ಮುನೀ

ಮುನೀ

"ಟ್ರೀನ್ ಟ್ರೀನ್ ...."
ಫೋನಿನ ರಿಂಗ್ ಕೇಳಿದಾಗ ತಾನು ನಿರೀಕ್ಷಿಸುತ್ತಿದ್ದ ಮಗನ ಕರೆಯಾಗಿರಬಹುದು ಎಂದು ಊಹಿಸಿ ಖದೀಜುಮ್ಮ ಫೋನೆತ್ತಿ "ಹಲೋ" ಎಂದರು
"ಹಲೋ ಅಸ್ಸಲಾಮು ಅಲೈಕುಂ"
"ವ ಅಲೈಕುಂ ಸಲಾಂ ಯಾರು?"
"ಉಮ್ಮ ನಾನು ಮುನೀರ್"
"ಮುನೀ ಯಾವಾಗ ತಲುಪಿದ್ದೀಯ , ಹೇಗಿದ್ದೀಯ..?"
"ಬೆಳಿಗ್ಗೆ....... ಹತ್ತು ಗಂಟೆಗೆ"
"ಹೋಗುವಾಗ ತೊಂದರೆ ಏನೂ ಆಗಿಲ್ಲ ತಾನೆ?"
"ಇಲ್ಲ"
"ದುಡ್ಡು ಜೋಪಾನ"
"ಸರಿ ಉಮ್ಮ ಬಾಪ ಇಲ್ವಾ?"

"ಇದ್ದಾರೆ ಕೊಡ್ತೇನೆ.." ಎನ್ನುತ್ತಾ, ಮಗನ ಫೋನೆಂದು ತಿಳಿದು ಓಡಿ ಬಂದಿದ್ದ ಅಬ್ಬು ಹಾಜಿಗೆ ಫೋನು ಕೊಟ್ಟರು ಖದೀಜುಮ್ಮ
"ಅಸ್ಸಲಾಮು ಅಲೈಕುಂ"
"ವ ಅಲೈಕುಂ ಸಲಾಂ " ಎಂದು ಮಗನಿಗೆ ದೇವರ ರಕ್ಷಣೆ ಆಶಿರ್ವದಿಸಿ,
"ಏನಾಯ್ತು ಅಫೀಸಿಗೆನಾದ್ರು ಹೋಗಿದ್ದಿಯ?" ವೀಸಾ ಮಾಡಿಸಲೆಂದು ಮುಂಬಯಿಗೆ ಹೋಗಿದ್ದ ಮುನೀರ್ ನಲ್ಲಿ ವಿಚಾರಿಸಿದರು ಅಬ್ಬು ಹಾಜಿ
"ಹೌದು ನಾಳೆ ಹೋಗಲಿಕ್ಕೆ ಹೇಳಿದ್ರು ನಾಳೆನೆ ಹಣ ಕೊಡಲಿಕ್ಕೆ ಹೇಳಿದ್ರು"
"ದುಡ್ಡು ಜೋಪಾನ ಹೆಚ್ಚೆನಾದ್ರು ಬೇಕಾ..?"
"ಇಲ್ಲ"
"ಬೇಕಿದ್ರೆ ಸಿದ್ದಿಕ್ ನಿಂದ ತಗೋ"
"ಬೇಕಾಗಿಲ್ಲ"
"ಇನ್ನೇನಾದ್ರು ಇದೆಯಾ?"
"ಇಲ್ಲ ಇಡ್ತೀನಿ ಅಸ್ಸಲಾಮು ಅಲೈಕುಂ"
"ವ ಅಲೈಕುಂ ಸಲಾಂ" ಎನ್ನುತ್ತಾ 'ಒಮ್ಮೆ ಎಲ್ಲ ಸರಿಯಾಗಿ ಕಡಲು ದಾಟಿದರೆ ಸಾಕಿತ್ತು ರಬ್ಬೆ' ಎಂದು ಭಾರವೆಲ್ಲ ದೇವರಿಗೆ ವಹಿಸಿ, "ಖದೀಜ ಆ ಸಿದ್ದೀಕ್ ನ ಫೋನ್ ನಂಬರ್ ಹುಡುಕಿ ಕೊಡು" ಎಂದು ಅಬ್ಬು ಹಾಜಿ ಫೋನೆತ್ತಿದರು

ಸಿದ್ದಿಕ್ ಅಬ್ಬು ಹಾಜಿಯ ಸಹೋದರಿಯ ಮಗ ಮುಂಬೈ ಯಲ್ಲಿ ಕೆಲಸಕ್ಕಿದ್ದ

******

ಟ್ರೀನ್ ಟ್ರೀನ್ ...
"ಅಷ್ಟು ಜೋರಾಗಿ ಫೋನ್ ರಿಂಗ್ ಆಗ್ಗ್ತಾ ಇದೆ ಇನ್ನೂ ಫೋನ್ ತೆಗಿಲಿಕ್ಕೆ ಆಗುದ್ಲ್ವ ಖದೀಜ?" ಅರ್ಧಾಂಗಿಯನ್ನು ಬೈಯುತ್ತಾ ಅಬ್ಬು ಹಾಜಿ ಬಂದರು. ಖದೀಜುಮ್ಮ ನಮಾಜ್ ಮಾಡುವುದು ಕಂಡು ಸುಮ್ಮನಾಗಿ ಫೋನ್ ಕಿವಿಗಿತ್ತು "ಹಲೋ" ಎಂದರು.
"ಹಲೋ ಅಸ್ಸಲಾಮು ಅಲೈಕುಂ"
"ಯಾರು ಬಾಪ ಅಲ್ವ "
"ಹೌದು"
"ಉಮ್ಮ ಇಲ್ವಾ" ಪ್ರತೀ ಬಾರಿ ಅಮ್ಮ ಫೋನು ತೆಗೆಯುತ್ತಿದ್ದ ರೂಡಿ ಬದಲಾದಾಗ ಮುನೀರ್ ಸಂಶಯದಿಂದ ಕೇಳಿದ
"ಇದ್ದಾರೆ ನಮಾಜ್ ಮಾಡ್ತಿದ್ದಾರೆ" ಅಬ್ಬು ಹಾಜಿ ಉತ್ತರಿಸಿದರು
"ನಾನು ಏಜೆಂಟ್ ಅನ್ನು ಕಂಡಿದ್ದೆ ಎರಡು ದಿನ ದಲ್ಲಿ ವೀಸಾ ಸರಿಯಾಗುತ್ತೆ, ದುಡ್ಡು ಕೊಡ್ಲಿಲ್ಲ ನಾಳೆ ಕೊಡಬೇಕಾಗಬಹುದು "
ಹೇಳಬೇಕಾದದ್ದನ್ನೆಲ್ಲ ಒಂದೇ ಮಾತಲ್ಲಿ ಹೇಳಿ ಮುಗಿಸಿದ.
"ದುಡ್ಡು ಜೋಪಾನ , ಎಲ್ರ ಅದ್ರು ಬ್ಯಾಗನ್ನೆಲ್ಲ ತೆಗಿಬೇಡ ಹುಷಾರು ಆಯ್ತಾ?..."
"ಸರಿ ಬಾಪ ಉಮ್ಮನ ನಮಾಜ್ ಆಯ್ತಾ?"
"ಇಲ್ಲ"
"ಸರಿ ಅವರಿಗೆ ಸಲಾಂ ತಿಳಿಸಿ ದುವಾ ಮಾಡಿ ಇಡ್ತೀನಿ ಅಸ್ಸಲಾಮು ಅಲೈಕುಂ"
"ವ ಅಲೈಕುಂ ಸಲಾಂ "

********

'ಮುನೀರ್ ಫೋನ್ ಮಾಡಿ ಒಂದು ವಾರ ಆಯ್ತು , ಇನ್ನೂ ಯಾಕೆ ಫೋನ್ ಮಾಡಿಲ್ಲ ..!, ಏನಾಗಿರಬಹುದು ..! ಏನಾದರೂ ಅನಾಹುತ ..! ಇಲ್ಲ ಹಾಗೇನೂ ಆಗಿರಲಿಕ್ಕಿಲ್ಲ ..' ಹೀಗೆ ಯೋಚಿಸ್ತಾ ಅಬ್ಬು ಹಾಜಿ ಆ ಕಡೆ ಈ ಕಡೆ ಹೆಜ್ಜೆ ಹಾಕ್ತಿದ್ರು .

ಮತ್ತೇಕೆ ಅವನು ಫೋನ್ ಮಾಡ್ಲಿಲ್ಲ? ಇನ್ನೇನಾದರೂ ನಮ್ಮ ಫೋನ್ ಕೆಡಾಯ್ತಾ?' ಎಂದೆನಿಸಿ ಫೋನೆತ್ತಿ ನೋಡಿದರು ಇಲ್ಲ ಡಯಲ್ ಟೋನ್ ಕೇಳ್ತಾ ಇದೆ ಫೋನ್ ಸರಿಯಾಗೇ ಇದೆ ಇನ್ನೆನಾಯ್ತು ಅವನಿಗೆ..?' ಹೀಗೆ ಯೋಚನೆ ಗಳು ಅಬ್ಬುಹಾಜಿ ಯ ಮನಸ್ಸಲ್ಲಿ ತುಂಬ ತೊಡಗಿತು. "ಫೋನ್ ಬಂದಿರಬಹುದ ಈ ಶೈತಾನಿಗೆ ನಿದ್ರೆ ಬಂದ್ರೆ ದುನಿಯಾವಿನ ಜ್ಞಾನ ಇದ್ರೆ ತಾನೇ ..!" ಎಂದು ಖದೀಜುಮ್ಮನ ಮುಖ ನೋಡಿ ಬೊಬ್ಬಿಡುತ್ತಾ "ಒಮ್ಮೆ ಸಿದ್ದೀಕ್ ನ ನಂಬರ್ ಕೊಡು " ಎಂದು ಗದರಿಸಿದರು.

ಅವಸದಲ್ಲಿ ಪುಸ್ತಕವನ್ನು ಹರಿದುಹಾಕುವಂತೆ ಸಿದ್ದಿಕ್ ನ ನಂಬರ್ ಹುಡಿಕಿ ಪತಿಯ ಕಡೆ ನೀಡಿದರು ಖದೀಜುಮ್ಮ ಅದನ್ನು ಪಡೆದು ಫೋನೆತ್ತಿದರು ಅಬ್ಬುಹಾಜಿ.

"ಹಲೋ ಬೊಂಬಾಯಿ ಅಲ್ವ?"
"ಹೌದು"
"ಅಲ್ಲಿ ಸಿದ್ದಿಕ್ ಸಿಗಬಹುದಾ?"
"ನಾನೇ ಸಿದ್ದಿಕ್ ಮಾತಾಡುವುದು"
"ಇದು ನಾನು ಕಾಕ ಮಾತಾಡುವುದು"
"ಏನು ಕಾಕ ಹುಷಾರಗಿದ್ದೀರ ದೀದಿ ಹೇಗಿದ್ದಾರೆ?"
"ಅಲ್ಹಂದುಲಿಲ್ಲ ರಾಹತ್ತ್ ನೀನು ಹೇಗಿದ್ದೀಯ?"
"ನಾನು ಕೂಡ ರಾಹತ್ತಗಿದ್ದೆನಿ, ಏನ್ ಕಾಕ ವಿಶೇಷವಾಗಿ?"
"ಏನಿಲ್ಲ ನಮ್ಮ ಮುನೀರ್ ಫೋನ್ ಮಾಡಿ ಒಂದು ವಾರ ಆಯಿತು, ಏನಾಯ್ತು ಎಂತ ಯಾವುದು ಗೊತ್ತಿಲ್ಲ"
"ಹಾಗಾ.. ಅವನು ಇಲ್ಲಿಂದ ಸ್ವಲ್ಪ ದೂರ್ದಲ್ಲಿರುವುದ ನಾನು ವಿಚಾರಿಸ್ತೀನಿ, ನೀವು ಗಾಬರಿ ಯಾಗ್ಬೇಡಿ"
"ಅವನಲ್ಲಿ ದುಡ್ಡು ಕೂಡ ಇತ್ತು"
"ಏನು ಆಗಿರಲಿಕ್ಕಿಲ್ಲ ಫೋನ್ ಮಾಡಿ ಸಿಕ್ಕಿರಲಿಕ್ಕಿಲ್ಲ ..ಆ ವೀಸಾ ಎಜೆಂಟಿನ ಹೆಸರೇನು ಕಾಕ?"
" ಏನೋ ಸೌದಿ ಸರ್ವಿಸ್ಸೋ ಏನೋ ಇರ್ಬೇಕು?"
"ಸರಿ ನಾನು ವಿಚಾರಿಸಿ ಮತ್ತೆ ಫೋನ್ ಮಾಡ್ತೇನೆ" ಎನ್ನುತ್ತಾ ಸಿದ್ದಿಕ್ ಫೋನಿಟ್ಟ.

ಅಬ್ಬು ಹಾಜಿ ಸಿದ್ದಿಕ್ ನ ಫೋನ್ಗಾಗಿ ಅಲ್ಲೇ ಕೂತು ಕಾಯುತ್ತಿದ್ದರು.

*******

"ಟ್ರೀನ್.... "
ಒಂದು ರಿಂಗ್ ಆಗುವುದರಲ್ಲೇ ಫೋನೆತ್ತಿದರು ಅಬ್ಬು ಹಾಜಿ
"ಹಲೋ"
"ಹಲೋ ನಾನು ಸಿದ್ದಿಕ್"
"ಹ್ಞಾ .. ಏನು ಸಿದ್ದಿಕ್ , ಮುನೀರ್ ಸಿಕ್ಕಿದ್ನ? ಏನಾಯ್ತು?"
" ನಾನು ತುಂಬಾ ಹುಡುಕಲಿಲ್ಲ ಅವನು ಸಿಗ್ತಾನೆ.."
"ಏನಾಯ್ತು ನೀನು ಆ ಎಜೆನ್ಟರಲ್ಲಿ ಕೇಳಿದ್ಯ?"
"ಅದು.."
"ಏನು ಸಿದ್ದಿ ಏನಾಯ್ತು?"
"ಆ ಏಜೆಂಟ್ ನವರು ಸರಿಯಲ್ಲ.."
"ಏನು ...?"
"ಹೌದು ಕಾಕ ಅವರು ಸುಮಾರು ದಿನಗಳಿಂದ ಅಲ್ಲಿಲ್ಲ"
"ಯಾ ರಬ್ಬೆ .. ಮುನೀ ಅವತ್ತೇ ಹಣ ಕೊಡ್ತೇನೆ ಅಂದಿದ್ದ.."
"ನೀವು ಹೆದರಬೇಡಿ. ದುಡ್ಡು ಕೊಟ್ಟಿರಲಿಕ್ಕಿಲ್ಲ, ಕೊಟ್ಟಿದ್ರೆ ಹೋಗ್ಲಿ ಅವನಿಗೆ ನಾನು ಇಲ್ಲೇ ಒಂದು ಕೆಲಸ ಕೊಡಿಸ್ತೀನಿ .. ಹಲೋ ... ಹಲೋ.. ಕಾಕ .."
ಸಿದ್ದಿಕ್ ಹೇಳುತ್ತಿದ್ದಂತೆ ಅಬ್ಬು ಹಾಜಿ ಫೋನಿಟ್ಟರು

"ಏನಾಯ್ತಂತೆ..?" ಸಪ್ಪೆಯಗಿದ್ದ ಪತಿಯನ್ನು ಖದೀಜುಮ್ಮ ಕೇಳಿದರು.
"ಸಿಕ್ಕಿಲ್ವಂತೆ.. ಅ ಏಜೆಂಟ್ ದುಪ್ಲಿಕೆಟಂತೆ .." ಎಂದರು ಬೇಸದಲ್ಲಿ.

ಮತ್ತೆರಡು ನಿಮಿಷ ಮೌನ ವಾಗಿತ್ತು. ಒಳಿತಿಗಾಗಿ ದೇವರಲ್ಲಿ ಮನಸ್ಸಲ್ಲೇ ಪ್ರಾರ್ಥಿಸುತ್ತಿದ್ದರು ಖದೀಜುಮ್ಮ .. ಅಗಾಗ ಏನೇನೋ ಗೊಣಗಿತ್ತಿದ್ದರು ರೋಧಿಸುತ್ತಾ.

"ಟ್ರೀನ್... ಟ್ರೀನ್...ಟ್ರೀನ್....."
ಫೋನೆಷ್ಟೇ ರಿಂಗ್ ಆದರೂ ಅಬ್ಬು ಹಾಜಿ ಗಮನಿಸಲೇ ಇಲ್ಲ. ಸ್ವಲ್ಪ ಹೊತ್ತು ಕಾದು , ಪತಿಯ ಮುಖ ನೋಡಿ ಖದೀಜುಮ್ಮ ಫೋನ್ ತೆಗೆಯಲು ಬಂದರು. ಫೋನೆತ್ತಿ
"ಹಲೋ.." ಎಂದರು
"ಹಲೋ ಅಸ್ಸಲಾಮು ಅಲೈಕುಂ"
"ವ ಅಲೈಕುಂ ಸಲಾಂ.. ಯಾರು?"
"ಉಮ್ಮ, ನಾನು ಮುನೀರ್ ಮಾತಡೋದು...."

*******

ಅನ್ಯ ಭಾಷಾ ಪದಗಳು
------------------------------

ಅಸ್ಸಲಾಮು ಅಲೈಕುಂ, ವ ಅಲೈಕುಂ ಸಲಾಂ : ದೇವರ ರಕ್ಷಣೆ ಇರಲಿ ಎಂದು ಮುಸ್ಲಿಮರು ಮೊದಲು ಕಂಡಾಗ, ಮಾತು ಪ್ರಾರಂಬಿಸುವಾಗ ಹೇಳುವ ವಾಕ್ಯ .

ರಬ್ಬೆ : ದೇವನೆ
ಬಾಪ : ಅಪ್ಪ
ಉಮ್ಮ : ಅಮ್ಮ
ದುವಾ : ಪ್ರಾರ್ಥನೆ
ಶೈತಾನ್ : ಪಿಶಾಚಿ
ದುನಿಯಾವ್ : ಇಹಲೋಕ
ರಾಹತ್ತ್ : ಆರಾಮ
ಕಾಕ : ಮಾವ
ದೀದಿ : ಅಕ್ಕ (ಅತ್ತೆ)

~~~~~~

ಅಬ್ದುಲ್ ರಶೀದ್ ಸುಳ್ಯ (ಅರಸು)

Rating
No votes yet

Comments