'ಸಾವಿರದ ಶರಣ' ರಾಜ್ ನೆನಪಿಗೆ ನುಡಿ ನಮನ

'ಸಾವಿರದ ಶರಣ' ರಾಜ್ ನೆನಪಿಗೆ ನುಡಿ ನಮನ

ಇಪ್ಪತ್ತನೇ ಶತಮಾನದ ಭಾಷೆಯೆಂದೇ ಜನಪ್ರಿಯವಾದ ಸಿನಿಮಾದೊಂದಿಗೆ ಮನುಷ್ಯ ತನ್ನನ್ನು ಯಾವ ರೀತಿಯಲ್ಲಿ ಗುರುತಿಸಿಕೊಂಡಿದ್ದಾನೆಂದರೆ, ತಾನು ಮೊದಲು ನೋಡಿದ ಚಿತ್ರ, ನನ್ನ ಗೆಳೆಯನೊಂದಿಗೆ, ಗೆಳತಿಯೊಂದಿಗೆ, ಪ್ರೇಯಸಿಯೊಂದಿಗೆ, ಮದುವೆಯಾದ ನಂತರ ನೋಡಿದ್ದು, ನನ್ನ ಮಗನೊಂದಿಗೆ ನೋಡಿದ ಮೊದಲ ಚಿತ್ರ ಹೀಗೆ...ಜೀವನದ ಪ್ರತಿಯೊಂದು ಅಮೂಲ್ಯ ಕ್ಷಣವನ್ನೂ ಸಿನಿಮಾದೊಂದಿಗೆ ಬೆಸೆಯುವಷ್ಟು. ಹಾಗಾಗಿ, ಸಿನಿಮಾ ಎಂದಾಕ್ಷಣ ನನ್ನ ಕಣ್ಣ ಮುಂದೆ ಮೊದಲಿಗೆ ಕಾಣಿಸಿಕೊಳ್ಳುವುದು ಡಾ.ರಾಜ್ ಕುಮಾರ್. ಅವರಿಲ್ಲದ ಸಿನಿಮಾ ಪ್ರಪಂಚವನ್ನು ನಾನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಇಂದು ರಾಜ್ ಕುಮಾರ್ 80ನೇ ಹುಟ್ಟುಹಬ್ಬ. ಆದರೆ, ಅವರು ಭೌತಿಕವಾಗಿ ಇಂದು ನಮ್ಮೊಂದಿಗಿಲ್ಲ, ನಿಜ. ಆದರೆ, ಕನ್ನಡ ಚಿತ್ರ ರಸಿಕರ ಮನದಾಳದಲ್ಲಿ ಸದಾ ಕಾಲ ಜೀವಂತವಾಗಿರುತ್ತಾರೆ. ಕನ್ನಡ ನಾಡು ನುಡಿ ಸಂಸ್ಕೃತಿ ಜೀವಂತವಾಗಿರುವವರೆಗೂ ಚಿರಂಜೀವಿಯಾಗಿರುತ್ತಾರೆ. ಆ ಚಿರಂಜೀವಿ ರಾಜ್ ಕುಮಾರನಿಗೆ ನನ್ನ ಈ ನುಡಿ ನಮನ.

ನನ್ನ ಹುಟ್ಟೂರಾದ ತಿರುಮಕೂಡಲು ನರಸೀಪುರದಲ್ಲಿ ನಮ್ಮ ಮನೆಯ ಎದುರಿಗೆ ಒಬ್ಬ ಕಟ್ಟಾ ರಾಜ್ ಕುಮಾರ್ ಅಭಿಮಾನಿಯೊಬ್ಬನಿದ್ದ. ಅವನ ಮನೆಯ ತುಂಬಾ ರಾಜ್ ಕುಮಾರ್ ಫೋಟೋಗಳು. ಅವನು ಕೇವಲ ರಾಜ್ ಅಭಿಮಾನಿ ಮಾತ್ರ ಆಗಿರಲಿಲ್ಲ. ರಾಜ್ ಮಕ್ಕಳ ಒಟ್ಟಾರೆಯಾಗಿ ರಾಜ್ ಕುಟುಂಬದ ಕಟ್ಟಾ ಅಭಿಮಾನಿ ಅವನು. ಮನೆಯಲ್ಲಿ ಸದಾ ರಾಜ್ ಕುಮಾರ್ ಚಿತ್ರ ಗೀತೆಗಳು, ಶರ್ಟ್ ಮೇಲೆ ರಾಜ್ ಕುಮಾರ್ ಚಿತ್ರಗಳು ಹೀಗೆ ಎಲ್ಲವೂ ರಾಜ್ ಮಯ. ನಮ್ಮ ಕುಟುಂಬದೊಂದಿಗಿನ ಅವನ ಒಡನಾಟ ಕೂಡ ಅಷ್ಟೇ ದೊಡ್ಡದು. ನಮ್ಮ ಮನೆಯ ಹಲವಾರು ಕೆಲಸ ಕಾರ್ಯಗಳಲ್ಲಿ ಅವನದು ಪ್ರಮುಖ ಪಾತ್ರ. ಹೀಗಾಗಿ, ಅವನಿಗಿಂತ ವಯಸ್ಸಿನಲ್ಲಿ 10-12 ವರುಷಕ್ಕೆ ಚಿಕ್ಕವನಾದ ನನಗೂ ಕೂಡ ರಾಜ್ ಗೀಳು ಅಂಟಿಕೊಂಡಿತು. ನಮ್ಮೂರಿಗೆ ರಾಜ್ ಚಿತ್ರ ಯಾವುದೇ ಬಂದರೂ ಅಲ್ಲಿ ಇವನು ತಯಾರಿಸಿದ ಸ್ಟಾರ್ ಇರಲೇಬೇಕು. ಅವನೊಂದಿಗೆ ಸೇರಿ ನಾನು ಕೂಡ ಸ್ಟಾರ್ ತಯಾರಿಸುವುದರಲ್ಲಿ ನೆರವಾದೆ. ಆಗೆಲ್ಲ ಸ್ಟಾರ್ ತಯಾರಿಸಿದವರಿಗೆ ಉಚಿತವಾಗಿ ಚಿತ್ರ ನೋಡಲು ಬಿಡುತ್ತಿದ್ದರು. ಹಾಗಾಗಿ, ನಾನು ಕೂಡ ಅವನೊಂದಿಗೆ ಉಚಿತವಾಗಿ ಚಿತ್ರ ನೋಡುವ ಭಾಗ್ಯ ಲಭಿಸಿತು. ಅದೂ ಗಾಂಧಿ ಕ್ಲಾಸ್ ನಲ್ಲಿ. ಕೇವಲ ಬನಿಯನ್ ತೊಟ್ಟುಕೊಂಡು ಗಾಂಧಿ ಕ್ಲಾಸಿನಲ್ಲಿ ಮಲಗಿಕೊಂಡು ಚಿತ್ರ ನೋಡಿದ ನನಗೆ ಅದು ಎಷ್ಟರ ಮಟ್ಟಿಗೆ ಖುಷಿ ಕೊಟ್ಟಿತ್ತೆಂದರೆ, ಆ ಚಿತ್ರ ಯಾವುದೆಂಬುದರ ನೆನಪೂ ಇಲ್ಲ. ಇದಲ್ಲದೆ, ನಮ್ಮ ಮನೆಯಲ್ಲಿ ಕೂಡ ನನ್ನ ಅಕ್ಕಂದಿರನ್ನು ಹೊರತುಪಡಿಸಿದರೆ, ನನ್ನ ತಾಯಿ, ನನ್ನ ಸೋದರ ಮಾವ, ಅಜ್ಜಿ ಎಲ್ಲರೂ ರಾಜ್ ಅಭಿಮಾನಿಗಳೇ. ನಾನು ಹುಟ್ಟುವ ವೇಳೆಗಾಗಲೇ ರಾಜ್ 150 ಚಿತ್ರಗಳಿಗೂ ಮೀರಿ ಇನ್ನೇನು 200ರ ಮೈಲಿಗಲ್ಲು ಸಮೀಪಿಸುವವರಿದ್ದರು. ನಮ್ಮ ಮನೆಯ ಹತ್ತಿರವೇ ಇದ್ದ ಬಾಲಾಜಿ ಟಾಕೀಸು(ಟೆಂಟು) ನಮ್ಮ ಸಂಬಂಧಿಕರಿಗೇ ಸೇರಿದ್ದರಿಂದ ಅಲ್ಲಿಗೆ ರಾಜ್ ರ ಯಾವುದೇ ಚಿತ್ರ ಬರಲಿ ನಮ್ಮ ಕುಟುಂಬದವರಿಗೆ ಉಚಿತ ಪ್ರವೇಶ. ಹಾಗಾಗಿ, ರಾಜ್ ರ ಬಹುತೇಕ ಚಿತ್ರಗಳನ್ನು ನಾನು ನೋಡಿದ್ದು ಅಲ್ಲಿಯೇ. ನಮ್ಮ ಮನೆಯಲ್ಲಿ ತೀರಾ ಕಡಿಮೆ ಎನ್ನುವಷ್ಟು ಚಿತ್ರಗಳನ್ನು ನೋಡುವ ನಾನು ರಾಜ್ ಒಬ್ಬರದೇ 150ಕ್ಕೂ ಹೆಚ್ಚು ಚಿತ್ರಗಳನ್ನು ನೋಡಿದ್ದೇನೆ. ಅಷ್ಟರ ಮಟ್ಟಿಗೆ ಅವರ ಅಭಿಮಾನಿ.

ನಾನು ದೈಹಿಕವಾಗಿ, ಬೌದ್ಧಿಕವಾಗಿ ಬೆಳೆದ ಮೇಲೂ ಕೂಡ ರಾಜ್ ಚಿತ್ರಗಳು, ರಾಜ್ ವ್ಯಕ್ತಿತ್ವ ಘನವಾದುದೆಂದೇ ಅನಿಸುತ್ತಿತ್ತು. ನಿಜವಾದ ರಾಜ್ ಅಭಿಮಾನಿ ರಾಜ್ ತನ್ನ ಚಿತ್ರಗಳ ಮೂಲಕ, ತನ್ನ ವ್ಯಕ್ತಿತ್ವದ ಮೂಲಕ ಕಟ್ಟಿಕೊಟ್ಟ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು, ಅದನ್ನೇ ಜೀವಿಸಬೇಕು ಆಗ ಮಾತ್ರ ಅವರ ಅಭಿಮಾನಿಯವಾಗಲು ಅರ್ಹ. ಇಲ್ಲವಾದಲ್ಲಿ ಅವರ ಅಭಿಮಾನಿ ಎಂದು ಹೇಳಿಕೊಳ್ಳುವುದು ಅವರಿಗೆ ಅವಮಾನ ಮಾಡಿದಂತೆ ಎಂಬುದು ನಾನು ಬೆಳೆದ ಮೇಲೆ ಕಟ್ಟಿಕೊಳ್ಳಲಾರಂಭಿಸಿದ ಆದರ್ಶ. ಅದು ಸದಾ ಹಾಗೆಯೇ ಇರುತ್ತದೆ ಕೂಡ. ಅವರನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಬೇಕು ಎಂಬ ಮಹದಾಸೆ ನನ್ನಲ್ಲಿ ಸದಾ ಮನೆ ಮಾಡಿತ್ತು. ಅಂತಹ ಅವಕಾಶ ಹೇಗೆ ತಾನೇ ದೊರೆಯಬೇಕು. ನನಗೆ ಬುದ್ಧಿ ಬರುವ ವೇಳೆಗಾಗಲೇ ರಾಜ್ ಚಿತ್ರದಲ್ಲಿ ಅಭಿನಯಿಸುವುದನ್ನೇ ಕಡಿಮೆ ಮಾಡಿದ್ದರು. ಇಂತಹ ಸಂದರ್ಭದಲ್ಲಿ, ನನ್ನ ನೆಚ್ಚಿನ ರಾಜ್ ರನ್ನು ಕಾಣುವ ಭಾಗ್ಯ ಎಲ್ಲಿಂದ ತಾನೇ ದೊರೆಯಬೇಕು?

10ನೇ ತರಗತಿಯಿಂದ ಇಲ್ಲಿಯವರೆಗೆ ನನ್ನೆ ಲ್ಲಾ ಶಿಕ್ಷಣವನ್ನು ಮೈಸೂರಿನಲ್ಲಿಯೇ ಪಡೆದ ನನಗೆ ಹತ್ತಿರತ್ತಿರ 18-20ನೇ ವಯಸ್ಸಿನವರೆಗೂ ಬೆಂಗಳೂರು ಎಂಬುದು ಕೇವಲ ಕಿವಿ ಕೇಳಿದ ಶಬ್ದ, ಚಿತ್ರಗಳಲ್ಲಿ, ಟಿ.ವಿ.ಯಲ್ಲಿ ನೋಡಿದ ಊರಷ್ಟೇ ಆಗಿತ್ತು. ಆದರೆ, ನನ್ನ ತಾಯಿಯ ಸೋದರ ಮಾವ, ಮೈಸೂರಿನ ಅತ್ಯಂತ ಪ್ರಭಾವಿ ರಾಜಕಾರಣಿಗಳಲ್ಲೊಬ್ಬರಾಗಿದ್ದ, ಸಂಬಂಧದಲ್ಲಿ ನನಗೆ ತಾತ ಆಗಬೇಕಿದ್ದ ಒಬ್ಬರ ಮಗನ ಮದುವೆ ಸರಳವಾಗಿ ಧರ್ಮಸ್ಥಳದಲ್ಲಿ ನಡೆದಿತ್ತು. ಅಲ್ಲಿಗೆ ತಿರುಮಕೂಡಲು ನರಸೀಪುರದಿಂದ ನೇರವಾಗಿ ಬಸ್ ಮಾಡಿದ್ದರಿಂದಾಗಿ ನಾನು, ನನ್ನ ತಾಯಿ ಮತ್ತು ಕುಟುಂಬದ ಇತರ ಸದಸ್ಯರು ಹೋಗುವ ಮನಸ್ಸು ಮಾಡಿದೆವು. ನನಗೆ ಇದ್ದ ಕಾರಣ, ಧರ್ಮಸ್ಥಳವನ್ನು ಎಂದೂ ನೋಡಿರಲಿಲ್ಲ ಎಂಬುದೊಂದೇ ಆಗಿತ್ತು. ದೊಡ್ಡ ದೊಡ್ಡ ಕುಟುಂಬಗಳಲ್ಲಿನ ಸಂಪ್ರದಾಯ ಎಂದರೆ, ಮದುವೆ ನಂತರ ಆರತಕ್ಷತೆಯನ್ನು ಯಾವುದಾದರೂ ದೊಡ್ಡ ಹೋಟೆಲ್ ನಲ್ಲಿ ನಡೆಸುವುದು ತಾನೇ! ಅದರಂತೆ, ಆರತಕ್ಷತೆಯನ್ನು ಬೆಂಗಳೂರಿನ ಹೋಟೆಲ್ ಉಡ್ ಲ್ಯಾಂಡ್ಸ್ ನಲ್ಲಿ ಏರ್ಪಡಿಸಲಾಗಿತ್ತು. ಅಲ್ಲಿಗೂ ನಮ್ಮೂರಿನಿಂದ ಬಸ್ ವ್ಯವಸ್ಥೆ ಇದ್ದುದರಿಂದ, ನಾನು ನನ್ನ ಗೆಳೆಯರು, ಕುಟುಂಬದವರು ಎಲ್ಲರೂ ಹೊರಟೆವು. ತೀರಾ ಚಿಕ್ಕಂದಿನಲ್ಲಿ ಬೆಂಗಳೂರನ್ನು ನೋಡಿದ್ದ ನನಗೆ, ಮತ್ತೆ ಅದರ ದರ್ಶನವಾದದ್ದು ಆಗಲೇ. ಅಷ್ಟು ದೊಡ್ಡ ಊರು. ಅಷ್ಟು ದೊಡ್ಡ ಹೋಟೆಲ್. ಶ್ರೀಮಂತ ಜನ. ಕರ್ನಾಟಕದ ಪ್ರಸಿದ್ಧ ಸಿನಿಮಾ ತಾರೆಯರು, ರಾಜಕಾರಣಿಗಳು, ಅಧಿಕಾರಿಗಳು, ವಾಣಿಜ್ಯೋದ್ಯಮಿಗಳು ಎಲ್ಲರೂ ಆಗಮಿಸಿದ್ದರು. ಹಿಂದೆಂದೂ ನಾನು ಕಂಡರಿಯದಿದ್ದಂತಹ ವೈಭವ, ಜನ ಸಾಗರ. ಆದರೂ ನನ್ನ ಪಾಲಿಗೆ ಅದು ನೀರಸವಾಗಿಯೇ ಇತ್ತು. ಆಗಲೇ ಮಿಂಚಿನ ಸಂಚಾರವಾದದ್ದು. ರಾಜ್ ಆಗಮನದಿಂದ. ರಾಜ್ ತಮ್ಮ ಪತ್ನಿ ಪಾರ್ವತಮ್ಮನವರೊಂದಿಗೆ ಅಲ್ಲಿಗೆ ಆಗಮಿಸಿದರು. ಅವರು ಅಲ್ಲಿಗೆ ಕಾಲಿಡುತ್ತಿದ್ದಂತೆಯೇ ಅಲ್ಲಿದ ಬೇರೆ ಯಾರೂ ನನಗೆ ಕಾಣಿಸಿಲೇ ಇಲ್ಲ. ಅವರು ಇದ್ದಷ್ಟು ಹೊತ್ತು ಅವರನ್ನು ನನ್ನ ಕಣ್ಮನದ ತುಂಬಾ ತುಂಬಿಕೊಳ್ಳುತ್ತಿದ್ದೆ. ದಣಿವಾಗುವಷ್ಟು ನೋಡಿದೆ. ಆದರೂ, ತೀರದ ದಾಹ. ನನ್ನ ಪುಣ್ಯಕ್ಕೆ ಮಳೆ ರಾಯ ಎಲ್ಲಿದ್ದನೋ ಆಗಮಿಸಿಯೇ ಬಿಟ್ಟ. ಇನ್ನೇನು ಹೊರಡಲಿದ್ದ ರಾಜ್ ದಂಪತಿಗಳು ಮಳೆ ಬಂದೊಡನೆಯೇ ಅಲ್ಲಿಯೇ ಕುಳಿತು ಬಿಟ್ಟರು. 1 ಗಂಟೆಗೂ ಮೀರಿ. ನಾನು ಮತ್ತೊಂದಷ್ಟು ಕಿರಿಯ ರಾಜ್ ಅಭಿಮಾನಿಗಳು ರಾಜ್ ಸುತ್ತ ಜಮಾಯಿಸಿಬಿಟ್ಟೆವು. ಅವರನ್ನು ಕೈ ಮೈಗಳನ್ನು ಮುಟ್ಟಿ ಮುಟ್ಟಿ ನೋಡಿ ಪುಳಕಿತರಾಗುತ್ತಿದ್ದೆವು. ಆದರೆ, ಮಳೆ ನಿಂತೊಡನೆಯೇ ರಾಜ್ ಅಲ್ಲಿಂದ ತೆರಳಿಯೇ ಬಿಟ್ಟರು. ಆದರೆ, ನನ್ನ ಮನಸ್ಸಿನಲ್ಲಿ ಆ ಅಮೂಲ್ಯ ಗಳಿಗೆಯನ್ನು ಅಚ್ಚಳಿಯದೇ ಒತ್ತಿ ಹೋಗಿಬಿಟ್ಟರು.

ಇದಾದ ನಂತರ, ಒಂದು ವರ್ಷದ ಬಳಿಕವೋ ಏನೋ ಮತ್ತೆ ನಾನು ಯಾವುದೋ ಸಮಾರಂಭದ ನಿಮಿತ್ತ ನನ್ನ ಅಜ್ಜಿಯೊಂದಿಗೆ ಬೆಂಗಳೂರಿಗೆ ಹೋಗಿದ್ದೆ. ನನ್ನ ಅಜ್ಜಿಯ ಅಕ್ಕ ಸದಾಶಿವನಗರದ ವಾಸಿ. ಅವರು ಪ್ರಭಾವಿ ರಾಜಕಾರಣಿಯ ಪತ್ನಿ. ಅವರ ಮನೆ ಎದುರಿಗೇ ಎಸ್.ಎಂ.ಕೃಷ್ಣರ ಮನೆ. ಮೂರಂತಸ್ಸಿನ ಭಾರಿ ಬಂಗಲೆ ನಮ್ಮ ಅಜ್ಜಿಯ ಅಕ್ಕ(ಅಂದರೆ ನನಗೂ ಅಜ್ಜಿಯೇ!)ನದು. ಅವರು ಕೂಡ ಭಾರಿಯೇ! ನಮ್ಮ ಅಜ್ಜಿ ಹೇಳುತ್ತಿದ್ದರು. ಇಲ್ಲಿಯೇ ಹತ್ತಿರದಲ್ಲಿ ರಾಜ್ ಕುಮಾರ್ ಮನೆಯಿದೆ. ಯಾವಾಗಲಾದರೂ ಹೋಗಿ ನೋಡಿಕೊಂಡು ಬರೋಣವಂತೆ. ಇಲ್ಲವಾದಲ್ಲಿ ಪ್ರತಿದಿನ ರಾಜ್ ಕುಮಾರ್ ಇಲ್ಲಿ ವಾಕ್ ಮಾಡಿಕೊಂಡು ಹೋಗುತ್ತಾರೆ. ಆಗ ಹೋಗಿ ಮಾತಾಡಿಸೋಣವಂತೆ ಎಂದು ಹೇಳಿದರು. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಅದೊಂದು ದಿನ ಸಂಜೆ 7 ಗಂಟೆಯಾಗಿತ್ತೇನೋ! ರಾಜ್ ತಲೆಗೆ ಟವಲ್ ಕಟ್ಟಿಕೊಂಡು ಹಳ್ಳಿ ಹೈದನ ಹಾಗೆ ತಮ್ಮ ಭಂಟನೊಂದಿಗೆ ವಾಕ್ ಮಾಡಿಕೊಂಡು ಹೋಗುತ್ತಿದ್ದರು. ಅವರನ್ನು ಕಂಡೊಡನೆಯೇ ಕೂಗಿಕೊಂಡರು. 'ಶಶಿ, ನೋಡು ಬಾರೋ ಅಣ್ಣಾವ್ರು ಹೋಗ್ತಾ ಇದಾರೆ' ಎಂದು ಅಜ್ಜಿ ಕೂಗಿಕೊಂಡರು. ಎರಡನೇ ಅಂತಸ್ತಿನಲ್ಲಿದ್ದ ನಾನು ಅವರ ಕೂಗು ಕೇಳಿಸಿಕೊಂಡು ಓಡೋಡಿ ಕೆಳಗೆ ಬಂದೆ. ಅಲ್ಲಿ ನಮ್ಮ ಅಜ್ಜಿ ತಮ್ಮ ಪರಿಚಯ ಮಾಡಿಕೊಂಡು ನಾವು ತಿರುಮಕೂಡಲು ನರಸೀಪುರದವರು. ಹೀಗೀಗೇ ಇಂಥ ಮನೆಯವರು ಎಂದಾಕ್ಷಣ. ಹೌದಾ, ನಮ್ಮೂರು ಕಡೆಯವರು. ನರಸೀಪುರಕ್ಕೆ ನಾವು ಚಿಕ್ಕವರಾಗಿದ್ದಾಗ ನಾಟಕ ಆಡಲು ಬರ್ತಾ ಇದ್ವಿ. ತುಂಬಾ ಸಂತೋಷಾಯ್ತು ನಿಮ್ಮನ್ನ ಇಲ್ಲಿ ನೋಡಿ ಎಂದು ಸ್ವಲ್ಪ ಹೊತ್ತು ನಮ್ಮನ್ನೆಲ್ಲ ಮಾತನಾಡಿಸಿ ಹೊರಟರು. ಆಗ ಮತ್ತೊಮ್ಮೆ ನನ್ನ ಮೈಯಲ್ಲಿ ರೋಮಾಂಚನ! ನನ್ನ ಆರಾಧ್ಯ ದೈವವಾದ ರಾಜ್ ದರ್ಶನದಿಂದ ಪುನೀತನಾದ ಭಾವ.

ಇದೆಲ್ಲ ಅವರು ತೀರಿಕೊಂಡ ಬಳಿಕ ನೆನಪಾದದ್ದು ಉಂಟು. ರಾಜ್ ಸಾವು ಇಡೀ ಕರ್ನಾಟಕವನ್ನೆ ಕಂಗೆಡಿಸುವಷ್ಟು ಪರಿಣಾಮಕಾರಿಯಾಗಿತ್ತು. ರಾಜ್ ವ್ಯಕ್ತಿತ್ವವೇ ಅಂಥದ್ದು. ನಿಜ ಹೇಳಬೇಕಂದ್ರೆ, ಸಾವು ಅನ್ನೋದು ನನ್ನನ್ನ ಕಂಗೆಡಿಸಿದ್ದು ಅದೇ ಮೊದಲ ಬಾರಿ. ಅದನ್ನು ನನ್ನ ದಿನಚರಿಯಲ್ಲಿ ಕೂಡ ದಾಖಲಿಸಿದ್ದೆ. ತುಂಬಾ ನೋವಾಗಿತ್ತು ಅಂದು. ಎದೆ ತುಂಬ ಭಾರವಾಗಿತ್ತು. ದುಃಖ ಮಡುಗಟ್ಟಿ ನಿಂತಿತ್ತು. ರಾಜ್ ವ್ಯಕ್ತಿತ್ವ ಎಷ್ಟು ದೊಡ್ಡದು ಎಂಬುದನ್ನು ಅವರನ್ನು ಹತ್ತಿರದಿಂದ ಬಲ್ಲವರಿಗೇ ಗೊತ್ತು. ಇಡೀ ಭಾರತದಲ್ಲಿ ಕನ್ನಡವನ್ನು, ಕನ್ನಡ ಚಿತ್ರರಂಗವನ್ನು ಏಕಕಾಲಕ್ಕೆ ಪ್ರತಿನಿಧಿಸಬಲ್ಲಂತಹ ಏಕೈಕ ವ್ಯಕ್ತಿ ಆಗಿದ್ದರು ರಾಜ್. ಇಡೀ ಭಾರತದ ಇಡೀ ಸಿನಿಮಾ ಸಮುದಾಯವೇ ಗೌರವಿಸುವಂತಹ ವ್ಯಕ್ತಿತ್ವ ಅವರದು. ಅವರು ಸಿನಿಮಾಕಾಶದ ಧ್ರುವತಾರೆಯೇ ಎಂಬುದು ನಿರ್ವಿವಾದ. ಅವರು ನಾನಂದುಕೊಂಡದ್ದಕ್ಕಿಂದ ಎಷ್ಟು ದೊಡ್ಡ ವ್ಯಕ್ತಿ ಎಂಬ ಅರಿವಾದದ್ದು ಕೂಡ ಅವರ ಸಾವಿನ ನಂತರವೇ. 'ಶರಣರ ಸಾವನ್ನು ಮರಣದಲ್ಲಿ ನೋಡು' ಅಂತಾರೆ. ರಾಜ್ ಸಿನಿಮಾ ಪ್ರಪಂಚ ಕಂಡ ಅಂತಹ ಮಹಾ ಶರಣ.

'ಆಡಿಸಿ ನೋಡು, ಬೀಳಿಸಿ ನೋಡು, ಉರುಳಿ ಹೋಗದು. ಏನೇ ಬರಲಿ ಯಾರಿಗೂ ಸೋತು ತಲೆಯ ಬಾಗದು. ಎಂದಿಗೂ ನಾನು ಹೀಗೇ ಇರುವೆ ಎಂದು ನಗುವುದು. ಹೀಗೆ ನಗುತಲಿರುವುದು.' ಎಂದು ರಾಜ್ ಈಗಲೂ ನನ್ನ ಕಣ್ಮನಗಳ ಮುಂದೆ ಹಾಡುವ ಹಾಗೆ ಭಾಸವಾಗುತ್ತದೆ...

Rating
No votes yet

Comments