ಪೂರ್ವದ ಹೞಗನ್ನಡ ಮತ್ತು ಹೞಗನ್ನಡದ ನಡುವಿನ ವ್ಯತ್ಯಾಸಗಳು

ಪೂರ್ವದ ಹೞಗನ್ನಡ ಮತ್ತು ಹೞಗನ್ನಡದ ನಡುವಿನ ವ್ಯತ್ಯಾಸಗಳು

Comments

ಬರಹ

ಪೂರ್ವದ ಹೞಗನ್ನಡದ ಕಾಲ ಗೂತ್ತಿಲ್ಲದ ಕಾಲದಿಂದ ಹಿಡಿದು ಸುಮಾರು ಕ್ರಿ.ಶ. ೯ನೇ ಶತಮಾನದ ತನಕ. ೯ನೇ ಶತಮಾನದಿಂದ ೧೨ನೇ ಶತಮಾನದ ತನಕ ಹೞಗನ್ನಡ. ೧೨ನೇ ಶತಮಾನದಿಂದ ೧೭ನೇ ಶತಮಾನದವರೆಗೆ ನಡುಗನ್ನಡ. ನಂತರದ ಕಾಲದಿಂದ ಹೊಸಗನ್ನಡ. ಇದು ಕನ್ನಡಿಗರು ಗುಱುತಿಸುವ ಕನ್ನಡದ ಸ್ಥಿತ್ಯಂತರಗಳು.

ಪೂರ್ವದ ಹೞಗನ್ನಡದಲ್ಲೂ ’ಱ’ ಮತ್ತು ’ರ’ , ’ೞ’ ಮತ್ತು ’ಳ’ಕಾರಗಳ ಶಬ್ದದ ಅರ್ಥವ್ಯತ್ಯಾಸ ಕಡುವಾಗಿ ಹೞಗನ್ನಡದಂತೆ ಗುಱುತಿಸುತ್ತಿದ್ದರು.
ಪ್ರತ್ಯಯಗಳ ಉಪಾಂತಸ್ವರಗಳು ದೀರ್ಘವಾಗಿದ್ದುದು ಈ ಕಾಲದ ವಿಶೇಷ.
ಉದಾಹರಣೆಗೆ ದ್ವಿತೀಯಾ ವಿಭಕ್ತಿಯ ಪ್ರತ್ಯಯ ಪೂರ್ವದ ಹೞಗನ್ನಡದಲ್ಲಿ ’ಆನ್(ಆಂ)’, ಹೞಗನ್ನಡದಲ್ಲಿ ’ಅನ್(ಅಂ)’, ನಡುಗನ್ನಡದಲ್ಲಿ ’ಅನು’, ಹೊಸಗನ್ನಡದಲ್ಲಿ ’ಅನ್ನು’

ಉದಾಹರಣೆಗೆ ಸ್ವರ್ಗಾಗ್ರಮಾನೇಱಿದಾರ್ (ಪೂ ಹ) ಸ್ವರ್ಗಾಗ್ರಮನೇಱಿದರ್(ಹ) ಸ್ವರ್ಗಾಗ್ರವನೇಱಿದರು(ನ) ಹೊಸಗನ್ನಡದಲ್ಲಿ ಸ್ವರ್ಗಾಗ್ರವನ್ನೇಱಿದರು.
ಷಷ್ಠೀವಿಭಕ್ತಿಯ ಪ್ರತ್ಯಯವೂ ’ಆ’ (ದೀರ್ಘ) (ಪೂ.ಹ.) ಹೞಗನ್ನಡದಿಂದ ಹೊಸಗನ್ನಡದವರೆಗೆ ಅದು ’ಅ’ (ಹ್ರಸ್ವ).
ಸಪ್ತಮೀ ವಿಭಕ್ತಿಪ್ರತ್ಯಯ ಉಳ್(ಪೂ.ಹ.) ಒಳ್(ಹ) ಒಳು,ಅಲ್ಲಿ (ನ) ಮತ್ತು ಅಲ್ಲಿ (ಹೊ)
ಬಂದಾನ್, ಬಂದಾಳ್, ಬಂದಾಯ್, ಬಂದಾರ್, ಬಂದೇಂ(ನ್)(ಉತ್ತಮ ಪುರುಷ ಏಕವಚನ), ಬಂದೇಂ(ಮ್)(ಉತ್ತಮಪುರುಷ ಬಹುವಚನ) (ಭೂತಕಾಲ)
ಬರ್ಪಾನ್, ಬರ್ಪಾಳ್, ಬರ್ಪಾಯ್, ಬರ್ಪಾರ್, ಬರ್ಪೇಂ(ನ್)(ಉತ್ತಮ ಪುರುಷ ಏಕವಚನ), ಬರ್ಪೇಂ(ಮ್)(ಉತ್ತಮಪುರುಷ ಬಹುವಚನ) (ಭವಿಷ್ಯತ್)
ಇವು ಪೂರ್ವದ ಹೞಗನ್ನಡ ರೂಪಗಳು.
ಇವುಗಳಿಗೆ ಕ್ರಮವಾಗಿ ಹೞಗನ್ನಡದಲ್ಲಿ ಬಂದಂ(ನ್), ಬಂದಳ್, ಬಂದಯ್, ಬಂದರ್, ಬಂದೆಂ(ನ್), ಬಂದೆಂ(ಮ್), ಬರ್ಪಂ(ನ್), ಬರ್ಪಳ್, ಬರ್ಪಯ್, ಬರ್ಪರ್, ಬರ್ಪೆಂ(ನ್), ಬರ್ಪೆಂ(ಮ್)
ಬಂದನು, ಬಂದಳು, ಬಂದೆ, ಬಂದರು, ಬಂದೆನು, ಬಂದೆವು ಇವು ಭೂತಕಾಲದ ರೂಪಗಳು ನಡುಗನ್ನಡ, ಹೊಸಗನ್ನಡದಲ್ಲಿ
ಬಪ್ಪನು, ಬಪ್ಪಳು, ಬಪ್ಪೆ, ಬಪ್ಪರು, ಬಪ್ಪೆನು, ಬಪ್ಪೆವು (ನಡುಗನ್ನಡದ ರೂಪಗಳು)
ಬರುವನು, ಬರುವಳು, ಬರುವೆ, ಬರುವರು, ಬರುವೆನು, ಬರುವೆವು (ಹೊಸಗನ್ನಡ ರೂಪಗಳು).
ಇವನ್ನು ಪೂರ್ವದ ಹೞಗನ್ನಡ ಹಾಗೂ ಹೞಗನ್ನಡವನ್ನು ಅರ್ಥ ಮಾಡಿಕೊಳ್ಳುವಾಗ ಅವಶ್ಯವಾಗಿ ಗಮನಿಸಬೇಕು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Average: 5 (2 votes)
Rating
Average: 5 (2 votes)