ಬಸವನ್ಹಬ್ಬ - ಕೆಲ ಆಯಾಮಗಳು.

ಬಸವನ್ಹಬ್ಬ - ಕೆಲ ಆಯಾಮಗಳು.

ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು.

ನಾಳೆ ಅಂದರೆ ಸೋಮವಾರ ೨೭ ರ ಆಪ್ರಿಲ್ ೨೦೦೯ ರಂದು ಬಸವ ಜಯಂತಿ. ಇಂದು ಭಾನುವಾರ ರಜ. ಇದೇ ನೆಪದಲ್ಲಿ ಅಣ್ಣ ಬಸವಣ್ಣನ ಮೇಲೆ ಎರಡು ಮಾತು ಬರಿಯೋಣ ಅಂತ. ಬಸವ ಜಯಂತಿ ಆಚರಣೆ ಎಂದಿನಿಂದಶುರುವಾಯಿತು ಅಂತ ನಾನು ಯೋಚಿಸಿದ್ದು ಈ ಬರಹಕ್ಕೆ ಪ್ರೇರಣೆ.

 

“ಬಸವ ಜಯಂತಿ” ಅನ್ನೋ ಕಾನ್ಸೆಪ್ಟ್ ತುಂಬಾ ಇತ್ತೀಚಿನದು ಅಂತ ನನ್ನ ಅನಿಸಿಕೆ. ಯಾರು ಇದನ್ನು “ಈಗಿರುವ ರೂಪ”ದಲ್ಲಿ ಜಾರಿಗೆ / ಆಚರಣೆಗೆ ತರಲು ಕಾರಣರು ಅಂತ ನಾನು ಹುಡುಕಬೇಕಿದೆ.

 

(ಇದೇ ದಿನದಂದು) ಊರುಗಳಲ್ಲಿ / ಹಳ್ಳಿಗಳಲ್ಲಿ “ಬಸವನ ಹಬ್ಬ” ಅಂತ ಆಚರಣೆ ಇದೆ. ತಲೆ ತಲಾಂತರಗಳಿಂದ ನಾವು ಊರಲ್ಲಿ “ಬಸವನ ಹಬ್ಬ”ವನ್ನು ಆಚಹರಿಸುತ್ತ ಬಂದಿದ್ದೇವೆ. ನಾನು ( ಚಿಕ್ಕವನಿದ್ದಾಗ) ಗಮನಿಸಿದಂತೆ ಅಲ್ಲಿ ಈ ಹಬ್ಬ ದನ ಕರುಗಳಲ್ಲಿ ಒಂದಾದ “ಬಸವ” ಅಂದರೆ ಎತ್ತಿಗೆ ಸಂಬಂದ ಪಟ್ಟಂತಹ ಹಬ್ಬ, ಮತ್ತು ಬಸವ ದೇವರಿಗೆ (ಈ ಬಸವ ದೇವರ ರೂಪ “ನಂದಿ” ಯ ರೂಪವೇ ಅನ್ನುವುದು ವಿಶೇಷ) ಸಂಬಂದ ಪಟ್ಟಂತಹ ಹಬ್ಬ.

 

ನಾನು ಊರಲ್ಲಿದಾಗ ಹಲವಾರು ಬಾರಿ ಗುಡಿಗೆ ಹೋಗಿರಬಹುದು. ಮತ್ತು ಬಸವನ ದೇವರು ಅನೇಕ ಬಾರಿ ನಮ್ಮನೆಗೆ ಬಂದಿದೆ. (ಬಂದಿದೆ?!... ಹೌದು ನಾವು ಗುಡಿಯೊಳಗಣ ದೇವರನ್ನ ಹಿಂಗೇ ಕರಿಯೋದು!). ಆದರೆ ನನಗ್ಯಾವತ್ತೂ ಅದು ಇತಿಹಾಸ ಪುರುಷ ಬಸವಣ್ಣ ಅಂತ ಅನ್ನಿಸಿರಲೇ ಇಲ್ಲ. (off coarse, ರಾಮ್ನವಮಿಯಂದು ರಾಮದೇವರು ನಮ್ಮ ಮನೆಗೆ ಬರ್ತಾ ಇದ್ದಾಗ ನನಗ್ಯಾವತ್ತೂ ರಾಮಯಣದ ರಾಮ, ರಾಮಯಣವನ್ನು ಆಗಲೇ ಅನೇಕ ಬಾರಿ ಓದಿದ್ದರೂ, ನೆನಪಿಗೆ ಬರಲಿಲ್ಲ!) ನನ್ನ (ಮತ್ತು ಅಲ್ಲಿನ ಹಲ ಜನರ) ಕಲ್ಪನೆಯಲ್ಲಿ ಈ ಬಸವ ದೇವರು ಈಶ್ವರ ವಾಹನವಾದ ನಂದಿಯೇ.

 

ಊರ ಹೊರಗೆ ( ತುಂಬಾ ಹೊರಗೇನಲ್ಲ…ಬದಿಯಲ್ಲೇ) ಈಶ್ವರನ ಗುಡಿಯಿದ್ದು ( ಸುಮಾರು ೧೨ ನೇ ಶತಮಾನದ ಆಸುಪಾಸಿನದು ಅಂತಾರೆ… ಈಗ ಕೆಡವಿ ಹೊಸ ದೇವಸ್ತಾನ ಕಟ್ತಾ ಇದ್ದಾರೆ) ಅಲ್ಲಿ ಸ್ಥಾವರ ಲಿಂಗ ರೂಪಿಯಾದ ಈಶ್ವರ ಇರುವುದರಿಂದ ಈ ಬಸವ ದೇವರು ಆ ಶಿವನೂ ಅಲ್ಲ ಅಂತ ನಾನು ಅಂದುಕೊಂಡಿದ್ದ ದಿನಗಳವು.

 

ಮೇಲಿನ ಎಲ್ಲ ಸಾಲುಗಳ ಅರ್ಥ ಜನ ಸಾಮಾನ್ಯರ ( ಉದಾ. ನಾನು) ಬಸವನ ಹಬ್ಬ ( ಅರಿಕೆಯಲ್ಲಿ) ನಂದಿಯ ಮತ್ತು ತನಗೆ ಅನ್ನ ಕೊಡುವ ಎತ್ತಿನ ಹಬ್ಬವಾಗಿತ್ತೇ ಹೊರತು ಅಣ್ಣ ಬಸವಣ್ಣನ ಹಬ್ಬದಂತೆ ಕಂಡಿರಲಿಲ್ಲ.

 

ನಂತರದ ದಿನಗಳಲ್ಲಿ ಊರಿನಿಂದ ಹೊರಬಂದು ಅನೇಕ ಹಾಸ್ಟೆಲ್ಗಳಲ್ಲಿ / ಕಾಲೇಜುಗಳಲ್ಲಿ ನಾನು ಕಂದ ಬಸವ ಜಯಂತಿ ಆಚರಣೆ ಈ “ಬಸವನ ಹಬ್ಬ”ಕ್ಕೆ ಬೇರೆಯದೇ ಆದ ಆಯಾಮ ಇದೆ ಅನ್ನುವುದನ್ನು ಮನದಟ್ಟು ಮಾಡಿಕೊಟ್ಟಿತು.

 

ದಾವಣಗೆರೆಯ ಒಬ್ಬರು ( ಇವರ ಬಗ್ಗೆ ಮತ್ತು ಈ ಬಗ್ಗೆ ಕೆಲ್ಸ ಮಾಡಿದವರ ಬಗ್ಗೆ ಮಾಹಿತಿ ಇದ್ದರೆ ಹಂಚಿಕೊಳ್ಳಿ) ಅನೇಕ ಕಾಲ ಜ್ನಾನ ವಚನಗಳನ್ನು ಅಭ್ಯಸಿಸಿ ಅನೇಕ ಹಳೆಯ ಕೃತಿಗಳನ್ನು ನೋಡಿ, ಅಲ್ಲೆಲ್ಲೊ ಯಾವುದೋ ಪುಸ್ತಕದಲ್ಲಿ ಸಿಕ್ಕ ಬಸವಣ್ಣನ ಜಾತಕವನ್ನು ನೋಡಿ ಮತ್ತು ಜನ ಸಾಮಾನ್ಯರ “ಬಸವನ ಹಬ್ವ”ನ್ನು ಗಮನಕ್ಕೆ ತೆಗೆದುಕೊಂಡು “ಬಸವ ಜಯಂತಿ”ಗೆ ದಿನಕ್ಕೆ ಒಂದು ಫೈನಲ್ ರೂಪ ಕೊಟ್ಟರಂತೆ. ( ಇದರ ಬಗ್ಗೆ ಮಾಹಿತಿ ಇದ್ದರೆ ಹಂಚಿಕೊಳ್ಳಿ).

 

ಮೇಲಿನ ಲೆಖ್ಖಗಳ ಆಧಾರದ ಮೇಲ್ ಬಸವಣ್ಣ ಹುಟ್ಟಿದ್ದು ೩೦ನೇ ಮಾರ್ಚ್ ೧೧೩೪ ರಲ್ಲಿ ಅಂತೆ . ( ನನ್ನತ್ರ ಇರೋ horoscope software ನಲ್ಲಿ ಇದು ಹೊಂದಿಕೆಯಾಗಲಿಲ್ಲ. ಇದರ ಬಗ್ಗೆ ನಾನು ಇನ್ನೊಮ್ಮೆ ವಿವರವಾಗಿ ಬರೆಯುತ್ತೇನೆ.) ಆನಂದ ನಾಮ ಸಂವತ್ಸರ, ವೈಶಾಖ ಶುದ್ದ ತೃತೀಯ ದಂದು, ರೋಹಿಣಿ ನಕ್ಷತ್ರದಲ್ಲಿ. ಎಲ್ಲಾ ಬಾರಿಯೂ ಈ ರೋಹಿಣಿ ನಕ್ಷತ್ರ ತೃತೀಯ ದಲ್ಲೇ ಬರುವುದಿಲ್ಲ. ಆಚರಣೆ / ಸಂಸ್ಕೃತಿಯಂತೆ, ಬಸವಣ್ಣನ ಹುಟ್ಟು ಹಬ್ಬವನ್ನು ನಕ್ಷತ್ರದಂತೆ ತೆಗೆದುಕೊಂಡರೆ ನಾವು ಈ ಬಾರಿ ೨೮ ರಂದು ಬಸವ ಜಯಂತಿಯನ್ನು ಆಚರಿಸಬೇಕಾಗುತ್ತದೆ. ಈ ವೈಶಾಖ ಶುದ್ದ ತೃತೀಯ ದಿನವನ್ನು ಬೇರೆ ಬೇರೆ ಕಾರಣಗಳಿಂದ “ಅಕ್ಷಯ ತೃತೀಯ” ವೆಂದು ಕರೆಯುತ್ತಾರೆ. ಮತ್ತು ಕೆಲ ಸಂಪ್ರದಾಯದವರಿಗೆ ಈ ಅಕ್ಷಯ ತೃತೀಯ ( ಮೂರೂವರೆ ಪೂರ್ಣ ಮಹೂರ್ತಗಳಲ್ಲಿ ಒಂದು) ತುಂಬಾ ಮುಖ್ಯವಾದ ದಿನವೇ ಆಗಿರುವುದನ್ನು ಸೇರಿಸಿಕೊಂಡು ನಾನಾ ಕಾರಣಗಳಿಂದ ಮತ್ತು ಬಸವ ಜಯಂತಿಗೆ ರಜೆಯನ್ನು ಅಕ್ಷಯ ತೃತೀಯ ದಂದು ಕೊಡುತ್ತಾರೆ.


ರುದ್ರ ಕವಿ(ನಮ್ಮ ಸಮ ಕಾಲೀನರು) ಯ "ಬಸವೇಶ್ವರ ಚರಿತ್ರೆ" (ನನಗೆ ಸಿಕ್ಕ ನೇರ ಆಕರ ಇದೊಂದೆ) ಯಲ್ಲಿ ಈ ಪದ್ಯ ಬರುತ್ತೆ.

ಒಂದು ಸಾವಿರದೊಂದು ನೂರಾ
ಮುಂದೆ ಮೂವತ್ತೊಂದು ಇಶ್ವಿಯು
ಅಂದು ಅಕ್ಷತ್ತದಗಿ ನಕ್ಷತ್ರವು ತೃತೀಯೆಯೆಂದು
ಕಂದ ಪುಟ್ಟಿದ ಸುದ್ದಿ ಕೇಳಲು
ಸುಂದರಾಂಗಿಯರೆಲ್ಲ ನೆರೆದರು
ಅಂದವಾಗಿಹ ಪೆಸರನಿಟ್ಟರು ಬಸವನೆಂದಾಗ

ಇದರ ಪ್ರಕಾರ ಬಸವಣ್ಣ ಹುಟ್ಟಿದ ವರ್ಷ ೧೧೩೧. ರುದ್ರ ಕವಿಯವರು ತೀರ ಇತ್ತಿಚಿನವರಾದ್ದರಿಂದ ಇದು ಮೂಲ ಆಕರವಾಗಲಾರದೇನೋ?! ..ನೇರ ಮತ್ತು ಹಳೆಯ ಮೂಲ ಆಕರಗಳು ನಿಮ್ಮ ಗಮನಕ್ಕೆ ಬಂದಿದ್ದರೆ ದಯವಿಟ್ಟು ಹಂಚಿಕೊಳ್ಳಿ.  

 

ಇಂದು ಈ ದಿನಕ್ಕೆ ಒಂದಕ್ಕಿಂತ ಹೆಚ್ಚು ಆಯಮಗಳಿವೆ. ರೈತರು ಅನ್ನ ಕೊಡುವ ಎತ್ತನ್ನೂ, ಸಂಪ್ರದಾಯಸ್ತರು ತಮ್ಮ ಸಂಸ್ಕೃತಿಯ ಭಾಗವಾದ ನಂದಿಯನ್ನೂ ಮತ್ತು ನಮ್ಮಂತವರು ಅಣ್ಣ ಬಸವಣ್ಣನ ತತ್ವಗಳನ್ನು ನೆನೆಯುತ್ತೇವೆ.

 

ಈ ಚಿಕ್ಕ ಬ್ಲಾಗಿನಲ್ಲಿ ಬಸವಣ್ಣನ ವ್ಯಕ್ತಿತ್ವದ ಬಗ್ಗೆ, ಆದರ್ಶಗಳ ಬಗ್ಗೆ , ತತ್ವಗಳ ಬಗ್ಗೆ , ಕಳಕಳಿಯ ಬಗ್ಗೆ ಬರೆಯಲು ಆಗ್ತ ಇಲ್ಲ. ಮುಂದೆ ಯಾರಿಂದಲಾದರೂ ಬರುತ್ತೇನೋ ಅನ್ನೋ ನಿರೀಕ್ಷೆಯಲ್ಲಿ..
ಸವಿತೃ

Rating
No votes yet

Comments