ಅವತ್ತು ರಾತ್ರಿ ನನ್ನನ್ನು ದೆವ್ವ ಏನಾದ್ರೂ ಹಿಂಬಾಲಿಸ್ತಿತ್ತೇ ?

ಅವತ್ತು ರಾತ್ರಿ ನನ್ನನ್ನು ದೆವ್ವ ಏನಾದ್ರೂ ಹಿಂಬಾಲಿಸ್ತಿತ್ತೇ ?

ಸರಿಯೋ ತಪ್ಪೋ , ನಾನು ದೇವರು / ದೆವ್ವ ಇತ್ಯಾದಿ ಹೆಚ್ಚಿಗೆ ಹಚ್ಚಿಕೊಂಡೋನಲ್ಲ ; ಆದರೆ ಹಂಗಂತ ನಾನಾಗೇ ಏನೂ ದೆವ್ವ/ ದೇವರ ತಂಟೆಗೆ ಹೋಗೋದಿಲ್ಲ ( ಅಷ್ಟೇ ಏಕೆ ಯಾರ ತಂಟೆಗೂ ಹೋಗಬಯಸದವನು. ) ನಂಬದ ನಂಬುವ ಸ್ಥಿತಿಗಳ ನಡುವಿನ ಇಬ್ಬಂದಿತನ ನನ್ನದು .

ನನಗೆ ಅಷ್ಟೊಂದು ವಯಸ್ಸಾದರೂ ಒಂದು ಸಾವನ್ನು ಹತ್ತಿರದಿಂದ ನೋಡಿದ್ದು ಅದೇ ಮೊದಲ ಸಲವಾಗಿತ್ತು . ಅದು ಬೇರೇ ಊರಲ್ಲಾಗಿತ್ತು . ಅವತ್ತು ರಾತ್ರಿ ನಾನು ನಮ್ಮ ಊರಿಗೆ ಮರಳಿ ಬಂದೆ . ಹನ್ನೊಂದು ಗಂಟೆ ಆಗಿತ್ತು . ಮನೆಯ ಕೀಲಿ ಕೈ ಹತ್ತಿರವೇ ಇದ್ದ ( ಅಂದರೆ ಸುಮಾರು ಒಂದು ಕಿ.ಮೀ. ದೂರ) ಗೆಳೆಯನ ಮನೆಯಲ್ಲಿತ್ತು ಅಂತ ಕಾಣುತ್ತದೆ . ಅವನ ಮನೆಗೆ ಹೋಗಿ ಕೀಲಿಕೈ ಇಸಿದುಕೊಂಡು ಮನೆಯ ಕಡೆಗೆ ನಡೆಯುತ್ತಿದ್ದೆ . ಆಗ ಹನ್ನೊಂದೂವರೆ ದಾಟಿರಬೇಕು. ರಾತ್ರಿ ಹೊತ್ತು . ಮೋಡ ಮುಸುಕಿದ್ದಕ್ಕೋ , ಅಮವಾಸ್ಯೆ ಹತ್ತಿರವಿದ್ದಕ್ಕೋ ಸ್ವಲ್ಪ ಕತ್ತಲೆ ಹೆಚ್ಚಿತ್ತು . ದಾರಿಯೂ ನಿರ್ಜನವಾಗಿತ್ತು . ಸೊಲ್ಪ ಹೊತ್ತಿನ ಮೊದಲು ಹನಿ ಹನಿ ಮಳೆ ಆಗಿದ್ದಿರಬೇಕು . ರಸ್ತೆಯಲ್ಲಿ ಅಲ್ಲೊಂದು ಇಲ್ಲೊಂದು ದೀಪಗಳು . ನಮ್ಮೂರಲ್ಲಿ ಬೀದಿ ದೀಪ ಅಷ್ಟಕ್ಕಷ್ಟೇ . ಕಪ್ಪೆಗಳು ವಟರ್ ವಟರ್ ಅಂತ ವಟಗುಡುತ್ತಿದ್ದವು . ಅರ್ಧ ಹಾದಿಗೆ ಬಂದಾಗ ಅಲ್ಲಿ ಖಾಲಿಜಾಗ ಒಂದಿಷ್ಟು ಬಿದಿರು ಮೆಳೆಗಳು. ನನ್ನ ಹಿಂದೆ ಯಾರೋ ನಡೆಯುತ್ತಿದ್ದಂತೆ ಹೆಜ್ಜೆ ಸದ್ದಾಯಿತು . ನನಗೆ ಏನೋ ಸಂಶಯ. ಆ ಜಾಗ ಒಂದಿಷ್ಟು 'ಸುಮಾರು' ಅಂತ ಯಾರೋ ಹೇಳಿದ್ದು ನೆನಪಿಗೆ ಬಂತು . ನಾನು ನಡೆಯುವ ಗತಿಯನ್ನು ನಿಧಾನಗೊಳಿಸಿದೆ. ನನಗೆ ಕೇಳಿಸುತ್ತಿದ್ದ ಹೆಜ್ಜೆ ಸದ್ದೂ ನಿಧಾನ ಆಯ್ತು !? . ಚುರುಕುಗೊಳಿಸಿದೆ . ನಾನು ಕೇಳುತ್ತಿದ್ದ ಸದ್ದೂ ಅದರಂತೆಯೇ ?! ನಾನು ಸಾವಿನ ಮನೆಯಿಂದ ಬರ್ತಾ ಇದ್ದೆ ಬೇರೆ . ಎಲ್ಲ ಸೇರಿ ಹೆದರಿಕೆ ಹಣಿಕಿ ಹಾಕಿತು . ಕೂಡಲೇ ಗಟ್ಟಿ ಮನಸ್ಸು ಮಾಡಿದೆ . ಜೋ ಡರ್ ಗಯಾ ವೋ ಮರ್ ಗಯಾ ಅಲ್ವೇ ? ಹೆದರಿದರೆ ಕೆಲಸ ಕೆಟ್ಟಿತು ಅಂತ ಹೆದರಲು ನಿರಾಕರಿಸಿದೆ . ದೆವ್ವ ಗಿವ್ವ ಎಲ್ಲಾ ಸುಳ್ಳು ಹೆದರ್ ಬಾರ್ದು ಅಂತ ನನಗೆ ನಾನೇ ಹೇಳ್ಕೊಂಡು ಹಾಗೇ ನಡೆದು ಕೊಂಡು ಆ ಅರೆ ಬರೆ ಕತ್ತಲಲ್ಲೇ ಮುಂದುವರಿದೆ . ಅಂತೂ ಸುಳ್ಳು ಧೈರ್ಯ ನಟಿಸುತ್ತ ಮನೆ ಸೇರಿದೆ . ಅದೂ ಎಂಥ ಮನೆ ? ನಾಲ್ಕು ಗುಂಟೆ ಸೈಟಲ್ಲ್ಲಿರೋ ಒಂದೇ ಮನೆ . ಅಕ್ಕ ಪಕ್ಕ ಹೊಂದಿ ಮನೆಗಳೂ ಇಲ್ಲ ; ಮನೆಯಲ್ಲೂ ನಾನೊಬ್ನೇ . ಕತ್ತಲಲ್ಲೇ ಕೀಲಿ ತೆಗೆದು ತಡವರಿಸುತ್ತ ಲಾಯಿಟ್ ಹಚ್ಚಿದ್ದು . ದಣಿದದ್ದರಿಂದ ಹೆಚ್ಚು ವಿಚಾರಕ್ಕೆ ಅಸ್ಪದ ಕೊಡದೇ ನಿದ್ದೆ ಬಂದೇ ಬಿಟ್ಟಿತು.
..
..
..
..
..
..
..
..
ಆಮೇಲೆ ಹೊಳೆದದ್ದು . ನಾನು ಹಾಕಿದ ಬೂಟುಗಳೇ ರಸ್ತೆಯ ಮೇಲಿನ ನೀರಿನ ಕಾರಣಕ್ಕೋ ಏನೋ , ಅವು ಸಡಿಲು ಇದ್ದದ್ದಕ್ಕೋ ಏನೋ ಆ ತರ ಸದ್ದು ಮಾಡ್ತಿರಬೇಕು . ನಾನು ನಿಂತಾಗ ನಿಂತ ಹಾಗೆ , ನಡೆದಾಗ ನಡೆದ ಹಾಗೆ , ನಡೆದ ಗತಿಗೆ ತಕ್ಕಂತೆ ಸದ್ದು ಆಗೋದು ಆಗ ತಾನೇ ?

ವಾಮಾಚಾರದ ಬಗ್ಗೆ ಬ್ಲಾಗ್ ನೋಡಿ, ನನಗೆ ಆದ ಏನೋ ಒಂದು ಸಣ್ಣ ಅನುಭವ ಬರೆಯಬೇಕೆನಿಸಿತು. ಬರೆದಿದ್ದೇನೆ . ಓದಿದ್ದಕ್ಕೆ ಧನ್ಯವಾದಗಳು.

Rating
No votes yet

Comments