ಇತಿಹಾಸದಲ್ಲಿ ಕರಗಿಹೋದ ಬೀಗರ ಹಾಡುಗಳು

ಇತಿಹಾಸದಲ್ಲಿ ಕರಗಿಹೋದ ಬೀಗರ ಹಾಡುಗಳು

ಮದುವೆ ನಮ್ಮ ಬದುಕಿನಲ್ಲಿ ಒಂದು ಪ್ರಮುಖ ಘಟ್ಟ.

ಮೊದಲು ಮದುವೆಗಳು ೯ ದಿನಗಳ ಕಾಲ ನಡೆಯುತ್ತಿದ್ದವಂತೆ. ನಂತರ ಏಳು ದಿನಗಳು, ಐದು ದಿನಗಳು, ಮೂರು ದಿನಗಳಿಗೆ ಇಳಿದು ಈಗ ಮದುವೆಯ ಹಿಂದಿನ ದಿನದ ಆರತಕ್ಷತೆ ಹಾಗೂ ಮರುದಿನ ಮಾಂಗಲ್ಯಧಾರಣೆಗೆ ಮದುವಯು ಮುಗಿದುಹೋಗುತ್ತದೆ. ಆರತಕ್ಷತೆಯೇ ಇಲ್ಲದೆ ಸಂಕ್ಷಿಪ್ತವಾಗಿ ಒಂದು ದಿನದ ಮದುವೆಯನ್ನು ಮಾಡುವುದುಂಟು. ಆರ್ಯ ಸಮಾಜದಲ್ಲಿ ಮದುವೆಯೆನ್ನುವುದು ಹೆಚ್ಚೆಂದರೆ ಅರ್ಧ ದಿನದ ಸಮಾರಂಭ. ಮಂತ್ರಮಾಗಲ್ಯ ವಿವಾಹವು ಅರ್ಧ ಗಂಟೆಯಲ್ಲಿ ಮುಗಿಯುತ್ತದೆ. 

ಒಂದು ಕ್ಷಣ ಆಲೋಚಿಸೋಣ. ಒಂಬತ್ತು ದಿನಗಳ ಮದುವ ಹೇಗೆ ನಡೆಯುತ್ತಿದ್ದಿರಬಹುದು? ಅಂತಹ ಮದುವೆಯನ್ನು ಯಾರಾದರೂ ಮಾಡಿಕೊಂಡವರು ಇಂದು ಬದುಕದ್ದಾರೆಯೆ? ಅಥವ ಅಂತಹ ಮದುವೆಯನ್ನು ನೋಡಿದವರು ಇದ್ದರೆಯೆ? ಅವರಿಂದ ಆ ಒಂಬತ್ತು ದಿನಗಳ ಮದುವೆಯ ವಿವರವನ್ನು ಕೇಳುವ ಕುತೂಹಲ ನನಗಿದೆ.

ನನ್ನ ಬಾಲ್ಯದಲ್ಲಿ ನಾನು ಕಂಡಹಾಗೆ, ಇಂತಹ ೫ ದಿನಗಳ ಮದುವೆಯಲ್ಲಿ ಹೆಣ್ಣುಮಕ್ಕಳ ಹಾಡುಗಳು ಪ್ರಮುಖ ಸ್ಥಾನವನ್ನು ಪಡೆಯುತ್ತಿದ್ದವು. ಅದರಲ್ಲೂ ಬೀಗರ ಹಾಡುಗಳ ಸ್ಪರ್ಧೆ ಅತ್ಯಂತ ಆಕರ್ಷಕವಾಗಿರುತ್ತಿತ್ತು.

ಬೀಗರ ಹಾಡಿನ ಮೂಲ ಉದ್ದೇಶ ಮನರಂಜನೆ. ಮನರಂಜನೆಯ ಜೊತೆಗೆ ಹುಡುಗ ಹಾಗೂ ಹುಡುಗಿಯರ ಕಡೆಯವರು ಎಷ್ಟರಮಟ್ಟಿಗೆ ಬುದ್ಧಿವಂತರೂ ಹಾಗೂ ಸಮಯ ಸ್ಪೂರ್ತಿಯಿಂದ ಆಶುಕವಿತೆಗಳನ್ನು ಕಟ್ಟಿ ಹಾಡಬಲ್ಲರು ಎನ್ನುವುದನ್ನು ನಿರ್ಣಯಿಸುವ ಅಖಾಡ ಆಗಿರುತ್ತಿತ್ತು.

ವಧೂ-ವರರನ್ನು ಭೂಮಕ್ಕೆ ಕೂರಿಸುತ್ತಿದ್ದರು. ಅವರ ಪಕ್ಕದಲ್ಲಿ ಗಂಡಿನವರಿಗೆ ಊಟದ ಏರ್ಪಾಡು. ಬಣ್ಣ ಬಣ್ಣದ ರಂಗವಲ್ಲಿ ಹಾಕಿ. ವಿಶೇಷ ಪೀಠಗಳನ್ನಿಟ್ಟು, ಅಕ್ಕಪಕ್ಕದಲ್ಲಿ ದೀಪಗಳನ್ನು ಬೆಳಗಿ, ಪರಿಮಳ ಬೀರುವ ಅಗರುಬತ್ತಿಯನ್ನು ಹಚ್ಚಿಟ್ಟು ಗಂಡಿನವರಿಗಾಗಿ ಕಾಯುತ್ತಿದ್ದರು.

ಈ ಗಂಡಿನವರ ಪಕ್ಕದಲ್ಲಿ ಬೀಗರ ಹಾಡುಗಳನ್ನು ಹೇಳುವ ಗಂಡಿನ ಕಡೆಯ ಹೆಂಗಳೆಯರ ಗುಂಪು. ಅವರ ಎದುರಿಗೆ ಸರಿಯಾಗಿ ಹೆಣ್ಣಿನ ಕಡೆಯವರಿಂದ ಬೀಗರ ಹಾಡುಗಳ ಸವಾಲಿಗೆ, ಹಾಡುಗಳಲ್ಲಿಯೇ ಜವಾಬು ನೀಡುವ ಲಲನಾಮಣಿಯರ ಗುಂಪು.

ಊಟವು ಮುಕ್ಕಾಲು ಮುಗಿಯುತ್ತಾ ಬಂದಿದೆ ಎನ್ನುವಾಗ ಹಾಡುಗಳ ಬಾಣ ಚಿಮ್ಮುತ್ತಿತ್ತು.

ಹೆಣ್ಣಿನ ಕಡೆಯವರು ನಾವು ಸೋಲಬಾರದೆಂದು ವಿಶೇಷವಾಗಿ ಸಿದ್ದತೆಯನ್ನು ನಡೆಸಿಕೊಂಡು ಕುಳಿತಿರುತ್ತಿದ್ದರು. ಹಾಗಾಗಿ ಗಂಡಿನವರು ಬಿಡುತ್ತಿದ್ದ ಪ್ರತಿಯೊಂದು ಅಸ್ತ್ರಕ್ಕೆ ಪ್ರತ್ಯಸ್ತ್ರಗಳನ್ನು ಬಿಡಲು ತಯ್ಯಾರ್! ಇಬ್ಬರೂ ಗಣಪತಿಯ ಸ್ತುತಿಯಿಂದ ಆರಂಭಿಸುತ್ತಿದ್ದರು.

ಗಂಡಿನವರು:

ವರವನೀಡು ಗಣಾಧೀಶ| ವಿಘ್ನೇಶ||ಪ||

ದುರಿತಗಣ ವಿನಾಶಾ| ಸುರಪನುತ ಸರ್ವೇಶ||ಅ|ಪ||

ಸನ್ನುತರಾದೆಮೆಗೆ| ಮನ್ನಣೆಗೈಯದ||

ಕುನ್ನಿ ಬೀಗಿತಿಯಾ| ಬನ್ನಗೊಳಿಸುವಂಥ||೧||

ಹೆಣ್ಣಿನವರು

ಏಕದಂತನೆ ವರವ ಕರುಣಿಸು| ಭೀಕರದ ಬೀಗಿತ್ತಿಯಾ||ಪ||

ಏಕವಾಕ್ಯದೆ ಸೋಲಿಪಂದದೆ| ನೀ ಕರುಣಿಸೈ ಗಣಪತಿ||ಅ|ಪ||

ಸಂಡಿಗೆ ಕೋಸಂಬರಿಗಳನು| ತಂಡ ತಂಡದೆ ತಿನ್ನುತಾ|

ಭಂಡೆ ತಾನುಣಲಿಲ್ಲವೆಂಬಳು| ಚಂಡಿಯಂದದೀ ಘರ್ಜಿಸಿ||

ಗಂಡಿನವರು

ತಟಕು ತಟಕು ಬಡಿಸಿರೆಂದು| ಚಿಟಿಕಿ ಹಾಕಿ ನಡೆದಳು||ಪ||

ಅನ್ನ ಬಡಿಸುವೋರ ಕಂಡು| ಸನ್ನೆಮಾಡಿ ಕರೆದಳು||

ಸಣ್ಣದಾಗಿ ಕೈಯ ಮಾಡಿ| ಸಣ್ಣದಾಗಿ ಕೈಯ ಮಾಡಿ|

ಬಡಿಸೆರೆಂಬಳು||೧||

ತುಪ್ಪ ಬಡಿಸುವೋರ ಕಂಡು ಚಪ್ಪಾಳಾಕಿ ಕರೆದಳೂ||

ಒಪ್ಪವಾಗಿ ತುಪ್ಪವನ್ನು| ಒಪ್ಪವಾಗಿ ತುಪ್ಪವನ್ನು

ಬಡಿಸೆರೆಂಬಳು||೨||

ಹೆಣ್ಣಿನವರು

ಲಜ್ಜೆಯಿಲ್ಲವೇ ನಿನಗೇ| ಬೀಗಿತ್ತಿಯೇ ||ಪ||

ಲಜ್ಜೆಯಿಲ್ಲವೇ ಹುಳಿ| ಗೊಜ್ಜು ಪಾಯಸ ಭಕ್ಷ್ಯ|

ಮಜ್ಜಿಗೆ ಪಳದ್ಯಗಳ| ಬೊಜ್ಜು ಬೆಳೆವಂತೆ ತಿಂದು||೧||

ನೀರ ಕುಡಿಯುವಂತೆ| ನೂರು ದೊನ್ನೆಯ ತುಂಬಾ|

ಖೀರ ಕುಡಿದು ಮತ್ತೆ| ಹೊರಾಡುವೆಯಾ ಛೀ ||೨||

 ಗಂಡಿನವರು

ಸಾಕು ಈ ಹರಟೆ ಕಟ ಕಟ||ಪ||

ಯಾಕೆ ವ್ಯರ್ಥವೀ ಕಟಪಟೇ| ಸಾಕು ಸಾಕು ಭೀಕರಾನನೆ||ಆ|ಪ||

ಸಾವಿರಾರು ಜನರಿಗೆಲ್ಲಾ| ಯಾವ ಸಮಾರಾಧನೆ ಗೈದೆ||

ಶಾವಿಗೆ ಪಾಯಸದೊಳುಪ್ಪು| ಯಾವ ರುಚಿಯೇ ಬೆಪ್ಪಿನ ತಕ್ಕಡಿ||೧||

ನ್ಯಾಯವೇನೆ ನಿನಗೆ ಕುದುರೆ| ಲಾಯದೊಳಗೆ ಹುರುಳಿ ರಾಶಿಯ|

ಬೇಯಿಸುವ ತೆರದೊಳು ನಮಗೆ| ಮಾಯಕಾತಿ ಮುಳ್ಳಕ್ಕಿ ಬಡಿಸಿದೆ||೨|| 

ಹೆಣ್ಣಿನವರು

ಏನಿದಚ್ಚರಿಯೋ| ಕಾಣೆ ಮಾನಾಭಿ||

ಮಾನವಿಲ್ಲದೆ ನೀ| ನೀ ನುಡಿ ನುಡಿವುದೀ ಪರಿ||ಪ||

ಲಕ್ಷ ಲಾಡುಗಳ ನೀ| ನೀ ಕ್ಷಣದೊಳು| ನಿನ್ನ||

ಕುಕ್ಷಿಗಳಿಸಿದುದುನುನಾ| ನಿರೀಕ್ಷಿಸಿದೆನು ಅತ್ತಿಗೆ ಆಹಾ||೧||

ಹೋಳಿಗೆ ಜತೆಗಳಾ| ಮೇಲೆ ಮೇಲಿಳಿಸಿದೀ||

ಹಾಳುಭಾವಿಯೋ ಅದು| ಖೂಳೆಯುದರವೋ ಕಾಣೆ||೨|| 

 

ಹೀಗೆ ಗಂಡು-ಹೆಣ್ಣಿನ ಕಡೆಯವರು ಒಬ್ಬರನ್ನೊಬ್ಬರು ನಗುನಗುತ್ತಲೇ ಮೂದಲಿಸಿ ಹಾಡುತ್ತಿದ್ದರು. ಹೀಗೆ ಹಾಡುವಾಗ ಬಂದ ಕೆಲವು ಶಬ್ದಗಳನ್ನು ಗಮನಿಸಿ. ಕುನ್ನಿ, ಭಂಡೆ,  ಚಂಡಿ, ಬೆಪ್ಪುತಕ್ಕಡಿ, ಖೂಳೆ ಮುಂತಾದ ಶಬ್ಧಗಳನ್ನು ಅವರು ಸಹಿಸಿಕೊಳ್ಳೂತ್ತಿದ್ದರು! ಯಾರೂ ಇಂತಹ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಇಂತಹ ಶಬ್ಧಗಳಿಗೆ ಪ್ರತಿಶಬ್ಧಗಳನ್ನು ಪ್ರಯೋಗಿಸಿ ‘ಸೇಡನ್ನು’ ತೀರಿಸಿಕೊಳ್ಳುತ್ತಿದ್ದರು. ಆದರೂ ಎಲ್ಲರೂ ಒಂದೇ ತರಹ ಇರುವುದಿಲ್ಲವಲ್ಲ. ಮದುವೆಯ ಯಾವುದೋ ಘಟ್ಟದ ಅಸಹನೆ ಇಲ್ಲಿ ಚಿಮ್ಮಿ ನೇರವಾಗಿ ಜಗಳವೇ ಆರಂಭವಾಗಿಬಿಡುತ್ತಿತ್ತು. ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಸಂದರ್ಭಗಳು ಇರುತ್ತಿದ್ದವು. ಹಿರಿಯರು ವಿಪರೀತಕ್ಕೆ ಹೋಗದಂತೆ ತಡೆಯುತ್ತಿದ್ದರು.

ಮುಂದಿನ ದಿನಗಳಲ್ಲಿ ಇಂತಹ ಹಾಡುಗಳೇ ನಿಂತು ಬಿಟ್ಟವು! ಇದಕ್ಕೆ ಕಾಲವನ್ನು ದೂರಿ ಪ್ರಯೋಜನವಿಲ್ಲ. ಇದಕ್ಕೆ ನಾವು ಹಾಗೂ ನಮ್ಮ ದುರಾಸೆಯೇ ಕಾರಣ! ಎಲ್ಲ ವರದಕ್ಷಿಣೆ, ವರೋಪಚಾರವನ್ನು ನೀಡಿದ ಮೇಲೂ, ಮುಖವನ್ನು ಮೈಲುದ್ದ ಮಾಡಿಕೊಂಡಿರುವ ಗಂಡಿನ ಕಡೆಯವರನ್ನೇನಾದರೂ ಹಾಡಿನ ಮೂಲಕ ಕಿಚಾಯಿಸಿದರೆ ಮುಗಿಯಿತು! ಅಲ್ಲೇ ಡೈವೋರ್ಸಿಗೆ ಸಿದ್ಧವಾಗಿಬಿಡುತ್ತಾರೆ!

ಹಾಗಾಗಿ...ಬೀಗರ ಹಾಡುಗಳು...ಆ ಮನರಂಜನೆ...ಆ ಸ್ಪರ್ಧೆ...ಆ ಸೊಗಸು...ಇಂದಿಗೆ ಕೇವಲ ಕನಸು.

-ನಾಸೋ 

 

 

 

Rating
No votes yet

Comments