'ಗುರುಮಿತ್ರ' ಕೃಷ್ಣಾಜಿಯವರ ಪುಣ್ಯಸ್ಮರಣೆ

'ಗುರುಮಿತ್ರ' ಕೃಷ್ಣಾಜಿಯವರ ಪುಣ್ಯಸ್ಮರಣೆ

ಜಗತ್ತಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ನಿಲ್ಲಲು ಪ್ರತಿಯೊಬ್ಬ ಮಾನವ ಜೀವಿಗೆ ದಾರಿ ತೋರಲು ತುಂಬಲು ಕಾಲಕಾಲಕ್ಕೆ ಬುದ್ಧ, ಬಸವ, ಗಾಂಧಿಯಂತಹ ಕ್ರಾಂತಿಕಾರಿ ನಾಯಕರು ಜನ್ಮತಾಳುತ್ತಾರೆ ಎಂದೆನಿಸುತ್ತದೆ. 1895ರ ಮೇ 12ರಂದು ಮದನಪಲ್ಲಿಯಲ್ಲಿ ಜನಿಸಿ, ಅಂದು ವಿಶ್ವಮಾನ್ಯ ಥಿಯಾಸಫಿಕಲ್ ಸೊಸೈಟಿಯ ಮುಖ್ಯಸ್ಥೆಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರ್ತಿ ಅನಿಬೆಸೆಂಟರಿಂದ ವಿಶ್ವನಾಯಕನಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಬಾಲಕನೆಂದು ದತ್ತು ಸ್ವೀಕರಿಸಲ್ಪಟ್ಟು, ಇಂಗ್ಲೆಂಡಿನ ಪ್ರತಿಷ್ಟಿತ ಶಾಲಾ ಕಾಲೇಜುಗಳಲ್ಲಿ ಓದಿ, 1911ರಲ್ಲಿ 'ಆರ್ಡರ್ ಆಫ್ ದಿ ಸ್ಟಾರ್' ಎಂಬ ವಿಶ್ವಮಟ್ಟದ ಪ್ರತಿಷ್ಟಿತ ಸಂಸ್ಥೆಯ ಮುಖ್ಯಸ್ಥನ ಹುದ್ದೆಯನ್ನು ತ್ಯಜಿಸಿ, ಸ್ವತಂತ್ರನಾಗಿ 'ಈ ಜಗತ್ತನ್ನು ಪರಿವರ್ತಿಸುವುದು ನಿನ್ನಿಂದ ಮಾತ್ರ ಸಾಧ್ಯ' ಎಂದು ವಿಶ್ವದೆಲ್ಲೆಡೆ ಸಂಚರಿಸಿ ತಾನು ಹೋದೆಡೆಯೆಲ್ಲ ಮಿಂಚಿನ ಸಂಚಾರವನ್ನುಂಟು ಮಾಡಿ ಅಲ್ಲಿಯವರೆಗೆ ನೆಲೆಸಿದ್ದ ಜಾತಿ, ಧರ್ಮ, ಸಂಪ್ರದಾಯ, ಕಂದಾಚಾರಗಳನ್ನು ಕಿತ್ತೊಗೆದು ಪ್ರೀತಿಯ ಮೂಲಕ ಮಾನವ ಸಮಾಜದ ನಿರ್ಮಾಣದ ಹಾದಿಯಲ್ಲಿ ನಡೆದು, ತನ್ನ ಸಹಮಾನವರಿಗೂ ತನ್ನ ಬೋಧನೆ ಮೂಲಕವೇ ದಾರಿ ತೋರಿದ ಮಹಾಮಾನವತಾವಾದಿ ಜಿಡ್ಡು ಕೃಷ್ಣಮೂರ್ತಿಯವರ ಸ್ಮರಣಾರ್ಥ ಈ ಲೇಖನ.

ಖ್ಯಾತ ಬ್ರಿಟನ್ ದಾರ್ಶನಿಕ ಆಲ್ಡಕ್ಸ್ ಹಕ್ಸಲಿಯಿಂದ 'ಆಧುನಿಕ ಬುದ್ಧ' ಎಂದೇ ಕರೆಯಲ್ಪಟ್ಟ, ಮಹಾಮಾನವತಾವಾದಿ ಜಿಡ್ಡು ಕೃಷ್ಣಮೂರ್ತಿಯವರ ಪ್ರಸ್ತುತತೆ ಕುರಿತು ಈ ವಾರದ ಸುಧಾದಲ್ಲಿ ಪಿ.ಎಲ್.ರಾವ್ ಎಂಬುವವರು ವಿಸ್ತಾರವಾದ ಲೇಖನವನ್ನು ಬರೆಯುವುದರ ಮೂಲಕ ಈಗಿನ ಅತೀ ವೇಗದ ಮಾಹಿತಿ ತಂತ್ರಜ್ಞಾನ ಯುಗದದಲ್ಲೂ ಕೃಷ್ಣಾಜಿಯಂತಹ ಮಹಾನ್ ಚೇತನದ ಪ್ರಸ್ತುತತೆಯನ್ನು ಚರ್ಚಿಸುವ ಪ್ರಯತ್ನ ಮಾಡಿದ್ದಾರೆ. ಆ ಚರ್ಚೆಯ ಮುಂದುವರೆದ ಭಾಗವೇ ಈ ಲೇಖನ. ಅದಕ್ಕಾಗಿ ಇತ್ತೀಚೆಗೆ ತಾನೆ ಅಂದರೆ ಫೆಬ್ರವರಿ 17 ಕೃಷ್ಣಾಜಿಯವರ ಪುಣ್ಯಸ್ಮರಣೆಯ ದಿನವಾದ್ದರಿಂದ ಕಳೆದ 5-6 ವರ್ಷಗಳಿಂದ ಕೃಷ್ಣಾಜಿಯವರ ಕೆಲ ಪುಸ್ತಕಗಳನ್ನು ಓದುವುದರ ಮೂಲಕ, ಆ ಕುರಿತ ಚರ್ಚೆಗಳಲ್ಲಿ ಭಾಗವಹಿಸುವುದರ ಮೂಲಕ ಹಾಗೂ ಸ್ವತಃ ಅವರೇ ನೀಡಿರುವ ಬೋಧನೆಗಳ ವಿಡಿಯೋ ನೋಡುವುದರ ಮೂಲಕ ನಾನು ಗ್ರಹಿಸಿರುವ ಕೃಷ್ಣಾಜಿಯವರು, ಹಾಗೆಯೇ 'ದಿ ಫಸ್ಟ್ ಅಂಡ್ ದ ಲಾಸ್ಟ್ ಫ್ರೀಡಮ್' ಪುಸ್ತಕಕ್ಕೆ ಆಲ್ಡಕ್ಸ್ ಹಕ್ಸ್ ಲಿಯವರು ಬರೆದಿರುವ ಸುದೀರ್ಘ ಮುನ್ನುಡಿಯ ಸಂಗ್ರಹಾನುವಾದ ಹಾಗೂ ನಮ್ಮ ನಾಡಿನ ಈಗಿನ ಚಿಂತಕ ಶ್ರೇಷ್ಟರಾದ ಯು.ಆರ್.ಅನಂತಮೂರ್ತಿಯವರು ತಮ್ಮ ಇತ್ತೀಚಿನ ಕೃತಿ 'ಮಾತು ಸೋತ ಭಾರತ'ದಲ್ಲಿ ತಮ್ಮ ಬದುಕು, ಚಿಂತನೆಗಳ ಮೇಲೆ ಗಾಢವಾದ ಪ್ರಭಾವ ಬೀರಿರುವ ಕೃಷ್ಣಾಜಿಯವರ ಕುರಿತ ಲೇಖನದ ಮುಖ್ಯನುಡಿಗಳನ್ನು ಈ ಲೇಖನದಲ್ಲಿ ದಾಖಲಿಸುವ ಪ್ರಯತ್ನ ಮಾಡುವುದರ ಮೂಲಕ ಅವರ ಪುಣ್ಯಸ್ಮರಣೆಯನ್ನು ಸಾರ್ಥಕವಾಗಿಸುವ ಪ್ರಯತ್ನ ಮಾಡುತ್ತಿದ್ದೇನೆ.

'ನಮ್ಮೊಳಗೆ ಹಾಗೆಯೇ ವಿಶ್ವದಲ್ಲಿ ಅಡಕವಾಗಿರುವ ರಹಸ್ಯಗಳು ಹಾಗೂ ಗೊಂದಲಗಳನ್ನು ಅರ್ಥಮಾಡಿಕೊಳ್ಳಲು ಮೊದಲು ನಾವು ನಮ್ಮೊಳಗೆ ಸ್ಪಷ್ಟತೆಯನ್ನು ಕಂಡುಕೊಳ್ಳಬೇಕು. ಅಂತಹ ಸ್ಪಷ್ಟತೆ ಸರಿಯಾದ ಚಿಂತನೆಯೊಂದಿಗೆ ಬರುತ್ತದೆ. ಇಂತಹ ಸ್ಪಷ್ಟತೆಯನ್ನು ಮತ್ತೊಂದರೊಂದಿಗೆ ವಿನಿಮಯ ಮಾಡಿಕೊಳ್ಳಲು ಸಾಧ್ಯವಿಲ್ಲವಾದ್ದರಿಂದ ಈ ಸ್ಪಷ್ಟತೆಯನ್ನು ವ್ಯವಸ್ಥಿತಗೊಳಿಸಬಾರದು. ವ್ಯವಸ್ಥಿತ ಸಮೂಹ ಚಿಂತನೆಯು ಕೇವಲ ಪುನರಾವರ್ತಿತವಾದುದು. ಸ್ಪಷ್ಟತೆಯು ಶಾಬ್ದಿಕ ಖಚಿತ ನುಡಿಯಿಂದ ಬರುವಂತಹದ್ದಲ್ಲ. ಅದು ತೀವ್ರವಾದ ಸ್ವಯಂ ಜಾಗೃತಾವಸ್ಥೆ ಹಾಗೂ ಸರಿಯಾದ ಚಿಂತನೆಯಿಂದ ಬರುವಂತಹದ್ದು. ಸರಿಯಾದ ಚಿಂತನೆಯು ಅದು ಎಷ್ಟೇ ಅರ್ಹವಾದುದು ಹಾಗೂ ಶ್ರೇಷ್ಟವಾದುದೇ ಆಗಿರಲಿ, ಅದು ಕೇವಲ ಬುದ್ಧಿಯ cultivation ಅಲ್ಲ. ಸರಿಯಾದ ಚಿಂತನೆಯು ಸ್ವಯಂ ಜ್ಞಾನದಿಂದ ಬರುವಂತಹದ್ದು. ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳದೆ ನಿಮ್ಮ ಚಿಂತನೆಗೆ ಯಾವುದೇ ತಳಹದಿಯಿಲ್ಲ. ಸ್ವಯಂ ಜ್ಞಾನವಿಲ್ಲದೆ ನೀವು ಚಿಂತಿಸುವುದು ಸತ್ಯವಲ್ಲ.'

ಈ ಮೂಲಭೂತ ಚಿಂತನೆಯೇ ಕೃಷ್ಣಾಜಿಯವರ ಚಿಂತನೆಯ ತಳಹದಿ. 'ಮನುಷ್ಯರಲ್ಲಿ ಭರವಸೆಯಿದೆ. ಸಮಾಜದಲ್ಲಲ್ಲ, ವ್ಯವಸ್ಥೆಗಳಲ್ಲಲ್ಲ, ವ್ಯವಸ್ಥಿತ ಧಾರ್ಮಿಕ ವ್ಯವಸ್ಥೆಗಳಲ್ಲಲ್ಲ, ಕೇವಲ ನನ್ನಲ್ಲಿ, ನಿಮ್ಮಲ್ಲಿ ಮಾತ್ರ.' ಎಂದು ಹೇಳುವ ಮೂಲಕ ಮಾನವಕೇಂದ್ರಿತ ಚಿಂತನೆಗೆ ದಾರಿ ತೋರಿಸಿದರು ಎಂದು ಹೇಳುವಷ್ಟರಲ್ಲಿ ಮತ್ತೆ ಎದುರಾಗುವುದು ಅವರ ಶಾಸನದಂತಹ 'ಸತ್ಯವೆಂಬುದು ದಾರಿಗಳಿಲ್ಲದ ಬಯಲು' ನುಡಿ ಎದುರಾಗುತ್ತದೆ. ಆಗಲೇ ನಮಗೆ ಅರ್ಥವಾಗುವುದು ವ್ಯವಸ್ಥಿತ ಧರ್ಮಗಳು, ತಮ್ಮ ಮಧ್ಯವರ್ತಿಗಳೊಂದಿಗೆ, ಪವಿತ್ರ ಗ್ರಂಥಗಳೊಂದಿಗೆ, ತತ್ವಸಿದ್ಧಾಂತಗಳೊಂದಿಗೆ, ತರತಮಗಳೊಂದಿಗೆ, ವಿಧಿವಿಧಾನಗಳೊಂದಿಗೆ, ಮೂಲಭೂತವಾದ ಸಮಸ್ಯೆಗೆ ಸುಳ್ಳು ಪರಿಹಾರವನ್ನು ನೀಡುತ್ತಾರೆ ಎಂದು.

'ನೀವು ಭಗವದ್ಗೀತ, ಬೈಬಲನ್ನು ಅಥವಾ ಚೀನಾದ ಪವಿತ್ರ ಗ್ರಂಥವನ್ನು ಉದ್ಧರಿಸಿದಾಗ ನೀವು ಮಾಡುವುದು ಖಂಡಿತವಾಗಿಯೂ ಕೇವಲ ಅದರ ಪುನರುಚ್ಚಾರವಷ್ಟೆ. ಹೌದಲ್ಲವೇ? ನೀವು ಪುನರುಚ್ಚರಿಸುತ್ತಿರುವುದು ಸತ್ಯವಲ್ಲ. ಅದು ಸುಳ್ಳು. ಯಾಕೆಂದರೆ, ಸತ್ಯವನ್ನು ಪುನರುಚ್ಚರಿಸಲಾಗದು. ಸುಳ್ಳನ್ನು ವಿಸ್ತರಿಸಬಹುದು, ಪ್ರತಿಪಾದಿಸಬಹುದು, ಪುನರುಚ್ಚರಿಸಬಹುದೇ ಹೊರತು ಸತ್ಯವನ್ನಲ್ಲ. ಹಾಗೇನಾದರೂ ಮಾಡಿದಲ್ಲಿ ಸತ್ಯ ನಾಶವಾಗುತ್ತದೆ. ಅದರಿಂದಲೇ ಪವಿತ್ರ ಗ್ರಂಥಗಳು ಅಮುಖ್ಯವಾದುವು. ಮನುಷ್ಯ ಚಿರಂತನ ವಾಸ್ತವಕ್ಕೆ ಬರುವುದು ತನ್ನಲ್ಲೇ ನೆಲೆಸಿರುವ ಸ್ವಯಂಜ್ಞಾನದಿಂದಲೇ ಹೊರತು ಮತ್ತಾರದೋ ಒಬ್ಬರ ಸಂಕೇತಗಳ ಮೂಲಕವಲ್ಲ.

ನಂಬಿಕೆಯು ಅನಿವಾರ್ಯವಾಗಿ ಪ್ರತ್ಯೇಕಗೊಳಿಸುತ್ತದೆ. ನಿಮಗೆ ಯಾವುದಾದರೂ ನಂಬಿಕೆಯಿದ್ದಲ್ಲಿ, ಅಥವಾ ಯಾವುದಾದರೂ ನಂಬಿಕೆಯಲ್ಲಿ ಸುರಕ್ಷತಾ ಭಾವವನ್ನು ಅನುಭವಿಸಿದಲ್ಲಿ, ಮತ್ತೊಂದು ಬಗೆಯ ನಂಬಿಕೆಯಲ್ಲಿ ಸುರಕ್ಷತಾ ಭಾವವನ್ನು ಅನುಭವಿಸುವವರಿಂದ ಪ್ರತ್ಯೇಕಗೊಳ್ಳುತ್ತೀರಿ. ಎಲ್ಲಾ ವ್ಯವಸ್ಥಿತ ನಂಬಿಕೆಗಳು ಅವು ಭ್ರಾತೃತ್ವವನ್ನೇ ಬೋಧಿಸಿದರೂ, ಪ್ರತ್ಯೇಕತೆಯನ್ನು ಆಧಾರವಾಗಿರಿಸಿಕೊಂಡಿವೆ.

ಈ ನಂಬಿಕೆಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲಿಕ್ಕಾಗಿಯೇ ಕೃಷ್ಣಾಜಿಯವರು ಭಗವದ್ಗೀತೆ, ಉಪನಿಷದ್‌ಗಳಂತಹ ಪವಿತ್ರ ಗ್ರಂಥಗಳನ್ನು ಓದುವ ಗೋಜಿಗೆ ಹೋಗಲಿಲ್ಲ ಎಂಬುದಾಗಿ ಹಕ್ಸ್ ಲಿಯವರು ಗುರುತಿಸುತ್ತಾರೆ. ಹಾಗೆಯೇ, ಮುಂದುವರಿದು ನಮ್ಮಲ್ಲಿ ಉಳಿದವರು ಪವಿತ್ರ ಗ್ರಂಥಗಳನ್ನು ಕೂಡ ಓದುವುದಿಲ್ಲ. ಅಂದರೆ, ನಾವು ನಮ್ಮ ಕಾಲದ ಬಿಕ್ಕಟ್ಟುಗಳನ್ನು ಪ್ರೀತಿ ಮತ್ತು ಒಳಕಾಣ್ಕೆಗಳಿಂದ ಎದುರಿಸುವುದಿಲ್ಲ, ಬದಲಿಗೆ ಸೂತ್ರಗಳು, ವ್ಯವಸ್ಥೆಗಳೊಂದಿಗೆ ಎದುರುಗೊಳ್ಳುತ್ತೇವೆ.' ಆದರೆ, ಸದ್ಭಾವದ ವ್ಯಕ್ತಿಗಳು ಸೂತ್ರಗಳನ್ನು ಹೊಂದಿರಬಾರದು. ಯಾಕೆಂದರೆ, ಸೂತ್ರಗಳು ಅನಿವಾರ್ಯವಾಗಿ, 'ಅಂಧಾಲೋಚನೆ'ಯೆಡೆಗೆ ಮನಸ್ಸನ್ನು ಸೆಳೆಯುತ್ತವೆ. ಸೂತ್ರಗಳೆಡೆಗಿನ ನಮ್ಮ ವ್ಯಸನ ಸಾರ್ವತ್ರಿಕವಾದುದೇ. 'ನಾವು ಬೆಳೆದು ಬಂದ ವ್ಯವಸ್ಥೆಯು ಏನನ್ನು ಆಲೋಚಿಸಬೇಕು ಎಂಬುದನ್ನು ಆಧರಿಸಿದೆಯೇ ಹೊರತು, ಹೇಗೆ ಆಲೋಚಿಸಬೇಕು ಎಂಬುದನ್ನಲ್ಲ.

ಸೂತ್ರಗಳಲ್ಲಿ ನಂಬಿಕೆಯಿಟ್ಟು, ಅದರಂತೆ ನಡೆಯುವುದು ನಮ್ಮ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ನಮ್ಮನ್ನು ನಾವು ಸೃಷ್ಟಿಶೀಲವಾಗಿ ಅರ್ಥ ಮಾಡಿಕೊಂಡಲ್ಲಿ ಮಾತ್ರ, ಸೃಷ್ಟಿಶೀಲ, ಆನಂದಮಯ ಪ್ರಪಂಚದ ನಿರ್ಮಾಣ ಸಾಧ್ಯ. 'ಆನಂದಮಯ ಈ ಜಗಹೃದಯ' ಎಂಬ ಕುವೆಂಪುವಾಣಿಯನ್ನು ಸಾರ್ಥಕಗೊಳಿಸಲು ಸಾಧ್ಯ.

ಏನನ್ನು ಯೋಚಿಸಬೇಕು ಅಲ್ಲ, ಹೇಗೆ ಆಲೋಚಿಸಬೇಕು ಎಂಬುದನ್ನು ಬೋಧಿಸುವ ಶಿಕ್ಷಣವಷ್ಟೆ ಅನಂತಮೂರ್ತಿಯವರು ತಮ್ಮ 'ಆಚಾರ್ಯರು ಮತ್ತು ಋಷಿಗಳು' ಲೇಖನದಲ್ಲಿ ಹೇಳುವ ಹಾಗೆ ಆಚಾರ್ಯರನ್ನಲ್ಲ, ಋಷಿಗಳನ್ನು ಸೃಷ್ಟಿಸಬಲ್ಲದು. ಗುರುಪಟ್ಟವನ್ನು ಸಾರಾಸಗಟಾಗಿ ನಿರಾಕರಿಸುವ ಕೃಷ್ಣಾಜಿಯವರನ್ನು ನೀವು ಮಾಡುತ್ತಿರುವುದೇನು ಎಂದು ಕೇಳಿದರೆ, 'ನಾನು ಗುರುವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಯಾಕೆಂದರೆ, ಎಲ್ಲದಕ್ಕಿಂತ ಮೊದಲು, ನಾನು ನಿಮಗೆ ಯಾವುದೇ ಆನಂದವನ್ನು ನೀಡುತ್ತಿಲ್ಲ. ನಾನು ನಿಮಗೆ ಕ್ಷಣದಿಂದ ಕ್ಷಣಕ್ಕೆ, ದಿನದಿಂದ ದಿನಕ್ಕೆ, ಏನನ್ನು ಮಾಡಬೇಕು ಎಂದು ಹೇಳುತ್ತಿಲ್ಲ. ಆದರೆ, ನಾನು ನಿಮಗೆ ಏನನ್ನೊ ಸೂಚಿಸುತ್ತಿದ್ದೇನೆ. ನೀವು ಸ್ವೀಕರಿಸಬಹುದು ಅಥವಾ ಬಿಡಬಹುದು, ಅದು ನಿಮ್ಮನ್ನು ಅವಲಂಬಿಸಿದೆಯೇ ಹೊರತು ನನ್ನನ್ನಲ್ಲ. ನಾನು ನಿಮ್ಮಿಂದ ನಿಮ್ಮ ಆರಾಧನೆಯನ್ನಾಗಲಿ, ಹೊಗಳಿಕೆ, ತೆಗಳಿಕೆಗಳನ್ನಾಗಲಿ ಏನನ್ನೂ ಬೇಡುತ್ತಿಲ್ಲ. ಇದು ಸತ್ಯಸಂಗತಿ, ಇದನ್ನು ನೀವು ಸ್ವೀಕರಿಸಬಹುದು ಅಥವಾ ಬಿಡಬಹುದು ಎಂದಷ್ಟೇ ಹೇಳುತ್ತೇನೆ. ನೀವು ಹೆಚ್ಚಿನವರು ಬಿಡುತ್ತೀರಿ. ಯಾಕೆಂದರೆ, ಕಾರಣ ಸ್ಪಷ್ಟ. ನೀವು ಅದರಲ್ಲಿ ಯಾವುದೇ ಆನಂದವನ್ನು ಕಾಣುವುದಿಲ್ಲ.'

ಹಾಗಿದ್ದಲ್ಲಿ, ಕೃಷ್ಣಾಜಿಯವರು ನೀಡುವುದಾದರೂ ಏನು? ನಮಗೆ ಬೇಕೆನಿಸಿದಲ್ಲಿ ನಾವು ಪಡೆಯಬಹುದಾದದ್ದು ಏನು? ಬಿಡಬಹುದಾದದ್ದು ಏನು? ಅದು ನಾವು ನೋಡಿರುವ ಹಾಗೆ, ನಂಬಿಕೆಯ ವ್ಯವಸ್ಥೆಯಾಗಲಿ, ತತ್ವಸಿದ್ಧಾಂತಗಳಾಗಲಿ ಅಲ್ಲ. ಅದು ನಾಯಕತ್ವವಾಗಲಿ, ಧ್ಯಾನವಾಗಲಿ, ಆಧ್ಯಾತ್ಮಿಕ ನಿರ್ದೇಶನವಾಗಲಿ, ಉದಾಹರಣೆಯಾಗಲಿ ಅಲ್ಲ. ಅದು ವಿಧಿವಿಧಾನವಾಗಲಿ, ಚರ್ಚಾಗಲಿ, ಸಂಜ್ಞೆಯಾಗಲಿ, ಯಾವುದೇ ರೀತಿಯ ಸ್ಫೂರ್ತಿದಾಯಕ ಮನರಂಜನೆಯಾಗಲಿ ಅಲ್ಲ.

ಡಾ.ಮುರಾರಿ ಬಲ್ಲಾಳರು ಬರೆದಿರುವ ಕೃಷ್ಣಾಜಿಯವರ 'ಜೀವನ ದರ್ಶನ' ಕೃತಿಗೆ ಅನಂತಮೂರ್ತಿಯವರು ಬರೆದಿರುವ ಮುನ್ನುಡಿಯಲ್ಲಿ ಕೆಲವೊಂದು ಸೂಕ್ಷ್ಮಗಳನ್ನು ಕೂಲಂಕಷವಾಗಿ ಸ್ಪಷ್ಟಪಡಿಸಿದ್ದಾರೆ. ಅವನ್ನು ಇಲ್ಲಿ ಉದ್ಧರಿಸುವುದರ ಮೂಲಕ ಕೃಷ್ಣಾಜಿಯವರ ಕುರಿತು ನಮಗರ್ಥವಾಗದ್ದನ್ನು ಅರಿಯುವ ಪ್ರಯತ್ನ ಮಾಡಿದ್ದೇನೆ.

ಕೃಷ್ಣಾಜಿಯವರು ತಮ್ಮ ಮಾತುಗಳನ್ನು 'ಟೀಚಿಂಗ್ಸ್' ಎಂದು ಕರೆಯುತ್ತಾರೆ. ನಮ್ಮ ಮಾತಿನಲ್ಲಿ ಇದನ್ನು 'ಉಪದೇಶ' ಎನ್ನುವಂತಿಲ್ಲ. ಯಾಕೆಂದರೆ, ಉಪದೇಶದಲ್ಲಿ ಹೇಳುವವನ 'ಮೇಲೂ' ಕೇಳುವವನ 'ತಗ್ಗೂ' ಇರುತ್ತದೆ. ಸಂವಾದಕ್ಕೆ ಎಳೆಯುವವ ಕೃಷ್ಣಾಜಿ ಮಾತುಗಳನ್ನು ನಾವು 'ವಚನ'ಗಳೆಂದೇ ಕರೆಯಬಹುದೇನೋ. ವಚನ ಎಂದರೆ ಅದು ಶೃತಿಯೂ ಅಲ್ಲ. ಸ್ಮೃತಿಯೂ ಅಲ್ಲ. 'ಶೃತಿ' ಪರಮಾತ್ಮನಿಂದ ಋಷಿ ನೇರ ಕೇಳಿ ಪಡೆದಿದ್ದಾದರೆ, 'ಸ್ಮೃತಿ' ಅನುಸರಿಸಬೇಕಾದ ಆಜ್ಞಾರೂಪವಾದ ನೀತಿ ಸಂಹಿತೆ. ಆದರೆ ಶೃತಿ ಮತ್ತು ಸ್ಮೃತಿಯ ರೂಢಿಗತ ಜಾಲದಲ್ಲಿ ಸಿಕ್ಕಿದ ಮನುಷ್ಯನನ್ನು ಬಿಡುಗಡೆ ಮಾಡಲೆಂದೇ ಕೃಷ್ಣಾಜಿ ಮಾತು 'ವಚನ'ಗಳಾಗುತ್ತವೆ. ಇಲ್ಲಿ ಒಂದು ವಿಷಯ ಗಮನಿಸುವುದಾದರೆ, ನಮ್ಮ ಸಂಸ್ಕೃತಿ, ಜಾಯಮಾನಕ್ಕೆ ಹತ್ತಿರವಾದ ಶೃತಿ, ಸ್ಮೃತಿ ಹಾಗೂ ವಚನ ಎಂಬ ಶಬ್ದಗಳ ಮೂಲಕ ಕೃಷ್ಣಾಜಿಯವರು ಏನು ಹೇಳುತ್ತಾರೆ ಎಂಬುದನ್ನು ಅನಂತಮೂರ್ತಿಯವರು ಸೂಕ್ಷ್ಮವಾಗಿ ವಿವರಿಸಿದ್ದಾರೆ.

ಹಾಗಿದ್ದಲ್ಲಿ, ಕೃಷ್ಣಾಜಿಯವರು ತಮ್ಮ ಟೀಚಿಂಗ್ಸ್ ಮೂಲಕ ನಮಗೆ ನೀಡುವುದು ಸ್ವಯಂ ಶಿಸ್ತೇ? ಪ್ರಾರ್ಥನೆಯೇ? ಯೋಗವೇ?

ಖಂಡಿತ ಅಲ್ಲ. ಯಾಕೆಂದರೆ, ಸ್ವಯಂ ಶಿಸ್ತೆಂಬುದು ನಾವು ಪ್ರಜ್ಞಾಪೂರ್ವಕವಾಗಿ ರೂಪಿಸಿಕೊಳ್ಳುವಂತಹದ್ದು. ಇನ್ನು ಪ್ರಾರ್ಥನೆಯೆಂಬುದು ನಾವು ಬಯಸುವಂತಹ ಉತ್ತರವನ್ನು ತಂದುಕೊಡಬಹುದು. ಆ ಉತ್ತರವು ನಿಮ್ಮ ಅಪ್ರಜ್ಞಾ ಸ್ಥಿತಿಯಿಂದ, ನಮ್ಮೆಲ್ಲಾ ಬೇಡಿಕೆಗಳ ಗೋದಾಮಿನಿಂದ ಬಂದಿರುವಂತಹದ್ದಾಗಿರಬಹುದು. ಹಾಗಿದ್ದಲ್ಲಿ, ಅದು ದೇವರ ವಾಣಿಯಾಗಿರಲು ಸಾಧ್ಯವೇ ಇಲ್ಲ.

ಪ್ರಾರ್ಥನೆಗೆ ಬರುವುದಾದರೆ, ಕೇವಲ ಯಾವುದೋ ಮಂತ್ರಗಳು, ಸ್ತೋತ್ರಗಳ ನಿರಂತರ ಪುನರುಚ್ಚಾರದಿಂದ, ನಿಮ್ಮ ಆಲೋಚನೆಗಳನ್ನು ನಿಯಂತ್ರಿಸುವುದರಿಂದ, ಮನಸ್ಸು ಮೌನವಾಗುತ್ತದೆ. ಆ ಮೌನ ವಾಸ್ತವದ ಧ್ವನಿಯಲ್ಲ. ಯಾಕೆಂದರೆ, ವಾಸ್ತವದ ಧ್ವನಿಯು ನಿಮಗೇ ಬರಬೇಕು. ಅದನ್ನು ಕೋರುವುದಲ್ಲ, ಪ್ರಾರ್ಥಿಸಲಾಗುವುದಿಲ್ಲ. ಇಂತಹ ಪ್ರಾರ್ಥನೆಯಿಂದ ನಾವು ಯೋಗದೆಡೆಗೆ ತೆರಳುತ್ತೇವೆ. ಯೋಗಕ್ಕೆ ಅವಶ್ಯವಾಗಿರುವುದು ಏಕಾಗ್ರತೆ. ಏಕಾಗ್ರತೆ ಪ್ರತ್ಯೇಕತೆಯೇ ಹೊರತು ಬೇರೇನೂ ಅಲ್ಲ. ನಾವು ಸಾಮಾನ್ಯವಾಗಿ ಧ್ಯಾನವೆಂದು ಕರೆಯುವಂತಹದ್ದು ಪ್ರತಿರೋಧವನ್ನು ಒಡ್ಡುವ ಮಾರ್ಗವಷ್ಟೆ. ನಮ್ಮ ಆಯ್ಕೆಯ ವಿಷಯಕ್ಕೇ ಮೀಸಲಾದಂತಹ ಏಕಾಗ್ರತೆ.

ನೀವು ಏನನ್ನಾದರೂ ಆಯ್ಕೆ ಮಾಡಲು ಮಾಡುವಂತಹದ್ದಾದರೂ ಏನು? ಇದು ಒಳ್ಳೆಯದು, ಇದು ನಿಜವಾದ್ದು, ಸತ್ಯವಾದ್ದು, ಉಳಿದದ್ದು ಇವಲ್ಲ ಎಂದು ಹೇಳುವಂತೆ ಮಾಡುವುದಾದರೂ ಏನು? ನಮ್ಮ ಆಯ್ಕೆ ನಮ್ಮ ಸಂತೋಷ, ಪ್ರತಿಫಲ ಅಥವಾ ಸಾಧನೆಯನ್ನು ಏಕೆ ಅವಲಂಬಿಸಿರುತ್ತದೆ? ನೀವು ಯಾತಕ್ಕಾಗಿ ಆಯ್ಕೆ ಮಾಡಿಕೊಳ್ಳುತ್ತೀರಿ? ಪ್ರತಿಯೊಂದನ್ನು ಯಾಕೆ ಪರೀಕ್ಷಿಸಬಾರದು? ನೀವು ಹಲವು ವಿಚಾರಗಳಲ್ಲಿ ಆಸಕ್ತಿಯಿರಿಸಿಕೊಂಡಿದ್ದಲ್ಲಿ, ಒಂದನ್ನು ಮಾತ್ರ ಯಾಕೆ ಪರೀಕ್ಷಿಸುತ್ತೀರಿ? ಪ್ರತಿರೋಧವನ್ನು ಸೃಷ್ಟಿಸುವ ಬದಲು, ಒಂದು ಆಲೋಚನೆ, ಒಂದು ಆಸಕ್ತಿಯ ಬದಲು ಪ್ರತಿಯೊಂದು ಆಸಕ್ತಿ ಹುಟ್ಟಿದಾಗಲೇ ಅದರ ಒಳಹೊಕ್ಕು ನೋಡುವ ಮನಸ್ಸು ಯಾಕೆ ಮಾಡಬಾರದು?

ಇಂತಹ ಹಲವಾರು ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ತಿಕ್ಕಾಟಕ್ಕೆ, ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತವೆ. ವಾಸ್ತವವೇನೆಂದರೆ, ನಮಗೆ ತಿಳಿದೋ, ತಿಳಿಯದೋ ನಾವು ಹಲವಾರು ಆಸಕ್ತಿಗಳಿಂದ ಮಾಡಲ್ಪಟ್ಟಿದ್ದೇವೆ. ನಮಗೆ ಹಲವಾರು ಮುಖವಾಡಗಳಿವೆ. ಹಾಗಿದ್ದಲ್ಲಿ, ಎಲ್ಲವನ್ನೂ ಬಿಟ್ಟು ಒಂದನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ. ಅದಕ್ಕಾಗಿ ಯಾಕೆ ಒಂದರ ವಿರುದ್ಧ ಪ್ರತಿರೋಧ, ಘರ್ಷಣೆ ಹಾಗೂ ತಿಕ್ಕಾಟವನ್ನು ಸೃಷ್ಟಿಸಿಕೊಂಡು ನಮ್ಮೆಲ್ಲಾ ಶಕ್ತಿಯನ್ನು ವ್ಯಯಿಸುತ್ತೇವೆ? ನಾವು ಕೇವಲ ಕೆಲವೇ ಕೆಲವು ಆಲೋಚನೆಗಳಲ್ಲ, ಪ್ರತಿಯೊಂದು ಆಲೋಚನೆಯನ್ನು ಅದು ಹುಟ್ಟುತ್ತಿದ್ದಾಗಲೇ ಪರಿಗಣಿಸಿದಲ್ಲಿ, ಪ್ರತ್ಯೇಕತೆ ಇರಲಾರದು.

ಎಲ್ಲಿ ಅಭಿಪ್ರಾಯ ಇರುತ್ತದೋ, ಹೋಲಿಕೆ ಇರುತ್ತದೋ, ತಿರಸ್ಕಾರವಿರುತ್ತದೋ, ಅಲ್ಲಿ ಮನಸ್ಸಿನ ಮುಕ್ತತೆ ಇರಲಾರದು. ಅಲ್ಲಿ ಸಂಕೇತಗಳು ಹಾಗೂ ವ್ಯವಸ್ಥೆಗಳ ದಬ್ಬಾಳಿಕೆಯಿಂದ, ಭೂತದಿಂದ ಹಾಗೂ ಅಂತಹ ಪರಿಸರದಿಂದ ಸ್ವಾತಂತ್ರ್ಯ ಸಿಗಲಾರದು. ಯಾಕೆಂದರೆ, ಅಭಿಪ್ರಾಯ ಹಾಗೂ ಹೋಲಿಕೆ ಅಂತಿಮವಾಗಿ ನಮ್ಮನ್ನು ದ್ವಂದ್ವಕ್ಕೆ ಸಿಲುಕಿಸುತ್ತವೆ. ಗ್ರಹಿಸುವವನ ಮನಸ್ಸು 'ಆಯ್ಕೆರಹಿತ ಜಾಗೃತಾವಸ್ಥೆ'ಯಲ್ಲಿದ್ದಾಗ ಮಾತ್ರ 'ಸೃಷ್ಟಿಶೀಲ ವಾಸ್ತವ' ತನ್ನನ್ನು ತಾನು ವಿಶ್ವವ್ಯಾಪಿಯಾಗಿ ತೆರೆದಿಡುತ್ತದೆ. ನೀವು ಪ್ರೀತಿಸಿದಲ್ಲಿ, ನೀವು ಮನಸ್ಸಿಗೆ ಬಂದದ್ದು ಮಾಡಬಹುದು. ಆದರೆ, ಕೆಲವು ಪಾರಂಪರಿಕ ವ್ಯವಸ್ಥೆ ಹಾಗೂ ನಿಯಮಗಳು, ಆದರ್ಶಗಳು ಹಾಗೂ ನಿರ್ಬಂಧಗಳಿಗೆ ನಿಷ್ಠರಾಗಿ ನೀವು ನಿಮ್ಮ ಮನಸ್ಸಿಗೆ ಬಂದದ್ದು ಮಾಡುವ ಅಥವಾ ಮಾಡದೇ ಇರುವುದರೊಂದಿಗೆ ಆರಂಭಿಸಿದಲ್ಲಿ, ನೀವು ಎಂದೂ ಪ್ರೀತಿಸಲಾರಿರಿ. ಕೇವಲ 'ಆಯ್ಕೆರಹಿತ ಜಾಗೃತಾವಸ್ಥೆ' ಮಾತ್ರ 'ದ್ವಂದ್ವರಹಿತ' ಸ್ಥಿತಿಗೆ, ಒಟ್ಟು ಹೊಂದಾಣಿಕೆ ಹಾಗೂ ಒಟ್ಟು ಪ್ರೀತಿಯಲ್ಲಿ ವೈರುಧ್ಯಗಳನ್ನು ಒಂದುಗೂಡಿಸುವತ್ತ ಕರೆದೊಯ್ಯುತ್ತದೆ. ಈ ಆಯ್ಕೆರಹಿತ ಜಾಗೃತಾವಸ್ಥೆಯೇ ಬದುಕಿನ ಎಲ್ಲಾ ಸಂದರ್ಭಗಳಲ್ಲಿ, ಪ್ರತಿಯೊಂದು ಕ್ಷಣದಲ್ಲಿ ಪರಿಣಾಮಕಾರಿಯಾದ ಧ್ಯಾನವಾಗಿದೆ.

ನಿಜವಾದ ವಿಮೋಚನೆಯೆಂದರೆ, 'ಸೃಷ್ಟಿಶೀಲ ವಾಸ್ತವ'ದ ಒಳ ಸ್ವಾತಂತ್ರ್ಯ. ಇದು ವರವಲ್ಲ. ಇದನ್ನು ಶೋಧಿಸಬೇಕು, ಅನುಭವಿಸಬೇಕು. ಜ್ಞಾನವೆಂಬುದು ವಿವೇಕಕ್ಕೆ, ನಮ್ಮ ಸ್ವಯಂನ್ನು ಕ್ಷಣದಿಂದ ಕ್ಷಣಕ್ಕೆ ತೆರೆದಿಡುವುದಕ್ಕೆ ಒಂದು ತಡೆ. ವಿವೇಕದ ಅಚಲತೆಯನ್ನು ತಲುಪಿರುವ ಮನಸ್ಸು ಮಾತ್ರ ಪ್ರೀತಿಯೆಂದರೇನು ಎಂಬುದನ್ನು ಕಾಣಬಲ್ಲದು. ಪ್ರೀತಿಯೆಂಬುದು ವೈಯುಕ್ತಿಕವೂ ಅಲ್ಲ, ಅವೈಯುಕ್ತಿವೂ ಅಲ್ಲ. ಪ್ರೀತಿಯೆಂದರೆ ಪ್ರೀತಿಯಷ್ಟೆ. ಮನಸ್ಸಿನಿಂದ ಆಂತರಿಕ ಬಾಹ್ಯವೆಂದು ವ್ಯಾಖ್ಯಾನಿಸಲ್ಪಡುವ, ವಿವರಿಸಲ್ಪಡುವುದಲ್ಲ. ಪ್ರೀತಿಯೇ ಅದರ ಅನಂತತೆ. ಅದೇ ನಿಜವಾದುದು, ಉತ್ಕೃಷ್ಟವಾದುದು, ಅಗಣಿತವಾದುದು.

ಪ್ರೀತಿಯನ್ನು ಚಿಂತಿಸಲಾಗುವುದಿಲ್ಲ, ಪ್ರೀತಿಯನ್ನು ರೂಢಿಸಿಕೊಳ್ಳಲಾಗುವುದಿಲ್ಲ, ಅಭ್ಯಾಸ ಮಾಡಿಕೊಳ್ಳಲಾಗುವುದಿಲ್ಲ. ಪ್ರೀತಿಯ ಆಚರಣೆ, ಭ್ರಾತೃತ್ವದ ಆಚರಣೆ, ಮನದ ಬಯಲಲ್ಲೇ ಇದೆ. ಆದ್ದರಿಂದಲೇ ಅದು ಪ್ರೀತಿಯಲ್ಲ. ಇದು ಯಾವಾಗ ನಿಲ್ಲುತ್ತದೋ ಆಗ ಮಾತ್ರ ಪ್ರೀತಿ ಅಸ್ತಿತ್ವಕ್ಕೆ ಬರುತ್ತದೆ. ಆಗ ಮಾತ್ರ ನಿಮಗೆ ಪ್ರೀತಿಯೆಂದರೇನು ಎಂಬುದು ತಿಳಿಯುತ್ತದೆ. ಆಗ ಪ್ರೀತಿಯೆಂಬುದು ಗುಣಾತ್ಮಕವಾದುದಾಗಲಿ, ಪರಿಮಾಣಾತ್ಮಕವಾದುದಾಗಲಿ ಆಗಿರುವುದಿಲ್ಲ. ನೀವು ನಾನು ಇಡೀ ಪ್ರಪಂಚವನ್ನು ಪ್ರೀತಿಸುತ್ತೇನೆ ಎಂದು ಹೇಳುವುದಿಲ್ಲ. ಆದರೆ, ನಿಮಗೆ ಒಬ್ಬರನ್ನಾದರೂ ಪ್ರೀತಿಸುವುದು ತಿಳಿದಿದ್ದಲ್ಲಿ, ಸಮಸ್ತವನ್ನೂ ಪ್ರೀತಿಸುವುದು ನಿಮಗೆ ತಿಳಿದಿರುತ್ತದೆ. ಯಾಕೆಂದರೆ, ನಮಗೆ ಒಬ್ಬರನ್ನೂ ಪ್ರೀತಿಸುವುದು ತಿಳಿದಿಲ್ಲ ಎಂದ ಮೇಲೆ ಮಾನವಕುಲವನ್ನು ಪ್ರೀತಿಸುವುದು ಕಲ್ಪನಾತ್ಮಕವಾದುದಷ್ಟೆ. ಪ್ರೀತಿಯಿದ್ದಾಗ ಮಾತ್ರ ನಮ್ಮೆಲ್ಲರ ಸಮಸ್ಯೆಗಳನ್ನು ಬಗೆಹರಿಸಬಹುದು. ಆಗ ಮಾತ್ರ ನಮಗೆ ಸಂತೋಷ, ಆನಂದದ ಬಗ್ಗೆ ತಿಳಿಯಲು ಸಾಧ್ಯ.

ಹೀಗೆ ಹೇಳುತ್ತಾ 'ಪ್ರೀತಿ'ಯಿಂದ ಮಾತ್ರ ಈ ಜಗದೆಲ್ಲಾ ಕಷ್ಟನಷ್ಟಗಳನ್ನು ಸರಿಪಡಿಸಬಹುದು ಎಂಬುದನ್ನು ಹೇಳುತ್ತಾ, 'ಪ್ರೀತಿ'ಯ ಸಂದೇಶವನ್ನು ಜಗತ್ತಿಗೇ ನೀಡಿದ, ಅನಂತಮೂರ್ತಿಯವರು ಕರೆಯುವಂತೆ 'ಗುರುಮಿತ್ರ' ಕೃಷ್ಣಾಜಿಯವರಿಗೆ ನನ್ನ ನಮನಗಳು. 'ಮತೀಯತೆ ಆಗದ, ಜನಾಂಗ ದ್ವೇಷವಾಗದ ಆಧ್ಯಾತ್ಮಿಕ ಸತ್ಯಗಳು ಇವೆ ಎಂಬುದನ್ನು ಈ ನಮ್ಮ ದುಷ್ಟಕಾಲದಲ್ಲಿ ಹೇಳಬಲ್ಲವರು ಬೇಕು.' ಅದಕ್ಕಾಗಿಯೇ ಕೃಷ್ಣಾಜಿಯವರ 'ಟೀಚಿಂಗ್ಸ್' ನಮಗೆ ಬೇಕು. ಯಾಕೆಂದರೆ, ಅವರೇ ಒಂದೆಡೆ ಹೇಳುವಂತೆ, ಜೀವನವೆಂಬುದು ಕಲಿಸುವ ಮತ್ತು ಕಲಿಯುವ ಸತತ ಪ್ರಕ್ರಿಯೆ....

Rating
No votes yet

Comments