ಬಿ.ಜೆ.ಪಿಯವರ ಡಬಲ್ ಸ್ಟಾಂಡರ್ಡ್ಸ್

ಬಿ.ಜೆ.ಪಿಯವರ ಡಬಲ್ ಸ್ಟಾಂಡರ್ಡ್ಸ್

ಇವತ್ತು ಸಂಜೆ ಮನೆಗೆ ಚೂರು ಬೇಗ ಬಂದೆ. ಕಾಫಿ ಕುಡಿತಾ ಟಿ.ವಿ ಹಾಕಿದೆ. ನ್ಯೂಸ್ ಅಲ್ಲಿ ವೆಂಕಯ್ಯ ನಾಯ್ಡು ಬೆಂಗಳೂರಿನಲ್ಲಿರೋ ನಾಯ್ಡುಗಳನ್ನೆಲ್ಲ ಒಟ್ಟು ಹಾಕಿ ತೆಲುಗಲ್ಲಿ ಭಾಷಣ ಮಾಡ್ತಾ ಇದ್ದಿದ್ದನ್ನ ನೋಡಿ ಕರವೇ ಕಾರ್ಯಕರ್ತರು ಪ್ರತಿಭಟಿಸಿದರು. ಹಾಗೆ ಪ್ರತಿಭಟಿಸಿದ ಕಾರ್ಯಕರ್ತರನ್ನು ಅಲ್ಲಿದ್ದ ನಾಯ್ಡು ರೌಡಿಗಳು( ಅವರ ಕೊರಳಲ್ಲಿದ್ದ ಚಿನ್ನ ನೋಡಿದ್ರೆ ಎಲ್ಲ ರಿಯಲ್ ಎಸ್ಟೇಟ್ ಉದ್ಯಮಿಗಳು ಅನ್ನಿಸ್ತಾ ಇತ್ತು), ಪೋಲಿಸರು ಸೇರಿಕೊಂಡು ಹೀನಾಯಮಾನವಾಗಿ ಹೋಡಿತಾ ಇದ್ರು. ನೋಡಿ ಒಂದು ಕ್ಷಣ ಅವಕ್ಕಾದೆ. ಅಲ್ಲಾ, ಈ ವೆಂಕಯ್ಯ ನಾಯ್ಡು ಅದೆಲ್ಲಿಂದಲೋ ನಮ್ಮೂರಿಗೆ ಬರೋದೇನು, ಇಲ್ಲಿ ದಶಕಗಳಿಂದ ನೆಲೆಸಿ ಕನ್ನಡಿಗರೇ ಆಗಿರುವ ತೆಲುಗರನ್ನೆಲ್ಲ ಒಂದು ಗೂಡಿಸಿ, ಅವರೊಂದಿಗೆ ತೆಲುಗಲ್ಲಿ ಭಾಷಣ ಮಾಡುವುದೇನು, ಇದನ್ನ ನ್ಯಾಯಯುತವಾಗೇ ಪ್ರಶ್ನಿಸಿದ ಕರವೇ ಕಾರ್ಯಕರ್ತರನ್ನು ಹೋಡಿತಾ ಇದ್ದಿದ್ದನ್ನು ನೋಡಿದ್ರೆ ಕರವೇ ಕಾರ್ಯಕರ್ತರು ವಿಶಾಖಪಟ್ಟಣ ದಲ್ಲೋ, ಇಲ್ಲ ಹೈದರಾಬಾದನಲ್ಲೋ ಕನ್ನಡ ಮಾತನಾಡಿ ಅಂತ ಕೇಳಿದ್ರೆನೋ ಅಂದುಕೊಳ್ಳಬೇಕು. ಇದೆಲ್ಲ ನೋಡಿದ್ರೆ ಇನ್ನೂ ಕೆಲವೇ ಕಾಲದಲ್ಲಿ ಕನ್ನಡಿಗರ ನಾಡಲ್ಲಿ ಕನ್ನಡಿಗರನ್ನ ತೆಲುಗರು, ತಮಿಳರು, ಮರಾಠಿಗಳೇ ಆಳುವರೆನೋ ಅಂತಾ ಅನ್ನಿಸುತ್ತಾ ಇತ್ತು.

ಕನ್ನಡಿಗರೆಲ್ಲರ ಸ್ವಾಭಿಮಾನದ ಸಂಕೇತವಾದ ಕೆಂಪು ಹಳದಿ ಬಾವುಟ ಕೊಟ್ಟ ಮ.ರಾಮಮೂರ್ತಿಯವರ ಮನೆ ಭಾಷೆ ತೆಲುಗು, ಕನ್ನಡಿಗರ ಮುಖದಲ್ಲಿ ಮಂದಹಾಸ ಅರಳಿಸಿದ ಬೀಚಿ ಮನೆ ಮಾತು ತೆಲುಗು. ಆದರೆ ಅವರು ಕನ್ನಡಕ್ಕಾಗಿ ಧ್ವನಿ ಎತ್ತಿ, ಕನ್ನಡದ ಸೇವೆ ಗೈದ ಮಹನೀಯರು. ನೂರಾರು ಕಾಲದಿಂದ ಕರ್ನಾಟಕದಲ್ಲಿ ನೆಲೆಸಿ ಕನ್ನಡಿಗರೇ ಆಗಿರುವ ತೆಲುಗರನ್ನು, ಸೇಪರೇಟ್ ಆಗಿ ಕರೆದು, ನೀನು ತೆಲುಗು ಭಾಷಿಕ, ನೀನು ಇಲ್ಲಿಯವನಲ್ಲ, ನಿನ್ನೂರು ಅಲ್ಲಿದೆ ಎಂದು ಅವರ ಮನಸ್ಸಲ್ಲಿ ಪ್ರತ್ಯೇಕತೆಯ ಭಾವನೆ ಬಿತ್ತುವ, ಆ ಮೂಲಕ ಕನ್ನಡಿಗರ ಒಗ್ಗಟ್ಟು ಮುರಿಯಲು ಯತ್ನಿಸುವ ಇಂತಹ ಮನೆಮುರುಕ ನಾಯಕರನ್ನು ತಲೆ ಮೇಲೆ ಕೂರಿಸಿ ಮೆರೆಸುವ ನಮ್ಮ ರಾಜ್ಯದ ಬಿ.ಜೆ.ಪಿ ನಾಯಕರನ್ನು ಎಷ್ಟು ಹೊಗಳಿದರೂ ಸಾಲದು. ಈ ವೆಂಕಯ್ಯ ನಾಯ್ಡು ಕರ್ನಾಟಕದಿಂದ ರಾಜ್ಯಸಭೆಗೆ ಎರಡೆರಡು ಬಾರಿ ಆಯ್ಕೆಯಾಗಿದ್ದರೂ ಒಂದೇ ಒಂದು ಸಾರಿ ಕನ್ನಡ-ಕರ್ನಾಟಕದ ವಿಷಯಕ್ಕಾಗಿ ಧ್ವನಿ ಎತ್ತಿದ್ದು ನೀವು ಯಾರಾದರೂ ಕಂಡಿದ್ದಿರಾ? ಆದ್ರೆ ಇವರನ್ನು ತಲೆ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡೋದ್ರಲ್ಲಿ ನಮ್ಮ ರಾಜ್ಯದ ನಾಯಕರದು ಎತ್ತಿದ ಕೈ.

ಅಲ್ಪಸಂಖ್ಯಾತರನ್ನು ಮುದ್ದು ಮಾಡೋದು ಕಾಂಗ್ರೆಸ್, ಜೆಡಿ(ಎಸ್) ನಂತಹ ನಕಲಿ ಪಕ್ಷಗಳ ಕೆಲಸ, ತನಗೆ ಎಲ್ಲರೂ ಸಮಾನ ಅಂತ ಮಾತಿಗೊಮ್ಮೆ ಬಿಕ್ಕಳಿಸೋ ಬಿ.ಜೆ.ಪಿಗೆ ,, ಭಾಷಾ ಅಲ್ಪ ಸಂಖ್ಯಾತರ ವಿಷಯದಲ್ಲಿ ಯಾಕೆ ಈ ಇಬ್ಬಗೆಯ ನೀತಿ ? ಕನ್ನಡಿಗರ ಹಿತ ಕಾಯುವುದೇ ನನ್ನ ಸರ್ಕಾರದ ಕೆಲಸ ಅಂದ ಯಡಿಯೂರಪ್ಪನವರೇ, ಇದೇ ಏನು ಕನ್ನಡಿಗರನ್ನು ಕಾಯುವ ರೀತಿ?

ಅತ್ತ ಬೆಳಗಾವಿಯಲ್ಲಿ ಮರಾಠರ ಬಾವುಟ ಹಾರಿಸುವ ಅಂಗಡಿ, ಇತ್ತ ಶಿವಮೊಗ್ಗದಲ್ಲಿ ತಮಿಳರ ಸಮಾವೇಶ ನಡೆಸಿ, ಅವರಿಗೆ ಎಲ್ಲ ಸವಲತ್ತು ಕಲ್ಪಿಸಿ ಕೊಡುವೆ, ಕನ್ನಡಿಗರಿಂದ ರಕ್ಷಣೆ (??) ಕೊಡಿಸುವೆ ಎನ್ನುವ ಈಶ್ವರಪ್ಪ, ಇನ್ನೊಂದೆಡೆ ಕನ್ನಡದಲ್ಲಿ ತಮಿಳು ಭಾಷಣ ಬರೆದು ಚಿಂತಾಮಣಿಯಲ್ಲಿ ಓದಿದ ಯಡಿಯೂರಪ್ಪನವರು. ಇದನ್ನೆಲ್ಲ ನೋಡ್ತಾ ಇದ್ರೆ, ಬಿ.ಜೆ.ಪಿಯವರು ಮಾಡ್ತಾ ಇರುವ ಭಾಷಾ ಅಲ್ಪಸಂಖ್ಯಾತರ ತುಷ್ಟಿಕರಣ, ಹಾಗೂ ಅವರಿಗೆ ಕನ್ನಡ-ಕರ್ನಾಟಕದ ಬಗ್ಗೆ ನಿಜಕ್ಕೂ ಇರುವ ಕಳಕಳಿ ಎಷ್ಟು ನಿಜ ಅನ್ನುವ ಪ್ರಶ್ನೆ ನಿಮ್ಮ ಮನಸ್ಸಿಗೂ ಬಂದಿಲ್ಲವೇ ಗೆಳೆಯರೇ? ಮಾತಿನ ತೀಟೆಗೆ ಈ ವರ್ಷ ಕನ್ನಡ ಅನುಷ್ಟಾನ ವರ್ಷ ಅಂತ ಬುರುಡೆ ಬಿಟ್ಟ ನಮ್ಮ ಸರಕಾರದವರು ಅದ್ಭುತವಾದ ರೀತಿಯಲ್ಲೇ ಕನ್ನಡ ಅನುಷ್ಟಾನ ಮಾಡುತ್ತಿದ್ದಾರೆ ಏನಂತೀರಾ ಗೆಳೆಯರೇ?

Rating
No votes yet

Comments