ಒಂದು ಅಪೂರ್ಣ ಕವಿತೆ...

ಒಂದು ಅಪೂರ್ಣ ಕವಿತೆ...

ಮರೆಯಲಾಗದ ಕಹಿನೆನಪು
ಹರಿದ ಹಾಳೆಗಳಲ್ಲಿ...
ಹರಿವ ಕಣ್ಣೀರು, ದುಃಖ ಉಮ್ಮಳಿಸಲು
ಬೇಡವೀ ಜೀವನ....

ಜೀವನದ ಕಹಿ ಗಳಿಗೆಯಲ್ಲಿ ತೋಚಿದ ಕವನವನ್ನು ನನ್ನ ಡೈರಿಯಲ್ಲಿ ಗೀಚಿದ್ದೆ. ಇನ್ನೇನು ಜೀವನಕ್ಕೆ ವಿದಾಯ ಹಾಡುವ ಯೋಚನೆ ಒಂದೇ ಸಮನೆ ನನ್ನ ಹೃದಯದ ಬಾಗಿಲು ತಟ್ಟುತ್ತಿತ್ತು. ಆಮೇಲೆ ಏನೂ ಯೋಚಿಸಿಲ್ಲ...

ಕೊನೆಗೊಂದು ಬಾರಿ ಮರೀನಾಳ ಕಿನಾರೆಯಲ್ಲಿ ಒಂದಿಷ್ಟು ಕ್ಷಣ.... ಅದು ಮಾತ್ರ ಸಾಕು. ನನ್ನ ನಿಸ್ಸಹಾಯಕತೆಗೆ ಬಳಲಿದ ಮನಕೆ ಒಂದಿಷ್ಟು ನೆಮ್ಮದಿ ಸಿಗುವುದೇ ಅಲ್ಲಿ?
ಅಲ್ಪ ನೆಮ್ಮದಿ ಬೇಕು ಎಂದು ಒಳ ಮನಸ್ಸು ಹಾತೊರೆಯುತ್ತಿದ್ದರೂ...ಇನ್ನು ನನ್ನಿಂದ ಏನೂ ಮಾಡಲು ಸಾಧ್ಯವಿಲ್ಲ ಎಂಬ ಅನಿಸಿಕೆ... ಹೀಗೆ ಮನಸ್ಸು ಗೊಂದಲದ ಗೂಡಾಗಿತ್ತು.

"ಅಲ್್ವಿದಾ...ಮರೀನಾ...ಇನ್ನು ಮುಂದೆ ನಿನ್ನ ದಡದಲ್ಲಿ ಬಿಕ್ಕಿ ಬಿಕ್ಕಿ ಅತ್ತು, ನನ್ನ ಸಂಕಟವನ್ನು ಹೇಳಲು ಬರುವುದಿಲ್ಲ...ಸಾಕು ಈ ಜೀವನ..."

ಆ ಮರಳ ತಡಿಯಲ್ಲಿ ಒಂದೈದು ನಿಮಿಷ ಕುಳಿತು ಮತ್ತೆ ಮನೆಯ ಕಡೆಗೆ ಹೊರಟು ನಿಂತೆ. ಒಂದೇ ಸಮನೆ ಜೋರಾಗಿ ಕಡಲ್ಗಾಳಿ ಬೀಸುತ್ತಿತ್ತು. ಈ ಗಾಳಿಯನ್ನು ತೀಡಿ ಮುಂದೆ ಹೆಜ್ಜೆಯಿಡುತ್ತಿರುವಾಗ ಅಲ್ಲಿ ಕೆಲವೊಂದು ಮಕ್ಕಳು ಗಾಳಿಪಟ ಹಾರಿಸುವ ಹರಸಾಹಸದಲ್ಲಿ ತೊಡಗಿರುವುದನ್ನು ನೋಡಿ ಒಂದು ಕ್ಷಣ ನಿಂತೆ. ನಿಯಂತ್ರಣ ಸಿಕ್ಕದೆ ಆ ಗಾಳಿಪಟ ಎತ್ತರಕ್ಕೆ ಹಾರುವ ಬದಲು ಪದೇ ಪದೇ ನೆಲಕ್ಕಪ್ಪಳಿಸುತ್ತಿತ್ತು. ಇದನ್ನು ಲೆಕ್ಕಿಸದ ಆ ಪೋರರು ಗಾಳಿಪಟ ಮೇಲೆ ಹಾರಿಸಲೇ ಬೇಕು ಎಂಬ ಹಠದಿಂದ ನಿರಂತರ ಪ್ರಯತ್ನ ಮಾಡುತ್ತಿದ್ದರು. ಒಮ್ಮೆ ಅದು ನೆಲಕ್ಕೆ ಬಿದ್ದರೇನಂತೆ? ಅದನ್ನು ಹಿಡಿದು ಒಬ್ಬ ಪೋರ ಒಂದಷ್ಟು ದೂರ ಓಡಿದ. ಇನ್ನೊಬ್ಬ ದಾರವನ್ನು ಹಿಡಿದು ಕೊಂಡ. ಗಾಳಿಪಟ ಹಿಡಿದ ಪೋರ ರಭಸದಿಂದ ಅದನ್ನು ಮೇಲಕ್ಕೆಸೆದ...ಅಚ್ಚರಿ ಮೂಡಿಸುವಂತೆ ಗಾಳಿಪಟ ಮೇಲಕ್ಕೆ ಹಾರುತ್ತಿತ್ತು. ಗಾಳಿಯ ರಭಸವೂ ಕಮ್ಮಿಯಾಗಿತ್ತು. ಹುಡುಗರೆಲ್ಲರೂ ಗಾಳಿಪಟ ಮೇಲಕ್ಕೇರಿದ ಸಂತಸದಲ್ಲಿ ಕುಣಿದಾಡುತ್ತಿದ್ದರು..

ಅರೇ....ನಾನ್ಯಾಕೆ ಇಲ್ಲೇ ನಿಂತಿದ್ದೇನೆ? ಬೇಗ ಮನೆ ಸೇರಬೇಕಿದೆ. ಮತ್ತೆ ಈ ಮೊದಲೇ ನಿರ್ಧರಿಸಿದಂತೆ ಲೈಫ್್ಗೆ ಗುಡ್ ಬೈ ಹೇಳಬೇಕು. ಮರೀನಾ ಬೀಚ್್ನಿಂದ ಪಾರ್ಕ್ ಸ್ಟೇಷನ್್ಗೆ ಬಂದು ರೈಲು ಹತ್ತಿದೆ. ಇಂದು ರಾತ್ರಿ ಜೀವನಕ್ಕೆ ಅಂತ್ಯ ಹಾಡಬೇಕು. ಆದರೆ ಅದೇಕೋ ಮತ್ತೆ ಮತ್ತೆ ಆ ಗಾಳಿಪಟ ಹಾರಿಸುವ ಹುಡುಗರ ಹಠ, ಆ ರಭಸದ ಗಾಳಿಯನ್ನು ಲೆಕ್ಕಿಸದೆ ಗಾಳಿಪಟ ಹಾರಿಸಬೇಕೆಂಬ ಛಲ...ಮರೀನಾಳ ಮಡಿಲಲ್ಲಿ ಕಂಡಂತಹ ಆ ದೃಶ್ಯಗಳು ನನ್ನ ಮನಸ್ಸಿನ ಪುಟದಲ್ಲಿ ಹಾಗೇ ಹಾದು ಹೋಗುತ್ತಿತ್ತು.

ಅಂತೂ ಮನೆ ಸೇರಿದೆ. ನನ್ನ ಟೇಬಲ್ ಮೇಲಿರಿಸಿದ ಡೈರಿಯ ಹಾಳೆಯಲ್ಲಿ ಗೀಚಿದ ಕವಿತೆಯ ಸಾಲುಗಳನ್ನು ಮತ್ತೊಮ್ಮೆ ಓದಿದೆ.

ಆ ಕವಿತೆಯನ್ನು ಪೂರ್ತಿಗೊಳಿಸಬೇಕೆಂದು ಲೇಖನಿ ಹಿಡಿದುಕೊಂಡು ಕೂತರೂ ಮತ್ತೆ ಅದೇ ಗಾಳಿಪಟದ ನೆನಪು...ನಾನ್ಯಾಕೆ ಆ ಪುಟ್ಟ ಮಕ್ಕಳಂತೆ ಛಲವಾದಿಯಾಗಬಾರದು? ಎಂದು ಮನಸ್ಸು ಹೇಳಿದಂತಾಯಿತು.

ಇಲ್ಲ ಸಾಯಬೇಕು...ಆತ್ಮಹತ್ಯೆ...?

ಇದು ಸರೀನಾ?

ಕಷ್ಟಗಳನ್ನು ಹಿಮ್ಮೆಟ್ಟಿ ನಿಲ್ಲಬೇಕು..ನಾನ್ಯಾಕೆ ಹೆದರಿ ಓಡಲಿ?

ಐ ವಿಲ್ ಫೈಟ್ ಫೋರ್ ಇಟ್. ನಾನು ಪ್ರಯತ್ನಿಸಬೇಕು..ಗುರಿ ಮುಟ್ಟುವ ವರೆಗೆ.....

ಬೇಡ...

ಬೇಕು...ನಾನು ಅಷ್ಟು ಬೇಗ ಸೋಲೊಪ್ಪಿಕೊಳ್ಳಲಾರೆ...

ಯಸ್...ಸಾಯಬಾರದು...ಎದುರಿಸಬೇಕು...

ಅಲ್ಲೇ ಟೇಬಲ್ ಲ್ಯಾಂಪಿನ ಬಳಿ ಇರಿಸಿದ್ದ ಆತ್ಮಹತ್ಯಾ ಪತ್ರವನ್ನು ಮತ್ತೊಮ್ಮೆ ಓದಿದೆ. ಅದರಲ್ಲಿ ಬರೆದಿಟ್ಟ ಸಂಗತಿಗಳೆಲ್ಲಾ ಬಾಲಿಶವಾಗಿ ಕಂಡವು. ಅದರ ಪ್ರತಿಯೊಂದು ಅಕ್ಷರವು ನನ್ನನ್ನು 'ಹೇಡಿ' ಎಂದು ಗೇಲಿ ಮಾಡಿ ನಕ್ಕಂತೆ ಭಾಸವಾಯಿತು.

ಗೊಂದಲದ ನಡುವೆ ಅದನ್ನು ಹರಿದು ಬಿಸಾಡಿದೆ..ಮನಸ್ಸು ನಿರಾಳವಾಗಿತ್ತು. ನಾನಿನ್ನು ಬದುಕ ಬೇಕು ಎಂಬ ಆಸೆ ಮತ್ತೊಮ್ಮೆ ಚಿಗುರೊಡೆಯ ತೊಡಗಿತು.

ಡೈರಿ ತೆರೆದು ಪೂರ್ಣವಾಗದ ಕವಿತೆಯ ನಂತರದ ಸಾಲನ್ನು ಬರೆಯಲು ಯತ್ನಿಸಿದೆ...ಪದಗಳು ಸಿಗುತ್ತಿಲ್ಲ...ಏನೂ ತೋಚದೆ ಹಾಗೆ ಮುಚ್ಚಿಟ್ಟು ಸುಮ್ಮನೆ ನಿದ್ದೆ ಹೋದೆ. ಬೆಳಗ್ಗೆ ಎಚ್ಚರವಾದಾಗ ಹೊಸ ಉತ್ಸಾಹ ನನ್ನನ್ನಾವರಿಸಿತ್ತು. ಅಲ್ಲಿಯವರೆಗೆ ಚಡಪಡಿಸುತ್ತಿದ್ದ ಮನ ಹಗುರವಾಗಿ ಉಲ್ಲಾಸದಲ್ಲಿ ತೇಲಿದಂತೆ ಭಾಸವಾಗಿತ್ತು.

Rating
No votes yet

Comments