ಪುಸ್ತಕಗಳ ಲೋಕದಲ್ಲಿ - ಹೊಸ ಪುಸ್ತಕಗಳ ಸುತ್ತ

ಪುಸ್ತಕಗಳ ಲೋಕದಲ್ಲಿ - ಹೊಸ ಪುಸ್ತಕಗಳ ಸುತ್ತ

ಪುಸ್ತಕಗಳನ್ನು (ಶಾಲೆಯ ಪುಸ್ತಕಗಳನ್ನು ಬಿಟ್ಟು ಹೆಚ್ಚಿನದ್ದನ್ನು) ಓದ್ಲಿಕ್ಕೆ ಸಾಧ್ಯವಾದದ್ದು ಕೆಲವರುಷಗಳ ಹಿಂದಷ್ಟೇ. ಚಿಕ್ಕವನಿದ್ದಾಗ ಅಪ್ಪ ತಂದುಕೊಟ್ಟ ತೆನಾಲಿರಾಮ ಇತ್ಯಾದಿ ಪುಟ್ಟ ಪುಸ್ತಕಗಳನ್ನು ಬಿಟ್ಟರೆ ಹೆಚ್ಚಿನದ್ದನ್ನು ಓದಿದ ನೆನಪಿಲ್ಲ. ಚಿಕ್ಕವನಿದ್ದಾಗಿನಿಂದಲೂ ಹೆಸರಾಂತ ವಿಜ್ಞಾನಿಗಳ ಬಗ್ಗೆ, ಸ್ವಾತಂತ್ರ್ಯಯೋಧರ ಬಗ್ಗೆ ಓದಬೇಕೆಂಬ ಹಂಬಲವಿದ್ದರೂ ಅದು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ತೇಜಸ್ವಿಯವರ ಜುಗಾರಿ ಕ್ರಾಸ್, ಪರಿಸರದ ಕಥೆ, ಕಾರ್ವಾಲೋ, ಮಿಲೇನಿಯಮ್ ಎಡಿಷನ್ನಿನ ಕೆಲವು ಪುಸ್ತಕಗಳು, ಅಣ್ಣನ ನೆನಪು ಇತ್ಯಾದಿಗಳನ್ನು ಓದಿದ್ದು ಮತ್ತೆ ಕೆಲವು ಪುಸ್ತಕಗಳನ್ನು ಇಲ್ಲಿ ನಮೂದಿಸಲು ನನ್ನ ಪುಸ್ತಕ ಭಂಡಾರವನ್ನೊಮ್ಮೆ ಹೊಕ್ಕಿ ನೋಡಬೇಕಿದೆ. ಮಗಳು ಕಂಡ ಕುವೆಂಪು ಓದಲಿಕ್ಕೆ ಶುರುಮಾಡಿದ್ದೇನೆ. ಕಾರಂತರ ಮೂಕಜ್ಜಿಯ ಕನಸುಗಳು, ಕುವೆಂಪುರವರ ಮಲೆಗಳಲ್ಲಿ ಮಧುಮಗಳು ಇತ್ಯಾದಿ ಸಧ್ಯಕ್ಕೆ ನನ್ನ ಮೇಜಿನ ಮೇಲಿರುವ ಇನ್ನಿತರೆ ಪುಸ್ತಕಗಳು.

ಇದೆಲ್ಲದರ ಜೊತೆ ವಸುದೇಂದ್ರರು ಉಡುಗೊರೆಯಾಗಿ ಕೊಟ್ಟ "ಕೋತಿಗಳು ಸಾರ್ ಕೋತಿಗಳು" ತುಂಬಾನೇ ನಗಿಸುತ್ತಾ ಅನೇಕ ವಿಚಾರಗಳನ್ನು ನನ್ನ ತಲೆಯಲ್ಲಿ ತುಂಬುತ್ತಾ, ಮತ್ತೆ ಕೆಲವನ್ನು ಸಂಪದಿಗರಿಗೆ ಬರವಣಿಗೆಯಲ್ಲಿ ಬರೆದು ತಿಳಿಸುವಂತೆ ಪ್ರೇರೇಪಿಸುತ್ತಿದೆ. ಇದು ಮುಗಿದ ನಂತರ ಕಾಲೇಜು ರಂಗ ಓದುವುದು ಎಂದಾಗಿತ್ತು.

ಸಂಪದದ ಯಾವುದೋ ಒಂದು ಕೆಲಸವನ್ನು ಮುಗಿಸಲೇ ಬೇಕು ಎಂದು ಹೊರಗೆ ಹೊರಟಾಗ ಸಂಜೆ ೪:೩೦. ನಿಜವಾಗಲೂ ಮಾಡಬೇಕೆಂದ ಕೆಲಸ ಆಗಲೇ ಇಲ್ಲ. ಟೆಕ್ನಾಲಜಿಯ ಬಗ್ಗೆ ಮಾತನಾಡುತ್ತಾ ಕುಳಿತರೆ ಮಾಡಬೇಕಾದ ಕೆಲಸಗಳಂತೂ ವಾರದ ಕೊನೆಯಲ್ಲಿ ಆಗುವುದೇ ಇಲ್ಲ. ಸರಿ, ಮನೆಗೆ ತೆರಳಿ ಕೆಲಸ ಶುರುಮಾಡೋಣವೆಂದು ಹೊರಡುವ ಸಮಯದಲ್ಲಿ, ಬಸವನಗುಡಿಯ ಗೋಕಲೆ ಇನ್ಸ್ಟಿಟ್ಯೂಟ್ ನಲ್ಲಿನ ಪುಸ್ತಕ ಮಳಿಗೆಗೆ ಭೇಟಿಕೊಡುವ ಅವಕಾಶ. ಅಲ್ಲೇ ಇದ್ದ ಮುರಳಿಯನ್ನು ಸಂಧಿಸಲೆಂದೇ ಅಲ್ಲಿಗೆ ಹೊರಟಿದ್ದು.  ಕೊನೆಗೆ ಅಲ್ಲಿಂದ ವಾಪಸ್ ಬರುವಾಗ ೬ ಪುಸ್ತಕಗಳ ಜೊತೆ ಹಿಂದಿರುಗಿದ್ದೆ.

ಡಿ.ವಿ.ಜಿ ಯವರ

* ಮಂಕುತಿಮ್ಮನ ಕಗ್ಗ

ಡಾ|| ಬಿ.ಜಿ.ಎಲ್. ಸ್ವಾಮಿ ಯವರ

* ಪಂಚಕಲಶ ಗೋಪುರ

* ಮೈಸೂರು ಡೈರಿ

* ಅಮೇರಿಕಾದಲ್ಲಿ ನಾನು

*  ದೌರ್ಗಂಧಿಕಾಪಹರಣ

* ತಮಿಳು ತಲೆಗಳ ನಡುವೆ

ಇವೇ ಆ ಆರು ಪುಸ್ತಕಗಳು.

ಇವುಗಳ ಬಗ್ಗೆ ಮಾತನಾಡುತ್ತ ಇವನ್ನು ನನಗೆ ಕೊಡಿಸಿದ್ದು ಹರಿ :)..

ಪುಸ್ತಕಗಳು ಜ್ಞಾನದಾಹವನ್ನು ಇಂಗಿಸುವ ಅಮೃತವಿದ್ದಂತೆ.

ನನ್ನ ಪುಸ್ತಕ ಭಂಡಾರದಲ್ಲಿ ಈಗಾಗಲೇ ಇರುವ, ಓದಿತ್ತಿರುವ, ಓದಲಿರುವ, ಮತ್ತೆ ಇವುಗಳ ಪಟ್ಟಿಗೆ ಸೇರಲಿರುವ ಪುಸ್ತಕಗಳನ್ನು ಆಗ್ಗಿಂದ್ದಾಗ್ಗೆ ನಿಮ್ಮೆಲ್ಲರ ಮುಂದಿಡುತ್ತೇನೆ. ಈಗ ಸ್ವಲ್ಪ ಸಮಯ ಈ ಪುಸ್ತಕಗಳನ್ನು ತಿರುವುವ ಸಮಯ. ಬೆಳಗ್ಗೆ ಮತ್ತದೇ ಕೆಲಸದ ಗುಂಗು, ನಿಮ್ಮೆಲ್ಲರಂತೆ ನನಗೂ ಮಂಡೇ ಬ್ಲೂ ಎಫೆಕ್ಟ್ ಬರಲೂ ಬಹುದು. ಎಲ್ಲರಿಗೂ ಶುಭವಾರ ಎಂದು ಹಾರೈಸುತ್ತಾ..

 

- ಶಿವು@shivu.in

Rating
No votes yet

Comments