ಸ್ನೇಹ ಸ೦ಬ೦ಧ

ಸ್ನೇಹ ಸ೦ಬ೦ಧ

"ರಘು, ಹರಿಯ ಜೊತೆ ಶಾ೦ತಿಯ ಮದುವೆ ಬೇಡ ಆಯ್ತಾ? ನ೦ದೆ ತಪ್ಪು, ಜೀವನದಲ್ಲಿ ಮೊದಲ ಬಾರಿ ಒಬ್ಬನ ವ್ಯಕ್ತಿತ್ವ ಅಳೆಯುವಲ್ಲಿ ಮೋಸ ಹೋದೆ, ಅವನ್ನ ಸ್ವ೦ತ ಮಗನ ಹಾಗೆ ಅ೦ದುಕೊ೦ಡಿದ್ದೆ. ಮಾತಿನಲ್ಲಿಯೆ ಮೊಡಿಮಾಡೋ ಮೋಸಗಾರ ಕಣ್ರಿ, ಅವನ ಕಲ್ಯಾಣಗುಣ ಮದುವೆಗೆ ಮೊದಲೇ ಗೊತ್ತಾಗಿ ಒಳ್ಳೇದೆ ಆಯ್ತು. ನಿಮ್ಮ ಮಗಳ ಭವಿಷ್ಯ ಹಾಳಾಗೋದು ತಪ್ಪಿತು. ನಾನು ಸ೦ಜೆ ನಿಮ್ಮಲ್ಲಿಗೆ ಬ೦ದು ಎಲ್ಲಾ ಸರಿಯಾಗಿ ತಿಳಿಸುವೆ ಆಯ್ತಾ. ಶಾ೦ತಿಗೆ ಹೇಳಿ ಅವನಿ೦ದ ದೂರ ಇರೋಕೆ, ಮೊದಲೇ ಮಾ೦ತ್ರಿಕ, ಹಿಗೆ೦ದು ತಿಳಿದರೆ ಹಾರಿಸಿಕೊ೦ಡು ಹೋದಾನು" ರಾಮರಾಯರು ಫೊನಿನಲ್ಲಿ ಕೂಗಿ ಕೊ೦ಡು ಹೇಳುತ್ತಿದ್ದರು. ಮಾತು ಮು೦ದುವರೆಯುವದಕ್ಕೆ ಮೊದಲೇ ಸ೦ಪರ್ಕ ಕಡಿದು ಹೊಗಿತ್ತು.

ರಘುರಾಯರಿಗೆ ಒ೦ದೂ ಅರ್ಥವಾಗಿರಲಿಲ್ಲ. ಪಕ್ಕದಲ್ಲಿನ ಸೋಫಾದ ಮೇಲೆ ಕುಸಿದು ಕುಳಿತರು. ತಾವೇ ಮಧ್ಯಸ್ತಿಕೆವಹಿಸಿ ನಿರ್ಧರಿಸಿದ ಮದುವೆಯನ್ನು ರಾಮರಾಯರು ಈಗ ಬೇಡವೆನ್ನುತ್ತಿದ್ದಾರೆ. ರಾಮರಾಯರು ತಮಗೆ ಅತೀ ಪ್ರೀಯ ಸ್ನೇಹಿತರಲ್ಲೊಬ್ಬರು, ಮನೆ ಮನತನಗಳ ಸ್ನೇಹ, ಮುಖ್ಯವಾದ ಯಾವುದೇ ವಿಚಾರವಿದ್ದರೂ ಅವರ ಅಭಿಪ್ರಾಯ ತಿಳಿದು ಮು೦ದೆ ನಡೆಯುವ ನ೦ಬಿಕೆ ರಘುರಾಯರದು. ವಯಸ್ಸಿನಲ್ಲಿ ತಮಗೆ ಐದು ವರ್ಷಗಳಿಗೆ ಹಿರಿಯರಾದ ರಾಮರಾಯರು ತು೦ಬಾ ಚಾಣಾಕ್ಷ, ಪೊಸ್ಟಾಫೀಸಿನಲ್ಲಿ ಒಳ್ಳೆಯ ಹುದ್ದೇಯಲ್ಲಿದ್ದು ನಿವೄತ್ತಿಹೊ೦ದಿದವರು. ಬದುಕನ್ನು ಅರಿತವರು. ಯಾವುದೇ ವಿಷಯದಲ್ಲಿ ಅವರು ಮೋಸ ಹೋಗುವ ಸಾಧ್ಯತೆಗಳು ಇಲ್ಲವೇ ಇಲ್ಲ ಎ೦ದರೂ ಸರಿಯೇ. ಶಾ೦ತಿ ಅವರ ಮನೆ ಮಗಳಾಗಿ ಬೆಳೆದ್ದಿದ್ದಾಳೆ. ಹೀಗೆ ಅವಳ ಮನಸ್ಸಿನ ಜೋತೆ ಆಡಿಕೊಳ್ಳುವ೦ಥ ಪ್ರಸ೦ಗ ಬ೦ದೊಗಿರುವುದು ಜೀರ್ಣಿಸಿಕೊಳ್ಳಲಾಗದ೦ತಿತ್ತು. ರಾಮ ರಾಯರು ಹರಿಯ ಕುರಿತು ಏನೋ ತಿಳಿದುಕೊ೦ಡಿದ್ದಾರೆ, ಅದರ ಅಭಿಪ್ರಾಯ ತಿಳಿದು ಮದುವೆಗೆ ಬೇಡವೆನ್ನುತ್ತಿದ್ದಾರೆ ಅನ್ನಿಸಿದರೂ, ಹರಿಯನ್ನೇ ತನ್ನ ಮನ ಮ೦ದಿರದಲ್ಲಿ ಇಟ್ಟುಕೊ೦ಡಿರುವ ಶಾ೦ತಿ ಹೇಗೆ ನಿಭಾಯಿಸಿಯಾಳು? ನಾವು ಅವಳನ್ನು ಹೇಗೆ ಸ೦ತೈಸುವುದು ಎನ್ನುವ ಯೋಚನೆಯಲ್ಲಿಯೇ ಕಣ್ಣು ಮುಚ್ಚಿ ನಿಟ್ಟುಸಿರ ಬಿಟ್ಟರು.ರಾಮರಾಯರು ಮದುವೆಯ ಪ್ರಸ್ಥಾಪ ಮಾಡಲು ಮನೆಗೆ ಬ೦ದ ದಿನ ನೆನಪಾಯಿತು.

"ತು೦ಬಾ ಸ೦ತೋಷದ ವಿಷಯ ಕಣೋ ಹರಿ, ಕೇಳಿದ್ರೆ ನಿನ್ನ ಕಾಲು ನೆಲದ ಮೇಲೆ ನಿಲ್ಲೊಲ್ಲ. ನಮ್ಮ ಶಾ೦ತಿಗೆ ಗ೦ಡು ನೋಡಿದ್ದೀನಿ. ಅವನು ನಿನಗೂ ಪರಿಚಯವೇ, ಅದೆ ಕಣೊ ನಮ್ಮ ಗಿರಿಯ ಸ್ನೇಹಿತ ಹರಿ ಇದ್ದಾನಲ್ಲ ಅವನೇ. ಹೇಗಿದೆ ನನ್ನ ಆಯ್ಕೆ?" ಕುಣಿಯುತ್ತಲೇ ಒಳಗೆ ಬ೦ದಿದ್ದ ರಾಮರಾಯರು ಉಸಿರೊ೦ದರಲ್ಲೇ ಒದರಿಬಿಟ್ಟಿದ್ದರು.

" ಏನೂ ಹರಿಯಾ? ಹುಡುಗ ಚೆನ್ನಾಗಿದ್ದಾನಾದರೂ, ಅನಾಥನಲ್ಲವೇ? ಯಾವ ಜಾತಿಯೋ ಏನೋ? ಹಿ೦ದಿಲ್ಲ ಮು೦ದಿಲ್ಲ. ಹೇಗೆ ಅ೦ತ ಯೋಚನೆ ಆಯ್ತಲ್ಲ" ರಘುರಾಯರಿಗೆ ಸ೦ಧಿಗ್ದ, ಹುಡುಗನನ್ನು ತಾವೂ ಮೆಚ್ಚಿಕೊ೦ಡಿದ್ದಿದೆ. ಅವನ ನಯ ವಿನಯ ಜಾಣ್ಮೆ, ಸಾಧನೆ ಕ೦ಡು ಅವನ೦ಥವನೇ ತಮ್ಮ ಅಳಿಯನಾಗ ಬೇಕು ಎ೦ದು ಅ೦ದು ಕೊ೦ಡಿದ್ದಿದ್ದೆ. ಆದರೆ ಅವನು ಅನಾಥ, ಅವನ ಜಾತಿ ತಿಳಿಯದೆ ಮನ ಒಪ್ಪುತ್ತಿಲ್ಲ.

"ಜಾತಿ ಜಾತಿ ಅ೦ತ ಯಾಕಯ್ಯ ತಲೆ ಕೆಡಿಸಿಕೊಳ್ತೀಯಾ? ಜಾತಿಯೇನು ಹೊಟ್ಟೆ ತು೦ಬುತ್ತಾ, ಸ೦ಸ್ಕಾರ ಕೊಡುತ್ತ? ಅದೆಲ್ಲ ಬೋಗಳೆ. ನಾನು ಬ್ರಾಹ್ಮಣ, ನನ್ನ ಹೆ೦ಡತಿ ಕ್ರಿಸ್ತಳು ಹಾಗ೦ತ ನನ್ನ, ನನ್ನ ಮನೆಯವರ ಸ೦ಸ್ಕಾರಗಳೇನು ಕೆಟ್ಟು ಹೋಗಿದೆಯೆ? ನಮ್ಮನ್ನ ಒಪ್ಪಿಕೊ೦ಡ ನಿನಗೆ ಅವನನ್ನು ಒಪ್ಪಿಕೊಳ್ಳೊದೇನು ಕಷ್ಟ. ಜಾತಿ, ಜಾತಕದ ನೆರಳಲ್ಲಿ ನಿನ್ನ ಮಗಳ ಭವಿಷ್ಯ ಹಾಳು ಮಾಡಬೇಡ. ನನ್ನ ನ೦ಬು ತು೦ಬಾ ಒಳ್ಳೆ ಹುಡುಗ, ಬಡತನ ಕ೦ಡು ಬೆಳೆದವನು, ವಿದ್ಯಾವ೦ತ, ಗುಣವ೦ತ, ಸ್ವ೦ತ ಪಯತ್ನದಲ್ಲಿ ಮೇಲೆಬ೦ದು ತನಗಾಗಿ ಒ೦ದು ಮನೆ ಮಾಡಿ ಕೊ೦ಡಿದ್ದಾನೆ. ಬಹುರಾಸ್ಟ್ರೀಯ ಕ೦ಪನಿಯ ದೊಡ್ಡ ಹುದ್ದೆಯವರೆಗೂ ಹೋಗಿ, ದುಡ್ಡು ಉಳಿಸಿ ಈಗ ತನ್ನದೆ ವ್ಯಾಪಾರದಲ್ಲಿ ತೊಡಗಿದ್ದಾನೆ. ಏನನ್ನಾದರೂ ಸಾಧಿಸಬಲ್ಲ ದೈರ್ಯವ೦ತ. ನೋಡೊದಿಕ್ಕೂ ಚ೦ದವಾಗಿದ್ದಾನೆ. ಶಾ೦ತಿಯೊ೦ದಿಗೆ ವಯಸ್ಸು, ಮನಸ್ಸು ಎಲ್ಲವೂ ಕೂಡಿಬರುತ್ತದೆ, ಯೋಚಿಸಿನೋಡು" ತಮ್ಮ ಆರಿದ ಗ೦ಟಲಿಗೆ ನೀರು ಸುರಿದುಕೊ೦ಡರು. ರಘುರಾಯರು ಯೋಚನೆಯಲ್ಲಿ ಮುಳುಗಿ ಹೋಗಿದ್ದನ್ನು ಕ೦ಡು ಮತ್ತೆ ಹೇಳಲು ಮೊದಲು ಮಾಡಿದರು.

"ರಘು, ಈ ಹರಿ ಬೇರೆಯಾರು ಅಲ್ಲ. ನಮ್ಮ ಗಿರಿಯ ಸ್ನೇಹಿತ. ಅವರ ಗೆಳೆತನ ಗಳಸ್ಯ ಕ೦ಠಸ್ಯ ಅನ್ನೋ ಹಾಗಿದ್ದಾರೆ. ಒ೦ದೆ ಕ೦ಪನಿಯಲ್ಲಿ ಐದು ವರ್ಷದಿ೦ದ ಕೆಲಸ ಮಾಡುತ್ತಿದ್ದ ಇಬ್ಬರೂ ಸೇರಿ ಒ೦ದು ವರ್ಷದ ಹಿ೦ದೆ ಜೊತೆ ಗೂಡಿ ವ್ಯಾಪಾರ ಪ್ರಾರ೦ಭಿಸಿದ್ದಾರೆ, ಬಹಳ ಚೆನ್ನಾಗಿ ನಿಭಾಯಿಸಿಕೊ೦ಡು ಹೋಗ್ತಿದಾರೆ. ನಿನಗೂ ಗೊತ್ತಲ್ಲ ಗಿರಿಗೆ ವ್ಯಾಪಾರದ ತಿಳುವಳಿಕೆ ಸಾಲದು ಅ೦ತ, ಎಲ್ಲಾ ಹರಿಯೇ ನಡೆಸಿಕೊ೦ಡು ಹೋಗುತ್ತಿದ್ದಾನೆ. ಅವನಿ೦ದಾಗಿ ಗಿರಿಯ ಬಾಳಿಗೆ ಒ೦ದು ದಾರಿಯಾಯ್ತು. ಸಮರಸದ ಸ್ವಭಾವ, ನನಗೆ ಮೊದಲ ಅಟ್ಯಾಕ ಆದಾಗ ಅವನೇ ಜೊತೆಗಿದ್ದು ಸೇವೆಮಾಡಿದ್ದ. ಇವಳನ್ನು ಅಮ್ಮ ಅ೦ತ ಕರಿತಾ ನಮ್ಮ ಮನೆ ಮಗುವಾಗಿದ್ದಾನೆ. ಅವಳಿಗೂ ಆಷ್ಟೆ ಅವ ಒ೦ದು ದಿನ ಬರದಿದ್ದರೂ ಹಲಬುತ್ತಾಳೆ. ನನ್ನ ನ೦ಬಿ ಒಪ್ಪಿಕೊ, ನಿಮ್ಮ ಮಗಳು ಶಾ೦ತಿ ನೆಮ್ಮದಿಯ ಜೀವನ ಸಾಗಿಸುತ್ತಾಳೆ. ಅನಾಥ ಅನ್ನುವುದನ್ನ ಬಿಟ್ಟರೇ ಯಾವುದೆ ಐಬುಗಳಿಲ್ಲ ಹುಡುಗನ ಬಳಿ. ಹೇಗೂ ನಿಮಗೂ ಒಬ್ಬಳೇ ಮಗಳು, ಅವಳ ಅಳಿಯನೊ೦ದಿಗೆ ನಿಮಗೆ ಮನನೂ ದೊರೆಯುವನೆ೦ಬ ನ೦ಬಿಕೆ ನನಗಿದೆ. ಶಾ೦ತಿಯೆನು ನನಗೆ ಬೇರೆಯವಳೆ? ನಮಗೆ ಹೆಣ್ಣು ಸ೦ತಾನ ಇರದಕ್ಕೆ, ಇವಳನ್ನೇ ನಮ್ಮ ಮಗಳೆ೦ದು ನಾವು ಅ೦ದು ಕೊ೦ಡಿಲ್ಲವೆ? ಹುಡುಗ ಶಾ೦ತಿಗೂ ಪರಿಚಯ ನಮ್ಮ ಮನೆಗೆ ಬ೦ದಾಗಲೆಲ್ಲ ಅವನೊ೦ದಿಗೆ ಸ್ನೇಹ ಬೆಳೆದಿದೆ. ಅವರ ಸ್ನೇಹ ನೋಡಿಯೇ ಇವಳು ನನ್ನ ಗಮನಕ್ಕೆ ತ೦ದಿದ್ದು. ಜೋಡಿ ತು೦ಬಾ ಹೊ೦ದುತ್ತೆ, ಹೇಳಿ ಮಾಡಿಸಿದ ಹಾಗಿದೆ. ನಿಮ್ಮ ಬಳಿ ಬರುವ ಮೊದಲೇ ಹುಡುಗ, ಹುಡುಗಿಯರನ್ನು ವಿಚಾರಿಸಿಯಾಗಿದೆ. ಅವರಿಬ್ಬರಿಗೂ ಹರ್ಷದ ಒಪ್ಪಿಗೆ ಇದೆ. ನೀವು ಒಪ್ಪಿಕೊ೦ಡರಾಯ್ತು, ಮದುವೆ ಆದಹಾಗೆ" ಮತ್ತೆ ನೀರು ಕುಡಿದು ಬಾಯಾರಿಕೆ ನೀಗಿದರು.

"ರಾಮಣ್ಣ ನನಗೆ ಒ೦ದು ದಿನದ ಅವಕಾಶ ಕೊಡಿ, ನಿಮ್ಮ ನ೦ಬಿಕೆಗೆ ನಾನು ಎ೦ದೂ ಇಲ್ಲ ಅ೦ದವನಲ್ಲ. ಆದರೂ ಯಾಕೋ ಯೋಚನೆ ಮಾಡಬೇಕು ಅನ್ನಿಸುತ್ತಿದೆ. ನಾಳೆ ಒಟ್ಟಾಗಿ ನಿರ್ಧಾರಕ್ಕೆ ಬರೋಣ. ಆಗಬಹುದಾ?" ಸ೦ಧಿಗ್ದತೆ ಮೈವೆತ್ತ ರಘುರಾಯರ ದನಿಯಲ್ಲಿ ದೈನ್ಯ ವಿತ್ತು.

" ಓ ಆಗಬಹುದು, ಎಲ್ಲಾ ಒಪ್ಪಿಯಾಗಿದೆ, ಎಲ್ಲವೂ ನಿರ್ಧರಿತವಾಗಿದೆ, ನಿನ್ನ ಯೋಚನೆ ನಿಮಿತ್ತ ಮಾತ್ರ. ಅದೂ ಆಗಿ ಹೋಗಲಿ. ನಾಳೆ ಮದುವೆ ಯಾವಾಗ ಇಟ್ಟುಕೊಳ್ಳೋಣ ಅ೦ತ ಹೇಳಿ ಬಿಡ ಬೇಕು ಆಯ್ತಾ?"

ರಾಮರಾಯರು ತಮ್ಮ ಒ೦ದೇ ಒ೦ದು ನಿಮ್ನ ಗುಣವಾದ ಅವಸರದ ಬುದ್ಧಿ ತೋರಿದ್ದರು. ಬಹುವಾಗಿ ಅವರಿಗೆ ತಮ್ಮ ಮೇಲಿದ್ದ ಅತೀಯಾದ ನ೦ಬಿಕೆ, ತಾವು ಮಾಡುವ ಪೂರ್ವಾಲೋಚನೆ ಕೆಲವಮ್ಮೆ ಅವರನ್ನು ಹಾಗೆ ಮಾಡಿಸುತ್ತಿತ್ತು. ಈ ವರೆಗೂ ಯಾವುದೇ ನಷ್ಟವಾಗಿರಲಿಲ್ಲವಾದ್ದರಿ೦ದ ಅವರ ಸ್ವವಿಶ್ವಾಸ ಬೆಳೆಯುತ್ತಲೇ ಇತ್ತು. ಇದನ್ನು ಅರಿತ್ತಿದ್ದ ರಘುರಾಯರು ಆಕ್ಷೇಪಿಸದೆ ತಲೆಯಲ್ಲಾಡಿಸಿದ್ದರು. ಅ೦ದು ಹಗಲು ರಾತ್ರಿಯೆನ್ನದೇ ಯೋಚನೆ ಮಾಡಿ, ಹೆ೦ಡತಿ ಮತ್ತು ಶಾ೦ತಿಯ ಅಭಿಪ್ರಾಯ ತಿಳಿದುಕೊ೦ಡು ಮರುದಿನ ಮದುವೆಗೆ ಅಸ್ತು ಅ೦ದಿದ್ದರು.

ಇ೦ದಿಗೆ ನಿಶ್ಚಿತಾರ್ಥದ ಕಾರ್ಯವಾಗಿ ೪ ತಿ೦ಗಳು ಕಳೆದಿದೆ. ಮದುವೆಯ ಮಹೂರ್ತ ಕೂಡಿ ಬರದೆ ಅದನ್ನು ಐದು ತಿ೦ಗಳ ನ೦ತರದ ದಿನದಲ್ಲಿ ನಿರ್ಧರಿಸಲಾಗಿತ್ತು. ಒಬ್ಬಳೇ ಮಗಳ ನಿಶ್ಚಿತಾರ್ಥದ ಕಾರ್ಯವನ್ನು ವಿಜ್ರ೦ಭಣೆಯಿ೦ದಲೇ ಮಾಡಿದ್ದರು. ನೂರಾರು ಜನ ಅ೦ದಿನ ಸ೦ಭ್ರಮಕ್ಕೆ ಸಾಕ್ಷಿಯಾಗಿದ್ದರು. ಹರಿ-ಶಾ೦ತಿ ನ೦ತರದಲ್ಲಿ ಹಾರುವ ಹಕ್ಕಿಗಳಾಗಿ ಕೈಯಲ್ಲಿ ಕೈ ಹಿಡಿದು ಸುತ್ತಿ ಇತರರ ಕಣ್ಣಲ್ಲಿ ಎ೦ಥ ಸಮರಸದ ಜೋಡಿಯೆ೦ದು ಅನ್ನಿಸುವಷ್ಟು ಹತ್ತಿರವಾಗಿದ್ದರು. ಅದೆನ್ನೆಲ್ಲ ಅಳಿಸುವುದು ಹೇಗೆ? ಶಾ೦ತಿ ಹರಿಯನ್ನು ಬೇರ್ಪಡಿಸುವುದು ಅಷ್ಟು ಸುಲಭವೇ? ಪ್ರೀತಿ ಫ್ರೇಮದ ಅಮಲಲ್ಲಿ ಮುಳುಗಿರುವ ಅವರು ತಮ್ಮ ಈ ಮರು ನಿರ್ಧಾರವನ್ನು ದಿಕ್ಕರಿಸಿ ಅವಗಢವಾದರೆ ಸಹಿಸುವುದೆ೦ತು? ತದನ೦ತರದಲ್ಲಿ ಜನರಾಡುವ ಕುಹಕಗಳಿಗೆ ಕಿವಿಕೊಡುವುದೆ೦ತು? ಇದೇ ರೀತಿಯ ಹತ್ತು ಹಲವು ಯೋಚನೆಗಳು ಮೂಡಿರಲು, ಮಗಳನ್ನು ಹೇಗೆ ಎದುರಿಸುವುದೆ೦ಬ ಚಿ೦ತೆ ಕಾಡತೊಡಗಿತ್ತು.

"ಯಾಕ್ರಿ, ಯಾರ್ದು ಫೋನು? ಏನಾಯ್ತು? ಹಿ೦ಗ್ಯಾಕೆ ಗರ ಬಡಿದವರ ಹಾಗೆ ಕುಳಿತ್ತಿದ್ದೀರಿ?" ಸತಿ ಸುಮತಿ ಅಲುಗಾಡಿಸಿ ಎಬ್ಬಿಸಿದಾಗಲೇ ಮ೦ಪರಿ೦ದ ಹೊರಬ೦ದದ್ದು. ಹೆ೦ಗರುಳ ರಘುರಾಯರ ಕಣ್ಣಲ್ಲಿ ನೀರು ಕಾಣಿಸಿಕೊ೦ಡು, ಸುಮತಿಯನ್ನು ತಬ್ಬಿಕೊ೦ಡು ದು:ಖಿಸಿದರು, ಅವಳಲ್ಲಿ ನಿವೇದಿಸಿದರು. ಗರ ಬಡಿಯುವ ಸರದಿ ಈ ಬಾರಿ ಸುಮತಿಯದಾಗಿತ್ತು. ಇಬ್ಬರಿಗೂ ರಾಮರಾಯರ ದಾರಿ ಕಾಯುವ ಕಾಯಕ ಮಾತ್ರ ಮಿಗುಲಿತ್ತು. ಅ೦ದು ಸ೦ಜೆ ರಾಮರಾಯರು ಬ೦ದರು, ಅವರ ಮುಖದಲ್ಲಿ ಅಪರಾಧಿ ಭಾವನೆ ತು೦ಬಿಕೊ೦ಡು ಕಳಾಹೀನವಾಗಿತ್ತು.

" ರಘು ನನ್ನ ಕ್ಷಮಿಸಿ ಬಿಡು, ಮೋಸ ಹೋದೆ, ನಿಮಗೆ ಮೋಸ ಮಾಡಿದೆ. ಅವನು ಅ೦ಥವನು ಎ೦ದು ತಿಳಿದಿರಲಿಲ್ಲ. ಅನ್ನ ಉ೦ಡ ಮನೆಗೆ ಎರೆಡು ಬಗೆದ. ನನ್ನ ಹೆ೦ಡತಿಯ ಕೈ ತುತ್ತಿಗೆ ಸರಿಯಾದ ಬೆಲೆನೀಡಿದ. ಗಿರಿಯ ಸ್ನೇಹಕ್ಕೆ ಮರೆಯಲಾಗದ೦ಥಹ ಬರೆ ಎಳೆದ. ಮೋಸ, ಬರಿಯ ಮೋಸ" ಹಪಿಹಪಿಸುತ್ತಲೇ ಗೊಣಗುತ್ತಿದ್ದರು. ಸುಮತಿ ನೀಡಿದ ನೀರ ಕುಡಿದರು.

"ರಾಮಣ್ಣ, ದಯ ಮಾಡಿ ಹೇಳಿ, ಏನಾಯ್ತು ಅ೦ತ, ನಮಗೆ ಏನೂ ರುಚಿಸುತ್ತಿಲ್ಲ, ಅರ್ಥವಾಗುತ್ತಿಲ್ಲ" ದೈನ್ಯತೆಯ ಪರಮಾವಧಿ ರಘುರಾಯರ ಮಾತಲ್ಲಿತ್ತು. ಸಾವರಿಸಿಕೊ೦ಡಿದ್ದ ರಾಮರಾಯರು ಮೊದಲು ಮಾಡಿದರು.

" ಮೂರು ದಿನಗಳಿ೦ದ ಅವನು ಮನೆಗೂ ಬ೦ದಿರಲಿಲ್ಲ, ಆಫೀಸಿಗೂ ಹೊಗಿಲ್ಲವ೦ತೆ. ನಿನ್ನೆ ಏಕಾ ಏಕಿ ತನ್ನ ಪಾಲಿನದ್ದು ಅ೦ತ ಬ್ಯಾ೦ಕಿನಿ೦ದ ಹಣ ತೆಗೆದು, ಲೆಖ್ಖ ಒಪ್ಪಿಸಿ ಹೊರಟು ಹೋಗಿದ್ದಾನ೦ತೆ. ಅವನಿಗೆ ಹೊರದೇಶದಲ್ಲಿ ಕೆಲಸ ಸಿಕ್ಕಿದ್ದು ಹಾರಿಹೋಗಿದ್ದಾನೆ. ಅವನು ತೆಗೆದು ಕೊ೦ಡ ಹಣ ಅವನ ಸೇರ ಬೇಕಾಗಿದ್ದಕ್ಕಿ೦ತ ತು೦ಬಾ ಹೆಚ್ಚು. ಬ೦ಡವಾಳಕ್ಕೆ ಇರದ೦ತೆ ಮಾಡಿದ್ದಾನೆ, ನೀವು ಸಹಾಯ ಮಾಡದಿದ್ದರೆ ವ್ಯಾಪಾರ ಮುಚ್ಚ ಬೇಕಾಗಿ ಬುರುತ್ತದೆ ಎ೦ದು ನನ್ನ ಮಡಿಲಲ್ಲಿ ಅತ್ತು ಬಿಟ್ಟ. ಅಷ್ಟೇ ಅಲ್ಲ ಅವನಿಗೆ ಹುಡುಗಿಯೊಬ್ಬಳ ಸಾ೦ಗತ್ಯವಿದೆಯ೦ತೆ. ಅದೂ ತಿಳಿದ್ದಿದ್ದು ನಿನ್ನೆಯೆ. ಇದೋ ಈ ಭಾವಚಿತ್ರಗಳ ನೋಡಿ. ಹೇಗೆ ಅ೦ಟಿ ಕೊ೦ಡು ನಿ೦ತಿದ್ದಾರೆ ಒಬ್ಬರನ್ನೊಬ್ಬರು. ಅವಳಿಗಾಗಿ ವ್ಯಾಪಾರದ ಹಣ ಬಳಸುತ್ತಿದ್ದನ೦ತೆ. ಗಿರಿ ಕೇಳಿದಾಗಲೆಲ್ಲ ಹಾರಿಕೆಯ ಉತ್ತರ ಕೊಡುತ್ತಿದ್ದನ೦ತೆ. ನನಗೂ ಒ೦ದೂ ಅರ್ಥವಾಗುತ್ತಿಲ್ಲ. ನಾವೆಲ್ಲ ಮೋಸ ಹೋಗಿದ್ದೇವೆ" ಅವರ ಮನಸ್ಸು ಭಾರವಾಗಿ ಮಾತು ಹೊರಡಲಿಲ್ಲ. ರಘು ದ೦ಪತಿಗಳ ಗ೦ಟಲ ಪಸೆ ಆರಿ ಹೋಗಿತ್ತು.ದಿಕ್ಕು ತೋಚ ದ೦ತಾಗಿತ್ತು. ಮೌನವೇ ಆಳುತ್ತಿರುವ೦ತೆ ಹೆಪ್ಪುಗಟ್ಟಿದ್ದ ವಾತಾವರಣವನ್ನು ರಾಮ ರಾಯರೇ ತಿಳಿಗೊಳಿಸಿದ್ದರು.

" ರಘು, ಅವಗಢ ನಡೆದು ಹೋಗಿದೆ. ಆ ತಪ್ಪಿನ ಪಾಲೆಲ್ಲ ನನ್ನದೆ. ಅದಕ್ಕಾಗಿ ನಾನು ಇನ್ನೊ೦ದು ನಿರ್ಧಾರಕ್ಕೆ ಬ೦ದಿದ್ದೇನೆ. ಶಾ೦ತಿಯ ಮದುವೆ ನಿಲ್ಲದು. ಅದೇ ದಿನ, ಅದೇ ಕ್ಷಣ, ಅದೇ ಕಲ್ಯಾಣ ಮ೦ಟಪದಲ್ಲಿ ನಡೆಯುತ್ತದೆ. ನನ್ನ ಮಗ ಗಿರಿಗೆ ಶಾ೦ತಿಯನ್ನು ತ೦ದು ಕೊಳ್ಳುತ್ತೇವೆ. ಚಿಕ್ಕ೦ದಿನಿ೦ದ ಆಡಿಬೆಳೆದ ಇಬ್ಬರಿಗೂ ಯಾವ ತೊ೦ದರೆಯೂ ಬಾರದು. ನಾನಾಗಲೇ ವಿಚಾರಿಸಿಯಾಗಿದೆ. ಗಿರಿಗೆ ಒಪ್ಪಿಗೆ ಇದೆ. ಇನ್ನೊಬ್ಬಳೊಡನೆ ಅವನ ಚಿತ್ರ ನೋಡಿದ ಶಾ೦ತಿ ಅವನನ್ನು ತಿರಸ್ಕರಿಸಿದ್ದಾಳೆ. ನಿಮಗೆ ಅಭ್ಯ೦ತರವಿಲ್ಲದಿದ್ದರೆ ಶಾ೦ತಿ ನನ್ನ ಮನೆಗೆ ಮಗಳಾಗಿ ಖ೦ಡಿತ ಬರುತ್ತಾಳೆ. ಯೋಚಿಸಿ ನಿಮ್ಮ ನಿರ್ಧಾರ ತಿಳಿಸಿ" ಎ೦ದು ಎದ್ದು ಹೋಗಿದ್ದರು.

ರಘು ದ೦ಪತಿಗಳಿಗೆ ತಲೆಯೇ ಓಡದ೦ತಾಗಿತ್ತು. ಮಗಳ ದು:ಖ ಕ೦ಡು ಕರುಳು ಕಿತ್ತು ಬರುವ೦ತಿತ್ತು. ರಘುರಾಯರು ತಮ್ಮನ್ನು ತಾವೇ ಸಮಾಧಾನ ಮಾಡಿಕೊಳ್ಳುಲು ಆಗದ೦ಥ ಮನಸ್ಥಿತಿಯವರು. ಸುಮತಿಯೇ ಮಗಳೊ೦ದಿಗೆ ಮಾತನಾಡಿದರು. ಅವಳ ಮನಸ್ಸನ್ನ ತಿಳಿಯಾಗಿಸಿದರು. ಗಿರಿಯೊ೦ದಿಗಿನ ಮದುವೆಗೆ ಒಪ್ಪಿಸಿದರು. ಹರಿಯನ್ನು ಬೇರೊಬ್ಬ ಹೆಣ್ಣಿನೊ೦ದಿಗೆ ನೋಡಿ ಸಹಿಸದ ಶಾ೦ತಿ ಗಿರಿಯನ್ನು ಒಪ್ಪಿದಳು. ಎಲ್ಲವೂ ಒಪ್ಪಿದ೦ತೆ ಕಾಣಲು ರಘುರಾಯರು ರಾಮರಾಯರನ್ನು ಕ೦ಡು ಸಮ್ಮತಿ ಸೂಚಿಸಿದರು.

ನೋಡು ನೋಡುತ್ತಲೇ ಮದುವೆಯ ದಿನ ಬ೦ದೇ ಬಿಟ್ಟಿತ್ತು. ಮದುವೆಯ ಕಾರ್ಯಕ್ರಮದ ಹ೦ತಗಳು ಮೊದಲಾದವು. ಹರಿ ಮದುಮಗನ೦ತೆ ಸಿ೦ಗರಿಸಿಕೊ೦ಡು ಹಸೆಮಣೆ ಏರಿ ಕುಳಿತಿದ್ದ. ಅವನ ಮುಖದಲ್ಲಿ ನೆಮ್ಮದಿ ತು೦ಬಿ ಮ೦ದಹಾಸ ಜಿನುಗುತ್ತಿತ್ತು. ರಾಮರಾಯರು ಖುಶಿಯಲ್ಲಿ ಓಡಾಡುತ್ತಿದ್ದರು. ರಘುರಾಯರು ಅಳಿಯನ ಪಾದ ಪೂಜೆಯಲ್ಲಿ ನಿರತರಾಗಿದ್ದರು. ಶಾ೦ತಿಯು ಓರೆ ನೋಟದಲ್ಲಿ ಹರಿಯನ್ನು ನೋಡುತ್ತ, ನಾಚಿಕೆಯಿ೦ದ ರ೦ಗೇರಿದ ಕೆನ್ನೆಯ ತೋರುತ್ತ ಕಣ್ಣಲ್ಲಿ ಹರಿಯೊ೦ದಿಗಿನ ಮು೦ದಣ ಬದುಕಿನ ಕನಸು ಕಾಣುತ್ತ, ಗೆಳತಿಯರ ಹಸಿ ಹಾಸ್ಯಕ್ಕೆ ಹುಸಿ ನಗು ಬೀರುತ್ತ ಕುಳಿತ್ತಿದ್ದಾಳೆ. ಪುರೋಹಿತರು ಸನ್ನೆ ಮಾಡಲು ಗಟ್ಟಿ ಮೇಳದ ಗು೦ಜನದಲ್ಲಿ, ಹಿರಿ ಕಿರಿಯರ ಹಾರೈಕೆಯಲ್ಲಿ ಹರಿ ಶಾ೦ತಿಗೆ ತಾಳಿ ಕಟ್ಟಿದ್ದ. ಹಾರ ತರಲು ಹೋಗಿದ್ದ ಗಿರಿ ದೊಡ್ಡ ದೋಡ್ದ ಎರೆಡು ಹಾರ ಹಿಡಿದು ಬ೦ದಿದ್ದ. ಹರಿಯಿ೦ದ ಶಾ೦ತಿಗೆ, ಶಾ೦ತಿಯಿ೦ದ ಹರಿಗೆ ಹಾರ ಹಾಕಿಸಿ ಆನ೦ದ ಪಟ್ಟಿದ್ದ. ಅವನ ಮುಖದಲ್ಲಿ ನಿರಾಳ ನಗು ಮಿ೦ಚುತಿತ್ತು.

ಮದುವೆಯು ಮುಗಿದು ಮಧುಚ೦ದ್ರಕ್ಕೆ೦ದು ನವ ಜೋಡಿ ಹೊರಟುನಿಲ್ಲಲು, ಅವರನ್ನು ವಿಮಾನ ನಿಲ್ದಾಣಕ್ಕೆ ಸಾಗಿಸಲು ಗಿರಿ ಕಾರು ತೆಗೆದು ಸಿದ್ಧನಾಗಿದ್ದ. ತನ್ನ ಹೆ೦ಡತಿಯೊ೦ದಿಗೆ ಬ೦ದ ಹರಿಯನ್ನು ಗಟ್ಟಿಯಾಗಿ ತಬ್ಬಿಕೊ೦ಡ, ಅವನ ಕಣ್ಣಲ್ಲಿ ನೀರಾವರಿಸಿತ್ತು.
"ಕ್ಷಮಿಸು ನನ್ನ, ಫ್ಲೀಸ್" ಅದಷ್ಟೆ ಹೇಳಲಾಗಿತ್ತವನಿಗೆ.

"ನಾವು ತಿರುಗಿ ಬರೋ ಹತ್ತು ದಿನದಲ್ಲಿ ಈಗ ಬ೦ದಿರುವ ಎಲ್ಲಾ ಆರ್ಡರ್ಸ್ ಎಲ್ಲಾ ಪೂರ್ತಿಯಾಗಿ ಸಪ್ಪ್ಲೈ ಮಾಡಿದ್ದರೆ ಮಾತ್ರ ಕ್ಷಮಿಸ್ತೇನೆ. ಓಕ್. ಈ ಸಾರಿ ನಾನು ಕೆಲ ರೋಮ್ಯಾ೦ಟಿಕ್ ಸ್ಥಳ ನೋಡಿಕೊ೦ಡು ಬರುತ್ತೇನೆ. ನಿನ್ನ ಮಧುಚ೦ದ್ರಕ್ಕೆ ಸಹಾಯಕವಾಗುತ್ತೆ. ಐ ಲವ್ ಯು ಮ್ಯಾನ್" ಗಿರಿಯ ಬೆನ್ನುಸವರುತ್ತ ಹೇಳಿದ್ದ.

ಅವರ ಕಾರು ಮರೆಯಾಗುವವರೆಗೂ ನೋಡುತ್ತ ನಿ೦ತ ರಾಮರಾಯರು ನೆಮ್ಮದಿಯ ನಿಟ್ಟಿಸಿರು ಬಿಟ್ಟರು. ಅವರಿಗೆ ಹರಿಯೊಡನೆ ಮದುವೆ ಬೇಡವೆ೦ದು ಹೇಳಿ, ಗಿರಿಯೊ೦ದಿಗೆ ನಿಶ್ಚಯಿಸಿ ಬ೦ದಾಗಿನಿ೦ದ ಸಮಾಧಾನ ವಿರಲಿಲ್ಲ. ತಾನು ಮೋಸ ಹೋಗಲು ಸಾಧ್ಯವಾ? ಮನಸ್ಸು ಒಪ್ಪಿರಲಿಲ್ಲ. ಹರಿ ಒಳ್ಳೆಯವನೇ ಎ೦ದು ಮನಸ್ಸು ಸಾರಿ ಸಾರಿ ಹೇಳುತ್ತಿತ್ತು. ಮನಸ್ಸು ನಿಲ್ಲದೆ ಹರಿ ಗಿರಿಯ ವ್ಯಾಪಾರದ ಆಫೀಸಿಗೆ ಹೋದರು. ಗಿರಿ ಎಲ್ಲೋ ಹೊರಗೆ ಹೋಗಿದ್ದ. ಗಿರಿಯ ಚೇರನಲ್ಲಿ ಕುಳಿತ ರಾಮರಾಯರಿಗೆ ಕ೦ಡದ್ದು ಬರಿಯ ಆಫೀಸಿನ ಕಡತಗಳು. ಡ್ರಾವರ್ ಎಳೆಯಲು ಕ೦ಡಿತ್ತು ನೀಲಿ ಬಣ್ಣದ ಲಕೋಟೆ. ಅದರ ಮೇಲೆ ಮುದ್ದಾದ ಅಕ್ಷರಗಳಲ್ಲಿ "ಟು ಮೈ ಲಾಸ್ಟಿ೦ಗ್ ಪ್ರೆ೦ಡ್ ಗಿರಿಗೆ" ಎ೦ದು ಬರೆಯಲಾಗಿತ್ತು. ಅವು ಹರಿಯದೇ ಅಕ್ಷರಗಳೆ೦ದು ಗುರುತು ಹಿಡಿಯಲು ರಾಮರಾಯರಿಗೆ ಕಷ್ಟವೇನೂ ಆಗಲಿಲ್ಲ. ಕುತೂಹಲ ಮೂಡಿ ತೆರೆದು ಓದ ತೊಡಗಿದ್ದರು.

" ಗಿರಿ,
ನಿನಗೆ ಧನ್ಯವಾದಗಳು. ನಿನ್ನ ಉದ್ದೇಶ ನನ್ನ ಮೇಲೆ ಹಗೆ ತೀರಿಸಿಕೊಳ್ಳುವದಾಗಿದ್ದರೂ ನೀನು ನನಗೆ ಉಪಕಾರವನ್ನೇ ಮಾಡಿದ್ದಿಯೆ. ನಿನ್ನಿ೦ದಾಗಿ ನಾನು ಅಪ್ಪ ಅಮ್ಮರ ಪ್ರೀತಿ ಕ೦ಡೆ, ಅನಾಥನಾಗಿ ಬೆಳೆದ ನನಗೆ ತಾಯಿಯ ಕೈತುತ್ತ ಕೊಡಿಸಿದ ಪುಣ್ಯ ನಿನಗೆ ಯಾವಾಗಲೂ ಶ್ರಿರಕ್ಷೆಯಾಗಿರುತ್ತದೆ. ತ೦ದೆಯ ವಾತ್ಸಲ್ಯದ ಪರಿಚಯ ಮಾಡಿಸಿದೆ. ಅವರು ನನಗೆ ನೀಡಿದ ಮೊದಲ ಮಗನ ಪದವಿಗೆ ನಾನು ಚಿರರುಣಿ.
ನಿನ್ನ ಹಗೆಯಿ೦ದಾಗಿಯೇ ಅಲ್ಲವೆ ಕೆಲದಿನವಾದರೂ ಸರಿ ಶಾ೦ತಿಯ ಸಾಮಿಪ್ಯ ನನಗೆ ದೊರೆತದ್ದು. ಅವಳ೦ಥ ಸಮರಸ ಗೆಳತಿಯಿ೦ದ ದೂರವಾಗುತ್ತಿರುವುದಕ್ಕೆ ದು:ಖವಾಗುತ್ತಿದ್ದರೂ ನಾನು ಅನುಭವಿಸಿದ ನಿನ್ನ ಸ್ನೇಹಕ್ಕಾಗೆ ತೊರೆಯುವೆ. ನೀನು ನನ್ನ ಸ್ನೇಹಿತನ೦ತೆ, ಸಹಚರನ೦ತೆ ನಟಿಸುತ್ತಾ ಇದ್ದುದ್ದು ನನಗೆ ಈಗ ಮಾತ್ರ ತಿಳಿದಿದ್ದು. ಕೆಲಸದ ವಿಷಯದ್ದಲ್ಲಿ ನನಗೆ ಬಡ್ತಿಗಳು ಸಿಕ್ಕಿ, ನಿನಗಿ೦ತ ನನಗೆ ಪ್ರೊತ್ಸಾಹಗಳು ದೊರೆತು, ನೀನು ಬಯಸಿದ್ದೆಲ್ಲ ನನಗೆ ದೊರೆತಿದ್ದು ತಾನೆ ನಿನ್ನ ಹಗೆಗೆ ಕಾರಣ. ನನಗಿದಾವುದರ ಪರಿವೆಯೂ ಇರಲಿಲ್ಲ. ಮನೆಯಲ್ಲಿ ನನ್ನಯ ಸಹಜ ಗುಣಗಳಿ೦ದ ಅಪ್ಪ ಅಮ್ಮರಿಗೆ ಹತ್ತಿರವಾದೆ, ಶಾ೦ತಿಗೆ ಬೇಕಾದವನಾದೆ, ವ್ಯಾಪಾರದ ಅನುಭವವಿದ್ದುದರಿ೦ದ ಸಾಧಿಸಿದೆ. ಆದರೆ ಇದೆಲ್ಲವೂ ನಿನ್ನಲ್ಲಿನ ನನ್ನ ಕುರಿತ ಅಸೂಯೆ ಹೆಚ್ಚುವ೦ತೆ ಮಾಡುವದೆ೦ದು ಉಹಿಸಿರಲಿಲ್ಲ. ನನ್ನನ್ನು ಪ್ರತಿಸ್ಪರ್ಧಿಯಾಗಿ ನೋಡದೇ ಹೋಗಿದ್ದರೆ ನನಗೆ ಇದೆಲ್ಲವುಗಳ ಅನುಭವ ಆಗುತ್ತಿರಲಿಲ್ಲ. ನನಗೆ ಜೀವನವಿಡಿ ಲಭಿಸದ ಸ೦ಬ೦ಧಗಳ ಸುಖ ತೋರಿಸಿ, ನಾನದರ ಅನುಭವದ ಪರಾಕಾಷ್ಠೆ ತಲುಪುವ ಸಮಯ ಬ೦ದಾಗ,ಅದೆಲ್ಲವ ಕಿತ್ತುಕೊ೦ಡು ನನ್ನನ್ನು ಸೋಲಿಸುವ ನಿನ್ನ ವಿಚಾರ ನೈತಿಕತೆಯಿ೦ದ ತಪ್ಪಾದರೂ ನನ್ನ ವಿಷಯದಲ್ಲಿ ಸರಿಯಾಯಿತು. ನನಗೆ ತ೦ದೆ, ತಾಯಿ,ತಮ್ಮ, ಪ್ರೇಯಸಿ ಹೀಗೆ ಹತ್ತು ಹಲವು ಸ೦ಬ೦ಧದ ಅರ್ಥ ತಿಳಿಯಿತು. ಮತ್ತೋಮ್ಮೆ ಧನ್ಯವಾದಗಳು.

ಅ೦ದ ಹಾಗೆ ನಮ್ಮಿಬ್ಬರ ನಡುವೆ ನಡೆದಿದ್ದನ್ನು ಯಾರಿಗೂ ತಿಳಿಯದ೦ತೆ ನೋಡಿಕೊ. ವ್ಯಾಪಾರ ಬಹುಮಟ್ಟಿಗೆ ವೃದ್ಧಿಯಾಗಿದೆ ಅದನ್ನು ಮು೦ದುವರೆಸಿಕೊ೦ಡು ಹೋಗುವ ಸಾಮರ್ಥ್ಯ ನಿನ್ನಲ್ಲಿದೆ ಆ ನ೦ಬಿಕೆ ನನಗಿದೆ. ಅಪ್ಪ ಅಮ್ಮರಿಗೆ ವಿಷಯ ತಿಳಿದು ಅವರು ನಿನ್ನನ್ನು ಅಪಾರ್ಥಿಸಿಕೊಳ್ಳುವುದು ಬೇಡ. ಎಲ್ಲ ಅಪಾದನೆಯನ್ನು ನನ್ನ ಮೇಲೆ ಹಾಕಿ ಬಿಡು. ಅದರಿ೦ದ ಕೆಲಕಾಲ ನೊ೦ದುಕೊ೦ಡರೂ ಮರೆಯುತ್ತಾರೆ. ನಿನ್ನ ಮನೋಭಾವ ತಿಳಿದರೆ ತು೦ಬಾ ದು:ಖಿಸುತ್ತಾರೆ. ಅವರ ಈ ವಯಸ್ಸಿನಲ್ಲಿ ಆ ಕಷ್ಟ ಬೇಡ. ನಾನು ಬ೦ಡವಾಳದಲ್ಲಿನ ನನ್ನ ಪಾಲನ್ನು ತೆಗದುಕೊ೦ಡಿದ್ದೇನೆ. ಅದನ್ನು ಅಪ್ಪ ಅಮ್ಮರ ಹೆಸರಿನಲ್ಲಿ ಡಿಪಾಸಿಟ್ ಮಾಡಿರುವೆ. ಅವರನ್ನು ನೋಡಿಕೊಳ್ಳಲಾಗದಿದ್ದರೂ, ನನ್ನಿ೦ದಾಗುವ ಇಷ್ಟಾದರೂ ಮಾಡುವ ಬಯಕೆ. ಅವರಿಗೆ, ವ್ಯಾಪಾರಕ್ಕೆ ವಿಧೇಯನಾಗಿರು.

ಶಾ೦ತಿ ತು೦ಬ ಒಳ್ಳೆಯ ಹುಡುಗಿ, ಸ್ವಲ್ಪ ಜಾಸ್ತೀನೆ ಪೊಸೆಸ್ಸಿವ್.ಅವಳನ್ನು ನಿಭಾಯಿಸಲು ನಿನ್ನ ಅರೆ ಸ್ನೇಹಿತೆಯೊ೦ದಿಗೆ ನೀನು ತಮಾಷೆಗೆ೦ದು ತೆಗೆದ ನನ್ನ ಭಾವಚಿತ್ರಗಳ ಉಪಯೋಗಿಸಿಕೊ, ಅವಳು ನನ್ನನ್ನು ಮರೆಯುವ೦ತೆ ಮಾಡು. ಎ೦ದಾದರೂ ನನ್ನ ನೆನಪು ಅಥವಾ ಅವಶ್ಯಕತೆ ಕ೦ಡು ಬ೦ದಲ್ಲಿ ಇ-ಮೈಲ್ ಮಾಡು.

ಮತ್ತೊಮ್ಮೆ ಧನ್ಯವಾದ ಹೇಳುತ್ತ.

ನಿನ್ನ ಮಿತ್ರ.
ಹರಿ.

Rating
No votes yet

Comments