ಕೋರವಂಗಲದ ಭೂಚೇಶ್ವರ ಮತ್ತು ಕೊಂಡಜ್ಜಿಯ ವರದರಾಜ

ಕೋರವಂಗಲದ ಭೂಚೇಶ್ವರ ಮತ್ತು ಕೊಂಡಜ್ಜಿಯ ವರದರಾಜ

ಹಾಸನ ಜಿಲ್ಲೆ ಹೊಯ್ಸಳರ ಹಲವಾರು ದೇವಾಲಯಗಳ ನೆಲೆಬೀಡು. ಬೇಲೂರು ಹಳೇಬೀಡಿನ ದೇವಾಲಯಗಳಂತೂ ವಿಶ್ವವಿಖ್ಯಾತವಾಗಿವೆ. ಆದರೆ ಇವುಗಳನ್ನು ಬಿಟ್ಟು ನುಗ್ಗೇಹಳ್ಳಿ, ಜಾವಗಲ್ಲು, ದೊಡ್ಡಗದ್ದವಳ್ಳಿ, ಹಾರನಹಳ್ಳಿ ಮೊದಲಾದೆಡೆ ಇರುವ ಸುಂದರ ದೇವಾಲಯಗಳು ಅಷ್ಟು ಜನರಿಗೆ ಪರಿಚಯವಾಗಿಲ್ಲ. ಅಷ್ಟೇ ಏಕೆ, ಥಟ್ಟಂತ ಹೋಗಿ ಫಟ್ಟಂತ ಬರುವ ಈ ವೇಗದ ಜಮಾನಾದಲ್ಲಿ, ಹಳೇಬೀಡಿಗೆ ಹೋದವರೂ, ಒಂದು ಕಿಲೋಮೀಟರ್ ದೂರದ ಬಸ್ತಿಹಳ್ಳಿಗೇ ಹೋಗದೆ, ಸುಂದರವಾದ ಬಸದಿಗಳನ್ನೂ, ಕೇದಾರೇಶ್ವರ ದೇವಾಲಯವನ್ನೂ ನೋಡದೇ ಬರುವುದೇ ಹೆಚ್ಚು. ಅಂತಹದರಲ್ಲಿ, ಈ ದೇವಸ್ಘಾನಗಳು ಸ್ವಲ್ಪ ಅನಾಥವಾಗಿರುವುದರಲ್ಲಿ ಅಚ್ಹರಿಯೇನೂ ಇಲ್ಲ.

ನಮ್ಮೂರಿನ ಬಳಿಯ ಕೆಲವು ದೇವಾಲಯಗಳನ್ನು ಪರಿಚಯ ಮಾಡಿಸಬೇಕೆನ್ನಿಸಿತು. ಅದಕ್ಕೆಂದೇ ಈ ಬರಹ.

ಕೋರವಂಗಲದ ಭೂಚೇಶ್ವರ

ಮೊದಲಿಗೆ ನಾವು ಕೋರವಂಗಲದ ಭೂಚೇಶ್ವರನಿಗೆ ಭೇಟಿ ಕೊಡೋಣ. ಇದು ಹಾಸನದಿಂದ ೮-೯ ಕಿ.ಮೀ. ದೂರದಲ್ಲಿ, ಅರಸೀಕೆರೆ ರಸ್ತೆಯಲ್ಲಿದೆ. ಮುಖ್ಯ ರಸ್ತೆಯಿಂದ ಸಿಗುವ ತಿರುವಿನಲ್ಲಿ ೧-೨ ಕಿ.ಮೀ. ಹೋದರೆ, ಈ ಸುಂದರ ದೇವಾಲಯ ಎದುರಾಗುತ್ತದೆ. ನೀವು ಬೆಂಗಳೂರು ಕಡೆಯಿಂದ ಹೋಗುತ್ತಿದ್ದರೆ, ಹಾಸನ ಡೈರಿಯ ಬಳಿ ಎಡಕ್ಕೆ ತಿರುಗಿದರೆ ಹಾಸನದ ಒಳಹೊಗುತ್ತೀರಿ. ಬಲಗಡೆಗೆ ಹೋಗುವುದೇ ಅರಸೀಕೆರೆ ರಸ್ತೆ. ಈ ಟಿ-ಜಂಕ್ಶನ್ ನಿಂದ ಕೋರವಂಗಲ ಹೆಚ್ಚೆಂದರೆ ೪-೫ ಕಿ.ಮೀ. ಇರಬಹುದು ಅಷ್ಟೇ.

ಹಿಂದೆ ನಾನು ಹೋದಾಗ ತೆಗೆದ ಚಿತ್ರಗಳು ಇದ್ದರೂ, ಅದು ಜೆಪೆಗ್ ನಲ್ಲಿಲ್ಲದ ಕಾರಣ ನಾನು ವಿಕಿಪಿಡಿಯಾದಲ್ಲಿ ದಿನೇಶ ಕನ್ನಂಬಾಡಿ ಅವರು ಹಾಕಿರುವ ಚಿತ್ರವನ್ನು ಲಗತ್ತಿಸಿದ್ದೇನೆ. ಮೂಲ ಚಿತ್ರವನ್ನು ನೀವು ಇಲ್ಲಿ ನೋಡಬಹುದು.

ವಿಕಿಪಿಡಿಯಾನಲ್ಲಿ ಭೂಚೇಶ್ವರ ದೇವಾಲಯ

ಪ್ರವಾಸಿಕರ ಸಂದಣಿ ಇಲ್ಲದ ಪ್ರಶಾಂತ ಸ್ಥಳ ಇದು. ಈ ದೇವಾಲಯದಲ್ಲಿ ಪೂಜೆ ಜರುಗುವುದಾದರೂ, ನೀವು ಹೋದ ವೇಳೆ ಬೀಗ ಹಾಕಿದ್ದರೆ ಭಯಪಡಬೇಡಿ. ಹತ್ತಿರದ ಮನೆಯಲ್ಲಿ ವಿಚಾರಿಸಿದರೆ ಕೀಲಿ ಕೊಡುತ್ತಾರೆ. ಆರಾಮವಾಗಿ ನೋಡಿ ಬನ್ನಿ. ವೀರಬಲ್ಲಾಳನ ಕಾಲದಲ್ಲಿ ೧೨೦೦ ಸುಮಾರಿನಲ್ಲಿ ಕಟ್ಟಿದ ಮಂದಿರವಂತೆ ಇದು. ಆವರಣದಲ್ಲಿ ಕೆಲವು ಶಾಸನಗಳೂ ವೀರಗಲ್ಲುಗಳೂ ಇವೆ.

ಇದೊಂದು ನಕ್ಷತ್ರಾಕೃತಿಯ ಏಕಕೂಟ ದೇವಾಲಯ. ಬೇಲೂರು ಹಳೇಬೀಡುಗಳಲ್ಲಿಲ್ಲದ ಗೋಪುರ ಇಲ್ಲಿ ಕಂಡುಬರುತ್ತದೆ. ಮತ್ತೊಂದು ವ್ಯತ್ಯಾಸವೆಂದರೆ ಅಲ್ಲಿನ ಹಾಗೆ ಜಗತಿ ಇಲ್ಲ ಇಲ್ಲಿ. ದೇವಾಲಯ ಭೂಮಟ್ಟದಿಂದಲೇ ಕಟ್ಟಲ್ಪಟ್ಟಿದೆ. ಕೆತ್ತನೆಗಳು ಸೊಗಸಾಗಿವೆ. ಒಂದು ಗಂಟೆ ನೋಡಿ ಆನಂದಿಸಿ, ಕುಳಿತು ಊಟ ಮಾಡಿ ಬರಲು ಜಾಗ ಪ್ರಶಸ್ತವಾಗಿದೆ.

ಕೊಂಡಜ್ಜಿ ವರದರಾಜ

ಉತ್ತರದಿಂದ ಸುಲ್ತಾನರು ದಂಡೆತ್ತಿ ಬಂದಾಗ, ಎಷ್ಟೋ ಮೂರ್ತಿಗಳನ್ನು ಕಾಪಾಡಲು ಅವುಗಳನ್ನು ನೆಲದಲ್ಲಿ ಹುಗಿದಿಟ್ಟಿದ್ದರು ಎಂಬ ದಂತಕಥೆ ನಮ್ಮೂರ ಕಡೆ ಇದೆ. ಅದೆಷ್ಟು ನಿಜವೋ ಸುಳ್ಳೋ ತಿಳಿಯದು. ಆದರೆ ಹಾಸನದ ಸೌಮ್ಯಕೇಶವ, ಕೌಶಿಕದ ಲಕ್ಷೀಕೇಶವ ವಿಗ್ರಹಗಳೆಲ್ಲ ನೋಡಲು ಬೇಲೂರ ಚೆನ್ನಕೇಶವನ ಕಿರುರೂಪದಂತಿರುವುದಂತೂ ಸುಳ್ಳಲ್ಲ. ಹೊಯ್ಸಳರ ಕಲಾತ್ಮಕ ದೇವಾಲಯ ರಚನೆ ಇಲ್ಲದಿದ್ದರೂ ಈ ಮೂರ್ತಿಗಳು ಹೊಯ್ಸಳರ ಮೂರ್ತಿಗಳಂತೇ ತೋರುತ್ತದೆ. ಆದರೆ ಕೊಂಡಜ್ಜಿಯ ವರದರಾಜ ಮಾತ್ರ ಇದಕ್ಕಿಂತ ವಿಶಿಷ್ಟ. ಈ ಮೂರ್ತಿಯ ಆಕಾರ ಎತ್ತರ ಗಾತ್ರಗಳಾಗಲೀ, ಸೊಗಸಾಗಲೀ ಬೇಲೂರ ಚೆನ್ನಕೇಶವನಿಗಿಂತ ಗುಲಗಂಜಿಯಷ್ಟೂ ಕಮ್ಮಿ ಇಲ್ಲ. ಇದರ ಚಿತ್ರಗಳು ಕೂಡ ನನ್ನಲ್ಲಿದ್ದರೂ, ಈಗ ನಾನು ಗೂಗಲ್ ಎಂಬ ಮಂತ್ರಕ್ಕೇ ಮೊರೆಹೊಕ್ಕು ಇಲ್ಲಿ ಅಂಟಿಸಿದ್ದೇನೆ.

ಚಿತ್ರ ಕೃಪೆ: ಹೊಯ್ಸಳ ಟ್ರಾವೆಲ್ಸ್ ನವರ ಜಾಲತಾಣ.

ಕೊಂಡಜ್ಜಿ ಹಾಸನದಿಂದ ಹಳೇಬೀಡಿಗೆ ಹೋಗುವ ದಾರಿಯಲ್ಲಿ,  ಸಾಲಗಾಮೆಯ ನಂತರ ಸಿಗುವ ತಿರುವಿನಲ್ಲಿ ಎಡಕ್ಕೆ ಹೊರಳಿದರೆ ೧ ಕಿ.ಮೀ. ದೂರದಲ್ಲಿದೆ. ಹಾಸನದಿಂದ ೧೨-೧೪ ಕಿಮೀ ದೂರ ಅಷ್ಟೇ. ಸೀಗೆ ಗುಡ್ಡದ ತಪ್ಪಲಿನಲ್ಲಿರುವ ಇದೂಂದು ಸಣ್ಣ ಹಳ್ಳಿ. ಹೋದರೆ, ನಿಮಗೆ ಹೊಯ್ಸಳರ ದೇವಾಲಯ ಇರುವ ಸುಳುಹೂ ಕಾಣದಿದ್ದರೆ ನಿಮ್ಮ ತಪ್ಪಲ್ಲ. ಏಕೆಂದರೆ, ಇಲ್ಲಿಯ ಮೂರುತಿ ಹೊಯ್ಸಳರದ್ದಾಗಿದ್ದರೂ, ದೇವಾಲಯ ಅವರದಲ್ಲ. ಇಲ್ಲಿ ಹೇಳುವ ಕಥೆಯ ಪ್ರಕಾರ, ಈ ಮೂರ್ತಿಗೆಂದು ಕಟ್ಟಬೇಕಾಗಿದ್ದ ದೇವಾಲಯವನ್ನು ಕಟ್ಟಲೇ ಇಲ್ಲ. ದಾಳಿಯ ಕಾರಣ ಮೂರ್ತಿಯನ್ನೇ ಮುಚ್ಚಿಟ್ಟರು. ಮತ್ತೆಂದೋ ದೊರೆತ ಮೂರ್ತಿಗೆ, ಒಂದು ಸಣ್ಣ ಗುಡಿ ಕಟ್ಟಿದ್ದಾರೆ. ನಾಕು ಗೋಡೆ, ಮೇಲೊಂದು ಸೂರು ಇರುವ ಈ ಗುಡಿಯಲ್ಲಿ ಯಾವ ಕೆತ್ತನೆಗಳೂ ಇಲ್ಲ. ಆದರೆ, ಒಳಹೊಕ್ಕರೆ ಮಾತ್ರ, ೧೫-೧೬ ಅಡಿ ಎತ್ತರದ ವರದರಾಜನ ಅತಿ ನಗುಮೊಗದ ಚೆಲುವು ನಿಮ್ಮ ಮನಸೂರೆಗೊಳ್ಳುವುದು ಸುಳ್ಳಲ್ಲ!

ಇಲ್ಲಿನ ಇನ್ನೊಂದು ವಿಶೇಷವೆಂದರೆ, ನೀವು ವಿಗ್ರಹದ ಹತ್ತಿರವೇ ಹೋಗಿ ನೋಡಬಹುದು. ಬೇರೆಡೆಗಳಂತೆ, ಗರ್ಭಗೃಹದ ಹೊರಗೇ ನಿಲ್ಲಬೇಕೆಂಬ ನಿಯಮ ಇಲ್ಲಿಲ್ಲ. ಅಷ್ಟೇ ಏಕೆ? ವರದರಾಜನ ಸುತ್ತ ಅಟ್ಟಣೆಯೊಂದಿದೆ. ಅದರಲ್ಲಿ ಹತ್ತಿ , ಮೂರ್ತಿಯ ಹಿಂಭಾಗವನ್ನೂ ನೋಡಬಹುದು. ಈ ವ್ಯವಸ್ಥೆ ನನಗೆ ತಿಳಿದ ಹಾಗೆ ಇನ್ನು ಯಾವ ದೇವಾಲಯದಲ್ಲೂ ಇಲ್ಲ. ಬೇಲೂರ ಕೇಶವನ ಮುಂಭಾಗ ಚೆನ್ನ - ಕೊಂಡಜ್ಜಿ ವರದರಾಜನ ಹಿಂಭಾಗ ಚೆನ್ನ ಎಂಬ ಗಾದೆಮಾತನ್ನೂ ಒಬ್ಬರು ಹಿರಿಯರು ಹೇಳಿದ್ದುದು ನನಗೆ ನೆನಪಿದೆ.

ಕಳೆದ ಬಾರಿ ಇಲ್ಲಿಗೆ ಹೋದಾಗ ಮಾತ್ರ, ಗುಡಿ ಬಾಗಿಲು ಹಾಕಿತ್ತು. ಹತ್ತಿರದ ಮನೆಗಳಲ್ಲಿ ಯಾರ ಬಳಿಯೂ ಕೀಲಿಯೂ ನಮಗೆ ಸಿಗದೆ ಸುಮ್ಮನೆ ಮರಳಬೇಕಾಯಿತು ಎಂಬುದು ಮಾತ್ರ ಬೇಜಾರಿನ ಸಂಗತಿ. ಮೊದಲೆ ವಿಚಾರಿಸಿ ಹೋಗಬೇಕಾಗಿತ್ತೋ ಏನೋ. ಬೇಸಿಗೆಯಲ್ಲಿ ಇಲ್ಲಿ ರಥೋತ್ಸವ ನಡೆಯುತ್ತೆ. ಬಹಳ ಜನ ಸೇರುತ್ತಾರೆ. ನಾನು ಚಿಕ್ಕವನಾಗಿದ್ದಾಗ ಒಮ್ಮೆ ಹೋಗಿದ್ದ ನೆನಪೂ ಇದೆ.

ಇನ್ನೊಮ್ಮೆ ಹಾಸನದ ಕಡೆಗೆ ಹೋದಾಗ, ಸಮಯ ಮಾಡಿಕೊಂಡು ಇವೆರಡು ಎಡೆಗಳಿಗೆ ಹೋಗಿಬನ್ನಿ.

-ಹಂಸಾನಂದಿ

Rating
No votes yet

Comments