ಪ್ಯಾನಿಂಗ್

ಪ್ಯಾನಿಂಗ್

ವೀಡಿಯೋ ಚಿತ್ರೀಕರಣವಾದರೆ ಚಲಿಸುವ ವಸ್ತುವನ್ನು ಹಿಂಬಾಲಿಸಿ ಅದರ ಚಲನೆಯನ್ನು ಸೆರೆ ಹಿಡಿದು, ವೀಕ್ಷಕರ ಮನದಲ್ಲಿ ಆ ಚಲನೆಯ ಪರಿಣಾಮವನ್ನು ಬಿಂಬಿಸಬಹುದು. ಸ್ಥಬ್ದ ಛಾಯಾಗ್ರಹಣದಲ್ಲಿ ಚಲಿಸುವ ವಸ್ತುವಿನ ವೇಗಕ್ಕನುಗುಣವಾಗಿ Shutter Speed ಹೆಚ್ಚಿಸಿಕೊಂಡು ಅದರ ಚಲನೆಯನ್ನು ಸ್ಥಬ್ದಗೊಳಿಸಿ ಚಿತ್ರ ಸೆರೆಹಿಡಿಯುವುದು ವಾಡಿಕೆ. ಪರಿಣಾಮ, ಕೆಳಗಿನ ಚಿತ್ರದಂತೆ ಮುನ್ನೆಲೆಯ ಜೀಪು, ಅದರ ಹಿನ್ನೆಲೆ ಎಲ್ಲವೂ ಸ್ಪಷ್ಟವಾಗಿ ಚಿತ್ರಿತವಾಗುವುದು. ಇಲ್ಲಿ ಜೀಪು ಹೊರಬಿಡುತ್ತಿರುವ ಹೊಗೆಯಿಂದ ಅದು ಚಲಿಸುತ್ತಿರಬಹುದೇನೋ ಎಂದು ಊಹಿಸಬಹುದಾದರೂ ಆ ಚಲನೆಯ ಪರಿಣಾಮ ಚಿತ್ರದಲ್ಲಿ ಮೂಡಿಲ್ಲ.

ಕಡಿಮೆ Shutter Speed ಬಳಸಿ ತೆಗೆದ ಈ ಕೆಳಗಿನ ಚಿತ್ರದಲ್ಲಿ ಚಲಿಸುತ್ತಿರುವ ವಾಹನಗಳು ಅಸ್ಪಷ್ಟವಾಗಿದ್ದು, ಹಿನ್ನೆಲೆ ಸ್ಪಷ್ಟವಾಗಿರುವುದನ್ನು ಗಮನಿಸಬಹುದು. ಇಲ್ಲಿ ಅಸ್ಪಷ್ಟವಾಗಿ ಮೂಡಿದ ವಾಹನಗಳು ಚಲನೆಯನ್ನು ಬಿಂಬಿಸುತ್ತಾದರೂ, ಅವೇ ಚಿತ್ರದ ವಿಷಯವಾಗಿದ್ದಲ್ಲಿ ನೋಡುಗರಲ್ಲಿ ಆಸಕ್ತಿ ಮೂಡಿಸಲು ವಿಫಲವಾಗುತ್ತದೆ.

ಚಲಿಸುವ ವಿಷಯವನ್ನು ಸ್ಪಷ್ಟವಾಗಿಸಿ, ಚಲನೆಯ ಪರಿಣಾಮವನ್ನೂ ಬಿಂಬಿಸಲು ಉಪಯೋಗವಾಗುವ ವಿಧಾನವೇ ಪ್ಯಾನಿಂಗ್. ಈ ಕೆಳಗಿನ ಚಿತ್ರದಲ್ಲಿ ಚಲಿಸುವ ದ್ವಿಚಕ್ರ ವಾಹನ ಅದರ ಸವಾರರು ಸ್ಪಷ್ಟವಾಗಿ ಮೂಡಿದ್ದು, ಹಿನ್ನೆಲೆಯು ವಾಹನ ಚಲಿಸುವ ದಿಕ್ಕಿಗೆ ವಿರುದ್ಧವಾದ ಗೆರೆಗಳಂತಹ ರಚನೆಯೊಂದಿಗೆ ಅಸ್ಪಷ್ಟವಾಗಿ ಚಲನೆಯನ್ನು ಬಿಂಬಿಸುತ್ತಿದೆ. ಕಡಿಮೆ Shutter Speed ಉಪಯೋಗಿಸಿ, ಚಲಿಸುವ ವಿಷಯದೊಂದಿಗೆ ನಮ್ಮ ಕ್ಯಾಮರಾವನ್ನು ಅನುಸರಿಸಿ ಚಿತ್ರಿಸಿದರೆ ಈ ಬಗೆಯ ಚಿತ್ರವನ್ನು ಸೆರೆಹಿಡಿಯಬಹುದು.

# ಪ್ಯಾನಿಂಗ್ ಚಿತ್ರಗಳನ್ನು ತೆಗೆಯುವ ಮೊದಲು ನಿಮ್ಮ ವಿಷಯದ ಚಲನೆಯ ದಿಕ್ಕನ್ನು ನಿರ್ಧರಿಸುವುದು ಮುಖ್ಯ. ಆದ್ದರಿಂದ ನೀವು ಇದನ್ನು ಮೊದಲ ಬಾರಿ ಪ್ರಯತ್ನಿಸುತ್ತಿದ್ದರೆ, ನಿಮ್ಮ ಮನೆಯ ಬಳಿಯಿರುವ ಯಾವುದಾದರೂ ರಸ್ತೆ ಉತ್ತಮ ವಿಷಯವನ್ನು ಒದಗಿಸಬಹುದು.

# ವಿಷಯವನ್ನು ಪ್ಯಾನ್ ಮಾಡಲು ವಿಷಯಕ್ಕೆ ಸಮಾನಾಂತರವಾಗಿ ನಿಲ್ಲುವುದು ಅನುಕೂಲ. ಹಿನ್ನೆಲೆಯಲ್ಲಿನ ಬಣ್ಣ ಹಾಗೂ ಆಕೃತಿಗಳು ನಿಮ್ಮ ವಿಷಯಕ್ಕೆ ಪೂರಕವಾಗಿರುವಂತಹ ಸ್ಥಳವನ್ನು ಆಯ್ದುಕೊಳ್ಳುವುದು ಉತ್ತಮ.

# ಈ ಚಿತ್ರಕ್ಕೆ ಕಡಿಮೆ Shutter Speed ಅಗತ್ಯ ಇರುವುದರಿಂದ, ISO, Aperture (ಇಲ್ಲಿ ಕಡಿಮೆ ಅಂದರೆ ಹೆಚ್ಚಿನ f ಸಂಖ್ಯೆ) ಕಡಿಮೆ ಇಟ್ಟುಕೊಂಡು ಚಿತ್ರ ಓವರ್ ಎಕ್ಸ್ ಪೋಸ್ ಆಗದಂತೆ ನೋಡಿಕೊಳ್ಳಬೇಕು. Shutter Speed ಸೆಟ್ ಮಾಡಲು Shutter Speed ಪ್ರಿಯೋರಿಟಿ (Tv OR S) ಅಥವಾ ಮ್ಯಾನ್ಯುಅಲ್ ಶೂಟಿಂಗ್ ಮೋಡನ್ನು ಆಯ್ದುಕೊಳ್ಳಬಹುದು. Shutter Speed ೧/೬೦ಯವರೆಗೂ ಕೈಯಲ್ಲೇ ಕ್ಯಾಮರಾ ಹಿಡಿದು ಚಿತ್ರಿಸಬಹುದಾದ್ದರಿಂದ ೧/೨೫೦ ಯಿಂದ ೧/೬೦ವರೆಗೆ ಇಟ್ಟುಕೊಂಡು ಆರಂಭಿಸುವುದು ಉತ್ತಮ. ವಿಷಯದ ವೇಗ ಕೂಡ ನಿಮ್ಮ ಫಲಿತಾಂಶದ ಮೇಲೆ ಪರಿಣಾಮ ಬೀರುವುದರಿಂದ Shutter Speed ಎಷ್ಟು ಕಡಿಮೆ ಇಡಬಹುದೆಂಬ ಕಲ್ಪನೆ ಕೆಲವು ಚಿತ್ರಗಳನ್ನು ತೆಗೆದ ನಂತರ ನಿಮಗೆ ಸಿಗುವುದು. ಪ್ಯಾನಿಂಗ್ ಚಿತ್ರ ತೆಗೆದು ಅಭ್ಯಾಸವಾದ ನಂತರ ಇನ್ನೂ ಕಡಿಮೆ Shutter Speed, ಟ್ರೈಪಾಡ್ ಬಳಸಿ ಈ ಚಲನೆಯನ್ನು ಇನ್ನೂ ಪರಿಣಾಮಕಾರಿಯಾಗಿ ಚಿತ್ರಿಸಬಹುದು.

# ಯಾವುದಾದರೂ ಚಲಿಸುವ ವಿಷಯ ನಿಮ್ಮ ಕಣ್ಣಿಗೆ ಬಿದ್ದ ಕೂಡಲೇ ಅದನ್ನು ಕ್ಯಾಮರಾದ ಮೂಲಕ ಹಿಂಬಾಲಿಸುತ್ತಾ, ಬಟನ್ ಒತ್ತಿ, ಚಿತ್ರ ತೆಗೆದ ನಂತರ ಕೂಡ ಕ್ಯಾಮರಾದಿಂದ ವಿಷಯವನ್ನು ಕ್ಷಣ ಕಾಲ ಹಿಂಬಾಲಿಸಿ ಮೊದಲಿನಿಂದ ಕೊನೇಯವರೆಗೂ ಉತ್ತಮವಾದ "motion blur" ಪಡೆಯಬಹುದು.

# ಅಟೋ ಫೋಕಸಿಂಗ್ ಇಟ್ಟಲ್ಲಿ ಕಂಟ್ಯುನ್ಯುಸ್ ಫೋಕಸಿಂಗ್ ಆಯ್ದಲ್ಲಿ ಉತ್ತಮ. ಒಂದು ವೇಳೆ ನಿಮ್ಮ ಕ್ಯಾಮರಾದ ಆಟೋ ಫೋಕಸಿಂಗ್ ನಿಧಾನವಿದ್ದಲ್ಲಿ, ನೀವು ಯಾವ ಜಾಗದಲ್ಲಿ ಶಟ್ಟರ್ ರಿಲೀಸ್ ಮಾಡುವಿರೋ ಆ ಜಾಗಕ್ಕೆ ಫೋಕಸ್ ಮಾಡಿ ಬಟನ್ನನ್ನು ಅರ್ಧ ಹಿಡಿದಿಟ್ಟು ನಂತರ ಕ್ಲಿಕ್ಕಿಸಬಹುದು ಅಥವಾ ಮನ್ಯುವಲ್ ಫೋಕಸಿಂಗ್ ಬಳಸಬಹುದು.

ಮೇಲೆ ತಿಳಿಸಿದ ವಿಷಯವನ್ನು ತಿಳಿದಿದ್ದರಿಂದ ನಿಮ್ಮ ಸಂಗ್ರಹದಲ್ಲಿ ಪ್ಯಾನಿಂಗ್ ಚಿತ್ರ ಸೇರ್ಪಡೆಗೊಳ್ಳುವುದಿಲ್ಲ. ಈ ಬಗೆಯ ಚಿತ್ರ ತೆಗೆಯಲು ತಾಳ್ಮೆ ಮುಖ್ಯ ಎಂಬ ವಿಷಯವನ್ನು ಗಮನದಲ್ಲಿರಿಸಿಕೊಂಡು ಈ ವಾರಾಂತ್ಯವೇ ನಿಮ್ಮ ಮನೆಯ ಬಳಿಯಿರುವ ರಸ್ತೆಯ ಬೀದಿಗಿಳಿದು ಪ್ರಯತ್ನಿಸಿ, ನಿಮ್ಮ ಅನುಭವ ಕಾಮೆಂಟಿನ ಮೂಲಕ ಹಂಚಿಕೊಂಡರೆ ತುಂಬಾ ಸಂತೋಷ.

Rating
No votes yet

Comments