ಪ್ರಾಣಿಗಳೊಳುದಯೆ..........

ಪ್ರಾಣಿಗಳೊಳುದಯೆ..........

ಮೊನ್ನೆ "ಸಂಪದ ಬ್ಲಾಗ್"ನಲ್ಲಿ ಓದಿದ್ದೆ. ಪಕ್ಷಿಗಳಿಗೆ ಕುಡಿಯಲು ನೀರಿಡಿ ಅಂತ. ನಮ್ಮಮ್ಮ ಒಂದು ಹಾಡು ಹೇಳ್ತಾರೆ. "ಪ್ರಾಣಿಗಳೊಳು ದಯೆಯಿಡು ನೋಯಿಸಿದರೆ
ನೋವಾಗುವುದವಕೆ.
ಪ್ರಾಣದಮೇಲವುಗಳಿಗಿಹುದಾಸೆಯು
ನಿನಗಿರುವಂದದಲಿ."
ಪದ್ಯ ಇನ್ನೂ ಇದೆ ಈಗ ಇಷ್ಟುಸಾಕು.

ಪಕ್ಷಿಗಳು ನಮ್ಮನೇಹತ್ರ ಬರತ್ವೆ ಕುಂಡದಲ್ಲಿ ಗಿಡಗಳನ್ನು ಹಾಕೊಂಡಿದ್ದೀನಿ. ನಾವಿರುವುದು 3ನೇ ಅಂತಸ್ತಿನಲ್ಲಿ. ಏನು ಮಾಡೋದು ಗಿಡಗಳ ಆಸೆ. ಅಲ್ಲಿ ಬರುವ ಪಕ್ಷಿಗಳು ಅಲ್ಲೇ ಎಷ್ಟುಹೊತ್ತಾದರೂ ಕೂತು ಚಿಲಿಪಿಲಿಅಂತಿದ್ವು. ಯಾಕೆ ಇಲ್ಲಿ ಬರುತ್ತವೆ ಕೂರುತ್ತವೆ ನನಗೆ ಗೊತ್ತಾಗ್ತಾಇರಲಿಲ್ಲ. ಹಸಿರು ಗಿಡಗಳನ್ನು ನೋಡುತ್ವಲ್ಲಾ ನೀರೇನಾದ್ರೂ ಇದ್ಯೇನೋ ಅಂತ ಬರತ್ವೆ.ಬೇರೆ ಯಾರ ಮನೇಗೂ ಬರಲ್ವಂತೆ. ಬೇರೆ ಯಾರೂ ಗಿಡಗಳನ್ನು ಹಾಕೊಂಡಿಲ್ಲ. ಆಮೇಲೆ ಹೊಳೀತು. ನೀರಿಗೋಸ್ಕರಾನೇ ನಮ್ಮನೇಗೆ ಬರುತ್ತವೆ. ಈಗ ಒಂದು ದೊಡ್ಡ ಪಾತ್ರೇಲಿ ನೀರಿಡ್ತೀನಿ ಕುಡಿದು ಹಾರಿಹೋಗತ್ವೆ. ಇದು ನನಗೆ ತಿಳಿದಿದ್ದು ನಮ್ಮ "ಸಂಪದ ಬ್ಲಾಗ್" ನಿಂದರೀ. ಪಕ್ಷಿಗಳು ಥ್ಯಾಕ್ಸ್ ಹೇಳತ್ತ್ವೆ.

ನಮ್ಮ ಅಪಾರ್ಟ್ಮೆಂಟ್ ನಲ್ಲಿ ವಿಪರೀತ ಪಾರಿವಾಳಗಳು. ಓಡ್ಸೋಣ ಅಂತ ಯೋಚಿಸ್ತಾ ಇದ್ದೆವು. ಅವಕ್ಕೂ ನಮ್ಮಹಾಗೆ ಎಲ್ಲಿ ಬೇಕಾದರಲ್ಲಿ ಜೀವಿಸಕ್ಕೆ ಅಧಿಕಾರವಿದೆ. ಪಾಪ ಅವು ತಾನೆ ಎಲ್ಲಿ ಹೋಗತ್ವೆ. ಮರಗಳನ್ನೆಲ್ಲಾ ಕಡಿದು ಅಪಾರ್ಟ್ಮೆಂಟ್ ಕಟ್ಟಿದ್ದಾರೇನೋ? ಯಾರಿಗೆ ಗೊತ್ತು. ಮೊದಲು ಮರಗಳಲ್ಲಿ ಅವು ವಾಸವಾಗಿದ್ದವೇನೋ? ಹೀಗಾಗಿ ಓಡಿಸುವ ಯೋಚನೆ ಕೈಬಿಟ್ಟೆವು. ಎಲ್ಲಾ ನಮಗೇ ಬೇಕು ಅನ್ನೋ ಆಸೆ ನಮಗೆ ಸಿಗದಿದ್ರೆ ಜಗಳಮಾಡಿ ಕಿತ್ಕೋತೀವಿ. ಇಲ್ಲಾ ಹಣಕೊಟ್ಟು ಕೊಂಡುಕೋತೀವಿ. ಆದರೆ ಪ್ರಾಣೆ ಪಕ್ಷಿಗಳು ಹಾಗೆ ಮಾಡಕ್ಕೆ ಆಗಲ್ವಲ್ಲಾ.

ಅಮ್ಮ ಪ್ರತಿ ಶನಿವಾರ ಪೂಜೆ ಮಾಡಿ ರವೆ ಸಕ್ಕರೆ ಕೊಡೋರು ಹೋಗು ಇರುವೆ ಗೂಡು ಎಲ್ಲೆಲ್ಲಿದೆಯೋ ಅಲ್ಲೆಲ್ಲಾ ಸ್ವಲ್ಪ ಸ್ವಲ್ಪ ಹಾಕಿ ಬಾ ಅಂತ. ನನಗೆ ಅದೇ ಒಂದು ಆಟ ಇರುವೆ ಗೂಡು ಹುಡುಕಿ ಹಾಕಿ ಬರ್ತಿದ್ದೆ. ಈಗ ತಿಳೀತಿದೆ ಯಾಕೆ ಹಾಗೆ ಮಾಡಿಸ್ತಿದ್ರು ಅಂತ.

ಮನೇಕೆಲ್ಸ ಆದಮೇಲೆ ಅಂಗಳದಲ್ಲಿ ಒಂದು ಬಕೇಟ್ ನೀರು ತುಂಬಿಸಿ ಇಡಿಸುತ್ತಿದ್ದರು. ಯಾಕೆ ಅಂತ ನಾವು ಕೇಳ್ತಿರಲಿಲ್ಲ ನಮ್ಮತಂದೆಯವರು ಹೇಳ್ತಿರಲಿಲ್ಲ. ಎಲ್ಲಾ ಎಷ್ಟೊಂದು ಒಳ್ಳೆಯ ಅಭ್ಯಾಸಗಳು ಅಲ್ವಾ?.
ಹಾಸಿಗೆ ಹಾಸುವಾಗ ಗೋಡೆ ಅಂಚಿಗೆ ಹಾಸುತ್ತಿರಲಿಲ್ಲ. ಒಂದು ಗೇಣು ಜಾಗ ಬಿಡಿಸುತ್ತಿದ್ದರು. ಹುಳ ಹುಪ್ಪಟೆ ಹರಿದಾಡಲು ಜಾಗ ಬಿಟ್ಟು ಮಲಗು ಅಂತಿದ್ದರು. ಅವುಗಳು ಗೋಡೆ ಅಂಚಿನಲ್ಲೇ ಹರಿಯುವುದು ಸಾಮಾನ್ಯ. ಹೀಗೆತಿಳಿವಳಿಕೆಯುಳ್ಳ ಒಳ್ಳೊಳ್ಳೆ ಕಾರ್ಯಗಳನ್ನು ನಮ್ಮ ಕೈಯಿಂದಲೇ ಮಾಡಿಸುತ್ತಿದ್ದರು. ನಾವು ಯಾಕೆ ಅಂತ ಕೇಳುವ ಹಾಗಿರಲಿಲ್ಲ. ಮುಂದೆ ನಿಮಗೇ ತಿಳಿಯುತ್ತದೆ ಅನ್ನುತ್ತಿದ್ದರು. ಇನ್ನೂ ಹೇಳ್ತಾಹೋದ್ರೆ ಇನ್ನೊಂದು ಪೇಜ್ ತುಂಬೋದು ಗ್ಯಾರಂಟಿ. ಇಷ್ಟುಸಾಕು.
"ನೀವೂ ಬದುಕಿ ಪ್ರಾಣಿ ಪಕ್ಷಿಗಳಿಗೂ ಬದುಕಲು ಬಿಡಿ."
ಬ್ಲಾಗ್ ಬರಹ

ಸೀತ ಆರ್. ಮೊರಬ್

Rating
No votes yet

Comments