ವಧು ಪರೀಕ್ಷೆಯಿಂದಾ,,,,,,

ವಧು ಪರೀಕ್ಷೆಯಿಂದಾ,,,,,,

ನನಗಿನ್ನೂ ೨೯ತ್ತೇ ವರ್ಷಾ ರೀ ಆಗಲೇ ಮದ್ವೆಯಾಗೂ ಮದ್ವೆಯಾಗೂ ಅಂತ ಬಲವಂತ ಮಾಡ್ತಿದ್ದಾರೆ ಮನೇಲಿ,
ಆಗಲೇ ಬಹಳಷ್ಟು ಗಂಡುಗಳು ಬಂದು ಹೋಗಿದ್ದವು .ನಾನು ಯಾರನ್ನೂ ಒಪ್ಪಿರಲಿಲ್ಲ. ನನ್ನಬಗ್ಗೆ ಹೇಳುವುದಾದರೆ ಚೆನ್ನಾಗೇ ಇದ್ದೀನ್ರೀ .ನಮ್ಮ ಬೀದೀಲಿ ವಧು ಆನ್ವೇಷಕರು ಹೇಳ್ತಿದ್ರು ನಮಮಮ್ಮನಿಗೆ " ನಿಮ್ಮ ಹುಡುಗಿಯ ಹಾಗಿದ್ರೆ ಸಾಕು ನಮ್ಮಮನೆಗೆ ಬರುವ ಸೊಸೆ " ಇದನ್ನು ಕೇಳಿ ನನಗೆರಡು ಕೋಡುಗಳು ಬೆಳೆದಿದ್ದವು.

ಈ ಸಾಯಂಕಾಲ ಎಲ್ಲೂ ಹೊರಗೆ ಹೋಗ್ಬೇಡ ಮನೆಗೆ ವರನ್ನ ಕರ್ಕೊಂಡು ಬರ್ತಿದ್ದಾರೆ .ನೋಡಿ ಇವನನ್ನಾದ್ರೂ ಒಪ್ಪು. ಅಂದರು ಅಮ್ಮ . ಹುಂ ಅಂತ ತಲೆ ಅಲ್ಲಾಡಿಸಿದೆ. ಸಾಯಂಕಾಲ ಹೇಳಿದ ಟೈಂಗೆ ಬಂದರು. ವರ, ಗೆಳೆಯ, ಅಮ್ಮ, ಮತ್ತು ಅಪ್ಪ ಇಷ್ಟೇ ಜನ. ಇಬ್ಬರಲ್ಲಿ ಒಬ್ಬ ಸಪೂರಾಗಿ ಚೆನ್ನಾಗಿದ್ದ. ಇನ್ನೊಬ್ಬನನ್ನು ನೋಡಲು ಹೋಗಲಿಲ್ಲ ಸ್ವಲ್ಪ ನನ್ನ ಮುಖ ಅರಳಿತು. ಉಪ್ಪಿಟ್ಟು ಕಾಫಿ ತಿಂಡಿ ಸಮಾರಾಧನೆಯಾಯಿತು. ಕಾಫಿ ನನ್ನ ಕೈಲೇ ಕೊಟ್ಟು ಕಳುಹಿಸಿದರು ನನಗೋ ಈ ಕಡ್ಡಿ ತೆಗೆದು ಆ ಕಡೆ ಇಟ್ಟು ರೂಡಿ ಇರಲಿಲ್ಲ ಸೊಟ್ಟ ಕಾಲು ಹಾಕೊಂಡು ಬಂದು ಎಡವಿದ್ದೇ ಗೊತ್ತು. ಎಲ್ಲರಿಗೂ ಕಾಫಿ ಅಭಿಷೆಕವಾಯಿತು. ಪರವಾಗಿಲ್ಲ ಬಿಡಿ ಅಂತ ಸಾವರಿಸಿ ಕೊಂಡರು ವರನ ಕಡೆಯವರು.
ವರನನ್ನು ನೋಡೇ ಆಮೇಲೆ ಕಣಿ ತೆಗೀಬೇಡ ಅಮ್ಮ ಹೇಳಿದರು. ಕತ್ತೆತ್ತಿ ವರನನ್ನು ನೋಡಿದೆ ಮೂರ್ಚೆ ಹೋಗೋದೊಂದು ಬಾಕಿ. ಸಪೂರನಾಗಿದ್ದವನಾಗಿರಲಿಲ್ಲ, ನಾನು ನೋಡದೇ ಬಿಟ್ಟವನಾಗಿದ್ದ.ತಲೇಲಿ ಕೂದಲೇ ಇರಲಿಲ್ಲ ದೂರದರ್ಶನ ಕೇಂದ್ರದ ಚಿನ್ಹೆ ಸುರುಳಿಯಹಾಗೆ ಆಕಡೆ ಈಕಡೆ ಸುರುಳಿ ಸುತ್ತಿತ್ತು.ಹೊಟ್ಟೆ ಗುಡಾಣ ಹಿಂದಪ್ಪ ಮುಂದಪ್ಪ. ಅಯ್ಯಯ್ಯೋ ನಾನೊಪ್ಪೆ ಈ ಗಂಡನ್ನು ಮುಖ ಸೊಟ್ಟಮಾಡಿ ನಮ್ಮಮ್ಮನ ಕಡೆ ನೋಡಿದೆ, ಸುಮ್ಮನಿರುವಂತೆ ನಮ್ಮಮ್ಮ ಕಣ್ಸನ್ನೆ ಮಾಡಿದರು ನನ್ನನ್ನ ಒಪ್ಪಿದ್ದಾರೆಂದು ಗಂಡಿನ ಮುಖ ನೋಡಿದರೆ ತಿಳಿಯುತ್ತಿತ್ತು. ನಗು ನಗುತ್ತಾ ಇದ್ದರು.ಹೋಗುವಾಗ ಒಪ್ಪಿದ್ದೇವೆಂದು ತಿಳಿಸಿಹೋದರುಇನ್ನು ಕೇಳಬೇಕೇ? ನಮ್ಮಮ್ಮನ ವರಾತ ಈ ಗಂಡನ್ನು ನೀನು ಒಪ್ಪಲೇಬೇಕು ನಿನ್ನ ಹಿಂದೆ ಇನ್ನೂ ಮೂವರಿದ್ದಾರೆ ಹೇಮಿ,ಸಾತಿ, ಗೌರಿ ಯಾರಾದರೂ ಒಪ್ಪಿದರೆ ಅವರಿಗೇ ಮದುವೆಯಾಗಲು ಹೇಳುತ್ತೇನೆ. ನೀನು ಕನ್ಯೆಯಾಗೇ ಉಳಿ ಹೆದರಿಸಿದರು ಅಮ್ಮ
ಈಗ ನಾನೇನು ಮಾಡಲಿ? ನಡೆದರೆ ಸವೆದು ಹೋಗುತ್ತೇನೋ ಅಂತ ಜೋಪಾನವಾಗಿ ನೋಡ್ಕೋತಿದ್ದೀನಿ ಈದೇಹವನ್ನು. ಅಷ್ಟು ಸುಕೋಮಲ ದೇಹ ನನ್ನದು. ಯಾವುದಾದ್ರೂ ರಾಜಕುಮಾರ? ಬಂದು ಮದುವೆಯಾಗುತ್ತಾನೆಂದು ಕನಸು ಕಾಣುತ್ತಿದ್ದೆ. ಇದೆಲ್ಲಿತ್ತು ಈ ಚಿಂಪಾಂಜಿ, ಅದೂ ನೋಡಿದ ತಕ್ಷಣ ನನ್ನನ್ನೊಪ್ಪಬೇಕೇ?
ಸಾತಿ ಹೇಳುದ್ಲು ಅಕ್ಕ ನೀ ಒಪ್ಪದಿದ್ರೆ ಹೇಳು ನಾನೇ ಆಹುಡುಗನನ್ನು ಮದ್ವೆ ಆಗ್ತೀನಿ. ಹೇಗಿದ್ರೂ ನಾನೂ ನಿನ್ನಹಾಗೇ ಇದ್ದೀನಿ ಅವ್ರೂ ಒಪ್ತಾರೆ ಸ್ವಲ್ಪ ಬಣ್ಣ ಕಡಿಮೆ ಅಷ್ಟೇ ಅಡ್ಜಸ್ಟ್ ಮಾಡ್ಕೊಂಡ್ರಾಯ್ತು. ಮೊದಲಸಾರಿ ತಂಗಿಯಮೇಲೆ ಎಲ್ಲಿಲ್ಲದ ಕೋಪಬಂತು. ಚೆನ್ ಚೆನ್ನಾಗಿರೋ ಗೂಬೆಗಳೆಲ್ಲಾ (ವರಮಹಾಶಯರು) ಎಲ್ಲಿ ಹಾಳಾಗಿ ಹೋದ್ವೋ?ನನ್ನಂಥ ಸುಂದರಿಗೆ ಒಳ್ಳೆ ಸುಂದರ ಗಂಡು ಸಿಗಲಿಲ್ಲವೇ? ನನ್ನ ಅದೃಷ್ಟವನ್ನು ಶಪಿಸಿದೆ. ಬಲವಂತವಾಗಿ ಒಲ್ಲದ ಮನಸ್ಸಿನಿಂದ ಮದುವೆಗೆ ಒಪ್ಪಿಗೆ ಕೊಟ್ಟೆ (ಒಪ್ಪಿಸಿದರು) ಮನೆಯಲ್ಲಿ ಎಲ್ಲರಿಗೂ ಸಂತೋಷವಾಯಿತು ನನ್ನನ್ನು ಬಿಟ್ಟು
ವರಮಹಾಶಯ ಇದ್ದಕ್ಕಿದ್ದಂತೆ ಒಂದು ದಿನ ಬಂದು ನಿಮ್ಮ ಹುಡುಗಿಯ ಜತೆ ಮಾತಾಡಬೇಕೆಂದರು ನಾನು ಸುತರಾಂ ಒಪ್ಪಲಿಲ್ಲ. ಸಾತಿ, ನಾನೂ ಬರ್ತೀನಿ ನಡೀಯೆ ಹೋಗಣ ಎಂದು ಗೋಗರೆದಳು ಆಕಡೆ ನಾನು ಗಮನವೇ ಕೊಡಲಿಲ್ಲ.ಪೆಚ್ಚುಮೋರೆ ಹಾಕಿಕೊಂಡು ಹೋದರು ಹೋಗುವಾಗ ತಿರುತಿರುಗಿ ನೋಡಿ ಟಾಟ ಮಾಡಿದರು. ತಿರುಗಿ ಸಾತೀನೇ ಟಾಟ ಮಾಡಿದಳು ನಾನು ನೋಡಿಯೂ ನೋಡದಂತಿದ್ದೆ.
ನಿಜ ಹೇಳ್ತೀನಿ ಮದುವೇಲಿ ನಾನು ಒಂದುಬಾರಿಯೂ ನಗಲಿಲ್ಲ ಕಣ್ರೀ. ನನ್ನ ನಗುವೆಲ್ಲಾ ಪಕ್ಕದಲ್ಲಿದ್ದವರು ಕಿತ್ಕೊಂಡಿದ್ರು.
ಈಗ ಮುದ್ದಾದ ಎರಡು ಮಕ್ಕಳ ತಾಯಿ ನಾನು. ಒಂದು ಗಂಡು ಒಂದು ಹೆಣ್ಣುಎರಡು ನನ್ನ ಹಾಗೇ ಮುದ್ದಾಗಿವೆ.
ಲೇ ಬೇಳೆ ಇಷ್ಟ್ ಹಾಕುದ್ರೆ ಸಾಕಾಗತ್ತಾ? ಅನ್ನಕ್ಕೆ ಈಗ್ಲೇ ಇಡಲೋ ಅಥವಾ ನೀನೇ ಇಟ್ಕೋತೀಯೊನನಗೆ ಆಫೀಸ್ಗೆ ಹೊತ್ತಾಗ್ತಿದೆ. ತಿಂಡಿ ಮಾಡಿಟ್ಟಿದ್ದೀನಿ ಮಕ್ಕಳಿಗೂ ರೆಡಿ ಮಾಡಿದ್ದೀನಿ.ಅವುಗಳನ್ನು ಸ್ಕೂಲಿಗೆ ಬಿಟ್ಟು ನಾನು ಆಫೀಸ್ಗೆ ಹೋಗ್ತೀನಿ ನೀನು ಎದ್ದು ತಿಂಡಿ ತಿನ್ನು ಹೊಟ್ಟೆಗಿಲ್ಲದೇ ಇರಬೇಡ ಆಮೇಲೇ ಹುಷಾರು ತಪ್ಪೀತು ಡಾಕ್ಟರ್ ಹತ್ತಿರ ಕರ್ಕೊಂಡ್ ಹೋಗಕ್ಕೆ ನನಗೆ ಟೈಂ ಇಲ್ಲ ಕೇಳುಸ್ತಿದ್ಯೇನೇ? ಹಾಂ ಇಲ್ಲ ಹೂಂ ಇಲ್ಲ.
ಕನ್ನಡಿಯಲ್ಲೊಮ್ಮೆ ನನ್ನನ್ನು ನೋಡಿಕೊಂಡೆ ಬೆಚ್ಚಿ ಬಿದ್ದೆ ಎಲ್ಲಿ ಹೋಯಿತು ನನ್ನ ಸಪೂರ ದೇಹ 5-6 ವರ್ಷದಲ್ಲೇ ಇಷ್ಟೊಂದು ಬದಲಾವಣೆ,ಆಫೀಸ್ಗೆ ತಯಾರಿಯಾಗುತ್ತಿದ್ದವರು ಒಳಬಂದರು ಈಗ ಎದ್ಯಾ? ಆಗ್ಲೇ 9 ಗಂಟೆಯಾಯ್ತುಕಣೆ.ಇನ್ನೂ ಎದ್ದಿಲ್ವೇನೋಂತ ನೋಡ್ಕೊಂಡು ಹೋಗಕ್ಕೆ ಬಂದೆ. ಆಫೀಸ್ಗೆ ಹೊರಡ್ತಿದ್ದೀನಿಬಾಗಿಲು ಸರ್ಯಾಗಿ ಹಾಕ್ಕೊ, ಅವರತ್ತ ಕಣ್ಣಗಲಿಸಿ ನೋಡಿದೆ ಎಲ್ಲಿ ಹೋಯ್ತು ಇವರ ಗುಡಾಣ ಹೊಟ್ಟೆ ಅಬ್ಬ ಎಷ್ಟು ಸಪೂರ ವಾಗಿದ್ದಾರೆ 5 ವರ್ಷದಹಿಂದೆ ಇವರನ್ನು ನೋಡಿದವರು ಯಾರೂ ಗುರ್ತುಹಿಡಿಯೋದಿಲ್ಲ. ಏನೇ ನನ್ನನ್ನು ಹಾಗೆ ನೋಡ್ತಿದ್ದೀಯಾ? ಬಾ ಬಾಗಿಲು ಹಾಕ್ಕೊ ನಿದ್ದೆಗಣ್ಣಿನಲ್ಲೇ ಅವರ ಹಿಂದೆ ಹೊರಟೆ. ಬಾಗಿಲುಹಾಕ್ಕೊಂಡು ಮತ್ತೆ ಹಾಸಿಗೆ ಸೇರಿ ನಿದ್ರಾದೇವಿಗೆ ವಶಳಾದೆ.

ಹಾಸ್ಯ

ಸೀತ ಆರ್. ಮೊರಬ್

Rating
No votes yet

Comments