ಕಡ್ಲಿಮಟ್ಟಿಯ ಕಾಶೀಬಾಯಿ!!!

ಕಡ್ಲಿಮಟ್ಟಿಯ ಕಾಶೀಬಾಯಿ!!!

ಕಡ್ಲಿಮಟ್ಟಿಯ ಕಾಶೀಬಾಯಿ!!!

"ಕಡ್ಲಿಮಟ್ಟಿಯ ಕಾಶೀಬಾಯಿಯ ಶೀಲಕ ತಂದಿತ್ತ..."
ಇದು ಉ.ಕರ್ನಾಟಕದಲ್ಲಿ ಮನೆಮನೆಗೂ ಗೊತ್ತಿರುವ ಸೊಗಸಾದ ಜಾನಪದ ಹಾಡು. ಇದನ್ನ ನಾನು ಚಿಕ್ಕವನಾಗಿದ್ದಾಗ ಹಾಡತಾ ಇದ್ದೆ. ಆದರೆ ಅದರ ಅರ್ಥ ಮಾತ್ರ ಗೊತ್ತಿರಲಿಲ್ಲ. ಈಗ ನನಗೆ ಇದು ಸಂಪೂರ್ಣವಾಗಿ ಮರೆತು ಹೋಗಿದೆ. ಆದರೆ ಈ ಒಂದು ಸಾಲು ಮಾತ್ರ ನೆನಪಿದೆ. ಇದನ್ನು ನಾನು ಹಾಗೆ ಗುನುಗುತ್ತಿರುವಾಗ ನನ್ನ ಅಮ್ಮ ಈ ಹಾಡಿನ ಹಿಂದಿರುವ ಕಥೆಯನ್ನು ಹೇಳಿದರು. ನೂರೈವತ್ತು ವರ್ಷಗಳ ಹಿಂದೆ ನಡೆದಿದೆ ಅನ್ನಬಹುದಾದ ಒಂದು ಕಥೆ ಅದು. ಅದು ಈಗ ಜಾನಪದ ಗೀತೆಯಾಗಿ ಉತ್ತರಕರ್ನಾಟಕದಲ್ಲಿ ಪ್ರಚಲಿತದಲ್ಲಿದೆ.

ಆ ಕಥೆ ಇಂತಿದೆ....

ಬಾಗಲಕೋಟೆಯಿಂದ ಬಿಜಾಪುರಕ್ಕೆ ರೈಲು ಮಾರ್ಗವಾಗಿ ಹೋಗುವಾಗ ಕಡ್ಲಿಮಟ್ಟಿಯನ್ನೊ ಒಂದು ಸ್ಟೇಷನ್ ಬರುತ್ತೆ. ಕಡ್ಲಿಮಟ್ಟಿಯಲ್ಲಿ ಕಾಶೀಬಾಯಿ ಅನ್ನೊ ಒಬ್ಬ ಸಾಮಾನ್ಯ ಕೂಲಿ ಹೆಣ್ಣುಮಗಳೊಬ್ಬಳ ಕಥೆ ಇದು. ಅವಳಿಗೆ ಒಂದು ಚಿಕ್ಕ ಹಸುಳೆಯು ಇತ್ತು. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಬೇರೆ. ಗಂಡನ ಕೂಲಿ ಸಾಕಾಗುವುದಿಲ್ಲ ಎಂದು ತಾನೂ ಕೂಡ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಳು.

ಒಂದು ದಿನ ಹಾಗೆಯೇ ಕೂಲಿ ಮಾಡಿ, ಮನೆಗೆ ಹಿಂತಿರುಗಬೇಕೆನ್ನುವಷ್ಟರಲ್ಲೇ ಅದಾಗಲೇ ಕತ್ತಲು ಆವರಿಸಿತ್ತು. ಜನರೆಲ್ಲರೂ ತಮ್ಮತಮ್ಮ ಮನೆಗಳಿಗೆ ತೆರಳಿದ್ದರು. ತಾನು ತನ್ನ ಹಸುಳೆಯೊಂದಿಗೆ ಮನೆಕಡೆಗೆ ಹೆಜ್ಜೆ ಹಾಕಿದಳು ಕಾಶೀಬಾಯಿ ದಾರಿಯಲ್ಲಿ ಊರ ಹೊರಗಿನ ರೈಲ್ವೆ ಸ್ಟೇಷನ್ ಹತ್ತಿರ ಬಂತು. ಅದು ಇನ್ನೂ ಊರ ಹೊರಗಡೆ ಇದ್ದುದರಿಂದ ನಿರ್ಜನ ಪ್ರದೇಶವಾಗಿತ್ತು.

ರೈಲ್ವೆ ಸ್ಟೇಷನ್ನಲ್ಲಿ ಇರೋ ಸ್ಟೇಷನ್ ಮಾಸ್ಟರ್, ನಡುವಯಸ್ಸಿನ ಕಾಶೀಬಾಯಿ ಒಬ್ಬಳೆ ಮಗುವಿನ ಜೊತೆಗೆ ಬರುವುದನ್ನ ನೋಡ್ತಾನೆ.
ನಿರ್ಜನ ಪ್ರದೇಶದಲ್ಲಿ ಅವಳನ್ನು ಬಲಾತ್ಕಾರ ಮಾಡೋ ಕೆಟ್ಟ ಬುದ್ಧಿ ಅವನಿಗೆ ಬರುತ್ತೆ. ಹತ್ತಿರದ ದಾರಿ ಎಂದು ಯಾವಾಗಲು ಅವಳು ಸ್ಟೇಷನ್ ಮೂಲಕವೇ ಹಾದು ಹೋಗುವದು ವಾಡಿಕೆ. ಅಂದು ಕೂಡ ಹಾಗೆಯೇ ಸ್ಟೇಷನ್ ಮೂಲಕ ಹಾಯ್ತಾಳೆ. ಅವಳು ಸ್ಟೇಷನ್ನಲ್ಲಿ ಬರುವುದನ್ನೆ ಕಾಯ್ತಾ ಇದ್ದ ಸ್ಟೇಷನ್ ಮಾಸ್ಟರ್, ಒಮ್ಮೆಲೆ ಅವಳನ್ನು ಹೋಗಿಗಟ್ಟಿಯಾಗಿ ಹಿಡಿದುಕೊಂಡು ಬಿಡುತ್ತಾನೆ. ಇದನ್ನು ನೆನೆಸಿರದ ಕಾಶೀಬಾಯಿ ಆವಕ್ಕಾಗುತ್ತಾಳೆ. ತಾನು ಮಾಡ್ತಾ ಇರೋದು ಸರಿಯಲ್ಲ ಬಿಡು ಎಂದು ಪರಿಪರಿಯಲ್ಲಿ ಬೇಡಿಕೊಳ್ತಾಳೆ, ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾಳೆ. ಆದರೆ ಸ್ಟೇಷನ್ ಮಾಸ್ಟರ್ ಮಾತ್ರ ಅದಕೇನೂ ಒಗ್ಗದೆ, ಅವಳನ್ನು ದರದರನೇ ಅಲ್ಲೇ ಇರುವ ಹಳಿ ನಿಯಂತ್ರ ಣ ಕೊಠಡಿಗೆ (control room) ಒಯ್ತಾನೆ. ಕಾಶೀಬಾಯಿಗೆ ಕಂಕುಳಲಲ್ಲಿರೋ ಮಗು ಬೇರೆ. ಜೋರಾಗಿ ಕೂಗಾಡ್ತಾಳೆ, ಯಾರಾದರೂ ಬಂದು ಸಹಾಯ ಮಾಡ್ತಾರೆ ಅಂತ ಕೂಗ್ತಾಳೆ. ಆದರೆ ಬಡ ಕಾಶೀಬಾಯಿಯ ಕೂಗು ದೂರದಲ್ಲಿರೋ ಯಾರಿಗೂ ಕೇಳಿಸೋದೇ ಇಲ್ಲ. ತನ್ನ ಶೀಲಕ್ಕೆ ಬಂದೊದಗಿದ ಪರಿಸ್ಥಿತಿಯಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ ಳೋಕೆ ಪ್ರಯತ್ನ ಮಾಡ್ತಾಳೆ. ಒಂದುಸಲ ತನ್ನೆಲ್ಲಾ ಶಕ್ತಿಯಾನ ಕಲೆಹಾಕಿ ಜೋರಾಗಿ ಅವನನ್ನ ಒದ್ದು, ಓಡಿ ಹೋಗಿ ಹೊರಗಡೆಯಿಂದ ಬಾಗಿಲು ಹಾಕಿಬಿಡ್ತಾಳೆ. ಆದರೆ ಮಗು ಮಾತ್ರ ಒಳಗಡೆಯೇ ಉಳಿದು ಬಿಡುತ್ತೆ. ಆಗ ಸ್ಟೇಷನ್ ಮಾಸ್ಟರ್ ಕಿಟಕಿಯಿಂದ ಕೇಳ್ತಾನೆ. ಬಾಗಿಲು ತೆಗೆದು ತನಗೆ ಸಹಕರಿಸದಿದ್ದರೆ ಮಗುವನ್ನು ಕೊಂದು ಬಿಡುವುದಾಗಿ ಬೆದರಿಸುತ್ತಾನೆ. ಆದರೆ ಗರತಿ ಕಾಶೀಬಾಯಿ, ತನ್ನ ಶೀಲ ತನ್ನ ಗಂಡನಿಗೆ ಮಾತ್ರ ಮೀಸಲು, ಅದಿದ್ರೆ ಅಂತಹ ಸಾವಿರ ಮುದ್ದು ಮಕ್ಕಳನ್ನು ಪಡೆತೇನೆ ಹೋಗಲೊ, ಆದರೆ ನಿನಗೆ ಮಾತ್ರ ನಾನು ಶರಣಾಗುವುದಿಲ್ಲ ಎಂದು ತನ್ನ ಅಸಹಾಯಕ್ಕಾಗಿ ಬಿಕ್ಕಿಬಿಕ್ಕಿ ಅಳತ್ತಾಳೆ.

ಹೀಗಾದರೆ ಅವಳು ಬಾಗಿಲು ತೆಗೆದು ತನಗೊಲಿಯುವುದಿಲ್ಲವೆಂದು ತಿಳಿದ ಸ್ಟೇಷನ್ ಮಾಸ್ಟರ್ ಆ ಮಗುವಿನ ಒಂದೊಂದೇ ಅಂಗವನ್ನು ಕತ್ತರಿಸಿ, ಕಿಟಕಿ ಮೂಲಕ ಹೊರಗೆ ಬಿಸಾಕುತ್ತಾನೆ... ತನ್ನ ಮಗು ತನ್ನ ಕಣ್ಣಮುಂದೆಯೇ ಸಾಯ್ತಾ ಇರೊದನ್ನು ನೋಡಿ ತನ್ನ ಅಸಹಾಯಕ್ಕಾಗಿ ಮರುಗುತಾಳೆ, ಕೊರಗುತ್ತಾಳೆ, ಆದರೂ ಶೀಲಗಿತ್ತಿ ಕಾಶೀಬಾಯಿ ಅವನಿಗೆ ಬಾಗದೇ ತನ್ನ ಶೀಲವನ್ನು ಕಾಪಾಡಿಕೊಳ್ತಾಳೆ. ಮರುದಿನ ಬೆಳಿಗ್ಗೆ ನೆರೆದ ಜನ ಈ ದೃಶ್ಯವನ್ನು ನೋಡಿ ಕಾಶೀಬಾಯಿಯನ್ನ ಕೊಂಡಾಡ್ತಾರೆ, ಅವಳ ಶೀಲತನಕ್ಕೆ ಬೆರಗಾಗಿ ಅಳ್ತಾರೆ. ಅವಳ ಬಗ್ಗೆ, ಅವಳ ಶೀಲತನ ಎಲ್ಲರಿಗೂ ತಿಳಿಯಲೆಂದು ಅವಳ ಮೇಲೆ ಗೀತೆ ಕಟ್ಟಿ ಊರೂರೆಲ್ಲಾ ಹಾಡ್ತಾರೆ.
ಆನಂತರ ಬಹುಷಃ ಜನ ಸ್ಟೇಷನ್ ಮಾಸ್ಟರನಿಗೆ ಛೀಮಾರಿ ಹಾಕಿ, ಅವನ ತಲೆಬೋಳಿಸಿ ಊರೆಲ್ಲಾ ಕತ್ತೆ ಮೇಲೆ ಮೆರವಣಿಗೆ ಮಾಡಿ, ಊರ ನಡುವೆಯೇ ಗಲ್ಲಿಗೇರಿಸಿದರು ಅಂತ ಕಾಣುತ್ತೆ.

ಸನಾತನ ಭರತ ಸಂಸ್ಕೃತಿಯ ಪ್ರತೀಕ ನಮ್ಮ ಈ ಕಾಶೀಬಾಯಿ ಅಲ್ಲವೇ..

ಇದು ಸರಿಸುಮಾರು ನೂರು ವರ್ಷಗಳ ಹಿಂದೆ ನಡೆದಿದೆ ಅಂತ ಹೇಳ್ತಾರೆ... ಆದರೆ ಸರಿಯಾಗಿ ಗೊತ್ತಿಲ್ಲ...

ಈ ಹಾಡು ನನ್ನ ತಾಯಿಯವರಿಗೂ ನೆನಪಿಲ್ಲ.. ಯಾರಾದರೂ ಗೊತ್ತಿದ್ದರೆ.. ದಯವಿಟ್ಟು ತಿಳಿಸಿ...

"ಯತ್ರ ನಾರ್ಯಂತು ಪೂಜ್ಯಂತೆ ರಮಂತೆ ತತ್ರ ದೇವತಃ"

- ವಿನಾಯಕ

Rating
No votes yet

Comments