ನನ್ನ ಮೊದಲ ಬರಹ

ನನ್ನ ಮೊದಲ ಬರಹ

ಇದು ನಾನು ಮೊದಲ ಬಾರಿಗೆ ಕವನ ಬರೆದ ಕಥೆ. ನನ್ನ ಬರವಣಿಗೆಗೆ ಬಹಳವಾಗಿ ಪ್ರಭಾವ ಬೀರಿದ ಹಲವು ಕವಿಗಳ್ಳಲ್ಲಿ, ಶ್ರೀಯುತ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರನ್ನು ನಾನು ಯಾವಾಗಲೂ ಸ್ಮರಿಸಲು ಬಯಸುತ್ತೇನೆ. ಬೇಂದ್ರೆಯವರ "ಅನ್ನ ಯಜ್ಞ" ಪದ್ಯ ನನ್ನನ್ನು ಬರೆಯಲು ಪ್ರೇರೇಪಿಸಿತು. ಆ ಸಾಲುಗಳಲ್ಲಿ ಚಿಮ್ಮುವ ಅದಮ್ಯವಾದ ಜೀವನ ಪ್ರೀತಿ ಮತ್ತು ಇತರ ಜೀವಿಗಳ ಮೇಲಿನ ಕಳಕಳಿ ,ಎಂಥವರಲ್ಲೂ ಜೀವನ ಪ್ರೀತಿಯನ್ನು ಬಿತ್ತುವ ಶಕ್ತಿಯುಳ್ಳದ್ದು. ಅಲ್ಲದೆಯೆ ಆ ಕವನದ ಆರ್ದ್ರತೆ ಮತ್ತು ಜೀವನ ಪ್ರೀತಿ ಬಹಳ ಕಾಲ ನಮ್ಮ ಮೇಲೆ ಪ್ರಭಾವ ಬೀರದೆ ಇರಲಾರದು.
ಶ್ರೀಯುತ ಬೇಂದ್ರೆಯವರು ಕನ್ನಡದ ವರಕವಿ ಮಾತ್ರವಲ್ಲದೆ, ಜೀವನ ಪ್ರೀತಿಯನ್ನು ಬಿತ್ತಿದ ಮಹಾಪುರುಷ. ಆ ಬಿರಿದ ಕೂದಲುಗಳು, ಜೀವನದ ಸುಖ ದುಃಖಕ್ಕೆ ಒಡ್ಡಿಕೊಂಡಂತೆ ಭಾಸವಾಗುತ್ತದೆ. ಅಲ್ಲದೆಯೆ ಆ ಮುಖದಲ್ಲಿನ ಮಂದಹಾಸ ತನ್ನನ್ನು ತಾನು ಜಯಿಸಿದ ಒಬ್ಬ ಮಹಾನ್ ಸಾಧಕನಂತೆ ಕಂಡುಬರುತ್ತದೆ. ಇಂತಹ ಒಂದು ಮಹಾನ್ ಚೇತನದ ಪ್ರಭಾವದಿಂದ ನಾನು ಮೊದಲ ಬಾರಿಗೆ ಒಂದು ಕವನ ಬರೆದೆ. ಆ ಕವನದಲ್ಲೆಲ್ಲ " ಅನ್ನ ಯಜ್ಞ" ದ ಪ್ರೇರಿತ ಪದಗಳ ಬಳಕೆ ಸ್ಪಷ್ಟವಾಗಿ ಕಂಡುಬರುತ್ತಿತ್ತು. ಅಂತು ಹೇಗೋ ನಾನೂ ಕೂಡ ಒಂದು ಕವನ ಬರೆದೆ. ಇಲ್ಲಿಯವರೆಗೆ ನಾನು ಎಷ್ಟೇ ಕವನಗಳನ್ನು ಬರೆದಿರಬಹುದು ಆದರೆ ಆ ಮೊದಲನೇ ಕವನ ನೆನೆದಾಗಲೆಲ್ಲ ನನ್ನ ಕಣ್ಣ ಮುಂದೆ ಸುಳಿಯುವ ಬೇಂದ್ರೆಯವರ ಮುಖ, ನನ್ನ ಮನಸನ್ನು ಒಂದು ಪ್ರಶಾಂತವಾದ ಒಂದು ಸ್ಥಿತಿಗೆ ಕೊಂಡೊಯ್ಯುತ್ತದೆ.

Rating
No votes yet

Comments