ಕಾರಂತರು ಮತ್ತು ಧರ್ಮ

ಕಾರಂತರು ಮತ್ತು ಧರ್ಮ

ಸಮಾಜದ, ಪರಂಪರೆಯ, ಸನಾತನ ಧರ್ಮದ ಭಯ ಮತ್ತು ನಿಯಂತ್ರಣಗಳಾಚೆಯೂ ಒಂದು ಸಂಸಾರ ತಾನು ಏಕಘಟಕವಾಗಿ ಗಟ್ಟಿಯಾಗಿ ನಿಲ್ಲುವುದಕ್ಕಾಗಿಯೇ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ವ್ಯಕ್ತಿಯ ವೈಯಕ್ತಿಕ ಧರ್ಮ ಮತ್ತು ಸಂಸಾರದ ಸಮಷ್ಟಿ ಧರ್ಮಗಳ ನಡುವೆಯೇ ಸಂಘರ್ಷ ಸುರುವಾದರೆ ಅಲ್ಲಿ ಹೊಂದಾಣಿಕೆಯಾಗಲೀ ಸಹಜೀವನವಾಗಲೀ ಸಾಧ್ಯವೆ?

ತನ್ನ ತಾಯಿ ಪರಪುರುಷನ ಹಾಸುಗೆಯ ವಸ್ತುವಾಗುವುದನ್ನು ಮನಸಾ ಒಪ್ಪಿಕೊಳ್ಳಲಾರದ ಶ್ವೇತಕೇತು ತನ್ನ ತಾಯಿಯನ್ನು ಯಾರೋ ಉದ್ಧಾಲಕನ ಪತ್ನಿ ಎಂದುಕೊಂಡು ತಾನು ನಂಬಿದ ಮೌಲ್ಯಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಸಾಧ್ಯವಾಗುವುದೆ? ಸಾಧ್ಯವಿಲ್ಲದಾಗ ಏನು ಪರಿಹಾರ? ಘಟಸ್ಫೋಟ?

ಬ್ರಾಹ್ಮಣ್ಯಕ್ಕೆ ಅಪವಾದದಂತೆ ಬದುಕಿದ ನಾರಣಪ್ಪ, ಮತ್ತೆ ಮದುವೆಯಾಗಲು ಬಯಸುವ ಕಾತ್ಯಾಯಿನಿ, ವಿದೇಶಿ ಹುಡುಗಿಯನ್ನು ಮದುವೆಯಾಗುವ ಸನಾತನಿಯ ಏಕೈಕ ಕುಲಪುತ್ರ, ಕೀಳುಜಾತಿಯವನೊಂದಿಗೆ ಓಡಿ ಹೋಗುವ ಪುರೋಹಿತರ ಮಗಳು, ಮುಸ್ಲಿಂ ಹುಡುಗನನ್ನು ಮದುವೆಯಾಗುವ ನರಸಿಂಹ ಗೌಡರ ಮಗಳು...

ಇದು ಗಂಡು ಹೆಣ್ಣು ಸಂಬಂಧಗಳು ಸಂಸಾರದಲ್ಲಿ ಎಬ್ಬಿಸುವ ಬಿರುಗಾಳಿಗಷ್ಟೇ ಸೀಮಿತವಲ್ಲ. ಹೊಸ ಮೌಲ್ಯಗಳು ಹಳೆಯದರೊಂದಿಗೆ, ಪರಂಪರೆಯೊಂದಿಗೆ ಹೂಡುವ ಸಂಘರ್ಷ ಮಾತ್ರವಲ್ಲ. ಮಾನವೀಯತೆ ಎಂಬ ಸರಳವಾದ ಒಂದು ಸಂಗತಿ ಯಾವುಯಾವುದರ ಜೊತೆಗೆಲ್ಲ ನಡೆಸಲೇ ಬೇಕಾಗಿಬಂದ ಜಿದ್ದಾಜಿದ್ದಿ ಅನಿಸುತ್ತದೆ. ಈ ಅಸಹ್ಯಕರ ಬೆಳವಣಿಗೆ ಇಂದಿನ ಕಾಲಮಾನದ ಸ್ವರೂಪವನ್ನು ನಿರ್ಧರಿಸುತ್ತದೆ.

ಅದೇ ಶಿವರಾಮ ಕಾರಂತರ ಕಾದಂಬರಿಗಳನ್ನು ಗಮನಿಸಿ. ಕಾರಂತರ ಅನೇಕ ಕಾದಂಬರಿಗಳಲ್ಲೂ ಪುರೋಹಿತಶಾಹಿಯನ್ನೆ ನೆಚ್ಚಿದ ಬ್ರಾಹ್ಮಣ ಕುಟುಂಬಗಳಿವೆ. ಅಲ್ಲಿಯೂ ಇಂಥ ಮದುವೆಗಳು, ಓಡಿಹೋಗುವುದು, ವಿಷಮಘಳಿಗೆಯಲ್ಲಿ ಕಾಲುಜಾರುವುದು ಎಲ್ಲ ಇದೆ. ಮಠದ ಸ್ವಾಮಿ, ಯೋಗಿ, ಸಂನ್ಯಾಸಿಗಳೆಲ್ಲ ಕಾರಂತರ ಹೆಚ್ಚಿನ ಕಾದಂಬರಿಗಳ ಭಾಗವೇ ಆಗಿದ್ದಾರೆನ್ನಬಹುದು. ಜಗದೋದ್ಧಾರನಾ ಕಾದಂಬರಿಯಲ್ಲಿ ವಿಷ್ಣುವಿನ ದಶಾವತಾರದ ಸಮಕಾಲೀನ ಅನುಸಂಧಾನವಿದ್ದರೆ ನಂಬಿದವರ ನಾಕ ನರಕದಲ್ಲಿ ಭಾವಾನಂದ ಸ್ವಾಮಿಗಳ ಮುಖವಾಡದ ಚಿತ್ರವಿದೆ. ಆಳ ನಿರಾಳದಲ್ಲಿ ಯಾತ್ರಾ ಡಿಲಕ್ಸ್ ಎಂಬ ತೀರ್ಥಯಾತ್ರೆಯ ರೈಲು ಪ್ರಯಾಣ ಜನಸಾಮನ್ಯರ ಬದುಕಿನ ಆಧ್ಯಾತ್ಮ, ಧಾರ್ಮಿಕ ಡಾಂಭಿಕತೆಯನ್ನು ಇನ್ನಿಲ್ಲದಂತೆ ಕಣ್ಣಿಗೆ ಕಟ್ಟುತ್ತದೆ.

ಬಾಲ್ಯ ಸಖನೋ ಸಹಪಾಠಿಯೋ ಅಥವಾ ಸ್ವಂತ ಊರಿನವನೋ ಆದ ಒಬ್ಬ ವ್ಯಕ್ತಿ ಪರಿಸ್ಥಿತಿ, ಜನರ ಮೌಢ್ಯಗಳನ್ನೇ ಬಂಡವಾಳ ಮಾಡಿಕೊಂಡು ದೂರದ ಯಾವುದೋ ಒಂದು ಊರಿನಲ್ಲಿ ದೊಡ್ಡ ಸಂತನ ಪಟ್ಟಕ್ಕೇರುವುದನ್ನೂ, ಈ ಬಾಲ್ಯದ ಗೆಳೆಯನಿಂದ, ಸಹಪಾಠಿಯಿಂದ ಅಥವಾ ಊರಿನವನಿಂದ ಎಲ್ಲಿ ತನ್ನ ನಿಜರೂಪ ಪತ್ತೆಯಾಗಿ ರಹಸ್ಯ ಬಯಲಾಗುವುದೋ ಎಂದು ಹೆದರುವುದನ್ನೂ ಅವರ ಅನೇಕ ಕಾದಂಬರಿಗಳಲ್ಲಿ ಕಾಣಬಹುದು. ಇದಕ್ಕೆ ಅವರ ನಿಜಜೀವನದ ಒಂದು ಘಟನೆಯೂ ಕಾರಣ ಎನ್ನುವವರಿದ್ದಾರೆ.

ಹೆಚ್ಚಿನ ಕಡೆ ನೇರ ಅಭಿವ್ಯಕ್ತಿ ಇದ್ದರೂ ಕಾರಂತರ ಕಾದಂಬರಿಗಳಲ್ಲೂ ಧರ್ಮಸಂಕಟಗಳಿಗೆ, ಸಂದಿಗ್ಧಗಳಿಗೆ ಕೊರತೆಯಿಲ್ಲ. ಆದರೆ ಕಾರಂತರ ಯಾವ ಪಾತ್ರವೂ ಕಾನೂನಿನ ಪುಸ್ತಕಗಳಲ್ಲಿ, ಧರ್ಮಶಾಸ್ತ್ರಗಳಲ್ಲಿ ಪರಿಹಾರದ ಜಿಜ್ಞಾಸೆ ಹುಡುಕಲು ಹೊರಡುವುದಿಲ್ಲ. ಹೆಚ್ಚೆಂದರೆ ರಾಮಾಯಣ, ಮಹಾಭಾರತದ ಪಾತ್ರಗಳು ತಾವು ಕಂಡ ಯಕ್ಷಗಾನ ಪ್ರಸಂಗದಲ್ಲಿ ಹೇಗೆ ವರ್ತಿಸಿದವು ಎಂಬುದರಾಚೆ ಅವು ನಂಬುವುದು ಮನುಷ್ಯತ್ವವನ್ನು. ಸಮಾಜದ ಆರೋಗ್ಯಕ್ಕೆ ಬೇಕೇ ಬೇಕಿರುವ ಮೌಲ್ಯವನ್ನು. ಅವರ ಮೂಕಜ್ಜಿಯ ಕನಸುಗಳು ಕಾದಂಬರಿಯಂತೂ ಅನುಭವದಿಂದ ಮಾಗಿದ ಮನಸ್ಸು ಕಂಡುಕೊಂಡ ಹೊಸ ಮೌಲ್ಯಗಳ, ಹೊಸ ಅರ್ಥಗಳ ಹೊಸ ವ್ಯಾಖ್ಯಾನಗಳ ಖನಿಯೇ ಸರಿ.ಕಾರಂತರ ಪಾತ್ರಗಳು ಒಟ್ಟಾರೆ ಸಂಸಾರದ ಸುಖಕ್ಕೆ, ಸಮಾಜದಲ್ಲಿ ಇರುವ ಹೆಸರು, ಸ್ಥಾನಮಾನಕ್ಕೆ ಚ್ಯುತಿ ಬರಬಾರದೆನ್ನುವಾಗಲೂ ಮನುಷ್ಯತ್ವವನ್ನು ಬಿಟ್ಟುಕೊಡುವ ಮನೋಧರ್ಮವನ್ನು ಕಾರಂತರು ಎತ್ತಿ ಹಿಡಿಯುವುದಿಲ್ಲ. ನಮ್ಮ ನಿಮ್ಮ ದೈನಂದಿನಗಳು ನಡೆಯುವುದೇ ಹೀಗೆ.

ಸಂಸಾರದ ಅನನ್ಯತೆಯನ್ನು ಕಾಪಾಡುವುದು ಕೊನೆಗೂ ಇದೇ. ಧರ್ಮಶಾಸ್ತ್ರವಲ್ಲ. ಕಾನೂನೂ ಅಲ್ಲ. ಸಂಸಾರಕ್ಕೆ ಅನ್ವಯವಾದದ್ದು ಸಮಾಜಕ್ಕೂ ಅನ್ವಯವಾಗುತ್ತದೆ. ಯಾಕೆಂದರೆ ಸಮಾಜ ಕೂಡ ಒಂದು ಸಂಸಾರವಿದ್ದಂತೆಯೇ. ಅಲ್ಲಿಯೂ ವೈವಿಧ್ಯ, ವಿರೋಧ, ಒಳ್ಳೆಯದು, ಕೆಟ್ಟದು ಜೊತೆಜೊತೆಯಾಗಿ ಇರುತ್ತ ಸಾಮರಸ್ಯ ಮುಖ್ಯ. ಅದೇ ಅದರ ಆರೋಗ್ಯದ ನಿರ್ಣಾಯಕ ಅಂಶ, ಅಲ್ಲವೇ?

ಅಶೋಕ ಹೆಗಡೆಯವರ ಇತ್ತೀಚಿನ ಕಾದಂಬರಿ ಅಶ್ವಮೇಧ ಕೂಡ ಸರಿ ಸುಮಾರು ಹಳೆಯ ತಲೆಮಾರಿನವರ ಒಂದು ಕತೆಯನ್ನೆ ಒಳಗೊಂಡಿದೆ. ಅಲ್ಲಿಯೂ ಸನಾತನಿಯಾದ ಗಣೇಶ ಹೆಗಡೆಯವರ ಮಗಳು ನಿರ್ಮಲೆ ಅಸ್ಪೃಶ್ಯನೂ ಮನೆಗೆಲಸದವಳ ಮಗನೂ ಆದ ಬಾಲ್ಯಸಖ ಕೃಷ್ಣನೊಂದಿಗೆ ಮದುವೆಯ ದಿನವೇ ಓಡಿಹೋಗುತ್ತಾಳೆ. ಗಣೇಶ ಹೆಗಡೆ ಎಷ್ಟು ಸನಾತನಿಯೆಂದರೆ ಇದರಿಂದ ಆತನಿಗೆ ಹುಚ್ಚೇ ಹಿಡಿಯುತ್ತದೆ. ಊರ ಸನಾತನಿ ಬ್ರಾಹ್ಮಣರು, ಮಠ ಎಲ್ಲ ಈ ಸಂದರ್ಭದಲ್ಲಿ ವರ್ತಿಸುವ ರೀತಿ ವಿಭಿನ್ನವಾಗಿದೆ. ಇಲ್ಲಿ ಶಾಸ್ತ್ರಕ್ಕಿಂತ ವ್ಯವಹಾರ ಮುಖ್ಯವಾಗುವುದು ಅಚ್ಚರಿ. ಹುಚ್ಚು ಹಿಡಿದ ಗಣೇಶ ಹೆಗಡೆಯವರ ಆಸ್ತಿ ಕಬಳಿಸಲು ಮಠದಾದಿಯಾಗಿ ಹಲವರು ಜೊಲ್ಲುಸುರಿಸುವುದು ಕಾಣಬಹುದಿಲ್ಲಿ. ಯಾಕೆ ಹೀಗೆ? ಅಶೋಕರು ನಮ್ಮ ತಲೆಮಾರಿನವರಾದ್ದರಿಂದ ಈ ರೀತಿಯಾಯಿತೆ ಅಥವಾ ಆ ತಲೆಮಾರು ಇಂಥ ಮೌಲ್ಯ, ಪ್ರಾಶಸ್ತ್ಯ, ಕುಯುಕ್ತಿಗಳನ್ನು ಪ್ರಾಣೇಶಾಚಾರ್ಯರಂಥವರ, ಶ್ರೀನಿವಾಸ ಶ್ರೋತ್ರಿಗಳಂಥವರ ಮೌಲ್ಯ, ಪ್ರಾಶಸ್ತ್ಯಗಳ ಜೊತೆ ಜೊತೆಗೇ ಹೊಂದಿತ್ತೆ?

Rating
No votes yet

Comments