ತಂದೆಯವರ ನೆನಪುಗಳು - ಭಾಗ ಒಂದು

ತಂದೆಯವರ ನೆನಪುಗಳು - ಭಾಗ ಒಂದು

ಮೊನ್ನೆ ಆಸು ಸಾರ್ ಬರೆದ ತೀರ್ಥರೂಪರ ಸ್ಮರಣೆ ಓದಿದಾಗ ನನಗೂ ನಮ್ಮ ತಂದೆಯವರನ್ನು ನೆನಪಿಸಿಕೊಂಡು, ಬರೆಯಬೇಕೆನ್ನಿಸಿತು. ಇದುವರೆಗೂ ಬರೀ ಮನಸ್ಸಿನಲ್ಲಿಯೇ ಅವರನ್ನು ನೆನಪಿಸಿಕೊಂಡು, ಅವರಿಗೆ ನನ್ನ ಧನ್ಯವಾದಗಳನ್ನು ಹೇಳುತ್ತಿದ್ದೆ, ಆದರೆ ಇಂದು ಅದನ್ನು ಬರೆಯಬೇಕೆನ್ನಿಸಿತು. ಕಾರಣರಾದ ಆಸು ಸಾರ್ ಗೂ ಧನ್ಯವಾದಗಳು.

ನಾವು ನಾಲ್ಕು ಜನ ಮಕ್ಕಳಲ್ಲಿ, ನಾನೇ ಕೊನೆಯವಳು. ಇಬ್ಬರು ಅಕ್ಕಂದಿರು ಮತ್ತು ಒಬ್ಬನೇ ಅಣ್ಣ ನನಗೆ. ಒಬ್ಬನೇ ಮಗನಾದ್ದರಿಂದ ಅವನು ನಮ್ಮ ತಾಯಿಯ ಕಣ್ಮಣಿಯಾಗಿದ್ದ, ಆದರೆ ಕೊನೆಯ ಮಗು ಎಂದೋ ಏನೋ ನನ್ನ ಮೇಲೆ ಅಪ್ಪನಿಗೆ ವಿಶೇಷ ಪ್ರೀತಿ ! ಇದು ನಾನು ಅಪ್ಪನಿಗಾಗಿ ಬರೆದ ಮೊದಲ ನೆನಪು. ಅವರು ನಮ್ಮನ್ನಗಲಿ ಆಗಲೇ ೧೫ ವರ್ಷಗಳಾಯಿತು. ಈ ಹದಿನೈದು ವರ್ಷಗಳಲ್ಲಿ, ನಾನವರನ್ನು ಅದೆಷ್ಟು ಲಕ್ಷಸಲ ನೆನಪಿಸಿಕೊಂಡಿದ್ದೇನೋ ನನಗೇ ಗೊತ್ತಿಲ್ಲ - ಮರೆತಿದ್ದರೆ ತಾನೇ ಎಂದೂ ಹೇಳಬಹುರು. ಈ ದಿನ ನಾನು ಏನಾಗಿದ್ದೇನೋ, ಅದಕ್ಕೆ, ನನ್ನ ಈ ವ್ಯಕ್ತಿತ್ವ ರೂಪಿಸಿಕೊಳ್ಳುವುದಕ್ಕೆ ಅಪ್ಪನೇ ತಳಪಾಯ ಹಾಕಿದ್ದು.

ಅಪ್ಪ + ಅವರ ಅಣ್ಣ (ನಮ್ಮ ದೊಡ್ಡಪ್ಪ) ಮತ್ತು ಐವರು ಹೆಣ್ಣು ಮಕ್ಕಳು ನಮ್ಮ ತಾತನವರಿಗೆ. ನಮ್ಮ ದೊಡ್ಡಪ್ಪ ಓದಿನಲ್ಲಿ ಅತಿ ಬುದ್ದಿವಂತರಾಗಿದ್ದರಂತೆ. ಆಗಿನ ಕಾಲಕ್ಕೇ ಅವ್ರು ಸ್ನಾತಕೋತ್ತರ ಪದವಿ ಮಾಡಿ ಮಾನಸ ಗಂಗೋತ್ರಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದವರು. ಆದರೆ ಅಪ್ಪ ಓದಿನಲ್ಲಿ ಸ್ವಲ್ಪ ಹಿಂದೆಯೇ ಇದ್ದರು. ಅವರು ಬಹುಶ: ಹತ್ತನೇ ಇಯತ್ತೆಯವರೆಗೆ ಮಾತ್ರ ಓದಿದ್ದರೇನೋ... ಅಕ್ಕನ ಮನೆಯಲ್ಲಿದ್ದುಕೊಂಡು ತುಂಬಾ ಕಷ್ಟಪಟ್ಟು ಬೆರಳಚ್ಚು / ಶೀಘ್ರಲಿಪಿ ಕಲಿತು, ಕೆಲಸಕ್ಕೆ ಬಂದವರು. ತಾನು ಪದವೀಧರನಾಗಲಿಲ್ಲವೆಂದು, ತನ್ನೆಲ್ಲಾ ಮಕ್ಕಳೂ ಕನಿಷ್ಟ ಒಂದು ಪದವಿಯನ್ನಾದರೂ ಪಡೆಯಬೇಕೆಂಬ ಕನಸು ಕಂಡವರು.

ನಮ್ಮಣ್ಣನನ್ನು ಆಂಗ್ಲ ಶಾಲೆಗೆ ಸೇರಿಸಿ, ಅವನ ಪುಸ್ತಕಗಳನ್ನು ಅವನಿಗಿಂತಾ ಮೊದಲೇ ತಾನು ಕುಳಿತು ಓದಿ, ಅವನ ಜೊತೆ ತನ್ನ ಆಂಗ್ಲ ಭಾಷೆಯ ಮೇಲಿನ ಹಿಡಿತ ಸಾಧಿಸಿದವರು. ಕೆಲಸ ಬಿಟ್ಟು ತನ್ನದೇ ಸ್ವಂತ ದುಡಿಮೆ ಶುರುಮಾಡಿ, ಊರೂರು ತಿರುಗಿ, ಹಿಂದಿ, ಇಂಗ್ಲೀಷ್, ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳನ್ನು ಸರಾಗವಾಗಿ ಮಾತನಾಡಲು ಕಲಿತರು. ಪ್ರತಿವರ್ಷ ರಜಾ ಮುಗಿದು ತರಗತಿಗಳು ಶುರುವಾಗುವ ಮೊದಲೇ ಅಪ್ಪ ನನಗೆ ಹೊಸ ಪುಸ್ತಕದಲ್ಲಿನ ಮೊದಲ ೨ - ೩ ಪಾಠಗಳನ್ನು ಹೇಳಿಕೊಟ್ಟಿರುತ್ತಿದ್ದರು. ಶಾಲೆಯಲ್ಲಿ ಪಾಠ ನಡೆದಾಗ, ಎಲ್ಲಾ ಪ್ರಶ್ನೆಗಳಿಗೂ ನಾನೊಬ್ಬಳೇ ಉತ್ತರ ಕೊಡುತ್ತಿದ್ದದ್ದು. ಆಂಗ್ಲ ಪುಸ್ತಕದ ಪಾಠಗಳನ್ನು, ನಾನು ಅಪ್ಪನಿಂದ ಕಲಿತು, ನನ್ನ ಸ್ನೇಹಿತೆಯರಿಗೆ, ಗುಂಪುಕೂಡಿಸಿಕೊಂಡು, ಅರ್ಥ ಹೇಳಿ ವಿವರಿಸುತ್ತಿದ್ದೆ. ನಾನು ೮ನೇ ತರಗತಿಗೆ ಬರುವಷ್ಟರಲ್ಲಾಗಲೇ ನನ್ನಪ್ಪ ಪ್ರಜಾವಾಣಿ - ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಿಗೆ ವರದಿಗಾರರಾಗಿದ್ದರು. ಅವರ ಬರಹ ಎಷ್ಟು ಸ್ಪಷ್ಟವಾಗಿರುತ್ತಿತ್ತೆಂದರೆ, ಯಾವುದೇ ರೀತಿಯ ತಿದ್ದುಪಡಿಗಳಿಲ್ಲದೆ, ಅವು ಹಾಗೇ ಅಚ್ಚಾಗುತ್ತಿದ್ದವು. ಅಪ್ಪ ನಿಜವಾಗಲೂ ನಿಜ ಅರ್ಥದಲ್ಲಿ Selfmade man... ಶಾಲೆಯಲ್ಲಿ ನಡೆಯುವ ಎಲ್ಲಾ ತರಹದ ಭಾಷಣ, ಚರ್ಚಾಸ್ಪರ್ಧೆಗಳಿಗೆ, ಅಪ್ಪ ತಾವೇ ಸ್ವತ: ಕುಳಿತು, ಬರೆದು, ವಿಷಯ ತಯಾರಿಸಿಟ್ಟು, ನನ್ನನ್ನು ಭಾಗವಹಿಸಲು ಪ್ರೋತ್ಸಾಹಿಸುತ್ತಿದ್ದರು. ಆಶು ಭಾಷಣವಿರಲೀ ಅಥವಾ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಿರಲಿ, ನಾನು ಭಾಗವಹಿಸುತ್ತಿದ್ದೆ ಮತ್ತು ಅಪ್ಪನ ಶ್ರಮದಿಂದ ಅನೇಕ ಬಹುಮಾನಗಳನ್ನೂ ಗೆದ್ದೆ. ಅಪ್ಪ ನನಗಾಗಿ ಪಡುತ್ತಿದ್ದ ಪಾಡು, ಶ್ರಮ ನನಗೆ, ನಾನು ನನ್ನ ಮಗನಿಗಾಗಿ ಪಾಡುಪಟ್ಟಾಗ ಮಾತ್ರವೇ ಅರ್ಥ ಆಗಿತ್ತು.

೩೫-೪೦ ವರ್ಷಗಳ ಹಿಂದೆ, ಹೆಣ್ಣು ಮಕ್ಕಳು ದೊಡ್ಡವರಾಗುತ್ತಿದ್ದಂತೆ, ಅಪ್ಪನ ಹತ್ತಿರ ಸಲಿಗೆಯಿಂದ ಇರುವುದು ಸ್ವಲ್ಪ ಅಪರೂಪವೇ ಆಗಿತ್ತು. ನಾನು ಏಳನೇ ತರಗತಿಯವರೆಗೂ ಅಪ್ಪನ ಹತ್ತಿರ ಮಲಗುತ್ತಿದ್ಡೆ. ಒಮ್ಮೆ ನಾನಾಗ ೬ನೇ ತರಗತಿಯಲ್ಲಿದ್ದೆನೆಂದು ಕಾಣತ್ತೆ.. ಹುಷಾರಿಲ್ಲದೆ, ಹಟ ಮಾಡಿ ಅಪ್ಪನ ಪಕ್ಕ ಮಲಗಿದ್ದೆ, ಮಧ್ಯ ರಾತ್ರಿ ನಿದ್ದೆಯಲ್ಲೇ ವಾಂತಿ ಮಾಡಿಕೊಂಡಾಗ ನನ್ನಪ್ಪ ತನ್ನ ಕೈಯಲ್ಲೇ ಮಾಡಿಸಿಕೊಂಡಿದ್ದರು. ಚೂರೂ ಅಸಹ್ಯಿಸಿಕೊಳ್ಳದೆ, ನನ್ನನ್ನು ಎಬ್ಬಿಸಿ ಬಾಯಿ ತೊಳೆಸಿ, ತಟ್ಟಿ ಮಲಗಿಸಿದ್ದರು. ಹೇಗೆ ಮರೆಯಲಿ ಈ ನೆನಪುಗಳನ್ನು.........

ಚಿಕ್ಕವಳಿದ್ದಾಗ ನನಗೆ ತರಕಾರಿ ತಿನ್ನುವುದೆಂದರೆ ತುಂಬಾ ಇಷ್ಟ. ನಾನು ಅವರ ಜೊತೇನೇ ಊಟ ಮಾಡಬೇಕೆಂದು ಕುಳಿತಾಗ, ಅವರ ತಟ್ಟೆಯಲ್ಲಿನ ತರಕಾರಿಯೆಲ್ಲಾ ನನಗೇ ತಿನ್ನಿಸಿಬಿಡುತ್ತಿದ್ದರು. ಹಿತ್ತಲಲ್ಲಿ ನಮ್ಮನ್ನೆಲ್ಲಾ ಕಟ್ಟಿಕೊಂಡು ಅಪ್ಪ ಸುಂದರವಾದ ತೋಟ ಮಾಡಿದ್ದರು. ಕರಿಬೇವು, ಬಾಳೆ, ತೆಂಗು, ನಿಂಬು ಎಲ್ಲಾ ಬೆಳೆದಿದ್ದರು. ಮಲ್ಲಿಗೆ, ದಾಸವಾಳ, ಮಂದಾರ, ಶಂಖಪುಷ್ಪಗಳೆಲ್ಲಾ ಇದ್ದವು. ಅದಲ್ಲದೆ ಹುರಳೀಕಾಯಿ, ಸೀಮೆ ಬದನೆಕಾಯಿ, ಪಡವಲಕಾಯಿ.... ದಿನಾ ಬೆಳಿಗ್ಗೆ ಕಾಫಿ ಕುಡಿದು, ಸೀಮೆ ಬದನೆಗೆ ಚಪ್ಪರ ಹಾಕುವುದು, ಪಡವಲಕ್ಕೆ ಕಲ್ಲು ಕಟ್ಟುವುದು, ಪಾತಿಯಲ್ಲಿನ ಕಸ ತೆಗೆಯುವುದು, ನೀರು ಬಿಡುವುದು, ಎಲ್ಲಾ ಅಪ್ಪನ ನೇತ್ರುತ್ವದಲ್ಲಿ, ನಾನು ಕಲಿತಿದ್ದು. ತೋಟದಲ್ಲಿ ಕೆಲಸ ಮಾಡುತ್ತಾ, ನಾನು ಕೇಳುವ ಪ್ರಶ್ನೆಗಳಿಗೆಲ್ಲಾ ಉತ್ತರಿಸುತ್ತಾ, ಕಥೆಗಳನ್ನು ಹೇಳುತ್ತಿದ್ದರು ಅಪ್ಪ......

ನಾನು ಬೆಳೆದಂತೆಲ್ಲಾ ನನಗೆ ಈ ಎಲ್ಲಾ ಚಟುವಟಿಕೆಗಳಲ್ಲಿ ಆಸಕ್ತಿಯೂ ಪ್ರಕ್ರುತಿ ಆರಾಧನೆಯೂ ಕಲಿಸಿದ್ದೇ ನನ್ನ ಅಪ್ಪ. ದುಂಡಗೆ ಬರೆಯುವುದು, ಯಾವುದೇ ವಿಷಯವೇ ಆಗಲಿ, ಯಾರದರೂ ಕೇಳಿದರೆ, ಅದನ್ನು ಕೇಳಿದವರಿಗೆ ಅರ್ಥವಾಗುವಂತೆ ವಿವರಿಸುವುದು, ಇವು ನನ್ನ ಅಪ್ಪ ಹೇಳಿಕೊಟ್ಟ ಪಾಠವೇ. ಅಪ್ಪನಿಗೆ ಸಂಗೀತದಲ್ಲಿ ಅಪಾರ ಆಸಕ್ತಿಯಿತ್ತು. ತನಗೇ ಹಾಡಲು ಬರದಿದ್ದರೂ, ನನಗೆ ಸಂಗೀತ ಹೇಳಿಸಿದ್ದರು. ನಮ್ಮ ಗುರುಗಳು ಪಾಠಕ್ಕೆ ಬಂದರೆ, ನನ್ನ ಪಾಠ ಮುಗಿಯುವವರೆಗೂ ಅಪ್ಪ ಹೊರಗೆ ಹೊರಡುತ್ತಿರಲಿಲ್ಲ. ನಾನು ಮಹಡಿಯಲ್ಲಿ, ಹಾಡುತ್ತಿದ್ದರೆ, ಅವರು ಕೆಳಗೆ ಕುಳಿತು, ಕಣ್ಣು ಮುಚ್ಚಿ ಕೇಳುತ್ತಾಕುಳಿತಿರುತ್ತಿದ್ದರು. ಶ್ರೀ ಜಯಚಾಮರಾಜ ಒಡೆಯರ್ ರಚನೆಗಳಾದ ಚಿಂತಯಾಮಿ ಜಗದಂಬಾಂ.. ಹಿಂದೋಳ ರಾಗದಲ್ಲಿ, ಬ್ರಹ್ಮಾಂಡ ವಲಯೇ ಮಾಯೇ.. ಮಾಂಡ್ ರಾಗದಲ್ಲಿ ಮತ್ತು ಶ್ರೀ ಮುತ್ತಯ್ಯ ಭಾಗವತರ ರಚನೆ ಜಾಲಂಧರ ಸುಪೀಠಸ್ತೆ... ವಲಚಿ ರಾಗದಲ್ಲಿ, ಇವುಗಳು ಅಪ್ಪನಿಗೆ ಪ್ರಿಯವಾದ ಕೀರ್ತನೆಗಳು. ಅವರು ಮನೆಯಲ್ಲಿದ್ದರೆ ಇದರಲ್ಲಿ ಯಾವುದಾದರೊಂದು ಕ್ರುತಿ ನಾನು ಹಾಡಲೇ ಬೇಕಿತ್ತು. ಪಾಠ ಮುಗಿದ ನಂತರ ಗುರುಗಳ ಜೊತೆ ಕಾಫಿ ಕುಡಿದು, ನಂತರ ಹೊರಗೆ ಹೊರಡುತ್ತಿದ್ದರು.

ಇನ್ನೂ ಇದೆ.....
http://www.sampada.net/blog/shamala/02/04/2009/18600

Rating
No votes yet

Comments