ತಾತನವರ ನೆನಪು

ತಾತನವರ ನೆನಪು

ಅದೊಂದು ದಿನ, ತುಂಬ ಶೆಖೆ. ಬೇಸಿಗೆ ರಜೆಗೆಂದು ನಾವು ಅಜ್ಜಿಯ ಮನೆಯಲ್ಲಿದ್ದೆವು. ನಾವೆಲ್ಲರೂ ಕುಳಿತುಕೊಳ್ಳಲೆಂದು ರೆಡ್ ಆಕ್ಸೈಡ್ ನೆಲದ ಮೇಲೆ ಚಾಪೆ ಹಾಸಿದಳು ಅಕ್ಕ. ಚಾಪೆಯ ಮೇಲೆ ಎಗರಿ ಚಕ್ಳಮಕ್ಳ ಹಾಕಿ ಕೂತು ಇನ್ನೇನು ಮಾಡುವುದು ಎಂದು ಮನಸ್ಸಿಗೆ ಬರುವ ಮೊದಲೇ ಒಂದು ಗೊದ್ದ ಕಂಡಿತ್ತು. ನನಗೆ ಅರಿವೇ ಇಲ್ಲದಂತೆ ಅದನ್ನು ಬೆರಳುಗಳಲ್ಲೆತ್ತುಕೊಂದು ಚಾಪೆಯ ಮತ್ತೊಂದು ಬದಿಗೆ ಬಿಟ್ಟೆ. ಆ ಗೊದ್ದ ಮತ್ತೆ ತಾ ಬಂದ ದಾರಿಯಲ್ಲೇ ವಾಪಸ್ಸು ಚಾಪೆ ಹತ್ತುತ್ತಾ ಬಂತು. ಇನ್ನೇನು ಚಾಪೆ ದಾಟಿ ಹೋಗುವುದಿತ್ತು, ಮತ್ತೆ ಹಿಡಿದು ಇನ್ನೊಂದು ಬದಿಗೆ ಬಿಟ್ಟೆ. ಗೊದ್ದ ತಾ ಬಂದ ದಾರಿಯನ್ನೇ ಹಿಡಿದು, ಚಲಬಿಡದ ತ್ರಿವಿಕ್ರಮನಂತೆ ಮುಂದೆ ನಡೆಯಿತು.

ನನ್ನ ಗಮನವೆಲ್ಲ ಆ ಗೊದ್ದದ ನಡಿಗೆಯಲ್ಲಿ ಮುಳುಗಿಹೋಗಿತ್ತು. ಸುತ್ತಲಿನ ಜಗತ್ತಿನ ಪರಿವೆಯೇ ಇಲ್ಲದಂತೆ ಅದನ್ನೇ ನೋಡುತ್ತ ಕುಳಿತಿದ್ದ ನಾನು ಯಾರೋ ಗದರಿದ್ದು ಕೇಳಿ ಬೆಚ್ಚಿಬಿದ್ದೆ.

ತಲೆ ಎತ್ತಿ ನೋಡಿದಾಗ ನನಗೆ ನಂಬಲಾಗಲಿಲ್ಲ. ನಮ್ಮ ತಾತನವರು ಎಂದೂ ಗದರಿದ್ದೇ ಇಲ್ಲ.
"ಏಯ್, ಗೊದ್ದಕ್ಕೆ ಯಾಕೋ ಸುಮ್ಮನೆ ಹಿಂಸೆ ಕೊಡುತ್ತೀಯ? ಅದರ ಪಾಡಿಗೆ ಬಿಡು ಅದನ್ನು" ಎಂದು ನನ್ನ ಆಟ ನೋಡಿ ಗದರಿದ್ದರು ತಾತ. ಅವರು ಗದರಿದ್ದ ದನಿ ಅಪ್ಪನಂತೆ ಬಿರುಸಾಗಿರಲಿಲ್ಲ. ತೀರ ಗಟ್ಟಿಯಾಗಿ ಕೂಡ ಇರಲಿಲ್ಲ. ಆದರೆ ಅದ್ಯಾಕೋ ಅದರ ಹರಿತ ಮೊನಚಾಗಿತ್ತು. ಅಪ್ಪ ಗದರಿದರೂ ಜಗ್ಗದ ನನಗೆ ಅಳು ಬರುವಂತಾಗಿತ್ತು ಆ ದಿನ.

*****

ಮುಂಜಾನೆ ಎದ್ದು ತಾತ ಗೋಡೆಗೆ ಒಂದು ಕನ್ನಡಿ ಒರಗಿಸಿ, ಗೋದ್ರೇಜ್ ಸೋಪು ಹೊರಗೆ ತೆಗೆದಿಟ್ಟುಕೊಂಡು ಅದನ್ನು ಕಟ್ ಮಾಡಿ ಬಟ್ಟಲಿಗೆ ಹಾಕಿ ಕಲೆಸಿ ಶೇವ್ ಮಾಡುತ್ತ ಕುಳಿತಿರುತ್ತಿದ್ದರು. ನಾವೆಲ್ಲ ಮತ್ತೊಮ್ಮೆ ಮುಸುಕು ಹಾಕಿ 'ಇನ್ನೂ ಬೆಳಗಾಗಿಲ್ಲ' ಎಂದುಕೊಳ್ಳುತ್ತ ಮತ್ತೆ ನಿದ್ರೆ ಹೋಗುತ್ತಿದ್ದೆವು.

*****

ಮತ್ತೊಂದು ಬೇಸಿಗೆ ರಜೆ, ಮತ್ತಷ್ಟು ಶೆಖೆ. ಅತ್ತ ವರ್ಕ್ಶಾಪಿನ ಬಾಗಿಲ ಬಳಿ ಮಾಮ ಕಾಯಿ ಸುಲಿಯುತ್ತಿದ್ದರು. ಅವರ ಕಾಯಿ ಸುಲಿಯುವ ಕಲೆ ರಮಣೀಯ ದೃಶ್ಯ ಆಗ ನಮಗೆ. ಅತ್ತ ನೋಡುತ್ತಲೇ ಕೆಳಗಿದ್ದ ಕಬ್ಬಿಣ ಕಾಣದೆ ಕೊಂಚ ಎಡವಿ ವರ್ಕ್ಶಾಪಿನ ಒಳ ಹೊಕ್ಕುತ್ತಿರುವಂತೆ ತಾತ ನಾನು ಬರುತ್ತಿರುವುದ ನೋಡಿ "ಹುಷಾರಾಗಿ ಬಾರೋ... " ಎಂದಿದ್ದರು. ಆ ದನಿಯಲ್ಲಿದ್ದ ಆತ್ಮೀಯತೆ ಇಂದಿಗೂ ನೆನಪು.

ವರ್ಕ್ಶಾಪಿನಲ್ಲಿ ಅದೊಂದು ಮೆಶೀನ್ ಇರುತ್ತಿತ್ತು. ಅದನ್ನು ಆನ್ ಮಾಡಲೆಂದು ಒಂದು ಗ್ರೀನ್ ಬಟನ್, ಆಫ್ ಮಾಡಲು ರೆಡ್ ಬಟನ್, ಅದರೆದುರು ಒಂದು ಖುರ್ಚಿ ಹಾಕಿ ತಾತ "ಅಲ್ಲಿಯೇ ಕುಳಿತಿರು, ಈಚೆ ಲೇಥ್ ಹತ್ತಿರ ಬರಬೇಡ" ಎಂದು ಹೇಳಿ ಕೂಡಿಸಿರುತ್ತಿದ್ದರು. ನನಗೆ ಅಲ್ಲಿ ಕುಳಿತು ಆ ಮೆಶೀನುಗಳೆಲ್ಲ ಕೆಲಸ ಮಾಡುವುದು ನೋಡುವುದೆಂದರೆ ಖುಷಿಯೋ ಖುಷಿ. ಗ್ರೀನ್ ಬಟನ್ನು ಒತ್ತಿ ಮೆಶೀನ್ ಚಾಲೂ ಮಾಡಬೇಕೆಂದರೆ ತಾತ ಅಲ್ಲಿಂದ ಕೂಗಿ ಹೇಳುತ್ತಿದ್ದರು "ಹೂಂ, ಆನ್ ಮಾಡು" ಎಂದು. ನನಗೆ ಆ ಹಸಿರು ಬಟನ್ ಒತ್ತಿ ಮೆಶೀನು ಚಾಲೂ ಮಾಡುವುದೆಂದರೆ ಎಲ್ಲಿಲ್ಲದ ಸಡಗರ. "ಆಫ್ ಮಾಡು" ಎಂದ ಮೊದಲ ಸಾರಿ ಆಫ್ ಮಾಡುತ್ತಲೇ ಇರಲಿಲ್ಲ!

*****

ತಾತ ಯಾವಾಗಲೂ ಕೆಲಸ ಮಾಡುತ್ತಿದ್ದರು! ಊಟ ಮುಗಿಸಿ ಮೆಟ್ಟಲ ಕೆಳಗಿದ್ದ ಕಪಾಟಿನಿಂದ ವೆಲ್ಡಿಂಗ್ ರಾಡು ತೆಗೆದುಕೊಂಡು ನಡೆದರೆಂದರೆ ಮತ್ತೆ ಸಂಜೆ ಕತ್ತಲಾಗುವವರೆಗೂ ವರ್ಕ್ಶಾಪಿನಲ್ಲೇ ಕೆಲಸ. ನನಗೆ ಮಾತ್ರ ಬೇಸಿಗೆ ರಜೆಯಲ್ಲಿ ಏನೂ ಕೆಲಸವಿರುತ್ತಿರಲಿಲ್ಲ. ತಾತನ ಮನೆಯಲ್ಲಿ ಇದ್ದ ಕನ್ನಡ ಪುಸ್ತಕಗಳನ್ನು ಕೈಗೆತ್ತಿಕೊಂಡು ಓದುವ ಪ್ರಯತ್ನ ಮಾಡುತ್ತಿದ್ದೆ. ಅವರು ತರಿಸಿ ಓದಿ ಜೋಪಾನವಾಗಿ ಜೋಡಿಸಿಟ್ಟ ಸುಧಾ, ತರಂಗ, ಮಯೂರ ಹಾಗು ಇಲ್ಲಸ್ಟ್ರೇಟೆಡ್ ವೀಕ್ಲಿ ಓದಲು ಖುಷಿಯೋ ಖುಷಿ!
ಆದರೆ ಪುಸ್ತಕ ಓದುತ್ತ ನಡುನಡುವೆ ತಾತ ಏನು ಮಾಡುತ್ತಿದ್ದಾರೆ ಎಂದು ವರ್ಕ್ಶಾಪಿನ ಬಾಗಿಲ ಬಳಿ ಹೋಗಿ ಬಾಗಿಲಿಗೆ ಹಾಕಿಸಿದ್ದ ತೂತುಗಳಲ್ಲಿ ಇಣುಕಿ ನೋಡುವುದು! ಈಗ ಲೇಥ್ ಆನ್ ಮಾಡಿದ್ದಾರೆ, ಅಗೋ ವೆಲ್ಡಿಂಗ್ ಮಾಡ್ತಾ ಇದ್ದಾರೆ ಎಂದೆಲ್ಲ ಅಣ್ಣನಿಗೆ ಬಂದು ವರದಿ ಒಪ್ಪಿಸುವುದು.

ವೆಲ್ಡಿಂಗ್ ಮಾಡುತ್ತಿರುವಾಗ ವರ್ಕ್ಶಾಪ್ ಬಳಿ ಹೋದರೆ ತಾತ ವಾಪಸ್ ಕಳುಹಿಸುತ್ತಿದ್ದರು. ವೆಲ್ಡಿಂಗ್ ಮಾಡುವುದ ಬರಿಗಣ್ಣಿನಿಂದ ನೋಡಬಾರದು ಎಂದು ಹೇಳುತ್ತಿದ್ದರು.

*****

ಆ ದಿನ ಅಮ್ಮನಿಗೆ ಟೆಲಿಗ್ರಾಮ್! ಅಮ್ಮನಿಗೆ ಯಾರೂ ಟೆಲಿಗ್ರಾಮ್ ಕಳುಹಿಸೋದಿಲ್ಲ. ಇವತ್ಯಾರು ಕಳಿಸಿದ್ದು? ಅಮ್ಮ ಅದ್ಯಾಕೋ ಜಗತ್ತೇ ಬಿದ್ದು ಹೋದಂತೆ ಸಪ್ಪೆಯಾಗಿದ್ದರು. ಗೀತಳಿಗೆ ಆಘಾತವಾದೀತು ಅಂತ "ಅಣ್ಣನಿಗೆ ಹುಷಾರಿಲ್ಲ, ಕೂಡಲೆ ಹಿರಿಯೂರಿಗೆ ಬಾ" ಅಂತ ಮಾತ್ರ ಟೆಲಿಗ್ರಾಮ್ ಮಾಡಿದ್ದರು ಮಾಮ.

ಎಂದಿನಂತೆ ಕೆಲಸ ಮಾಡುತ್ತಿರುವವರು ಸ್ವಲ್ಪ ಮುಂಚೆಯೇ ಒಳ ಬಂದು ಏನೋ ಕಸಿವಿಸಿಯಾಗುತ್ತಿದೆ ಎಂದರಂತೆ. "ಅಣ್ಣ, ನಡೀರಿ ಡಾಕ್ಟರರ ಹತ್ತಿರ ಹೋಗೋಣ" ಎಂದ ಅತ್ತೆ ಆಟೋ ಕರೆದು ಜೊತೆಗೆ ಹೋಗುತ್ತಿರುವಾಗ ತಾತ ಕುಳಿತಲ್ಲೇ ಕೊನೆಯುಸಿರೆಳೆದಿದ್ದರಂತೆ.

******

ಮತ್ತೊಂದು ದಿನ, ಆ ದಿನ ಹಿರಿಯೂರಿನಲ್ಲಿ ವಿಪರೀತ ಶೆಖೆ. ವರ್ಕ್ಶಾಪು ಖಾಲಿ ಖಾಲಿ. ಕೆಲವು ಮೆಶೀನುಗಳು ಗೋಡೆಗೆ ಒರಗಿಸಿಟ್ಟಂತೆ ಇದ್ದವು. ಆ ದಿನ ವರ್ಕ್ಶಾಪು ದೊಡ್ಡದಾದ ಕೋಣೆಯಂತೆ ಕಾಣುತ್ತಿತ್ತು. ಸಾಕಷ್ಟು ಜಾಗ ಇತ್ತು ಇಷ್ಟು ದಿನ ಯಾಕೆ ಗೊತ್ತಾಗಲಿಲ್ಲ? ನೆಲದ ಮೇಲೆ ಏನಿದೆ ಎಂದು ನೋಡಬೇಕಿಲ್ಲ ಈಗ, ಸರಾಗವಾಗಿ ಹೆಜ್ಜೆಯಿಡಬಹುದು. ಮೆಶೀನುಗಳು ಚಲಿಸುತ್ತಿಲ್ಲ. ನಿಶ್ಯಬ್ಧ. ಸ್ವಿಚ್ ಬೋರ್ಡಿನ ಮೇಲೆ ಹೊದಿಸಿದ್ದ ಬಟ್ಟೆ ತೆಗೆದು ಧೂಳು ಕೊಡವುವಾಗ ಹಸಿರು ಬಟನ್ ಒತ್ತುವ ಮನಸ್ಸಾಯಿತು. ಆದರೆ ಯಾವ ಮೆಶೀನ್ ಕೂಡ ಚಾಲೂ ಆಗಲಿಲ್ಲ.
ಎಲೆಗೆ ಉಪ್ಪಿಟ್ಟು ಹಾಕಿ ಕೈಗಿಟ್ಟರೂ ಅಮ್ಮನಿಗೆ ಒಂದು ತುತ್ತೂ ಗಂಟಲಿಗೆ ಹೋಗಿರಲಿಲ್ಲ. ಅತ್ತ ಮಾಮ ಅದೇನೋ ಎಲ್ಲರೂ ತಂದ ಟವಲ್ಲು ತೆಗೆದಿಟ್ಟುಕೊಳ್ಳುತ್ತಿದ್ದರು.

Rating
No votes yet

Comments