ಯುಗಾದಿಯಂದು ಸಮೋಸಗಳ ವಿನಿಮಯ!

ಯುಗಾದಿಯಂದು ಸಮೋಸಗಳ ವಿನಿಮಯ!

ನಿನ್ನೆ ಯುಗಾದಿಯಂದು ಎಲ್ಲರೂ ಸಮೋಸಗಳ ವಿನಿಮಯ ಮಾಡಿಕೊಳ್ಳುತ್ತಿದ್ದಾಗ ನಾನು ನನ್ನದೇ ಶೈಲಿಯಲ್ಲಿ ಈ ನಾಲ್ಕು ಸಾಲುಗಳನ್ನು ಎಲ್ಲರಿಗೂ ರವಾನಿಸಿದ್ದೆ.

ಕಹಿ ಇರಲಿ
ಆ ಕಹಿಯ ಮರೆಸುವ
ಸಿಹಿ ಇರಲಿ

ನೋವಿರಲಿ
ಆ ನೋವ ಮರೆಸುವ
ನಲಿವಿರಲಿ

ಬೇವಿರಲಿ
ಆ ಬೇವಿಗೆ ಬೆಲ್ಲದ
ಸಿಹಿ ಇರಲಿ

ವಿರೋಧಿ ಇದು
ಸಂವತ್ಸರದ ನಾಮವಷ್ಟೇ
ಆಗಿರಲಿ
ವರುಷವಿಡೀ ಹರುಷ,
ಸುಖ, ನೆಮ್ಮದಿ ಇವು
ಸ್ನೇಹದಿಂದ ನಿಮ್ಮ
ಸನಿಹದಲೇ ಇರಲಿ!!!

ಇದಕ್ಕೆ ನನ್ನ ತಮ್ಮನಿಂದ* ಬಂದ ಕವನ ರೂಪದ ಸಮೋಸ:

ನಿನ್ನ ಕವನ ಬಂದು
ಇಂದು ಹೇಳಿತೆನಗೆ
ಯುಗಾದಿಯೆಂದು

ಮನವ ಸೆಳೆದು
ಹೃದಯ ಬಡಿದು
ತೋರಿತೆನೆಗೆ
ಅಮೃತ ಸಿಂಧು,

ಎಚ್ಚರಾಯ್ತು ನಿನ್ನ
ಕವನ ಬಂದ ಸದ್ದಿಗೆ

ಮನವು ಶುಭ್ರವಾಯ್ತು
ಭಾವಪೂರ್ಣ ವಿಷಯ
ನೀಡಿ ಬುದ್ಧಿಗೆ.

ಕವನ ಹುಟ್ಟುವಡೆವ
ಸೃಷ್ಟಿಗೈವ ಬ್ರಹ್ಮಶಕ್ತಿ
ನಿನ್ನ ಕವನಕೆ

ಬರುವ ಯುಗಾದಿವರೆಗೆ
ನಿನ್ನ ನೆನಪ ಹೊತ್ತು
ನಡೆವ ಯೋಗ ಎನ್ನ
ಕಾವ್ಯ ಚರಣಕೆ!!!

(ನನ್ನ ತಮ್ಮ ಆತ್ರಾಡಿ ಪೃಥ್ವಿರಾಜ್ ಹೆಗ್ಡೆ, ಉಡುಪಿಯಲ್ಲಿ ನ್ಯಾಯವಾದಿಯಾಗಿದ್ದಾನೆ)
ಸಮೋಸ: ಸರಳ ಮೊಬೈಲ್ ಸಂದೇಶ.

Rating
No votes yet

Comments