ಯಾವುದೋ ಮಾರ್ಚಿನ, ಯಾರದೋ ಸಂಗತಿ

ಯಾವುದೋ ಮಾರ್ಚಿನ, ಯಾರದೋ ಸಂಗತಿ

 

             ಮಾರ್ಚ್ ತಿಂಗಳ ಸಂಜೆಯ ತಂಗಾಳಿ ತಂಪಾಗಿ ಬೀಸುತ್ತಿತ್ತು. ಮಳೆ ಬರುವ ಮೊದಲು ಮಣ್ಣಿನಿಂದ ಏಳುವ ಸುವಾಸನೆ ಅದರಲ್ಲಿ ಮಿಳಿತವಾಗಿತ್ತು. ಅಶ್ಟು ಮೆಟ್ಟಿಲುಗಳನೇರಿ ದಡ-ದಡನೇ ಓಡಿ ಬರುತ್ತಿದ್ದ ಇಬ್ಬರಿಗೂ ತಣ್ಣನೆಯ ಸ್ಪರ್ಶ ಕೊಡುತ್ತಿತ್ತು. 

             ಬಿಳಿ ಮಾರ್ಬಲ್ಲಿನ ಮೆಟ್ಟಲುಗಳ ಮೇಲೆ ಮೂಡುತ್ತಿದ್ದ, ತಿಳಿ-ಕೆಸರಿನ ಅವಳ ಪಾದದ ಗುರುತಿನ ಪಕ್ಕದಲ್ಲೇ ತನ್ನ ಪಾದವನ್ನು ಅಚ್ಚೊತ್ತುತ್ತಾ, ಹಿಂದಿಂದೆ ಬಗ್ಗಿ, "ಅಚ್ಚು ಸರಿಯಾಗಿದೆಯೇ..?" ಎಂದು ಪರೀಕ್ಷಿಸುವುದರಲ್ಲೇ ಇತ್ತು ಅವನ ಲಹರಿ. ಮೊದಲು ಹತ್ತಿದ ಅವಳು, ಇವನೆಡೆ ನೋಡಿದಾಗ, ಅದೇ ಕ್ಷಣ ಇವನು ಅವಳೆಡೆ ತಲೆ ಎತ್ತಿದಾಗ, ಅವನನ್ನು ನೋಡಿಯೂ ನೋಡದಂತೆ ಮುಳುಗುವ ಸೂರ್ಯನತ್ತ ಮುಖ ಮಾಡಿದಳು. ಅವಳ ಮುಖ-ಭಾವ ಗ್ರಹಿಸಿ, "ಸಧ್ಯ..!!, ಅವಳು ನಾ ಮಾಡುತ್ತಿದ್ದುದು ನೋಡಲಿಲ್ಲ", ಎಂದು ಸಮಾಧಾನ ಪಟ್ಟರೂ, ಅವಳದನ್ನು ನೋಡಬೇಕಾಗಿತ್ತು ಎಂದವನಿಗೆ ಅನಿಸದೇ ಇರಲಿಲ್ಲ. ಅವಳ ಹಣೆಯಿಂದ ಮೆಲ್ಲನೆ ಟಿಸಿಲೊಡೆಯುತ್ತಿದ್ದ ಬೆವರ ಹನಿಗಳನ್ನು ತನ್ನೊಡಲೊಳಗೆ ಬಸಿದುಕೊಂಡು ಹೋಗುವ ತವಕದಲ್ಲಿದ್ದಂತ್ತಿತ್ತು, ಆ ಗಾಳಿ. ಗಾಳಿಯ ದಿಕ್ಕಿನ್ನಲ್ಲೇ ಹಿಂದೆ-ಮುಂದೆ ಓಲಾಡುತ್ತಿದ್ದ ಅವಳ ಮುಂಗುರುಳು, ತನಗೇನೋ ಹೇಳುತ್ತಿವೆ ಎಂದೆನಿಸಿದರೂ, ಅವನಿಗೆ ಬೆವರೊಡೆಯುತ್ತಿದ್ದ  ಅವಳ ಮುಗ್ಧ ಮುಖ ನೋಡುವದರಲ್ಲೇ ವರ್ಣಿಸಲಾಗದ ಆಸಕ್ತಿ, ರೋಮಾಂಚನ.
 
                          ಹಾಗೆ ತನ್ನನ್ನೇ ನೋಡುತ್ತ ನಿಂತವನಿಗೆ ಅವಳು, "ಏನ್ ನಾನಂದ್ರೆ ನಿನಗೆ ಅಶ್ಟು ಇಶ್ಟಾನಾ ?", ಅಂತ ತುಂಟ ನಗೆ ನಗುತ್ತ ಕೇಳಿಯೇಬಿಟ್ಟಳು. ಸ್ವಲ್ಪ ತಬ್ಬಿಬ್ಬಾದ ಅವನು, ದೃಷ್ಠಿ ಬದಲಿಸಿ ಪೆದ್ದು-ಪೆದ್ದಾಗಿ, ತನಗಶ್ಟೆ ಗೊತ್ತಾಗುವಂತೆ ನಕ್ಕ. ಆದರೆ ಆ ಪ್ರಶ್ನೆಗೆ ಅವನ ದೇಹದಲ್ಲಿ ಕೆಟ್ಟ-ಕೊರೆಯುವ ಚಳಿಗಾಳಿ, ಎದೆಯ ಬುಡದಿಂದ್ದೆದ್ದು ಹೊಟ್ಟೆಯಲ್ಲೆಲ್ಲಾ ಬೀಸಿದಂತಾಯಿತು. ದಿನಪೂರ್ತಿ ಬಿಸಿಲಿನಿಂದ ಕುದ್ದಿದ್ದ ಮಾರ್ಬಲ್ಲಿಗಳು ಅವನ ಪಾದಗಳಿಂದ ದೇಹಕ್ಕೆ ಸ್ವಲ್ಪ-ಸ್ವಲ್ಪ ಕಾವು ಕೊಟ್ಟು ಅವನ ಪರಿಸ್ಥಿತಿಯನ್ನೇನೋ ಸುಧಾರಿಸಿದವು. ಹಾಗೆ ಕೇಳಿದ ಅವಳು ಮತ್ತೆ ಮುಳುಗುವ ಕೆಂಪು ಸೂರ್ಯನೆಡೆಗೆ ನೋಡತೊಡಗಿದಳು.
      
                     "ಆಹ್..!! ಆ ಕಡೆ ತಿರುಗಿದಳಲ್ಲಾ...", ಎಂದುಕೊಂಡ ಅವನು, ಅವಳು ತನ್ನೆಡೆಗೆ ಸಧ್ಯಕ್ಕಂತೂ ನೋಡುವುದಿಲ್ಲ ಎಂದು ತನ್ನದೇ ತರ್ಕದಿಂದ ಗ್ರಹಿಸಿ ಆವಳನ್ನೇ ನೋಡತೊಡಗಿದ. ಅವಳು, ಆಗಶ್ಟೇ ಮೂಡುತ್ತಿದ್ದ ಚಂದಿರನಂತೆ ತಂಪು-ತಂಪು. ಆದನ್ನು ಸುತ್ತುವರಿದಿರುವ ಮೋಡಗಳಶ್ಟೇ ಬಿಳಿ-ಬಿಳಿ, ತಾಜಾ-ತಾಜಾ. ಆ ಮೋಡಗಳು ಹನಿಯೊಡದರೆ, ಅವಳು ನಕ್ಕ ಹಾಗಂತೆಯೇ....., ಎಂದೆನಿಸಿತು ಆ ಕ್ಷಣದಲ್ಲಿ.
              
                    ಅವನೆಡೆ ನೋಡದೇ, ಹಾಗೆಯೇ ನಡೆದು ಅಲ್ಲೇ ಇದ್ದ ಬೆಂಚಿನ ಮೇಲೆ ಅವಳು ಕುಳಿತಳು. ಅವಳ ನಡಿಗೆ, ಕೂತ ಭಂಗಿಯಲ್ಲಿದ್ದ ಆತ್ಮ-ವಿಶ್ವಾಸ ನೋಡಿ, ಇವನಿಗೆ ಮಾತು ಹೊರಡಲಿಲ್ಲ. ಇವನು ಹೋಗಿ ಅವಳ ಪಕ್ಕ ಕೂತ. ಒಂದು ಕ್ಷಣ, "ಏನು ಮಾತಾಡಬೇಕು ?", ಎಂದು ಕಸಿವಿಸಿಯಾಯಿತಿವನಿಗೆ.
 
                   "ಏನು..?", ಎಂಬಂತೆ ಅವಳು ಅವನನ್ನು ನೋಡಿದಾಗ, ತಲೆ-ತಗ್ಗಿಸಿದವನಿಗೆ, ಅವಳನ್ನು ಮೊದಲ ಸಲ ನೋಡಿದ್ದು, ಹಿಂದೆ ಸುತ್ತಿದ್ದು, ಮಾತನಾಡಿಸಲು ಪ್ರಯತ್ನಿಸಿದ್ದು, ಮಾತಾಡಿಸಿದ್ದು ಮತ್ತು ಲೆಟರ್ ಕೊಟ್ಟಿದ್ದು, ಎಲ್ಲವೂ ಮನಸ್ಸಲ್ಲಿ ಹಾದವು. "ತಾನೇಕೆ ಹಾಗೆ ಮಾಡಿದೆ..?", ಎಂದವನು ಯೋಚಿಸಿರಲಿಲ್ಲ. ಈಗ ಯೋಚಿಸಿದರೆ, ಏನೂ ಹೊಳೆಯುತ್ತಿಲ್ಲ. ಹಾಗೆ ಎಶ್ಟೋ ಹೊತ್ತು ಯೋಚಿಸಿದವನಿಗೆ, "ಏನು ಹೇಳಬೇಕು..?" ಎಂದು ಬಗೆಹರಿಯಲಿಲ್ಲ.
 
                  ಇದ್ದಕ್ಕಿದ್ದ ಹಾಗೆ ಸಣ್ಣ ಮಳೆ ಹನಿಗಳುದುರತೊಡಗಿದವು. ನಿಧಾನವಾಗಿ ಇವನ ಮನದಲ್ಲೇ ಅವಸರ ಏರತೊಡಗಿತ್ತು. ಹಾಗೆ ಎದ್ದ ಅವಳು ಸ್ವಲ್ಪ ದೂರ ನಡೆದು, ಹಿಂತಿರುಗಿ ಕುಳಿತವನೆಡೆಗೆ ನೋಡಿದಳು. "ಮ್..",  ಏನೋ ಹೇಳಲೆಂದು ಅವನು ಬಾಯ್ತೆರೆಯುವಾಗಲೇ, ಅವಳು ತಿರುಗಿ ನಡೆಯತೊಡಗಿದಳು. ಮೆಟ್ಟಿಲುಗಳನ್ನು ಇಳಿಯತೊಡಗಿದವಳನ್ನೇ ನೋಡುತ್ತಿದ್ದವ, ಎದ್ದು ಮೆಟ್ಟಿಲುಗಳೆಡೆಗೆ ನಡೆಯತೊಡಗಿದ. ಜೋರಾದ ಮಳೆಯಲ್ಲಿ, ಮರೆಯಾದವಳಲ್ಲೇ ದೃಶ್ಟಿ ನೆಟ್ಟವನ, ಬಾಯು ಪೂರ್ತಿ ಒಣಗಿತ್ತು, ಮುಖ-ಮೈ ಒದ್ದೆಯಾಗಿತ್ತು.
 
ಹಾಗೆ, ಬಿಳಿ ಮೆಟ್ಟಿಲುಗಳಲ್ಲಿ ಅವಳ ಪಾದದ ಗುರುತುಗಳನ್ನು ಹುಡುಕತೊಡಗಿತ್ತು, ಅವನ ಮನಸು.......

 

Rating
No votes yet

Comments