ನಗೋ ಬುದ್ಧ - ಝೆನ್ ಕತೆ

ನಗೋ ಬುದ್ಧ - ಝೆನ್ ಕತೆ

ನೀವು ಲಾಫಿಂಗ್ ಬುದ್ಧ ಅಂತ ಒಂದು ಚೀಲ ಹೊತ್ತುಕೊಂಡು ನಗುತ್ತಿರುವ ಬೌದ್ಧ ಸನ್ಯಾಸಿಯ ಚಿಕ್ಕ ದೊಡ್ಡ ಮೂರ್ತಿ ನೋಡಿರಬಹುದು . ಒಳ್ಳೇದಾಗುತ್ತದೆ ಅಂತ ನಿಮ್ಮ ಮನೆಗಳಲ್ಲಿ ಇಟ್ಕೊಂಡೂ ಇರಬಹುದು .
ಯಾರಿವನು ?

ಇವನು ಒಬ್ಬ ಝೆನ್ ಗುರು . ಹಾಗಂತ ಅವನು ಕರೆದುಕೊಳ್ತಿರಲಿಲ್ಲ . ಶಿಷ್ಯಂದಿರು , ಉಪದೇಶ, ಪ್ರವಚನ ಇತ್ಯಾದಿ ಅವನಿಗೆ ಸೇರುತ್ತಿರಲಿಲ್ಲ . ಅವನು ಒಂದು ದೊಡ್ಡ ಚೀಲ ಹಿಡಿದುಕೊಂಡು ಓಡಾಡ್ತಿದ್ದ . ಅದರಲ್ಲಿ ಮಕ್ಕಳಿಗಾಗಿ ತಿಂಡಿತಿನಿಸುಗಳನ್ನು ಇಟ್ಕೊಂಡಿರ್ತಿದ್ದ . ಮಕ್ಕಳು ಕಂಡಲ್ಲಿ ಮಕ್ಕಳಿಗೆ ಹಂಚ್ತಿದ್ದ .
ಯಾರಾದರೂ ಅವನನ್ನ ನಮಸ್ಕರಿಸಿದರೆ , 'ಒಂದ್ ರೂಪಾಯಿ ಕೊಡಿ' ಅಂತ ಕೇಳ್ತಿದ್ದ .

ಒಂದು ಸಲ ಅವನನ್ನ ಯಾರೋ ಬೀದಿಯಲ್ಲಿ ತಡೆದು ಕೇಳಿದರು - ಝೆನ್ ನ ಮಹತ್ವ ಏನು ?
ಅವನು ಚೀಲವನ್ನು ಕೆಳಗೆ ಇಳಿಸಿ ಸುಮ್ಮನೆ ನಿಂತ.
ಮತ್ತೆ ಕೇಳಿದರು - ಝೆನ್ ಸಾಕ್ಷಾತ್ಕಾರ ಆಗಿರೋದರ ಕುರುಹೇನು ?
ಕೆಳಗಿಟ್ಟ ಚೀಲವನ್ನ ಮತ್ತೆ ಹೆಗಲ ಮೇಲೇರಿಸಿಕೊಂಡು ಮುಂದಕ್ಕೆ ನಡೆದುಬಿಟ್ಟ .

Rating
No votes yet

Comments