ಎಡವದಿರಿ ಶ್ವಾನಪ್ರಿಯರೆ ...

ಎಡವದಿರಿ ಶ್ವಾನಪ್ರಿಯರೆ ...

ನಾಯಿಮರಿಯನೊಂದ ಇಟ್ಟು
ದಿನವೂ ಅನ್ನಹಾಲು ಕೊಟ್ಟು
ವಾರಕ್ಕೊಮ್ಮೆ ಶುಚಿಯಾಗಿಟ್ಟು
ಮೂಕಪ್ರಾಣಿಯೊಳಗೆ ಒಂದು
ಜೀವವಿಹುದು ಎಂದು ಅರಿತು
ತೋರಿದ ಪ್ರೀತಿ ಮಾನವೀಯತೆ

ಯಜಮಾನಿಯಾಕೆ ಕಲಿತ ಹೆಣ್ಣು
ನಾಲ್ಕು ಗೋಡೆ ಶಾಲೆ ಮಧ್ಯೆ
ಪಠ್ಯ ಹೊತ್ತು ಓದಿ ಬೆಳೆದು,
ಕೈಗೊಂದಿಷ್ಟು ರೊಕ್ಕ ಬಂದು
ಪ್ರೀತಿ ತೋರಿದಳು ನಾಯಿಮರಿಯ ತಂದು,
ಸಮಾಜವನ್ನು ಅರಿತೇ ಇಲ್ಲ !

ಸಕಲ ಸಮಯ ಚಿಂತೆಯನ್ನು
ನಾಯಿಮರಿಯ ಹಾರೈಕೆಗಿಟ್ಟು
ದುಡಿವ ಕೆಲಸದಹುಡುಗಿಗದರ
ಸಕಲ ಕೆಲಸ ವಹಿಸಿಬಿಟ್ಟು
ಕರ್ತವ್ಯದಿಂದ ದೂರವಾಗೆ
ಯಜಮಾನಿಯದ್ದೇನಲ್ಲಿ ಮಾನವೀಯತೆ?

ಪಾಪ ಪುಟ್ಟ ಬಡವ ಹುಡುಗಿ
ಹೊಟ್ಟೆ ಹೊರೆಯೆ ದುಡಿಯುತಿಹುದು
ಜೊತೆಗೊಂದಿಷ್ಟು ಓದುಬರಹ
ನಾಯಿಮರಿಯ ಮುಗ್ಧತೆ ಅವಳಲ್ಲಿ,
ನೋಡುವಳು ಅಲ್ಲೇ ನಿಂತು
ಬ್ರೆಡ್ಡು ಬಿಸ್ಕತ್ತು ನೂರೆಂಟು ತಿಂಡಿ
ಹಾಲನೆಂದು ತಾ ಸವಿದೇ ಇಲ್ಲ
ತಿನ್ನುವುದು ಅನ್ನಗಂಜಿ ಮಾತ್ರ,

ನಾಯಿಮರಿಗೇಕಿಷ್ಟು ಪೋಷಣೆ
ಎಂದೆಂದೂ ಯೋಚಿಸದವಳಾಕೆ
ಮುಗುದೆ ಅದಕೆ ತಿಳಿಯದೇನು
ಹೇಳಿದ್ದನ್ನು ಮಾಡಿ ರೂಢಿ

ನಾಯಿಮರಿಗೆ ಸಿಗುವ ಪ್ರೀತಿ
ಆ ಹುಡುಗಿಗೇಕೆ ದೊರಕದು?
ನಾಡ ತುಂಬಾ ಬಡವರಿರಲು
ಪ್ರೀತಿ ಕುರುಡು ಯಾಕದು?

ಹೇಳಿದೆನಲ್ಲ ಈಗಾಗಲೇ,
ತಪ್ಪು ನಾಯಿಮರಿಯದ್ದಲ್ಲ
ತಪ್ಪು ಆ ಹುಡುಗಿಯದ್ದಲ್ಲ
ನಾಯಿಮರಿಯ ವ್ಯಾಮೋಹವದು
ಮಾನವೀಯತೆಯ ಕುರುಡುಮಾಡಿಹುದು
ಎಡವದಿರಿ ಶ್ವಾನಪ್ರಿಯರೆ !

Rating
No votes yet

Comments