ನೆನಪುಗಳ ಮಾತು ಮಧುರ...... !

ನೆನಪುಗಳ ಮಾತು ಮಧುರ...... !

ಈಗ್ಗೆ ಸುಮಾರು ವರ್ಷಗಳ ಹಿಂದಿನ ಮಾತು... ನಾನಾಗ ಹೈಸ್ಕೂಲಿನಲ್ಲಿದ್ದೆ... ಕರ್ಮವೀರ ಅನ್ನುವ ಮ್ಯಾಗಜೀನ್ ಮತ್ತೆ ಪ್ರಾರಂಭವಾಗಿ ಅದರ ಕಂಪನ್ನು ಸೂಸಲಿಕ್ಕೆ ಶುರು ಮಾಡಿತ್ತು.. ( ತುಂಬಾ ವರ್ಷಗಳ ಹಿಂದಿನ ಪತ್ರಿಕೆ ಕಾರಣಾಂತರಗಳಿಂದ ಕೆಲ ವರ್ಷನಿಂತು ಹೋಗಿತ್ತು. ) ನಾನಾಗಷ್ಟೇ ಕವನಗಳನ್ನು ಬರೆಯೋಕೆ ಆರಂಭಿಸಿದ್ದೆ. ಅದರಲ್ಲಿ ಅನೇಕರು ತಮ್ಮ ಕವನಗಳನ್ನು ಬರೀತಿದ್ದರು. ಅವರುಗಳಲ್ಲಿ, ಎಚ್.ಎಸ್. ಮುಕ್ತಾಯಕ್ಕ ಅನ್ನುವ ಕವಯಿತ್ರಿಯ ಸಾಲುಗಳು ನನಗೆ ತುಂಬಾ ಮೆಚ್ಚಿಗೆಯಾಗ್ತಾ ಇದ್ದವು. ಅವರು ಒಂದು ಕಡೆ ಬರೆದಿದ್ದರು .

"ಬರುವ ನಾಳೆಗಳೇ ನೀವು
ಸಂತಸವನ್ನು ಹೊತ್ತು ತರಬಲ್ಲಿರಾದರೂ
ಸಂದ ನೆನ್ನೆಗಳ ನೆನಪಿನ ಖುಶಿ ತರಲಾರಿರಿ...."

ಈ ಸಾಲುಗಳು ಎಷ್ಟರ ಮಟ್ಟಿಗೆ ನನ್ನ ಮೇಲೆ ಪ್ರಭಾವ ಬೀರಿತ್ತೆಂದರೆ, ಹೈಸ್ಕೂಲು ಮುಗಿಸಿ ಬರುವಾಗ ಅನೇಕ ಸ್ನೇಹಿತರ ಆಟೋಗ್ರಾಫ್ ಗಳಲ್ಲಿ, ಡೈರಿಗಳಲ್ಲಿ, ಇವೇ ಸಾಲುಗಳನ್ನು ಉದ್ಧರಿಸಿದ್ದೆ. ಆ ಹೊತ್ತಿನ ಸಂದರ್ಭಕ್ಕೆ ಆ ಸಾಲುಗಳು ಹೊಂದಿಕೊಳ್ಳುತ್ತಲೂ ಇದ್ದವು. ಕಳೆದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಕೂರುವಲ್ಲಿ ಅದೇನೋ ಒಂದು ರೀತಿಯ ಅನುಭೂತಿ ಇರುವುದಂತೂ ಸುಳ್ಳಲ್ಲ ಅಲ್ಲವೇ...

ಇವತ್ಯಾಕೋ ಇದ್ದಕ್ಕಿದ್ದ ಹಾಗೆ ಆ ಸಾಲುಗಳು ನೆನಪಾದವು. ನಿಮಗೂ ಹೇಳಬೇನ್ನಿಸಿತು. ನನಗ್ಗೊತ್ತು, ನಿಮ್ಮನ್ನೂ ಸೆಳೀತವೆ ಆ ಸಾಲುಗಳು
ಅಂದ ಹಾಗೆ ಈಗ ಆ ಕವಯಿತ್ರಿ ಎಲ್ಲಿದ್ದಾರೋ , ಹೇಗಿದ್ದಾರೋ ತಿಳಿಯದು . ಯಾರಿಗಾದರೂ ತಿಳಿದಿದ್ದರೆ ಹೇಳ್ತೀರಾ?

Rating
No votes yet

Comments