ಕ್ರೂಟ್ಸರ್ ಸೊನಾಟಾ: ಅಧ್ಯಾಯ ಹತ್ತು

ಕ್ರೂಟ್ಸರ್ ಸೊನಾಟಾ: ಅಧ್ಯಾಯ ಹತ್ತು

“ನಾನು ಹೀಗೆ ಸೆರೆಗೆ ಸಿಕ್ಕಿಬಿದ್ದೆ. ಜನ ಅದನ್ನು ಪ್ರೀತಿಯಲ್ಲಿ ಸಿಕ್ಕಿಬೀಳುವುದು ಅನ್ನುತ್ತಾರೆ. ಅವಳು ನನಗೆ ಪರಿಪೂರ್ಣ ಹೆಣ್ಣಿನಂತೆ ಕಂಡಳು. ಅವಳೆದುರು ನಾನು ಪರಿಶುದ್ಧ ಕಾಗೆಯಂತಿದ್ದೆ. ಈ ಲೋಕದಲ್ಲಿ ತನಗಿಂತ ಕೀಳಾದ ಹಾಳಾದ ಮನುಷ್ಯರು ಕಣ್ಣಿಗೆ ಬೀಳದಷ್ಟು ಪತಿತನಾದ ಮನುಷ್ಯ ಯಾರೂ ಇಲ್ಲ ಅನ್ನುವುದು ಪರಮ ಸತ್ಯ. ಆದ್ದರಿಂದಲೇ ಪತಿತನಾದವನು ತನಗಿಂತ ಕೀಳಾದವನ್ನು, ಹಾಳಾದವನನ್ನು ಕಂಡು ಆತ್ಮ ತೃಪ್ತಿಯಿಂದಲೂ ಜಂಬದಿಂದಲೂ ಬೀಗುತ್ತಾನೆ. ನಾನೂ ಹಾಗೆಯೇ ಇದ್ದೆ. ನಾನು ಮದುವೆಯಾಗಿದ್ದು ದುಡ್ಡಿಗಾಗಿ ಅಲ್ಲ. ನನ್ನ ಅನೇಕ ಗೆಳೆಯರು ಸಂಬಂಧದ ಹಿರಿತನಕ್ಕಾಗಿಯೋ, ಶ್ರೀಮಂತಿಕೆಯ ಆಸೆಗಾಗಿಯೋ ಮದುವೆಯಾಗಿದ್ದರು. ಆದರೆ ನನಗೆ ಅಂಥ ಆಸಕ್ತಿ ಇರಲಿಲ್ಲ. ಮೊದಲನೆಯದಾಗಿ ನಾನು ಶ್ರೀಮಂತ, ಆಕೆ ಬಡವಿ. ಎರಡನೆಯದಾಗಿ, ನನ್ನ ಗೆಳೆಯರು ಮದುವೆಯಾದದ್ದು ಮದುವೆಗೆ ಮುನ್ನ ಇದ್ದ ತಮ್ಮ ಅಫೇರುಗಳನ್ನೆಲ್ಲ ಮುಂದುವರೆಸುವುದಕ್ಕೆ, ಮತ್ತೊಂದು ಹೊಸ ಹೆಣ್ಣಿನ ರುಚಿ ನೋಡುವುದಕ್ಕೆ ಮದುವೆಯಾಗುತ್ತಿದ್ದರು. ಆದರೆ ನಾನಾದರೋ ಮದುವೆಯಾದ ಕೂಡಲೇ ಹೊರಚಾಳಿಗಳನ್ನೆಲ್ಲ ಬಿಟ್ಟು ಏಕ ಪತ್ನೀವ್ರತಸ್ಥನಾಗಿರಲು ತೀರ್ಮಾನ ಮಾಡಿದ್ದೆ. ಆದ್ದರಿಂದಲೇ ನಿಶ್ಚಿತಾರ್ಥವಾದ ಕೂಡಲೆ ನನ್ನ ಹೆಮ್ಮೆ, ನನ್ನ ಜಂಬ ಅಪಾರವಾಗಿ ಹಿಗ್ಗಿತು.
“‘ನಾನು ದೇವತೆ’ ಎಂದು ನಂಬಿಕೊಂಡಿದ್ದ ನೀಚನಾಗಿದ್ದೆ ನಾನು. ನಿಶ್ಚಿತಾರ್ಥಕ್ಕೂ ಮದುವೆಗೂ ಬಹಳ ದಿನಗಳ ಅಂತರವಿರಲಿಲ್ಲ. ಆ ದಿನಗಳನ್ನು ನೆನೆದುಕೊಂಡರೆ ನಾಚಿಕೆಯಾಗುತ್ತದೆ. ಎಂಥ ಅಸಹ್ಯ!
“ಪ್ರೀತಿ ಅನ್ನುವುದು ನೈತಿಕವಾದ ಭಾವ, ಆಲೋಚನೆಗಳ ಸಮೂಹವೇ ಹೊರತು ಕೇವಲ ಇಂದ್ರಿಯಗಳಿಗೆ ಸಂಬಂಧಿಸಿದ್ದಲ್ಲ ಎಂದು ಸಾಮಾನ್ಯವಾಗಿ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಅದು ಹೌದಾದರೆ ಆ ಭಾವ, ಆಲೋಚನೆಗಳನ್ನು ಮಾತಿನಲ್ಲಿ ಹೇಳುವುದಕ್ಕೆ, ಆ ಕುರಿತು ಮಾತುಕತೆಯಾಡುವುದಕ್ಕೆ ಸಾಧ್ಯವಾಗಬೇಕು. ಅಂಥದೇನೂ ಇಲ್ಲ. ನಾವಿಬ್ಬರೂ ಇದ್ದಾಗ ಮಾತಾಡುವುದು ಬಹಳ ಕಷ್ಟ ಅನಿಸುತ್ತಿತ್ತು. ಸಂಭಾಷಣೆ ಅಂದರೆ ಬೆಟ್ಟದ ಮೇಲಕ್ಕೆ ಬಂಡೆ ಉರುಳಿಸಿಕೊಂಡು ಹೋಗಬೇಕಾಗಿದ್ದ ಸಿಸಿಫಸನ ಕಷ್ಟದಂಥ ಕಷ್ಟ. ಏನಾದರೂ ಹೇಳಬೇಕೆಂದು ಯೋಚನೆ ಮಾಡಿ ಮಾಡಿ ಹೇಳುತ್ತಿದ್ದೆವು. ಹೇಳಿದ ಮೇಲೆ ಮತ್ತೇನು ಮಾತಾಡಬೇಕೆಂದು ತಿಳಿಯದೆ ಮತ್ತೆ ಮೌನವಾಗಿದ್ದು ಬೇರೆ ವಿಷಯಗಳಿಗೆ ತಡಕಾಡುತ್ತಿದ್ದೆವು. ಪರಸ್ಪರ ಹೇಳಬೇಕಾದ್ದೇನು ಎಂದು ನಮಗೆ ನಿಜವಾಗಿಯೂ ಗೊತ್ತಿರಲಿಲ್ಲ. ಬದುಕಿನ ಬಗ್ಗೆ, ನಮ್ಮ ಮನೆಯ ಬಗ್ಗೆ ಏನೇನು ಮಾತಾಡಬಹುದೋ ಅದನ್ನೆಲ್ಲ ಆಡಿ ಮುಗಿಸಿದ್ದೆವು.
“ಮತ್ತೇನು ಮಾತಾಡಬೇಕು? ನಾವು ಪ್ರಾಣಿಗಳಾಗಿದ್ದಿದ್ದರೆ ಮಾತಾಡುವ ಅಗತ್ಯವೇ ಇಲ್ಲವೆಂದು ಗೊತ್ತಿದ್ದು ಸುಮ್ಮನಿದ್ದುಬಿಡಬಹುದಿತ್ತು. ಆದರೆ ನಾವು ಮನುಷ್ಯರು ಮಾತಾಡಲೇಬೇಕಾಗಿತ್ತು. ಆದರೆ ಮಾತಿಗೆ ವಿಷಯಗಳೇ ಇರಲಿಲ್ಲ! ನಮ್ಮ ಮನಸ್ಸುಗಳಲ್ಲಿದ್ದ ವಿಷಯ ಮಾತಿನಲ್ಲಿ ಹೇಳಬಹುದಾದಂಥದಾಗಿರಲಿಲ್ಲ.
“ಮತ್ತೆ ಚಾಕಲೆಟ್ಟುಗಳನ್ನು ತಿನ್ನುವ ಸಿಲ್ಲಿ ಸಂಪ್ರದಾಯ, ಹೊಟ್ಟೆಬಾಕರಂತೆ ಸಿಹಿ ತಿಂಡಿಗಳನ್ನು ಗಿಡಿದುಕೊಳ್ಳುವುದು, ಮದುವೆಗೆ ಮಾಡಿಕೊಳ್ಳುವ ಅಸಹ್ಯಕರ ಸಿದ್ಧತೆಗಳು, ನಾವಿರಬೇಕಾದ ಅಪಾರ್ಟಮೆಂಟಿನ ಬಗ್ಗೆ, ನಮ್ಮ ಮಲಗುವ ಕೋಣೆಯ ಬಗ್ಗೆ, ನಮ್ಮ ಮಂಚ ಹಾಸಿಗೆಗಳ ಬಗ್ಗೆ, ಬೆಳಗಿನ ಗೌನಿನ ಬಗ್ಗೆ, ಮನೆಯಲ್ಲಿ ತೊಡಬೇಕಾದ ಬಟ್ಟೆಗಳ ಬಗ್ಗೆ, ಕಿಟಕಿ ಪರದೆಗಳ ಬಗ್ಗೆ, ವಿಧ ವಿಧ ಡ್ರೆಸ್ಸುಗಳ ಬಗ್ಗೆ ಹೆಣ್ಣಿನ ಅಮ್ಮನೊಡನೆ ನಡೆಸುವ ಕೊನೆಯಿರದ ಚರ್ಚೆಗಳು! ಸ್ವಲ್ಪ ಹೊತ್ತಿನ ಮೊದಲು ಆ ಮುದುಕ ಹೇಳುತ್ತಿದ್ದನಲ್ಲ, ಹಾಗೆ ಹಳೆಯ ಕಾಲದ ಫ್ಯಾಶನ್ನಿನಂತೆ ಮದುವೆಯಾಗುವುದಿದ್ದರೆ ಈ ಹಾಸಿಗೆ, ಬೆಡ್ ಶೀಟುಗಳೆಲ್ಲ ಪವಿತ್ರವಾದ ವಿವರಗಳಾಗುತ್ತಿದ್ದವು. ಆದರೆ ನಾವೋ, ಹತ್ತರಲ್ಲಿ ಒಂಬತ್ತು ಜನ ಗಂಡಸರಿಗೆ ಈ ಪಾವಿತ್ರ್ಯ ಇತ್ಯಾದಿಗಳಲ್ಲಿ ನಂಬಿಕೆ ಇಲ್ಲ. ಮದುವೆಯಷ್ಟೆ ಮುಖ್ಯ. ಮದುವೆಗೆ ಮೊದಲೇ ಮದುವೆಯಾಗದಿರುವವರು ನೂರಕ್ಕೆ ಒಬ್ಬರೂ ಇಲ್ಲ. ನೂರರಲ್ಲಿ ಐವತ್ತು ಗಂಡಸರು ಮದುವೆಗೆ ಮೊದಲೇ ಹೆಂಡತಿಗೆ ಮೋಸ ಮಾಡಲು ನಿರ್ಧಾರ ಮಾಡಿಕೊಂಡುಬಿಟ್ಟಿರುತ್ತಾರೆ.
“ಇಂಥಾ ಒಬ್ಬಳು ಹೆಣ್ಣನ್ನು ಪಡೆದುಕೊಳ್ಳುವ ಸಲುವಾಗಿಯಷ್ಟೆ ಮದುವೆಗಾಗಿ ಚರ್ಚಿಗೆ ಮೆರವಣಿಗೆ ಹೋಗುವುದು ಅಗತ್ಯ ಎಂದು ತುಂಬ ಜನ ಗಂಡಸರು ತಿಳಿದುಕೊಂಡಿದ್ದಾರೆ. ಹಾಗಿದ್ದರೆ ಮದುವೆಯ ಲೌಕಿಕ ವಿವರಗಳ, ಅಂಗಿ, ಬಟ್ಟೆ, ವಡವೆ ಇತ್ಯಾದಿ ಚರ್ಚೆಯ ಮಹತ್ವವೇನು? ಅದೊಂದು ಬಗೆಯ ಮಾರಾಟವಲ್ಲವೆ? ಕನ್ಯೆಯೊಬ್ಬಳನ್ನು ಲಂಪಟನೊಬ್ಬನಿಗೆ ಆಕರ್ಷಕ ವಿವರಗಳ ಸಮೇತ ಒಪ್ಪಿಸಿಕೊಡುವ ಮಾರಾಟವಲ್ಲವೆ?”
(ಮುಂದುವರೆಯುವುದು)

Rating
No votes yet

Comments