ಸತ್ಯವಂತರಿಗೆ ಇದು ಕಾಲವಲ್ಲ!

ಸತ್ಯವಂತರಿಗೆ ಇದು ಕಾಲವಲ್ಲ!

ನಿಮ್ಮೊಡನೆ ಒಂದು ಅನುಭವವನ್ನು ಹಂಚಿಕೊಳ್ಳಬೇಕಿದೆ.

ಕಳೆದ ಐದು ದಿನಗಳು ನಾನು ಕಾಸಂಸು, ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯವರು, ಕರ್ನಾಟಕ ಕಾನೂನು ವಿದ್ಯಾರ್ಥಿಗಳಿಗಾಗಿ  ನಡೆಸಿದ ರಾಜ್ಯ ಮಟ್ಟದ ಕ್ವಿಜ್ ಕಾರ್ಯಕ್ರಮದ ಕ್ವಿಝ್ ಮಾಸ್ಟರ್ ಆಗಿದ್ದೆ. ಅದರ ಒಂದು ನೆನಪು.

ಅಖಿಲ ಕರ್ನಾಟಕದಿಂದ ಬಂದ ಕಾನೂನು ವಿದ್ಯಾರ್ಥಿಗಳು ತುರುಸಿನಿಂದ ಸ್ಪರ್ಧಿಸಿದರು. ಸ್ಪರ್ಧೆಯು ಮೊದಲ ಉಪಾಂತ್ಯ (ಫಸ್ಟ್ ಸೆಮಿ ಫೈನಲ್) ವನ್ನು ತಲುಪಿತು. ಬೆಳಗಾಮಿನ ಆರ್.ಎಲ್.ಕಾನೂನು ವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಬೆಂಗಳೂರಿನ ಕೆ.ಎಲ್.ಇ ಕಾನೂನು ವಿದ್ಯಾಲಯದ ವಿದ್ಯಾರ್ಥಿಗಳು ಸ್ಪರ್ಧಿ ಹಾಗೂ ಪ್ರತಿ ಸ್ಪರ್ಧಿಗಳು.

ಸ್ಪರ್ಧೆ ಬಿರುಸಾಗಿ ಆರಂಭವಾಯಿತು. ಮೂರು ಸುತ್ತುಗಳು ಮುಗಿದವು! ಎರಡೂ ತಂಡಗಳಿಗೆ ಸಮ ಸಮ ಅಂಕಗಳು! ಸಮಬಲಶಾಲಿಗಳು!!

ವಿಜಯಿಗಳನ್ನು ಗುರುತಿಸಲು ಟೈ ಪ್ರಶ್ನೆಗಳನ್ನು ಕೇಳಲು ನಿರ್ಧರಿಸಿದೆ. ಒಂದೊಂದು ತಂಡಕ್ಕೆ ಮೂರು ಮೂರು ಪ್ರಶ್ನೆಗಳನ್ನು ಕೇಳಿದೆ.

ಈಗ ಮತ್ತೆ ಎರಡೂ  ತಂಡಗಳು ಸಮ ಸಮ ಅಂಕಗಳನ್ನು ಗಳಿಸಿದವು! ಮತ್ತೇ ಟೈ!!

ಕ್ವಿಜ್ ಏನಾದರೂ ರಂಗದ ಮೇಲೆ ನಡೆಯುತ್ತಿದ್ದರೆ, ಮತ್ತೊಂದು ಸುತ್ತು ಪ್ರಶ್ನೆಗಳನ್ನು ಕೇಳಿ ವಿಜಯಿಯನ್ನು ನಿರ್ಧರಿಸುವುದು ಸುಲುಭ! ಆದರೆ ಇದು ಟಿವಿ ಮಾಧ್ಯಮದಲ್ಲಿ ಪ್ರಸಾರವಾಗಬೇಕಾಗಿದ್ದ ಕಾರಣ ಸಮಯ ಮಿತಿ ತೀವ್ರವಾಗಿತ್ತು.

ಹಾಗಾಗಿ....

ಅನಿವಾರ್ಯವಾಗಿ ನಾಣ್ಯ ಚಿಮ್ಮುವ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು! ಇದಕ್ಕೆ ಎರಡೂ ತಂಡಗಳು ಒಪ್ಪಿದವು!

ನಾಣ್ಯ ಚಿಮ್ಮಿದೆವು!!

ನಾಣ್ಯ ರಾಜ ಮುಖವಾಗಿ ಬಿತ್ತು! ಬೆಂಗಳೂರಿನ ಕೆ.ಎಲ್.ಇ ವಿದ್ಯಾರ್ಥಿಗಳು ಎಂದು ಘೋಷಿಸಿತು! ಕೂಡಲೇ ಕೆ.ಎಲ್.ಇ ವಿದ್ಯಾರ್ಥಿಗಳ ಹರ್ಷ ಮುಗಿಲು ಮುಟ್ಟಿತು. ವೇದಿಕೆಯ ಮೇಲೆ ಕುಣಿದು ಕುಪ್ಪಳಿಸಿದರು.

ಆದರೆ....

ನನ್ನನ್ನೂ ಒಳಗೊಂಡು, ಇಡೀ ಸಭಾಂಗಣ ಮೌನವಾಗಿತ್ತು!

ಕಾರಣವಿಷ್ಟೆ!

ಬೆಳಗಾಮಿನ ವಿದ್ಯಾರ್ಥಿಗಳು, ಸ್ಪರ್ಧೆಯ ವಿಸರ್ಜನಾ ಮೂರು ಹಂತಗಳಲ್ಲಿ ಹಾಗೂ ಉಪಾಂತ್ಯ ಪೂರ್ವ (ಕ್ವಾರ್ಟರ್ ಫೈನಲ್) ಸ್ಪರ್ಧೆಗಳಲ್ಲಿ ಅತ್ಯುತ್ತಮವಾಗಿ ಭಾಗವಹಿಸಿದ್ದರು. ಅತ್ಯಂತ ಹೆಚ್ಚು ಅಂಕ ತೆಗೆದುಕೊಂಡಿದ್ದರು. ನಿಜಕ್ಕೂ ಬುದ್ದಿವಂತರಾಗಿದ್ದರು.  ಮೂರನೆಯ ಸುತ್ತಾದ ‘ನಮ್ಮ ಸಮಸ್ಯೆ ನಿಮ್ಮ ಪರಿಹಾರದಲ್ಲಿ’ ಜನಸಾಮಾನ್ಯರ ಕಾನೂನು ಸಮಸ್ಯೆಯನ್ನು ತೆಗೆದುಕೊಂಡು ಅದ್ಭುತವಾಗಿ ವಾದಿಸಿದ್ದರು. ಹಾಗಾಗಿ ಈ ತಂಡ ಅಂತಿಮ ಸುತ್ತನ್ನು ತಲುಪುತ್ತದೆ ಹಾಗೂ ಪ್ರಶಸ್ತಿ ವಿಜೇತ ತಂಡವಾಗಲಿದೆ ಎಂದು ನಾವೆಲ್ಲ ಲೆಕ್ಕ ಹಾಕಿದ್ದೆವು.

ಬೆಳಗಾಮಿನ ವಿದ್ಯಾರ್ಥಿಗಳಿಗೆ ಹೋಲಿಸಿದರೆ, ಬೆಂಗಳೂರಿನ ತಂಡ ಸ್ವಲ್ಪ ಸಪ್ಪೆ!

ಆ ಕ್ಷಣದಿಂದ ಒಂದು ರೀತಿಯ ಹೇಳಿಕೊಳ್ಳಲಾಗದ ಸಂಕಟ ನನ್ನನ್ನು ಕಾಡುತ್ತಿದೆ. ಅದನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.

ಬೆಳಗಾಮಿನ ವಿದ್ಯಾರ್ಥಿಗಳು ಸೋತದ್ದು ನ್ಯಾಯವೆ?

ದೇವರು ಎನ್ನುವವನು ಒಬ್ಬನಿದ್ದು, ಅವನು ನ್ಯಾಯ-ಅನ್ಯಾಗಳನ್ನು ನೋಡಿ, ಸತ್ಯವಂತರನ್ನು ಕಾಯುತ್ತಾನೆ ಎಂದು ದೊಡ್ಡವರು, ತಿಳಿದವರು ಹೇಳುವುದನ್ನು ಕೇಳಿದ್ದೇನೆ.

ಆದರೆ...

ಬೆಳಗಾಮ್ ವಿದ್ಯಾರ್ಥಿಗಳ ಸೋಲು ದೇವರು ಎನ್ನುವುವನು ಒಬ್ಬನಿದ್ದಾನೆ, ಅವನು ಸತ್ಯವಂತರನ್ನು ಕಾಯುತ್ತಾನೆ ಎನ್ನುವುದು ಸುಳ್ಳು ಎಂದು ಅನಿಸಲಾರಂಬಿಸಿದೆ.

ಬೆಳಗಾಮಿನ ವಿದ್ಯಾರ್ಥಿಗಳ ಅದ್ಭುತ ಪ್ರದರ್ಶನವನ್ನು ಕಂಡು, ಕೆ.ಎಲ್.ಇ ಕಾನೂನು ವಿದ್ಯಾಲಯ, ಬೆಂಗಳೂರಿನ ಪ್ರಾಂಶುಪಾಲರು-ಬೆಳಗಾಮಿನ ವಿದ್ಯಾರ್ಥಿಗಳಿಗೆ ವೈಯುಕ್ತಿಕವಾಗಿ ಒಂದು ಪ್ರೋತ್ಸಾಹಕ ಬಹುಮಾನವನ್ನು ಘೋಷಿಸಿದರು. ಇದ್ದುದರಲ್ಲಿ ಇದು ಸ್ವಲ್ಪ ಸಮಾಧಾನವನ್ನು ತಂದಿತು.

ದಾಸರ ‘ಸತ್ಯವಂತರಿಗಿದು ಕಾಲವಲ್ಲ’ ಎಂಬ ಕೀರ್ತನೆ ನೆನಪಿಗೆ ಬಂದಿತು.

-ನಾಸೋ

 

Rating
No votes yet

Comments