ಕೇಳುವ ಸೌಭಾಗ್ಯ ನನಗೆ ಒದಗಿ ಬಂತು. ಮಾರ್ಚ್-೮ರಂದು ಇಂದಿರಾನಗರದ ಚಿನ್ಮಯ ಕೃಷ್ಣ ದೇವಸ್ಥಾನದವರು ಅನುಜ್ ಕೃಷ್ಣಮೂರ್ತಿಯವರ ಗಾಯನ ಕಚೇರಿ ಏರ್ಪಡಿಸಿದ್ದರು. ನನಗೆ ಇವರು ಒಬ್ಬ ನೂತನ ಗಾಯಕರು. ಸುಮಾರು ೨೬ ವಯಸ್ಸಾಗಿರಬಹುದು. ಗಾಯನವಲ್ಲದೆ ವಯೊಲಿನ್ ಕೂಡ ನುಡಿಸುತ್ತಾರಂತೆ. ಅದ್ಭುತವಾಗಿ ಹಾಡುತ್ತಾರೆಂದು ನಮ್ಮ ಸಂಬಂಧಿಕರೊಬ್ಬರು ಹೇಳಿದ್ದರು. ಬೇಸರದ ಮಾತೆಂದರೆ ಇಂತಹ ಕಚೇರಿಗೆ ಬಂದವರು ಕೇವಲ ೧೫ ಮಂದಿ ಮಾತ್ರ.

ಕೇವಲ ೧:೩೦ ಘಂಟೆಯ ಕಚೇರಿಯಾದ್ದರಿಂದ, ಆಲಾಪನೆಗಳು, ಸ್ವರ-ಪ್ರಸ್ತಾರಗಳು ಅಷ್ಟು ವಿಸ್ತಾರವಾಗಿರಲಿಲ್ಲ. ಹೆಚ್ಚಾಗಿ ಭಕ್ತಿ-ಗೀತೆಗಳ ಮಧ್ಯೆ ಕೇಂದ್ರಿಕೃತವಾಗಿತ್ತು. ಅಬ್ಬಬ್ಬ ಎಂತಹ ಅದ್ಭುತ ಗಾಯನ. ಅವರ ಕಂಠದಲ್ಲಿ ಅಷ್ಟೊಂದು ಪರಿಪಕ್ವತೆ. ದೀಕ್ಷಿತರ ಚಕ್ರವಾಕ ರಾಗದ "ವಿನಾಯಕ..." ಎಂಬ ರಚನೆಯಿಂದ ಕಚೇರಿ ಪ್ರಾರಂಭವಾಯಿತು. ನಂತರ ಆರಭಿ ಆಲಾಪನೆ ಜೊತೆಗೆ ಒಂದು ಗೀತೆ ರಸವತ್ತಾಗಿತ್ತು (ಗೀತೆ ನೆನಪಿಲ್ಲ). ಮಹಾರಾಜ ಜಯಚಾಮರಾಜ್ ಒಡೆಯರ್ ಅವರ ನಾದನಾಮಕ್ರಿಯ ರಾಗದಲ್ಲಿ ಶಿವನ ಕೀರ್ತನೆ "ಶಿವಶಿವ ಶಿವಭೋ.." ಮನಸ್ಸಿಗೆ ಮುದ ನೀಡಿತು. ಇದರಲ್ಲಿ ಬಹಳ ಇಷ್ಟವಾಗಿದ್ದು ಅವರ ಚಿಕ್ಕವಾದ ಮತ್ತು ಚೊಕ್ಕವಾದ ರಾಗದ ಆಲಾಪನೆ. ಮುಖಾರಿ ರಾಗದ "ಶರಣಂ ಅಯ್ಯಪ್ಪ.." ಹಾಡು ನಮ್ಮನ್ನು ಶಬರಿಮಲೆಗೆ ಕೊಂಡೊಯ್ಯಿತು. ಮೋಹನ, ಯಮನ್-ಕಲ್ಯಾಣಿಯ ಕೀರ್ತನೆಗಳು ಕೂಡ ರಸಿಕರನ್ನು ಆನಂದದ ಕಡಲಿನಲ್ಲಿ ತೇಲಿಸಿದವು. ಶಿವರಂಜನಿ, ಪಂತುವರಾಳಿ ರಾಗದ ಹಾಡುಗಳನ್ನು ನಮಗೆ ಕೇಳಿಸಿದರು. ಶಿವರಂಜನಿ ರಾಗ ನನಗೆ ಗುರುತಿಸಲು ಬರುತ್ತಿರಲಿಲ್ಲ. ಅಲ್ಲೊಬ್ಬರ ಹಿರಿಯರ ಮಾರ್ಗದರ್ಶನದಿಂದ ನನಗೆ ಈ ರಾಗವೂ ಗುರುತಿಸಲು ಈಗ ಸಾಧ್ಯವಾಗಿದೆ :). ನನ್ನ ಊಹೆ ಸರಿಯಾದ್ದಲ್ಲಿ "ಶಿಲೆಗಳು ಸಂಗೀತವ ಹಾಡಿದೆ.." ಈ ಹಾಡು ಕೂಡ ಶಿವರಂಜನಿ ರಾಗದಲ್ಲಿದೆ (ತಿದ್ದುಪಡಿ ಅಗತ್ಯವಿದೆ). ಜುಂಜೂಟಿಯಿಂದ ಪ್ರಾರಂಭವಾಗುವ ರಾಗಮಾಲಿಕೆ "ಚಿನ್ನಂಚಿರಿಯೆ.." ಕೂಡ ಬಹಳ ಚೆನ್ನಾಗಿ ಹಾಡಿದ್ದರು. ಈ ಹಾಡನ್ನು ಕಾಪಿ ರಾಗದಲ್ಲಿ ಹಲವಾರು ಗಾಯಕರು ಪ್ರಾರಂಭ ಮಾಡುತ್ತಿದ್ದರಿಂದ, ಇವರ ಹೊಸ ಪ್ರಯೋಗ ನನಗೆ ಬಹಳ ಕುತೂಹಲ ಮೂಡಿಸಿತು.

ಈ ಕಚೇರಿಯಲ್ಲಿ ಬಹಳ ಆಕರ್ಷಿಸಿದ ಕೀರ್ತನೆ ಎಂದರೆ ೧೨ ರಾಗಗಳ ಒಂದು ಹಾಡು. ರಚನಕಾರರು ಯಾರೆಂದು ತಿಳಿದಿಲ್ಲ. ಬಹಳ ಅದ್ಭುತವಾಗಿ ಹಾಡಿದ್ದರು. ಎಲ್ಲ ರಾಗಗಳ ಛಾಯೆಗಳು ಎದ್ದು ಕಾಣುವಷ್ಟು ಸ್ಪಷ್ಟ ಸಾಹಿತ್ಯದ ಗಾಯನ. ಇದೊಂದು ದೇವಿ ಹಾಡು. ಈ ಹಾಡು ಹೀಗೆ ಬರುತ್ತದೆ

ಆರಭಿ... ಅನಂದ-ಭೈರವಿ
..ಮೋಹನ.....ಹಂಸಧ್ವನಿ..

ಎಲ್ಲೆಲ್ಲಿ ರಾಗದ ಹೆಸರು ಕಾಣಸಿಗುವುದೊ ಅಲ್ಲಲ್ಲಿ ಅದೇ ರಾಗದ ಸಾಲುಗಳು!! ಅದ್ಭುತ ಹಾಡಿದು. ಈ ಹಾಡಿನ ಪ್ರತಿ ಚರಣದಲ್ಲೂ ಸ್ವರಗಳು ಇವೆ. ಮೇಲಿನ ಉದಾಹರಣೆಯನ್ನು ಗಮನಿಸಿ. ಅದಕ್ಕೆ ಸ್ವರಗಳು ಹಂಸಧ್ವನಿ ಇಂದ ಪ್ರಾರಂಭವಾಗಿ ಮೋಹನ, ಆನಂದ-ಭೈರವಿ ಮುಂತಾಗಿ, ಆರಭಿಯಲ್ಲಿ ಕೊನೆಗೊಳ್ಳುತ್ತದೆ. ಈ ಹಾಡಿನಲ್ಲಿ ಬರುವ ರಾಗಗಳು (ನಾನು ನೆನಪಿಸಿಕೊಂಡಂತೆ) ಆರಭಿ, ಆನಂದ-ಭೈರವಿ, ಮೋಹನ, ಹಂಸಧ್ವನಿ, ಸಾರಂಗ, ದರ್ಬಾರ್, ಭೈರವಿ, ಕಮಲಾ-ಮನೋಹರಿ. ಉಳಿದವು ಮರೆತು ಹೋದವು :(.

ಲಾಲ್ಗುಡಿ ಜಯರಾಮನ್ ಅವರ ರಚಿಸಿದ ದೇಶ್ ರಾಗದ ತಿಲ್ಲಾನ ಕೂಡ ಸುಂದರವಾಗಿತ್ತು. ಇಂತಹ ರಾಗಗಳಲ್ಲೂ ತಿಲ್ಲಾನಗಳಿವೆ ಎಂಬುದು ನನಗೆ ತಿಳಿದಿರಲಿಲ್ಲ. ಮಧ್ಯಮಾವತಿ ರಾಗದಲ್ಲಿ ಶ್ರೀರಾಮನ ಒಂದು ಶ್ಲೋಕದೊಂದಿಗೆ ಕಚೇರಿ ಮುಕ್ತಾಯವಾಯಿತು ಹಾಗೆ ಅವರ ಗಾಯನ ಕೇಳಲು ನಾನು ಕಚೇರಿಗೆ ಹೋಗಿದ್ದು ಸಾರ್ಥಕವಾಯಿತು. ಅವರ ಅಮೋಘ ಕಚೇರಿಗೆ ಹಲವರು ಮೆಚ್ಚುಗೆ (ನನ್ನನ್ನೂ ಸೇರಿಸಿ) ವ್ಯಕ್ತಪಡಿಸಿದಾಗ, ಅವರಿಂದ "ನೀವು ಬಂದಿದ್ದೆ ದೊಡ್ಡ ವಿಚಾರ ನನ್ನದೇನೂ ಇಲ್ಲ.." ಎಂಬ ವಾಕ್ಯ.

----------------------------------------------------------------------------------------------------------------

ಸಂಗೀತಾಸಕ್ತರಿಗೆ: ಇವರ ಕಚೇರಿ ಈಜಿಪುರದ ರಾಮಮಂದಿರದಲ್ಲಿ ಈ ಭಾನುವಾರ ಅಂದರೆ ಮಾರ್ಚ್ ೨೯ ರಂದು ಜರುಗಲಿದೆ. ಆಸಕ್ತರು ಇವರ ಸಂಗೀತದ ಸವಿಯನ್ನು ಅಸ್ವಾದಿಸಬಹುದು.

Rating
No votes yet

Comments