ಜಾಗತೀಕರಣ ಮತ್ತು ಅದರ ತೊಂದರೆಗಳು, ಪಾಶ್ಚಿಮಾತ್ಯರು ಕಂಡ ಹಾಗೆ ಮತ್ತು ನನ್ನ ಅನಿಸಿಕೆ

ಜಾಗತೀಕರಣ ಮತ್ತು ಅದರ ತೊಂದರೆಗಳು, ಪಾಶ್ಚಿಮಾತ್ಯರು ಕಂಡ ಹಾಗೆ ಮತ್ತು ನನ್ನ ಅನಿಸಿಕೆ

Globalization and it's discontents
ಲೇಖಕ: ಜೋಸೆಫ್ ಸ್ಟಿಗ್ಲಿಟ್ಸ್
ಮೊದಲಿಗೇ ಹೇಳಿಬಿಡ್ತೀನಿ, ನನ್ನ ಅನಿಸಿಕೆಗಳಿಗೂ ಈ ಪುಸ್ತಕದಲ್ಲಿನ ವಿಚಾರಗಳಿಗೂ ಸಾಮ್ಯತೆ ಇದೆ ಅಂತ ನನಗೆ ಮೊದಲೇ ಗೊತ್ತಿತ್ತು.. ಆದರೆ, ಓದುತ್ತಾ ಹೋದಾಗ ಲೇಖಕನ ಅನಿಸಿಕೆಗಳಿಗೂ ನನ್ನವುಗಳಿಗೂ ವ್ಯತ್ಯಾಸ ತಲೆದೂರಿದ್ದಕ್ಕೆ ಈ ಪುಸ್ತಕ ನನಗೆ ಅಷ್ಟಾಗಿ ಹಿಡಿಸದೇ ಹೋಗಿರಬಹುದು.

ಈ ಪುಸ್ತಕವನ್ನು ನಮ್ಮ ವಿಶ್ವವಿದ್ಯಾಲಯದಲ್ಲಿನ ಒಬ್ಬ ಇಂಗ್ಲೀಷ್ ಅಧ್ಯಾಪಕರು ಓದಲಿಕ್ಕೆ ಹೇಳಿದ್ದರು. ಆದ್ದರಿಂದ ಮೊದಮೊದಲು ಹುರುಪಿನಿಂದಲೇ ಓದಿದೆ. ಆದರೆ ಮಧ್ಯದಲ್ಲಿ ಇನ್ನೂ ಹಲವು ಪುಟಗಳು ಬಾಕಿ ಇರಬೇಕಾದರೇ ಇನ್ನು ಇದನ್ನು ಮುಗಿಸಲು ಅಸಾಧ್ಯ ಎನಿಸಿತು. ಬಿಟ್ಟು ಬಿಟ್ಟೆ.

ಪುಸ್ತಕದ ವಿಷಯ, ವಿಶ್ವಬ್ಯಾಂಕ್ ಮತ್ತು IMF ಇವುಗಳ ಸಂಕುಚಿತ ಧೋರಣೆಗಳಿಂದ ಬಡ ರಾಷ್ಟ್ರಗಳಿಗೂ ಮುಂದುವರೆಯುತ್ತಿರುವ ದೇಶಗಳಿಗೂ ಆಗುತ್ತಿರುವ ಬಾಧೆಗಳು. ಸ್ಟಿಗ್ಲಿಟ್ಸರು ಹಲವು ರಾಷ್ಟ್ರಗಳ ಉದಾಹರಣೆಯನ್ನಿತ್ತು ಈ ಅಂತರ್ರಾಷ್ಟ್ರೀಯ ಸಂಘಟನೆಗಳ ತಪ್ಪು ನಿಲುವುಗಳಿಂದ, ಒತ್ತಡಗಳಿಂದ ಹೇಗೆ ಮೊದಲೇ ಕಷ್ಟದಲ್ಲಿದ್ದ ಈ ದೇಶಗಳ ತೊಂದರೆಗಳು ಮತ್ತೂ ಹೆಚ್ಚಾಗಿವೆ ಎಂಬುದನ್ನು ವಿವರಿಸಿದ್ದಾರೆ. ಇಥಿಯೋಪಿಯಾ, ಬೋಟ್ಸ್ವಾನ, ಲ್ಯಾಟಿನ್ (ದಕ್ಷಿಣ ಅಮೇರಿಕ), ಮತ್ತು ಪೂರ್ವ ಏಶಿಯಾ ದೇಶಗಳಲ್ಲಿ ತಲೆದೋರಿದ ತೊಂದರೆಗಳನ್ನು, neo-classical economicsನಲ್ಲಿ ಮುಳುಗಿದ ಈ ಸಂಸ್ಥೆಗಳು ತಮ್ಮ 'ಸಲಹೆ'ಗಳನ್ನು ಒತ್ತಾಯವಾಗಿ ಅವುಗಳ ಮೇಲೆ ಹೇರಿದ್ದು ಇವುಗಳ ವಿವರ ಚಿತ್ರಣ ನೀಡುತ್ತಾರೆ.

ಸ್ಟಿಗ್ಲಿಟ್ಸ್ ಅವರ ಪ್ರಕಾರ, ಜಾಗತೀಕರಣ ಕೆಟ್ಟದ್ದಲ್ಲ. ಅದನ್ನು ಅನುಷ್ಠಾನಕ್ಕೆ ತಂದ ರೀತಿ, ಬಡದೇಶಗಳ ಬೆಳವಣಿಗೆಗೆ ವ್ಯತಿರಿಕ್ತವಾದದ್ದು. ಇದಕ್ಕೆ ಕಾರಣ, ಈ ಸಂಸ್ಥೆಗಳ ಮೇಲಿರುವ ದೊಡ್ಡ ದೊಡ್ಡ ಕಾರ್ಪೊರೇಷನ್ ಗಳ ಸ್ವಲ್ಪ ಹೆಚ್ಚೇ ಎನಿಸುವು ವ್ಯಾಪ್ತಿ, ಸಂಸ್ಥೆಗಳ ಅಧಿಕಾರಿಗಳಲ್ಲಿರುವ ನಾನೇ ಸರಿ (ಅಥವ, ನಮ್ಮ ಅರ್ಥಶಾಸ್ತ್ರ ನೀತಿಗಳೇ ಸರಿ) ಎನ್ನುವ ಕೂಪಮಂಡೂಕತನ, ಅಂತರ್ರಾಷ್ಟ್ರೀಯ ರಾಜಕೀಯ ಮುಂತಾದವುಗಳು. ಜಾಗತೀಕರಣ ಕೆಲವರಿಗೆ ನೋವುಂಟು ಮಾಡುತ್ತದೆ. ಆದರೆ, ಈ ಸಂಸ್ಥಗಳು ಆ ನೋವನ್ನು ಹೆಚ್ಚಿಸಿವೆ. ಇವೆಲ್ಲ ಸರಿಯೇ. ಪುಸ್ತಕವನ್ನು ಓದುತ್ತಾ ಹೋದಂತೆ ಕೆಲವು ಅಂಶಗಳು ಮೊದಮೊದಲು ಕೂತೂಹಲಕಾರಿಯಾಗಿ ಕಂಡುಬಂದರೂ ಕೊನೆಕೊನೆಗೆ ಅವುಗಳ ಪ್ರಸ್ತಾಪೆ ಅತಿಯೆನಿಸಿ ಬಿಡುತ್ತದೆ.

ಸ್ಟಿಗ್ಲಿಟ್ಸ್ ವಿಶ್ವಬ್ಯಾಂಕಿನಲ್ಲೂ ಮತ್ತು ಕ್ಲಿಂಟನ್ ಆಡಳಿತದಲ್ಲಿ ಈ ವಿಷಯಗಳಿಗೆ ಸಂಬಂಧಿಸಿದ ಉನ್ನತ ಹುದ್ದೆಯಲ್ಲೂ ಸೇವೆ ಸಲ್ಲಿಸಿದ್ದಾರೆ. ಕ್ಲಿಂಟನ್ ಆಡಳಿತ ಮತ್ತು ವಿಶ್ವಬ್ಯಾಂಕಿಗೆ ಸ್ವಲ್ಪ ಹೆಚ್ಚೇ ಕನಿಕರ ತೋರಿಸುತ್ತಾರೆ ಲೇಖಕ. ಕೊನೆಕೊನೆಗೆ ಪುಸ್ತಕ IMF ವಿರುದ್ಧದ ಅಹವಾಲುಗಳ ಸಂಗ್ರಹವೇನೋ ಎನ್ನುವುದರ ಮಟ್ಟಿಗೆ ಆ ಸಂಸ್ಥೆಯ ವಿರುದ್ಧ ದೂರು ಹೇಳುತ್ತಾರೆ. ಪ್ರತೀ ಪುಟದಲ್ಲಿಯೂ ಅದೇ ವ್ಯಾಖ್ಯಾನ ನನ್ನನ್ನು ಬೋರು ಹೊಡೆಸಲು ಶುರು ಮಾಡಿತು. ಆದರೆ ಹೀಗು ಇರಬಹುದೇ ಎಂದು ಹಲವು ಬಾರಿ ಗಾಬರಿಯಾಗುತ್ತದೆ.

ಭಾರತವನ್ನೂ, ಚೀನಾವನ್ನೂ (ಹಾಗೆ ನೋಡಿದರೆ ದಕ್ಷಿಣ ಏಶಿಯವನ್ನೆಲ್ಲಾ) ಲೇಖಕ ಹೊಗಳಿದ್ದಾರೆ. ನಮ್ಮ ದೇಶ ಪ್ರಗತಿಯ ಹಾದಿಯಲ್ಲಿದೆ ಎಂದು ಇಂತಾ ದೊಡ್ಡ ಲೇಖಕರು ಭಾವಿಸಿರುವುದು ಹೆಮ್ಮೆಯ ವಿಚಾರವೇ. ಆದರೆ ಆಯಾ ದೇಶಗಳ ಕುಂದು ಕೊರತೆಗಳನ್ನು, ಅದರಲ್ಲಿಯೂ ವಿಶೇಷವಾಗಿ ಬಡ ರಾಷ್ಟ್ರಗಳ ವಿಷಯದಲ್ಲಿ ಪಾಶ್ಚಿಮಾತ್ಯ ಅರ್ಥಶಾಸ್ತ್ರಘ್ನ್ಯರ ನಿಲುವುಗಳು ಎಷ್ಟು ಸರಿ ಎಂಬ ಚಿಂತೆ ನನ್ನನ್ನು ಕಾಡುತ್ತದೆ, ಈ ಪುಸ್ತಕವನ್ನೋದಿದಾಗ. ಪುಸ್ತಕದ ವಿಷಯಕ್ಕೆ ನಮ್ಮ ದೇಶದ ವಿಚಾರ ಸಂಬಂಧಿಸಿಲ್ಲದಿದ್ದರಬಹುದು. ಆದರೆ, ದಕ್ಷಿಣ ಏಶಿಯಾವೆಲ್ಲಾ ಚೆನ್ನಾಗಿ ಮುಂದುವರೆಯುತ್ತಿದೆ, ಅಲ್ಲಿನ ಆಡಳಿತನೀತಿಗಳು ಪರವಾಗಿಲ್ಲ ಎಂಬರ್ಥದ sweeping statementಗಳು ನನ್ನನ್ನು ಗಾಬರಿಗೊಳಿಸುತ್ತವೆ. ಪ್ರಾದೇಶಿಕ ಮಟ್ಟದಲ್ಲಿ ಒಂದೇ ರಾಷ್ಟ್ರದಲ್ಲಿ ಬಹಳ ಅಂತರಗಳಿರಬಹುದು ಎಂಬ ಮಾತು ಲೇಖಕರಿಂದ ಬರುವುದಿಲ್ಲ. ಈ ದೇಶ ಪಾಸು, ಇದು ಫೈಲ್ ಮುಂದೆ ನಡಿ ಎನ್ನುವ ಅಜಾಗರೂಕತೆ ಕಾಣುತ್ತದೆ. ಭೂಮಿಯ ಮೇಲಿರುವ ದೇಶಗಳಿಗೆಲ್ಲಕ್ಕೂ ಸಂಬಂಧಿಸಿದಂತಹ ವಿಷಯಗಳ ಬಗ್ಗೆ ಬರೆಯಬೇಕಾದರೇ ಈ ಮಟ್ಟಿಗಿನ detailನ ಅವಶ್ಯಕತೆ ಇಲ್ಲದಿರಬಹುದು, ಆದರೆ, ಈ ವಿಚಾರ ವಿಶ್ವಬ್ಯಾಂಕ್ ಮತ್ತು IMF ಧೋರಣೆಯಲ್ಲಿ ಕಂಡುಬರುತ್ತದೆಯೇ, ಅಥವ ಸ್ಟಿಗ್ಲಿಟ್ಸರ ಪ್ರಕಾರ ಪ್ರಗತಿಯಲ್ಲಿ ಈ ತರಹದ ಪ್ರಾದೇಶಿಕ ಮಟ್ಟದಲ್ಲಿನ ಅಂತರಗಳ ಪಾಲೇನು ಎಂಬುದರ ಪ್ರಸ್ತಾಪವಿರಬೇಕಾಗಿತ್ತು.. ಮುಖ್ಯವಾಗಿ ಜಾಗತೀಕರಣದ ಬಗ್ಗೆ ಮಾತಾಡುವಾಗ ಜಾಗತೀಕರಣ ಯಾವ ಯಾವ ದೇಶಗಳಲ್ಲಿ ಯಾವ ರೀತಿಯ ಪರಿಣಾಮ ಬೀರಿದೆ, ಯಾವ ಯಾವ ದೇಶಗಳಲ್ಲಿ ಯಾವ ಯಾವ ಪ್ರದೇಶಗಳು ಈ conceptನ ಸದುಪಯೋಗಗಳನ್ನು ಪಡೆದುಕೊಂಡಿವೆ, discontent ದೇಶದ ಯಾವ ಪ್ರದೇಶಗಳಲ್ಲಿವೆ ಎಂಬುದರ ಚರ್ಚೆ ಇಲ್ಲ. ಅಂತರ್ರಾಷ್ಟ್ರೀಯ ವ್ಯಾಪಾರಗಳಲ್ಲಿ ಬಡದೇಶಗಳಿಗಾಗಿರುವ ಅನ್ಯಾಯದ ಬಗ್ಗೆ ಹೇಳಿ, ಭಾರತ ಈ ವಿಷಯದಲ್ಲಿ ಪೂರ್ತಿ ಯಶಸ್ಸು ಸಾಧಿಸಿದೆ ಎಂದು ಹೇಳುವುದು ಸರಿಯಲ್ಲ. ನಮ್ಮ ದೇಶದ ಆರ್ಥಿಕ ಕ್ಷೇತ್ರಗಳಲ್ಲಿ ಒಂದೋ ಎರಡೋ ಘಟಕಗಳು ಇಂದು ಜಾಗತೀಕರಣದ ಲಾಭವನ್ನು ಪಡೆದಿವೆ. ಹಲವು ಕ್ಷೇತ್ರಗಳು ತೊಂದರೆಗಳಗಾಗಿರುವುದು ಸರ್ವವಿದಿತ. ಇದನ್ನೆಲ್ಲಾ, ಪ್ರತಿಯೊಂದು ದೇಶವೂ ಸಹಿಸಿಕೊಳ್ಳಲೇ ಬೇಕಾದ ನೋವು ಎಂದು ಹೇಳುವುದು ಉಡಾಫೆಯ ಮಾತಾದೀತು. ಇದು ಇಡೀ ದೇಶ ಸಹಿಸಿಕೊಂಡ ನೋವಲ್ಲ, ದೇಶದ ಕೆಲವೇ ಕೆಲವು ಜನ ಲಾಭ ಪಡೆದು ಮಿಕ್ಕವರೆಲ್ಲ ದಿಕ್ಕುಗೆಡುತ್ತಿರುವ ಸಂಗತಿ. ನಾವೂ ನೀವು ನಮ್ಮ ಕಂಪ್ಯೂಟರ್ ತೋರಿಸಿದ ಸಿಮ್ಯೂಲೇಷನ್ ಹಿಡ್ಕಂಡು ಕೋಟ್ಯಾಂತರ ಜನರ ಭವಿಷ್ಯದ ಬಗ್ಗೆ ನಮಗೆ ಕಂಡಂತೆ ವರ್ತಿಸುವುದು ಎಷ್ಟರ ಮಟ್ಟಿಗೆ ಸರಿ ಎಂದೆನಿಸಿತು.

ಮುಂದೆ ಓದಲು ಮನಸ್ಸಾಗಲಿಲ್ಲ. ಓದುಗರು, ಇವನ್ಯಾರಯ್ಯ, ಪೂರ್ತಿ ಓದದೇ ಇಷ್ಟೆಲ್ಲಾ ಮಾತಾಡ್ತಾನಲ್ಲ ಎನ್ನಬಹುದು.. ಆದರೆ ಈ ತರಹದ ವಾಸ್ಥವದ ಚಿತ್ರಣವನ್ನು ಕೇವಲ ಅಂಕಿಅಂಶಗಳ ಮೂಲಕ ಕಂಡು ೧೦-೧೫ ದಿನಗಳ ಪ್ರವಾಸದ ಮೂಲಕ ದೇಶಗಳ ತೊಂದರೆಗಳೇನು, ಅದಕ್ಕೆ ಯಾರ್ಯಾರು ಏನೇನು ಮಾಡಬೇಕು, ಯಾರ ಮೇಲೆ ತಪ್ಪಿನ ಹೊಣೆಹಾಕಬೇಕು ಮುಂತಾದ ಮಾತುಗಳ ಸಾಂದರ್ಭಿಕವಲ್ಲ ಅನ್ನಿಸುವುದಕ್ಕೆ ಶುರುವಾದುದರಿಂದ ಮುಂದೆ ಓದಿ ಪ್ರಯೋಜನವಿಲ್ಲ ಎನ್ನಿಸಿತು. ಬಿಟ್ಟೆ.

ಆದರೂ, ನಮಗಲ್ಲದಿದ್ದರೂ, ಪಾಶ್ಚಿಮಾತ್ಯರಿಗೆ, ಈ ವಿಷಯಕ್ಕೆ ಹೊಸಬರಿಗೆ (ನಾನು ಇದನ್ನೆಲ್ಲ ಅರೆದು ಕುಡಿದಿದ್ದೀನಿ ಅಂತಲ್ಲ ;-) ) ಹಿಡಿಸಬಹುದೇನೋ, ಈ ಪುಸ್ತಕ.

Rating
No votes yet

Comments