ಟಿಂಗಿಯ ಲೋಕ

ಟಿಂಗಿಯ ಲೋಕ

ಅಕ್ಕನ ಮದುವೆಯ ಸಿದ್ಧತೆಗೆಂದು ಅಪ್ಪ-ಅಮ್ಮ ಇಬ್ಬರೂ ಬೆಂಗಳೂರಿಗೆ ಹೋಗಿದ್ದರು. ನಾನು, ನನ್ನ ಎರಡನೆಯ ಅಕ್ಕ ಮತ್ತು ಅಣ್ಣ ಮಾತ್ರ ಮನೆಯಲ್ಲಿದ್ದೆವು. ರಾತ್ರಿ ಮಲಗಿ ಸ್ವಲ್ಪ ಹೊತ್ತಿಗೆಲ್ಲ ಪಕ್ಕದ ರಸ್ತೆಯ ಕಡೆಯಿಂದ ನಾಯಿಮರಿಯೊಂದು ಅಳುವ ಸದ್ದು ಶುರುವಾಯಿತು. ಎಷ್ಟು ಹೊತ್ತಾದರೂ ಅಳು ನಿಲ್ಲಿಸದಿದ್ದಾಗ, ನಮ್ಮಣ್ಣ ಕಿಟಕಿಯಲ್ಲಿ ನೋಡಿ, ’ಅಯ್ಯೋ ಪಾಪ, ಛಳಿ ಕಣೆ’ ಎಂದು ಎತ್ತಿಕೊಂಡು ಬಂದೇ ಬಿಟ್ಟ. ೨- ೩ ವಾರಗಳ ಕಂದು ಬಣ್ಣದ ಮುದ್ದಾದ ಮರಿ. ಹಣೆಯ ಮೇಲೆ ಬಿಳಿಯದೊಂದು ಗೆರೆ ಮಧ್ಯದಲ್ಲಿ ! ನಾವದನ್ನು ಮನೆಯ ಹಿತ್ತಲಲ್ಲಿ ಒಂದು ಡ್ರಮ್ ನಲ್ಲಿ ಮಲಗಿಸಿ, ಬೆಚ್ಚಗೆ ಮಾಡಿ, ದೀಪವಾರಿಸಿ ಬಂದು ಮಲಗಿದ ತಕ್ಷಣ ಮತ್ತೆ ಕುಂಯ್... ರಾಗ, ನೋಡಿದರೆ ಡ್ರಮ್ ನಿಂದ ಹೊರಗೆ ಧುಮುಕಿ ನಡುಗುತ್ತಿದೆ. ಸರಿ ಮತ್ತೆ ಕೂಡಿಸಿ ಬಂದರೆ ಮತ್ತದೇ ರಾಗ... ಹೀಗೆ ಮೂರು ಬಾರಿ ಆದನಂತರ ಅದರ ಹೊಟ್ಟೆ ಹಸಿದಿರಬಹುದೆಂಬುದು ನಮ್ಮ ಮಂದ ಬುದ್ಧಿಗೆ ಹೊಳೆಯಿತು ! ಹಾಲು ತಟ್ಟೆಯಲ್ಲಿಟ್ಟ ತಕ್ಷಣ ಸರ ಸರ ಕುಡಿದು ಬೆಚ್ಚಗೆ ಮಲಗಿತ್ತು. ಬೆಳಿಗ್ಗೆ ಎದ್ದು ಅಮ್ಮನ ಕೆಂಗಣ್ಣು ನೆನಪಿಸಿಕೊಂಡು, ಎಷ್ಟು ಓಡಿಸಿದರೂ ಹೋಗದೆ, ಎಲ್ಲ ವಿರೋಧಗಳನ್ನೂ (ನಮ್ಮಣ್ಣನ ಸದ್ದಿಲ್ಲದ ಬೆಚ್ಚನೆ ಸಪೋರ್ಟ್ನಲ್ಲಿ) ಎದುರಿಸಿ, ನಮ್ಮ ಸಂಸಾರದ ಒಬ್ಬ ಸದಸ್ಯನಾಗೇ ಬಿಟ್ಟ ’ಟಿಂಗಿ’.

ಒಬ್ಬ ಮನುಷ್ಯನಿಗಿಂತ ಚೆನ್ನಾಗಿ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಿದ್ದ ಟಿಂಗಿ, ನಮ್ಮ ತಾಯಿಯವರಿಗೆ ಮಾತ್ರ ಹೆದರಿದಂತೆ ನಾಟಕವಾಡುತ್ತಾ ಅತಿ ಮರ್ಯಾದೆ ತೋರಿಸುತ್ತಿದ್ದ. ತುಳಸಿ ಪೂಜೆಗೆ ಹೋಗುವಾಗ ಬಾಲ ಮುದುರಿ, ದಾರಿ ಬಿಟ್ಟು, ಅಮ್ಮ ವಾಪಸ್ಸು ಬರುವಾಗ ಮಾತ್ರ, ತಲೆ ಎತ್ತಿ, ಬಾಲ ಬಿದ್ದು ಹೋಗುವಂತೆ ಅಲ್ಲಾಡಿಸುತ್ತಾ, ಮಧ್ಯ ದಾರಿಯಲ್ಲಿ ನಿಂತಿರುತ್ತಿದ್ದ. ಅಮ್ಮ ಪ್ರಸಾದ ಕೊಟ್ಟರೆ ಮಾತ್ರ ದಾರಿ ಬಿಡುತ್ತಿದ್ದ ಒಳಗೆ ಬರಲು. ಮನೆಯ ಎಲ್ಲರನ್ನೂ ತನ್ನದೇ ಆದ ವಿಭಿನ್ನ ರೀತಿಯಲ್ಲಿ ಅರ್ಥ ಮಾಡಿಕೊಂಡು ಪ್ರೀತಿಸುತ್ತಿದ್ದ. ಹೊಸದಾಗಿ ಮದುವೆಯಾದ ನಮ್ಮ ಭಾವ ನಮ್ಮನೆಗೆ ಬರುವಾಗ, ರಾತ್ರಿ ಬಸ್ಸಿನಲ್ಲಿ ಬಂದು ಇವನ ಹೆದರಿಕೆಗೆ ಮುಂದಿನ ಊರಿನವರೆಗೂ ಹೋಗಿ, ಬೆಳಗಾದ ನಂತರ ವಾಪಸ್ಸು ಬರುವಂತೆ ಮಾಡುತ್ತಿದ್ದ. ಅಣ್ಣ ಎಂಜಿನಿಯರಿಂಗ್ ಓದಲು ಹೊರಟು ಹೋದಾಗ, ಅನ್ನ-ನೀರು ಬಿಟ್ಟು ಸತ್ಯಾಗ್ರಹ ಹೂಡಿ, ತನ್ನ ಅಸಂತೋಷ ವ್ಯಕ್ತಪಡಿಸಿದ್ದ. ರಜದಲ್ಲಿ ಅವನು ಊರಿಗೆ ಬಂದಾಗ, ಆಹಾ.... ಟಿಂಗಿಯ ಸಂಭ್ರಮ ನೋಡಲು ಅದ್ಭುತವಾಗಿರುತ್ತಿತ್ತು. ಅವನ ಹೆಸರು ಕರೆದರೇ ಸಾಗು, ಛಂಗನೆಗರಿ, ಸುತ್ತಲೂ ಹುಡುಕಾಡಿಬಿಡುತ್ತಿದ್ದ.

ಹತ್ತು ವರ್ಷ ಟಿಂಗಿ ನಮ್ಮ ಜೊತೆ ನಮ್ಮ ಎಲ್ಲಾ ಸುಖ-ದು:ಖ ಹಂಚಿಕೊಂಡು, ನಮ್ಮನ್ನಗಲಿದ. ಈಗಲೂ ಅವನ ಪ್ರೀತಿ, ಆಟಗಳು, ನಮಗೆ ಬೆಚ್ಚನೆ ನೆನಪು ತರುತ್ತವೆ.

"ವಿಜಯ ಕರ್ನಾಟಕ ಯುಗಾದಿ ವಿಶೇಷಾಂಕ ೨೦೦೯ ರ ಸಂಚಿಕೆಯಲ್ಲಿ ಪ್ರಕಟವಾಗಿದೆ"

Rating
No votes yet

Comments